ಜಿಲ್ಲಾ ನ್ಯಾಯಾಲಯಗಳಲ್ಲಿ ಬುದ್ಧಿಮತ್ತೆ (ಎಐ) ಪರಿಕರಗಳನ್ನು ಬಳಸುವ ಕುರಿತು ಕೇರಳ ಹೈಕೋರ್ಟ್ ದೇಶದಲ್ಲಿಯೇ ಮೊದಲ ಬಾರಿಗೆ ಮಾರ್ಗಸೂಚಿ ರೂಪಿಸಿದೆ.
ಯಾವುದೇ ಸಂದರ್ಭದಲ್ಲಿಯೂ ನಿರ್ಧಾರ ತೆಗೆದುಕೊಳ್ಳಲು ಅಥವಾ ಕಾನೂನು ತಾರ್ಕಿಕತೆಗೆ ಪರ್ಯಾಯವಾಗಿ ಎಐ ಪರಿಕರ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಚಾಟ್ ಜಿಪಿಟಿ ಮತ್ತು ಡೀಪ್ ಸೀಕ್ ರೀತಿಯ ಎಐ ಪರಿಕರಗಳ ಬಳಕೆಯನ್ನು ಮಾರ್ಗಸೂಚಿ ನಿಷೇಧಿಸಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅನುಮೋದಿಸಿದ ಎಐ ಪರಿಕರಗಳನ್ನಷ್ಟೇ ಬಳಸಬೇಕು ಎಂದು ಸೂಚಿಸಿದೆ.
ನ್ಯಾಯಾಂಗ ಕೆಲಸದಲ್ಲಿ ಎಐ ಪರಿಕರಗಳ ಜವಾಬ್ದಾರಿಯುತ ಬಳಕೆ, ಗೌಪ್ಯತೆಯ ಹಕ್ಕುಗಳ ರಕ್ಷಣೆ, ಭದ್ರತಾ ಅಪಾಯಗಳನ್ನು ಪರಿಹರಿಸುವುದು, ಕಾನೂನು ಮತ್ತು ನೈತಿಕ ಬಾಧ್ಯತೆಗಳ ಪಾಲನೆ ಮತ್ತು ಪ್ರತಿ ಹಂತದಲ್ಲೂ ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಮಾರ್ಗಸೂಚಿ ರೂಪಿಸಲಾಗಿದೆ.
ಜಿಲ್ಲಾ ನ್ಯಾಯಾಂಗದ ಸದಸ್ಯರು ಮತ್ತು ಸಿಬ್ಬಂದಿ ತರಬೇತಿ ಕಾರ್ಯಾಗಾರಗಳಿಗೆ ಹಾಜರಾಗಬೇಕು ಮತ್ತು ಎಐ ಬಳಕೆಯ ಪ್ರತಿಯೊಂದು ನಿದರ್ಶನದ ಕಟ್ಟುನಿಟ್ಟಾದ ದಾಖಲೆಯನ್ನು ನಿರ್ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.
ಎಐ ಪರಿಕರಗಳ ವಿವೇಚನಾರಹಿತ ಬಳಕೆಯು ಗೌಪ್ಯತೆ ಹಕ್ಕುಗಳ ಉಲ್ಲಂಘನೆ, ದತ್ತಾಂಶ ಭದ್ರತಾ ಅಪಾಯಗಳು ಮತ್ತು ನ್ಯಾಯಾಂಗ ನಿರ್ಧಾರ ತೆಗೆದುಕೊಳ್ಳುವಲ್ಲಿ ನಂಬಿಕೆಯ ಕೊರತೆ ಸೇರಿದಂತೆ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದಿರುವ ಮಾರ್ಗಸೂಚಿಯು ಜಿಲ್ಲಾ ನ್ಯಾಯಾಂಗಕ್ಕೆ ತೀವ್ರ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ.
ನ್ಯಾಯಾಂಗ ಆದೇಶ, ತೀರ್ಪು ಅಥವಾ ಅದರ ಯಾವುದೇ ಭಾಗದ ವಿಷಯ ಮತ್ತು ಸಮಗ್ರತೆಯ ಜವಾಬ್ದಾರಿ ನ್ಯಾಯಾಧೀಶರಿಗೆ ಸೇರಿರುವುದರಿಂದ, ಯಾವುದೇ ಸಂದರ್ಭಗಳಲ್ಲಿ ಯಾವುದೇ ತೀರ್ಪು, ಪರಿಹಾರ, ಆದೇಶ ಅಥವಾ ತೀರ್ಪನ್ನು ತಲುಪಲು ಯಾವುದೇ ಸಾಧನ ಬಳಸಬಾರದು ಎಂದು ತಿಳಿಸಲಾಗಿದೆ.
ಮಾಹಿತಿ ಮೂಲ: timesofindia.indiatimes.com & kannada.barandbench.com
ನ್ಯಾಯಾಲಯದ ತೀರ್ಪಿನ ಕುರಿತು ವಿವರವಾದ ಮಾಹಿತಿ ನಿರೀಕ್ಷಿಸಲಾಗಿದೆ.


