ಕೇರಳದಲ್ಲಿ ಭಾರೀ ಸದ್ದು ಮಾಡಿರುವ ನಿವೃತ್ತ ಹೆಡ್‌ಲೋಡ್ ಕಾರ್ಮಿಕ ಗೋಪನ್ ಸ್ವಾಮಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆ, ಕುಟುಂಬಸ್ಥರ ವಿರೋಧದ ನಡುವೆಯೂ ಗುರುವಾರ (ಜ.15) ಪೊಲೀಸರು ಗೋಪನ್ ಸ್ವಾಮಿಯವರ ಶವವನ್ನು ಸಮಾಧಿಯಿಂದ ಹೊರ ತೆಗೆದಿದ್ದಾರೆ.
ತಿರುವನಂತಪುರಂ ಜಿಲ್ಲೆಯ ನೆಯ್ಯತ್ತಿಂಕರ ಬಳಿಯ ಅರಳುಮೂಡುವಿನ ಮನೆ ಬಳಿ 72 ವರ್ಷದ ಗೋಪನ್ ಸ್ವಾಮಿಯವರ ಶವ ಹೂತಿದ್ದ ಕುಟುಂಬಸ್ಥರು ಸಮಾಧಿ ನಿರ್ಮಿಸಿದ್ದರು.
ಸ್ವಯಂ ಗೋಷಿತ ಗುರು ಎನ್ನಲಾದ ನಿವೃತ್ತ ಹೆಡ್‌ಲೋಡ್ ಕಾರ್ಮಿಕ ಗೋಪನ್ ಸ್ವಾಮಿ ಜನವರಿ 9ರಿಂದ ನಾಪತ್ತೆಯಾಗಿದ್ದರು. ಆ ಬಳಿಕ ಸ್ಥಳೀಯ ದೇವಸ್ಥಾನದ ಬಳಿ ಅವರ ಸಮಾಧಿ ಕಂಡು ಬಂದಿತ್ತು. ಗೋಪನ್ ಸ್ವಾಮಿ ಆಧ್ಯಾತ್ಮಿಕತೆಯ ಪರಾಕಾಷ್ಠೆಯನ್ನು ತಲುಪಿ ಸ್ವಇಚ್ಛೆಯಿಂದ ಸಮಾಧಿಯಾಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದರು.
ಈ ಪ್ರಕರಣದ ಹಿಂದೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಜನವರಿ 13ರಂದು ಸಮಾಧಿ ಬಳಿಗೆ ಬಂದ ಪೊಲೀಸರು ಮತ್ತು ಇತರ ಅಧಿಕಾರಿಗಳು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಇದಕ್ಕೆ ಗೋಪನ್ ಸ್ವಾಮಿ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗೋಪನ್ ಸ್ವಾಮಿ ಪತ್ನಿ ಸುಲೋಚನಾ, ಮಕ್ಕಳಾದ ಸನಂದನ್, ರಾಜಸೇನನ್ ಸಮಾಧಿ ಬಳಿ ಅಡ್ಡಲಾಗಿ ನಿಂತು ಪೊಲೀಸರನ್ನು ತಡೆದಿದ್ದರು.
“ಗೋಪನ್ ಸ್ವಾಮಿ ಸಾವಿಗೂ ಮುನ್ನ ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡಿದ್ದಾರೆ. ಅವರ ಸಾವನ್ನು ವೈದ್ಯರಲ್ಲ, ಶಿವನೇ ನಿರ್ಧರಿಸಿದ್ದಾನೆ. ಹಾಗಾಗಿ, ವೈದ್ಯಕೀಯ ದೃಢೀಕರಣದ ಅಗತ್ಯವಿಲ್ಲ ಎಂದು ಗೋಪನ್ ಸ್ವಾಮಿ ಪತ್ನಿ ಸುಲೋಚನಾ ಮಾಧ್ಯಮಗಳ ಮುಂದೆ ಹೇಳಿದ್ದರು.
ಆದರೆ, ಜಿಲ್ಲಾಧಿಕಾರಿ ಅನು ಕುಮಾರಿ ಅವರು ಗೋಪನ್ ಸ್ವಾಮಿ ನಾಪತ್ತೆ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಆದೇಶದ ವಿರುದ್ದ ಗೋಪನ್ ಸ್ವಾಮಿ ಕುಟುಂಬ ಹೈಕೋರ್ಟ್ ಮೊರೆ ಹೋಗಿತ್ತು. ನಮ್ಮ ಇಚ್ಛೆಯಂತೆ ಸಮಾಧಿ ಮಾಡುವುದು ನಮ್ಮ ಹಕ್ಕು. ನಮ್ಮ ಧಾರ್ಮಿಕ ನಂಬಿಕೆ ಆಚರಿಸಲು ಸಂವಿಧಾನದಲ್ಲಿ ಅವಕಾಶವಿದೆ. ಗೋಪನ್ ಸ್ವಾಮಿ ತನ್ನ ಧಾರ್ಮಿಕ ನಂಬಿಕೆಯಂತೆ ಸಮಾಧಿಯಾಗಿದ್ದಾರೆ. ಹಾಗಾಗಿ, ಸಮಾಧಿಯಿಂದ ಶವ ಹೊರ ತೆಗೆಯುವುದು ಸರಿಯಲ್ಲ ಎಂದು ಕುಟುಂಬಸ್ಥರು ವಾದಿಸಿದ್ದರು.
ಆದರೆ, ಗೋಪನ್ ಸ್ವಾಮಿ ಕುಟುಂಬದ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಜಿಲ್ಲಾಧಿಕಾರಿ ಆದೇಶದಂತೆ ಸಮಾಧಿಯಿಂದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಗೋಪನ್ ಸ್ವಾಮಿ ಸಾವನ್ನಪ್ಪಿದರೆ ನೀವು ಮರಣ ಪ್ರಮಾಣ ಪತ್ರ ಏಕೆ ತೆಗೆದುಕೊಂಡಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿತ್ತು.
ವರದಿಗಳ ಪ್ರಕಾರ, ಗುರುವಾರ ಪೊಲೀಸರು ಸಮಾಧಿ ತೆರೆದಾಗ ಅದರೊಳಗೆ ಗೋಪನ್ ಸ್ವಾಮಿಯವರ ಶವ ಬೂದಿ ಅಥವಾ ಭಸ್ಮ ಮತ್ತು ಸುಗಂಧ ದ್ರವ್ಯಗಳಿಂದ ಆವೃತ್ತವಾಗಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಶವ ಹೊರ ತೆಗೆಯುವ ಹಿನ್ನೆಲೆ ಗುರುವಾರ ಬೆಳಿಗ್ಗೆಯೇ ಸಮಾಧಿ ಸ್ಥಳದಲ್ಲಿ ದೊಡ್ಡ ಮಟ್ಟದಲ್ಲಿ ಪೊಲೀಸ್ ಮತ್ತು ಮೂರು ವಿಧಿವಿಜ್ಞಾನ ತಜ್ಞರ ತಂಡಗಳನ್ನು ನಿಯೋಜಿಸಲಾಗಿತ್ತು. ಗಲಾಟೆಯಾಗುವ ಮುನ್ಸೂಚನೆಯಿದ್ದ ಕಾರಣ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ವರದಿಗಳ ಪ್ರಕಾರ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಮುಂದುವರಿಸಲಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಗೋಪನ್ ಸ್ವಾಮಿಯದ್ದು ಕೊಲೆಯೂ, ಇಲ್ಲಾ ಅವರೇ ಸಮಾಧಿಯಾದರೋ ಎಂಬುವುದು ಖಚಿತವಾಗಬೇಕಿದೆ.
ಕೋಮು ಬಣ್ಣ ಬಳಿದ ಹಿಂದುತ್ವ ಸಂಘಟನೆಗಳು :
ಗೋಪನ್ ಸ್ವಾಮಿ ಸಮಾಧಿ ಪ್ರಕರಣ ಅವರ ಕುಟುಂಬ ಮತ್ತು ಪೊಲೀಸರ ನಡುವಿನ ಸಂಘರ್ಷ. ಆದರೆ, ‘ಹಿಂದೂ ಐಕ್ಯ ವೇದಿ’ ಮತ್ತು ‘ವಿಎಸ್‌ಡಿಪಿ’ಯಂತಹ ಕೆಲ ಹಿಂದುತ್ವ ಸಂಘಟನೆಗಳು ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸಿದೆ.
ಮುಸ್ಲಿಮರು ಗೋಪನ್ ಸ್ವಾಮಿಯವರ ಸಮಾಧಿಯನ್ನು ಬಲವಂತವಾಗಿ ತೆರೆಯುವಂತೆ ಮಾಡಿ, ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ಆದರೆ, ಪೊಲೀಸರು ಗೋಪನ್ ಸ್ವಾಮಿ ಸಮಾಧಿ ತೆರೆದಿರುವುದು ಹೈಕೋರ್ಟ್ ಆದೇಶದ ಹಿನ್ನಲೆಯಾಗಿದೆ.
ಸೈಫ್ ಅಲಿ ಖಾನ್ ಇರಿತ ಪ್ರಕರಣ; ದಾಳಿಕೋರನಿಗಾಗಿ 7 ಪೊಲೀಸ್ ತಂಡಗಳಿಂದ ಹುಡುಕಾಟ


