ಕೇರಳದ ಪತ್ತನಂತಿಟ್ಟದ ಚುಟ್ಟಿಪ್ಪಾರ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೂವರು ಸಹಪಾಠಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ತನಂತಿಟ್ಟದ ಎಸ್‌ಎಂಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಅಮ್ಮು ಎ ಸಜೀವ್ (21) ನವೆಂಬರ್ 15ರಂದು ಶುಕ್ರವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆ ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ವಿದ್ಯಾರ್ಥಿನಿಯ ಕುಟುಂಬಸ್ಥರು ಆಕೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ತಂದೆ ಸಜೀವ್, “ಮಗಳು ಸಹಪಾಠಿಗಳಿಂದ ಕಿರುಕುಳ ಅನುಭವಿಸುತ್ತಿದ್ದ ಬಗ್ಗೆ ಈ ಹಿಂದೆಯೇ ಪ್ರಾಂಶುಪಾಲರಿಗೆ ದೂರು ನೀಡಿದ್ದೆ” ಎಂದಿದ್ದರು. ಹಾಗಾಗಿ, ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಆದೇಶಿಸಿದೆ.
ಅಮ್ಮು ಸಜೀವ್ ಸಾವಿಗೆ ಸಂಬಂಧಿಸಿದಂತೆ ಗುರುವಾರ (ನ.22) ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದ ಸಹೋದರ ಅಖಿಲ್ ಸಜೀವ್, “ನನ್ನ ಸಹೋದರಿ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯ ಸಾವಿನ ಬಗ್ಗೆ ಕುಟುಂಬಕ್ಕೆ ಅನುಮಾನವಿದೆ. ಕೋಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆ ಸಮೀಪದಲ್ಲೇ ಇರುವಾಗ ಅಮ್ಮುವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಏಕೆ ಕರೆದುಕೊಂಡು ಹೋಗಲಾಯಿತು?” ಎಂದು ಪ್ರಶ್ನಿಸಿದ್ದರು.
ಈ ಬೆನ್ನಲ್ಲೇ ಮೂವರು ಸಹಪಾಠಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಒಬ್ಬರು ಕೋಟಯಂ ಮತ್ತು ಇಬ್ಬರು ಪತ್ತನಾಪುರಂ ಮೂಲದವರು ಎಂದು ತಿಳಿದು ಬಂದಿದೆ. ಅವರ ಹೆಸರು ಬಹಿರಂಗಗೊಂಡಿಲ್ಲ. ಅಮ್ಮು ತಂದೆ ನೀಡಿದ ದೂರು ಅನುಸರಿಸಿ ಮೂವರನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ನವೆಂಬರ್ 15ರಂದು ರಾತ್ರಿ ಅಮ್ಮುವಿನ ಹಾಸ್ಟೆಲ್ ವಾರ್ಡನ್, ಆಕೆ ಬಿದ್ದು ಮೂಳೆ ಮುರಿತ ಆಗಿದೆ. ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದರು. ಪೋಷಕರು ಆಸ್ಪತ್ರೆಗೆ ಹೋದಾಗ, ಅಮ್ಮು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.
ಅಮ್ಮು ಸಾವಿಗೆ ಸಂಬಂಧಿಸಿದಂತೆ ಕೇರಳ ಸ್ಟೂಡೆಂಟ್ ಯೂನಿಯನ್ (ಕೆಎಸ್‌ಯು) ಗುರುವಾರ ಚುಟ್ಟಿಪ್ಪಾರ ನರ್ಸಿಂಗ್ ಕಾಲೇಜಿಗೆ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಪೊಲೀಸರು ಕಾಲೇಜು ಬಳಿ ಮೆರವಣಿಗೆ ತಡೆದಾಗ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ರಾಜ್ಯದ ವಿವಿದೆಡೆಗಳಲ್ಲಿ ಅಮ್ಮು ಸಾವು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ : ನರ್ಸಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು : ತನಿಖೆಗೆ ಆದೇಶಿಸಿದ ಸರ್ಕಾರ


