ಪೋಕ್ಸೋ ಪ್ರಕರಣದ ಆರೋಪಿಗಳಾದ ಪ್ರಮುಖ ಮಲಯಾಳಂ ಸುದ್ದಿವಾಹಿನಿಯ ಮೂವರು ಪತ್ರಕರ್ತರಿಗೆ ಕೇರಳ ಹೈಕೋರ್ಟ್ ಸೋಮವಾರ (ಜ.20) ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
‘ರಿಪೋರ್ಟರ್ ಲೈವ್’ ಸುದ್ದಿ ವಾಹಿನಿಯ ಸಲಹಾ ಸಂಪಾದಕ ಅರುಣ್ ಕುಮಾರ್ ಕೆ, ವರದಿಗಾರ ಶಹಬಾಝ್ ಅಹ್ಮದ್ ಮತ್ತು ಇನ್ನೋರ್ವ ಪತ್ರಕರ್ತನಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು ಪ್ರಕರಣದ ಆಧಾರವನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಲೈವ್‌ಲಾ ವರದಿಯ ಪ್ರಕಾರ, “ಅವರು ಪತ್ರಕರ್ತರು..ಪ್ರಕರಣದ ಸಂತ್ರಸ್ತೆಯೇ ದೂರು ನೀಡದಿರುವಾಗ, ನೀವು ಏಕೆ ದೂರು ದಾಖಲಿಸಿದ್ದೀರಿ?” ಎಂದು ನ್ಯಾಯಾಧೀಶರು ರಾಜ್ಯ ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿದ್ದಾರೆ.
ಮೂವರು ಪತ್ರಕರ್ತರ ವಿರುದ್ದ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಮನೋಭಾವದೊಂದಿಗೆ ಸನ್ನೆಗಳನ್ನು ಮಾಡಿದ ಅಪರಾಧಕ್ಕೆ ದಾಖಲಿಸುವ ಪೋಕ್ಸೋ ಕಾಯ್ದೆಯ ಸೆಕ್ಷನ್ 11(1) ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಜನವರಿ 4 ರಿಂದ 8ವರೆಗೆ ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯ ಶಾಲಾ ಮಕ್ಕಳ ಕಲಾ ಸ್ಪರ್ಧೆಯ (ಕಲೋತ್ಸವಂ) ಸುದ್ದಿ ಪ್ರಸಾರದ ವೇಳೆ ರಿಪೋರ್ಟರ್ ಲೈವ್ ವಾಹಿನಿಯ ಪತ್ರಕರ್ತರು ಸ್ವರ್ಧಿಯೊಬ್ಬರ ಕುರಿತು ದ್ವಂದ್ವಾರ್ಥ ನೀಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಲೋತ್ಸವದಲ್ಲಿ ಸಾಂಪ್ರಾದಾಯಿಕ ‘ಒಪ್ಪನ ಪಾಟ್’ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಬಾಲಕಿಯೊಬ್ಬರ ಕುರಿತು ಪತ್ರಕರ್ತರಾದ ಅರುಣ್ ಮತ್ತು ಶಹಬಾಸ್ 2012ರ ‘ಉಸ್ತಾದ್ ಹೋಟೆಲ್’ ಸಿನಿಮಾ ಉಲ್ಲೇಖಿಸಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಅವರು ದೂರು ದಾಖಲಿಸಿದ್ದರು. ಇದಕ್ಕೂ ಮೊದಲು, ಜನವರಿ 10ರಂದು, ಆಯೋಗವು ವಿಡಿಯೋಗೆ ಸಂಬಂಧಿಸಿದಂತೆ ಚಾನೆಲ್‌ನಿಂದ ವಿವರಣೆಯನ್ನು ಕೇಳಿತ್ತು.
ಆರೋಪಿ ಪತ್ರಕರ್ತರು ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ, ವಿವಾದಕ್ಕೆ ಕಾರಣವಾದ ವಿಡಿಯೋವನ್ನು ಬಾಲಕಿಯ ಪೋಷಕರು ಮತ್ತು ಆಕೆಯ ಶಿಕ್ಷಕರ ಒಪ್ಪಿಗೆಯೊಂದಿಗೆ ರೆಕಾರ್ಡ್ ಮಾಡಿದ ಟೆಲಿ-ಸ್ಕಿಟ್ ಎಂದು ವಾದಿಸಿದ್ದಾಗಿ ವರದಿಗಳು ಹೇಳಿವೆ.
‘ರಿಪೋರ್ಟರ್ ಲೈವ್’ ಇತ್ತೀಚೆಗೆ ರಾಜಕೀಯ ಪಕ್ಷಗಳನ್ನು ಟೀಕಿಸುವ ವರದಿಗಳನ್ನು ಪ್ರಕಟಿಸಿದೆ ಎಂದು ಗಮನಸೆಳೆದ ಪತ್ರಕರ್ತರು, ತಮ್ಮ ವಿರುದ್ದದ ಪ್ರಕರಣವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಗೋಮೂತ್ರ ಖಾಯಿಲೆ ಗುಣಪಡಿಸುತ್ತದೆ ಎಂದ ಐಐಟಿ ಮದ್ರಾಸ್ ನಿರ್ದೇಶಕ : ವ್ಯಾಪಕ ಟೀಕೆ


