ಕೇರಳ ಮೂಲದ ನಿಮಿಷಾ ಪ್ರಿಯಾಗೆ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ದೇಶದ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅನುಮೋದಿಸಿಲ್ಲ ಎಂದು ಭಾರತದಲ್ಲಿರುವ ಯೆಮೆನ್ ಗಣರಾಜ್ಯದ ರಾಯಭಾರ ಕಚೇರಿ ಸೋಮವಾರ ಹೇಳಿದೆ ಎಂದು ಕಾನ್ಸುಲೇಟ್ ಪತ್ರವನ್ನು ಉಲ್ಲೇಖಿಸಿ ಮನೋರಮಾ ನ್ಯೂಸ್ ವರದಿ ಮಾಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ರಿಯಾ, ಜುಲೈ 2017 ರಲ್ಲಿ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹದಿಯನ್ನು ಹತ್ಯೆಗೈದ ಆರೋಪದಲ್ಲಿ ಯೆಮೆನ್‌ನಲ್ಲಿ ಜೈಲಿನಲ್ಲಿದ್ದಾರೆ. ಕೇರಳ ನರ್ಸ್
“ಇಡೀ ಪ್ರಕರಣವನ್ನು ಹೌತಿ ಬಂಡುಕೋರರು ನಿರ್ವಹಿಸಿದ್ದಾರೆ ಎಂದು ಯೆಮೆನ್ ಸರ್ಕಾರ ಒತ್ತಿಹೇಳುತ್ತದೆ ಮತ್ತು ಆದ್ದರಿಂದ, ಯೆಮೆನ್ ಗಣರಾಜ್ಯದ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷರಾದ ಗೌರವಾನ್ವಿತ ಡಾ. ರಶಾದ್ ಅಲ್-ಅಲಿಮಿ ಅವರು ಈ ತೀರ್ಪನ್ನು ಅಂಗೀಕರಿಸಿಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ವರದಿಯಾಗಿದೆ.
2020 ರಲ್ಲಿ, ರಾಜಧಾನಿ ಸನಾದ ವಿಚಾರಣಾ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಅವರ ಮನವಿಯನ್ನು ನವೆಂಬರ್ 2023 ರಲ್ಲಿ ಯೆಮೆನ್ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ತಿರಸ್ಕರಿಸಿತ್ತು. ಆದಾಗ್ಯೂ, ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಪ್ರಕಾರ, ಹತ್ಯೆಗೀಡಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ನೀಡಿದರೆ ಅವರಿಗೆ ಕ್ಷಮೆ ನೀಡುವ ಆಯ್ಕೆಯನ್ನು ಇದು ಮುಕ್ತವಾಗಿಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಸೆಂಬರ್ 30 ರಂದು, ಯೆಮೆನ್ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷರಾಗಿರುವ ಅಲ್-ಅಲಿಮಿ ಅವರು ಪ್ರಿಯಾಗೆ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ್ದಾರೆ ಎಂದು ವರದಿಗಳು ಹೇಳಿತ್ತು. ಈ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಡಿಸೆಂಬರ್ 31 ರಂದು, ಪರಿಸ್ಥಿತಿಯ ಬಗ್ಗೆ ತಿಳಿದಿದ್ದು, ಈ ಪ್ರಕರಣದಲ್ಲಿ ಪ್ರಿಯಾ ಮತ್ತು ಅವರ ಕುಟುಂಬಕ್ಕೆ ಸಹಾಯವನ್ನು ನೀಡುತ್ತಿದೆ ಎಂದು ಹೇಳಿತ್ತು.
ಈ ನಡುವೆ, ಮರಣದಂಡನೆ ಶಿಕ್ಷೆಯನ್ನು ಮನ್ನಾ ಮಾಡಲು ಪ್ರಿಯಾ ಅವರ ತಾಯಿ ಕೊಲೆಗೀಡಾದ ಮೆಹದಿ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ದಿನಗೂಲಿ ಕಾರ್ಮಿಕರಾಗಿರುವ ತಮ್ಮ ಪೋಷಕರಿಗೆ ಸಹಾಯ ಮಾಡಲು ಪ್ರಿಯಾ ಅವರು 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು. ಅವರು 2015 ರಲ್ಲಿ ತನ್ನದೆ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದರು, ಅದಕ್ಕೂ ಮೊದಲು ಅವರು ಯೆಮೆನ್‌ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಪ್ರಿಯಾ ಮತ್ತು ಅವರ ವ್ಯಾಪಾರದ ಪಾಲುದಾರರಾದ ಮೆಹದಿ ನಡುವೆ ಭಿನ್ನಾಭಿಪ್ರಾಯಗಳು ಬಂದಿದ್ದವು. ಅವರು ಹಣದ ದುರುಪಯೋಗದ ಬಗ್ಗೆ ಮೆಹದಿಯನ್ನು ಪ್ರಶ್ನಿಸಿದ್ದು ಈ ಭಿನ್ನಾಭಿಪ್ರಾಯಕ್ಕೆ ಕಾರಣ ಎಂದು ಅವರ ಕುಟುಂಬವು ಹೇಳಿಕೊಂಡಿದೆ. ಕೇರಳ ನರ್ಸ್
ಕೊಲೆಗೀಡಾದ ಮೆಹದಿ ತನ್ನ ಮಗಳಿಗೆ ಮಾದಕದ್ರವ್ಯದ ಅಮಲಿನಲ್ಲಿ ವರ್ಷಗಟ್ಟಲೆ ಚಿತ್ರಹಿಂಸೆ ನೀಡಿದ್ದಾನೆ ಮತ್ತು ಹಲವಾರು ಬಾರಿ ಬಂದೂಕು ತೋರಿಸಿ ಅವರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಪ್ರಿಯಾ ಅವರ ತಾಯಿ ಮನವಿಯಲ್ಲಿ ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ, ಪ್ರಿಯಾ ದೇಶವನ್ನು ತೊರೆಯಲು ಸಾಧ್ಯವಾಗದಂತೆ ಅವರ ಪಾಸ್‌ಪೋರ್ಟ್ ಅನ್ನು ಕೂಡಾ ಮೆಹದಿ ಮುಟ್ಟುಗೋಲು ಹಾಕಿಕೊಂಡಿದ್ದರು ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಅದಾಗ್ಯೂ, ಪ್ರಿಯಾ ತನ್ನ ಪಾಸ್‌ಪೋರ್ಟ್ ಹಿಂಪಡೆಯುವುದಕ್ಕಾಗಿ ಮೆಹದಿಗೆ ನಿದ್ರೆಯ ಚುಚ್ಚುಮದ್ದನ್ನು ನೀಡಿದ್ದರು. ಆದರೆ, ಇದು ಮಿತಿಮೀರಿದ್ದರಿಂದ ಮೆಹದಿ ಸಾವನ್ನಪ್ಪಿದ್ದರು.
2014 ರಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ದೇಶದ ರಾಜಧಾನಿ ಸನಾವನ್ನು ವಶಪಡಿಸಿಕೊಂಡಾಗ ಯೆಮೆನ್‌ನಲ್ಲಿ ಅಂತರ್ಯುದ್ಧ ಪ್ರಾರಂಭವಾಗಿತ್ತು. ಅಂದಿನಿಂದ ಅವರು ದೇಶದ ಬಹುಪಾಲು ಭಾಗವನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿದ್ದಾರೆ. ಹೌತಿಗಳು ಮುಸ್ಲಿಮರ ಶಿಯಾ ಪಂಗಡದ ಭಾಗವಾಗಿದ್ದು, ಯೆಮೆನ್‌ನ ಸುನ್ನಿ ಬಹುಮತದ ಸರ್ಕಾರದೊಂದಿಗೆ ಸಂಘರ್ಷ ನಡೆಸುತ್ತಲೆ ಬಂದಿದೆ.
2015 ರಲ್ಲಿ, ಸೌದಿ ಅರೇಬಿಯಾ ಮತ್ತು ಮುಸ್ಲಿಂ ರಾಜ್ಯಗಳ ಒಕ್ಕೂಟವು ಹೌತಿ ಬಂಡುಕೋರರನ್ನು ಹಿಮ್ಮೆಟ್ಟಿಸಲು ಮಧ್ಯಪ್ರವೇಶಿಸಿತ್ತು. ಅದರ ನಂತರ ಈ ಒಕ್ಕೂಟವು ಅಲಿ ಅಬ್ದುಲ್ಲಾ ಸಲೇಹ್ ಅವರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸರ್ಕಾರವನ್ನು ಪದಚ್ಯುತಗೊಳಿಸಿದ್ದರು. ಈ ವೇಳೆ ದೇಶದಲ್ಲಿ ಸಾವಿರಾರು ಜನರು ಸಾವನ್ನಪ್ಪಿ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದರು.
ಇದನ್ನೂಓದಿ: ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ
ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ


