ಇತ್ತೀಚೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ ಕೇರಳದ ನೀಲಂಬೂರು ಕ್ಷೇತ್ರದ ಸ್ವತಂತ್ರ ಶಾಸಕ ಪಿವಿ ಅನ್ವರ್ ಅವರು ರಾಜೀನಾಮೆ ನೀಡಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಬೆಂಬಲದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನ್ವರ್, ಜನವರಿ 13ರಂದು ಸೋಮವಾರ ಕೇರಳ ವಿಧಾನಸಭಾ ಸ್ಪೀಕರ್‌ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಜನವರಿ 11ರಂದು, ಅನ್ವರ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಎಐಟಿಸಿಯ ಅಥವಾ ಟಿಎಂಸಿಯ ಕೇರಳ ರಾಜ್ಯ ಸಂಯೋಜಕರಾಗಿ ನೇಮಕಗೊಂಡಿರುವುದಾಗಿ ಘೋಷಿಸಿದ್ದರು. ಇದೀಗ, ಅನರ್ಹತೆ ಎದುರಿಸಬೇಕಾದೀತು ಎಂಬ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸ್ವತಂತ್ರ ಶಾಸಕರು ರಾಜಕೀಯ ಪಕ್ಷಕ್ಕೆ ಸೇರಿದರೆ ತಮ್ಮ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ. 1985 ರ 52ನೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಸೇರಿಸಲಾದ ಪಕ್ಷಾಂತರ ವಿರೋಧಿ ಕಾಯ್ದೆ ಎಂದು ಕರೆಯಲ್ಪಡುವ ಹತ್ತನೇ ಶೆಡ್ಯೂಲ್ ಸ್ವತಂತ್ರ ಶಾಸಕರನ್ನು ಈ ವ್ಯಾಪ್ತಿಯೊಳಗೆ ತಂದಿತು.
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಆರ್. ಅಜಿತ್ ಕುಮಾರ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜಕೀಯ ಕಾರ್ಯದರ್ಶಿ ಪಿ. ಶಶಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಂತರ ಸಿಪಿಐ(ಎಂ) ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಅನ್ವರ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಲು ವಿಫಲ ಪ್ರಯತ್ನ ಮಾಡಿದ್ದರು. ನಂತರ ಅವರು ಡೆಮಾಕ್ರಟಿಕ್ ಮೂವ್‌ಮೆಂಟ್ ಆಫ್ ಕೇರಳ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು.
ಇತ್ತೀಚೆಗೆ ನೀಲಂಬೂರಿನಲ್ಲಿ ಅರಣ್ಯ ವಿಭಾಗೀಯ ಕಚೇರಿ (ಉತ್ತರ) ಧ್ವಂಸ ಮಾಡಿದ್ದಕ್ಕಾಗಿ ಅನ್ವರ್ ಅವರನ್ನು ಬಂಧಿಸಲಾಗಿತ್ತು. ಕಾಡಾನೆ ದಾಳಿಯಿಂದ ಬುಡಕಟ್ಟು ಯುವಕನೊಬ್ಬ ಸಾವನ್ನಪ್ಪಿದ ನಂತರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.
ಜನವರಿ 6 ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಅನ್ವರ್ ಅವರು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನೊಂದಿಗೆ ಸಹಕರಿಸಲು ಸಿದ್ಧ ಎಂದು ಹೇಳಿದ್ದರು. ನಂತರ ಅವರು ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : ಎಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು 6 ತಿಂಗಳಲ್ಲಿ ಇತ್ಯರ್ಥಗೊಳಿಸಿ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತಾಕೀತು


