ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೋಟ್ಟಿಯಲ್ಲಿ ನವ ವಿವಾಹಿತೆ ಶಹಾನಾ ಮುಮ್ತಾಝ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಪತಿ ಅಬ್ದುಲ್ ವಾಹಿದ್‌ನನ್ನು ಪೊಲೀಸರು ಸೋಮವಾರ (ಜ.20) ಬಂಧಿಸಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಮಧ್ಯಪ್ರಾಚ್ಯದಿಂದ ಊರಿಗೆ ವಾಪಾಸಾಗುತ್ತಿದ್ದ ಅಬ್ದುಲ್ ವಾಹಿದ್‌ನನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಿಎಸ್ಸಿ ಮ್ಯಾಥ್‌ಮ್ಯಾಟಿಕ್ಸ್ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ಶಹಾನಾ ಮತ್ತು ಯುಎಇಯಲ್ಲಿ ಉದ್ಯೋಗದಲ್ಲಿದ್ದ 25 ವರ್ಷದ ಅಬ್ದುಲ್ ವಾಹಿದ್ ವಿವಾಹ ಮೇ 27, 2024ರಲ್ಲಿ ನಡೆದಿತ್ತು. ಮದುವೆಯಾಗಿ 22 ದಿನದಲ್ಲಿ ವಾಹಿದ್ ಯುಎಇಗೆ ತೆರಳಿದ್ದ.
“ಯುಎಇಗೆ ಹೋದ ಬಳಿಕ ವಾಹಿದ್ ಪತ್ನಿ ಶಹಾನಾಳನ್ನು ನಿರ್ಲಕ್ಷ್ಯ ಮಾಡುತ್ತಿದ್ದ. ಆಕೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಆತನೂ ಕರೆ ಮಾಡುತ್ತಿರಲಿಲ್ಲ. “ನೀನು ಕಪ್ಪಗಿದ್ದೀಯ, ಇಂಗ್ಲಿಷ್ ಮಾತನಾಡೋಕೆ ಬರಲ್ಲ” ಎಂದು ಅವಮಾನಿಸುತ್ತಿದ್ದ. ಈ ವಿಚಾರವನ್ನು ಶಹಾನಾ ತನ್ನ ಅತ್ತೆಯ ಬಳಿ ಹೇಳಿದಾಗ, ಅವರೂ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ, “ಮಗ ವಾಹಿದ್‌ಗೆ ನಿನಗಿಂತ ಬುದ್ದಿವಂತೆ ಮತ್ತು ಸುಂದರವಾದ ಸಂಗಾತಿ ಸಿಗಬೇಕಿತ್ತು” ಎಂದು ನಿಂದಿಸಿದ್ದಾರೆ. ಈ ಕಾರಣಕ್ಕೆ ಮನೊಂದು ಶಹಾನಾ ಸಾವಿಗೆ ಶರಣಾಗಿದ್ದಾಳೆ” ಎಂದು ಆಕೆಯ ಚಿಕ್ಕಪ್ಪ ಅಬ್ದುಲ್ ಸಲಾಂ ಆರೋಪಿಸಿದ್ದಾರೆ.
ಜನವರಿ 14, 2025ರಂದು ಕೊಂಡೋಟ್ಟಿಯ ಪತಿ ವಾಹಿದ್ ಮನೆಯಲ್ಲಿ ಶಹಾನಾ ಶವವಾಗಿ ಪತ್ತೆಯಾಗಿದ್ದಾರೆ. ಪತಿ ಮತ್ತು ಆತನ ಕುಟುಂಬಸ್ಥರ ಕಿರುಕುಳ ಶಹಾನಾ ಸಾವಿಗೆ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಶಹಾನಾ ಸಾವನ್ನಪ್ಪಿದ ದಿನದಂದೇ ಕೊಂಡೋಟ್ಟಿ ಪೊಲೀಸರು ಪತಿ ಅಬ್ದುಲ್ ವಾಹಿದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪತ್ನಿಯ ಮೇಲಿನ ದೌರ್ಜನ್ಯದ ಆರೋಪ ಹೊರಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು.
ಇದಕ್ಕೂ ಮೊದಲು, ಕೇರಳ ಮಹಿಳಾ ಆಯೋಗವು ಶಹಾನಾ ಸಾವಿನ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಆಯೋಗದ ಅಧ್ಯಕ್ಷೆ ಅಡ್ವೊಕೇಟ್ ಪಿ ಸತೀದೇವಿ ಅವರು ಪ್ರಕರಣ ದಾಖಲಿಸಿಕೊಂಡು ವರದಿ ಸಲ್ಲಿಸುವಂತೆ ಆಯೋಗದ ನಿರ್ದೇಶಕರು ಮತ್ತು ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಶಹಾನಾ ಅವರ ಅಂತ್ಯಕ್ರಿಯೆ ಜನವರಿ 15, 2025ರಂದು ನಡೆದಿದೆ. ತನಿಖೆ ಮುಂದುವರೆದಿದ್ದು, ಆಕೆಯ ಕುಟುಂಬಸ್ಥರು ಮಾಡಿರುವ ಆರೋಪಗಳ ಬಗ್ಗೆ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಹಾನ ಸಾವು ಆತ್ಮಹತ್ಯೆಯಿಂದ ಆಗಿದೆ ಎಂದು ವರದಿಗಳು ಹೇಳಿವೆ. ಅದು ಆತ್ಮಹತ್ಯೆಯೂ.. ಕೊಲೆಯೂ? ಅಥವಾ ಇನ್ಯಾವುದೇ ಕಾರಣಕ್ಕೆ ಸಾವಾಗಿದೆಯೂ ಇನ್ನೂ ಖಚಿತವಾಗಿಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ ನಾವು ಇತ್ಯರ್ಥಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ, ‘ಆತ್ಮಹತ್ಯೆ’ ಬದಲಾಗಿ ಸುದ್ದಿಯಲ್ಲಿ ‘ಸಾವು’ ಎಂದಷ್ಟೇ ಉಲ್ಲೇಖಿಸಲಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಪೋಕ್ಸೋ ಪ್ರಕರಣ | ಕೇರಳದ ಮೂವರು ಪತ್ರಕರ್ತರಿಗೆ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು


