ವಿಶೇಷ ಪ್ರಕರಣವೊಂದರಲ್ಲಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸರಣಿ ಹಂತಕನಿಗೆ ತನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇರಳ ಹೈಕೋರ್ಟ್ ಇತ್ತೀಚೆಗೆ ಪೆರೋಲ್ ನೀಡಿದೆ.
ರಿಪ್ಪರ್ ಜಯನಂದನ್ ಪೆರೋಲ್ ಪಡೆದ ಅಪರಾಧಿ. ತಾನು ರಚಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಯನಂದನ್ ಅವರಿಗೆ ಎರಡು ದಿನಗಳ ಬೆಂಗಾವಲು ಪೆರೋಲ್ ನೀಡಿ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಆದೇಶಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಜಯನಂದನ್ ಅವರ ಪತ್ನಿ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಮಗಳು, ವಕೀಲೆ ಕೀರ್ತಿ ಜಯನಂದನ್ ಅವರೇ ತನ್ನ ತಂದೆಯ ಬಿಡುಗಡೆಗಾಗಿ ವಾದ ಮಂಡಿಸಿದ್ದಾರೆ.
ಒಂಬತ್ತನೇ ತರಗತಿಯವರೆಗೆ ಮಾತ್ರ ಓದಿರುವ ಜಯನಂದನ್ ಅವರು ಕಳೆದ 17 ವರ್ಷಗಳಿಂದ ಜೈಲಿನಲ್ಲಿದ್ದು ಈ ಅವಧಿಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಈ ವಿಚಾರವನ್ನು ನ್ಯಾಯಾಧೀಶರು ಪೆರೋಲ್ ನೀಡುವ ವೇಳೆ ಗಮನಿಸಿದ್ದಾರೆ.
ಜಯನಂದನ್ ಸುಮಾರು 23 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅವುಗಳಲ್ಲಿ 5 ಕೊಲೆ ಪ್ರಕರಣಗಳಾಗಿವೆ. 3 ಕೊಲೆ ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದ್ದು ಎರಡರಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತನ್ನ 17 ವರ್ಷಗಳ ಸೆರೆವಾಸದ ಅವಧಿಯಲ್ಲಿ ಜಯನಂದನ್ ಈವರೆಗೆ ಎರಡು ಬಾರಿ ಜೈಲಿನಿಂದ ತಪ್ಪಿಸಿಕೊಂಡಿದ್ದರು ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಜಯನಂದನ್ ರಚಿಸಿದ ‘ಪುಲರಿ ವಿರಿಯುಂ ಮುಂಬೆ’ ಕೃತಿ ಡಿಸೆಂಬರ್ 23ರಂದು ಎರ್ನಾಕುಲಂ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೆರೋಲ್ ನೀಡಲಾಗಿದೆ. ಅರ್ಜಿದಾರರ ಪ್ರಕಾರ, ಜಯನಂದನ್ ತನ್ನ ಪುಸ್ತಕದಿಂದ ಬರುವ ಆದಾಯವನ್ನು ವಿಶೇಷ ಅಗತ್ಯತೆ ಇರುವ ಮಕ್ಕಳ ಕಲ್ಯಾಣಕ್ಕಾಗಿ ದಾನ ಮಾಡಲು ಬಯಸಿದ್ದಾರೆ.
ಪುಸ್ತಕ ಬಿಡುಗಡೆಗೆ ಪೆರೋಲ್ ನೀಡಲು ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಜೈಲು ಅಧಿಕಾರಿಗಳು ನಿರಾಕರಿಸಿದ್ದರು. ಆದರೆ, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದು ನ್ಯಾಯ ಪೀಠ ತಿಳಿಸಿದೆ.
ಜಯನಂದನ್ ಅವರಿಗೆ ನ್ಯಾಯಾಲಯ ಡಿಸೆಂಬರ್ 22ರಿಂದ 23ರವರೆಗೆ (ಇಂದು ಮತ್ತು ನಾಳೆ) ಬೆಂಗಾವಲು ಪೆರೋಲ್ ನೀಡಿದೆ.
ಇದನ್ನೂ ಓದಿ : “ಗೋಮಾಂಸ ಪ್ರಚಾರಕಿಯನ್ನು ದೇವಸ್ಥಾನಕ್ಕೆ ಹೇಗೆ ಬಿಟ್ರು”?..ಯೂಟ್ಯೂಬರ್ ವಿರುದ್ಧ ಧ್ವೇಷ ಹರಡಿದ ಬಲ ಪಂಥೀಯರು


