ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರವು ಪೊಲೀಸ್ ಪಡೆಗಳ ಪಾಸಿಂಗ್-ಔಟ್ ಪರೇಡ್ ಪ್ರತಿಜ್ಞೆಯನ್ನು ತಿದ್ದುಪಡಿ ಮಾಡಿದೆ.
ಪರಿಷ್ಕೃತ ಪ್ರತಿಜ್ಞೆಯಲ್ಲಿ ‘ಪೊಲೀಸ್‌ಮ್ಯಾನ್’ (Police Man) ಎಂಬ ಪದವನ್ನು ತೆಗೆದು ಹಾಕಿ ಲಿಂಗ-ತಟಸ್ಥ ಪದ ‘ಪೊಲೀಸ್ ಸಿಬ್ಬಂದಿ’ (Police Personnel) ಎಂದು ಬದಲಾಯಿಸಿದೆ ಎಂದು ವರದಿಯಾಗಿದೆ.
ಜನವರಿ 3, ಶುಕ್ರವಾರ ಹೆಚ್ಚುವರಿ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅವರು ಪ್ರತಿಜ್ಞೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದಾರೆ. ಪರಿಷ್ಕರಣೆ ಕಾರಣದಿಂದ ಪೊಲೀಸರು ಇನ್ನು ಮುಂದೆ ಪಾಸಿಂಗ್ ಔಟ್ ವೇಳೆ “ಪೊಲೀಸ್ ಸಿಬ್ಬಂದಿಯಾಗಿ’ ನಾನು ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಲಿದ್ದಾರೆ.
2011ರಲ್ಲಿ ಸುತ್ತೋಲೆ ಹೊರಡಿಸಿದ್ದ ರಾಜ್ಯ ಪೊಲೀಸ್ ಮುಖ್ಯಸ್ಥರು, ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಹುದ್ದೆಯ ಮುಂದೆ ‘ಮಹಿಳೆ’ ಎಂದು ಉಲ್ಲೇಖಿಸುವುದನ್ನು ನಿಷೇಧಿಸಿದ್ದರು. ಉದಾ : ವುಮೆನ್ ಪೊಲೀಸ್ ಕಾನ್‌ಸ್ಟೇಬಲ್, ವುಮೆನ್ ಹೆಡ್ ಕಾನ್‌ಸ್ಟೇಬಲ್, ವುಮೆನ್ ಸಬ್-ಇನ್‌ಸ್ಪೆಕ್ಟರ್, ವುಮೆನ್ ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ವುಮೆನ್ ಸೂಪರಿಡೆಂಟ್ ಆಫ್ ಪೊಲೀಸ್.
ಕೇರಳ ಪೊಲೀಸ್ ಕಾಯ್ದೆ- 2011ರ ಪರಿಚ್ಛೇದ 87ರ ಪ್ರಕಾರ, ಪೊಲೀಸ್ ಪಡೆಗೆ ಸೇರುವ ಪ್ರತಿಯೊಬ್ಬ ವ್ಯಕ್ತಿಯೂ ತರಬೇತಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ ನಂತರ, ನೇಮಕಾತಿ ಪ್ರಾಧಿಕಾರ ಅಥವಾ ನಾಮ ನಿರ್ದೇಶನಗೊಂಡ ಅಧಿಕಾರಿಯ ಮುಂದೆ (ನಿಗದಿತ ಸ್ವರೂಪದಲ್ಲಿ) ಪ್ರಮಾಣ ವಚನ ಸ್ವೀಕರಿಸಬೇಕು.
ಲಿಂಗ-ನಿರ್ದಿಷ್ಟ ಅರ್ಹತೆ ಇಲ್ಲದೆ ಬೆಟಾಲಿಯನ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಉಲ್ಲೇಖಿಸಲು ‘ಹವಾಲ್ದಾರ್’ ಪದವನ್ನು ಬಳಸಲು ಪೊಲೀಸ್ ಪಡೆ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ವಚಾತಿ ನಾಯಕ ಷಣ್ಮುಗಂ ತಮಿಳುನಾಡು ಸಿಪಿಎಂ (ಎಂ) ಮೊದಲ ದಲಿತ ಕಾರ್ಯದರ್ಶಿ


