ಕೋಝಿಕ್ಕೋಡ್‌ನ ಪೆರಂಬ್ರಾದ ಚಂಗರೋತ್ ಪಂಚಾಯತ್ ಕಚೇರಿಯ ಮುಂದೆ ದಲಿತ ಸಮುದಾಯಕ್ಕೆ ಸೇರಿದ ನಿರ್ಗಮಿತ ಅಧ್ಯಕ್ಷ ಉನ್ನಿ ವೆಂಗೇರಿ ಅವರನ್ನು ಅವಮಾನಿಸಲು “ಶುದ್ಧೀಕರಣ ಆಚರಣೆ” ನಡೆಸಲಾಗಿದೆ ಎಂಬ ಆರೋಪದ ಮೇಲೆ ಕೇರಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗವು 10 ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ಪಂಚಾಯತ್ ಕಚೇರಿಯ ಹೊರಗೆ ಸಗಣಿ ನೀರು ಸಿಂಪಡಿಸಿ, ಅವಮಾನಕರ ರೀತಿಯಲ್ಲಿ ಆಚರಣೆ ನಡೆಸಲಾಗಿದೆ ಎಂಬ ಮಾಧ್ಯಮ ವರದಿಗಳ ಆಧಾರದ ಮೇಲೆ ಆಯೋಗವು ಕ್ರಮ ಕೈಗೊಂಡಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.
ಸೋಮವಾರ ನಡೆದ ವಿಜಯೋತ್ಸವದ ಸಂದರ್ಭದಲ್ಲಿ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕಾರ್ಯಕರ್ತರ ಗುಂಪು ಪಂಚಾಯತ್ ಕಚೇರಿಯ ಹೊರಗೆ ನೀರು ಸಿಂಪಡಿಸಿ ಆವರಣವನ್ನು ಗುಡಿಸಿ ಸ್ವಚ್ಛಗೊಳಿಸಿದೆ ಎಂದು ಪೆರಂಬ್ರಾ ಪೊಲೀಸರುತಿಳಿಸಿದ್ದಾರೆ ಎಂದು ‘ಆನ್‌ಮನೋರಮಾ’ ವರದಿ ಮಾಡಿದೆ. “ಘಟನೆಯ ಬಗ್ಗೆ ಇನ್ನೂ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲವಾದ್ದರಿಂದ ನಾವು ಪ್ರಕರಣ ದಾಖಲಿಸಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಈ ಕೃತ್ಯದ ಹಿಂದೆ ಐಯುಎಂಎಲ್ ಕಾರ್ಯಕರ್ತರು ಇದ್ದಾರೆ ಎಂದು ವೆಂಗೇರಿ ಆರೋಪಿಸಿದ್ದಾರೆ. ಎಲ್‌ಡಿಎಫ್ ವಿರುದ್ಧ ಯುಡಿಎಫ್ ಗೆದ್ದ ಇತರ ಮೂರು ಪಂಚಾಯತ್‌ಗಳಲ್ಲಿ ಈ ರೀತಿಯ ಯಾವುದೇ ಆಚರಣೆಗಳು ನಡೆದಿಲ್ಲ ಎಂದು ಅವರು ಹೇಳಿದರು. ಅವರು ದಲಿತ ಪಂಚಾಯತ್ ಅಧ್ಯಕ್ಷರಾಗಿದ್ದ ಕಾರಣ ಚಂಗರೋತ್‌ನಲ್ಲಿ ನಡೆದ ಘಟನೆ ಎದ್ದು ಕಾಣುತ್ತದೆ ಎಂದು ಹೇಳಿದರು.
ಆದರೆ, ಐಯುಎಂಎಲ್ ನಾಯಕರು ಆರೋಪಗಳನ್ನು ನಿರಾಕರಿಸಿದರು. ಪಂಚಾಯತ್ ಭ್ರಷ್ಟಾಚಾರವನ್ನು ತೊಡೆದುಹಾಕುತ್ತಿದೆ ಎಂದು ಸಾಂಕೇತಿಕವಾಗಿ ತಿಳಿಸಲು ಯುವಕರು ನೀರು ಮತ್ತು ಪೊರಕೆಯನ್ನು ಬಳಸಿ ಪ್ರದೇಶವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಹೇಳಿದರು.
ಈ ಘಟನೆಯು ಜಿಲ್ಲೆಯಲ್ಲಿ ರಾಜಕೀಯ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಸಿಪಿಎಂನ ಯುವ ವಿಭಾಗವಾದ ಡಿವೈಎಫ್‌ಐ ಮಂಗಳವಾರ ಚಂಗರೋತ್ ಪಂಚಾಯತ್ ಕಚೇರಿಗೆ ಮೆರವಣಿಗೆ ನಡೆಸಿ, ಆಪಾದಿತ ಕೃತ್ಯವನ್ನು ಖಂಡಿಸಿತು. ಪ್ರತಿಭಟನೆ ಶಾಂತಿಯುತವಾಗಿತ್ತು, ಈ ಪ್ರದೇಶದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಡ ಪ್ರಜಾಸತ್ತಾತ್ಮಕ ರಂಗವು ಆ ಒಂದು ದಿನದ ನಂತರ ಮತ್ತೊಂದು ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಅವರು ಹೇಳಿದರು.


