ಕೇರಳ ಸರ್ಕಾರ ಸೋಮವಾರ (ನ.11) ಐಎಎಸ್ ಅಧಿಕಾರಿಗಳಾದ ಕೆ.ಗೋಪಾಲಕೃಷ್ಣನ್ ಮತ್ತು ‘ಕಲೆಕ್ಟರ್ ಬ್ರೋ’ ಎಂದು ಜನಪ್ರಿಯರಾಗಿದ್ದ ಎನ್. ಪ್ರಶಾಂತ್ ಅವರನ್ನು ಶಿಸ್ತು ಕ್ರಮದ ಭಾಗವಾಗಿ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಕೆ. ಗೋಪಾಲಕೃಷ್ಣನ್ ಅವರನ್ನು ಕೇರಳದ ‘ಹಿಂದೂ ಐಎಎಸ್ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ವಾಟ್ಸಾಪ್ ಗ್ರೂಪ್’ ರಚಿಸಿದ್ದಕ್ಕಾಗಿ ಮತ್ತು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್. ಪ್ರಶಾಂತ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯತಿಲಕ್ ಅವರನ್ನು ಟೀಕಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ಕಾರ್ಯವೈಖರಿ ಕುರಿತು ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ-ಸರ್ಕಾರದ ಉಪಕ್ರಮವಾದ ‘ಉನ್ನತಿ’ಯಿಂದ ಕಡತಗಳು ನಾಪತ್ತೆಯಾಗಿವೆ ಎಂದು ಮಾತೃಭೂಮಿ ನ್ಯೂಸ್ ವರದಿ ಮಾಡಿದ ಬಳಿಕ, ಅಧಿಕಾರಿಗಳಾದ ಪ್ರಶಾಂತ್ ಮತ್ತು ಜಯತಿಲಕ್ ನಡುವೆ ಜಗಳ ಶುರುವಾಗಿತ್ತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯತಿಲಕ್ ಅವರು ‘ಉನ್ನತಿ’ ಉಪಕ್ರಮದ ನೇತೃತ್ವ ವಹಿಸಿದ್ದ ಪ್ರಶಾಂತ್ ಅವರ ಸರ್ಕಾರಕ್ಕೆ ವರದಿ ನೀಡಿದ್ದರು.
ನಂತರ ಪ್ರಶಾಂತ್ ಅವರ ಹಾಜರಾತಿ ದಾಖಲೆಗಳನ್ನು ಸುಳ್ಳು ಮಾಡಿದ ಆರೋಪದ ಮೇಲೆ ಮಾತೃಭೂಮಿ ನ್ಯೂಸ್ ಮತ್ತೊಂದು ವರದಿ ಮಾಡಿತ್ತು.
ನವೆಂಬರ್ 9ರ ಶನಿವಾರದಂದು, ಜಯತಿಲಕ್ ಅವರು ವರದಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಲವಾರು ಯುವ ಐಎಎಸ್ ಅಧಿಕಾರಿಗಳ ಜೀವನವನ್ನು ಹಾಳು ಮಾಡಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ಉಪಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಪ್ರಶಾಂತ್ ಅವರು ತಮ್ಮ ಹಿರಿಯ ಅಧಿಕಾರಿಯನ್ನು ಸಿನಿಮಾ ಡೈಲಾಗ್ ಬಳಸಿ ಲೇವಡಿ ಮಾಡಿದ್ದರು.
ಅಮಾನತ್ತಾದ ಇನ್ನೋರ್ವ ಅಧಿಕಾರಿ ಗೋಪಾಲಕೃಷ್ಣನ್ ಅವರು ಹಿಂದೂ ಐಎಎಸ್ ಅಧಿಕಾರಿಗಳಿಗಾಗಿಯೇ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಿರುವ ಆರೋಪವಿದೆ. ‘ಮಲ್ಲು ಹಿಂದೂ ಆಫೀಸರ್ಸ್’ ಎಂಬ ವಾಟ್ಸಾಪ್ ಗ್ರೂಪನ್ನು ದೀಪಾವಳಿಗೆ ಸಂಬಂಧಿಸಿದಂತೆ ಗೋಪಾಲಕೃಷ್ಣನ್ ರಚಿಸಿದ್ದಾರೆ ಎಂದು ವರದಿಯಾಗಿದೆ.
ಕೆಲವು ಐಎಎಸ್ ಅಧಿಕಾರಿಗಳು ಈ ಬಗ್ಗೆ ಗೋಪಾಲಕೃಷ್ಣನ್ ಬಳಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ನಂತರ ಆ ವಾಟ್ಸಾಪ್ ಗ್ರೂಪನ್ನು ಡಿಲಿಟ್ ಮಾಡಲಾಗಿತ್ತು.
ಗ್ರೂಪಿನ ಸ್ಕ್ರೀನ್‌ಶಾಟ್ ಮಾಧ್ಯಮಗಳಿಗೆ ಸೋರಿಕೆಯಾದಾಗ, ಗೋಪಾಲಕೃಷ್ಣನ್ ತಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿದೆ ಎಂದು ಹೇಳಿದ್ದರು. “ಯಾರೋ ನನ್ನ ಮೊಬೈಲ್ ಹ್ಯಾಕ್ ಮಾಡಿದಂತೆ ತೋರುತ್ತಿದೆ, ಅದರಲ್ಲಿ 11 ಗ್ರೂಪ್‌ಗಳನ್ನು ರಚಿಸಿದ್ದಾರೆ. ನನ್ನ ಎಲ್ಲಾ ಸಂಪರ್ಕ ಸಂಖ್ಯೆಗಳನ್ನು ಅದಕ್ಕೆ ಸೇರಿಸಿದ್ದಾರೆ. ನಾನು ಈಗ ವಾಟ್ಸಾಪ್ ಅನ್ ಇನ್‌ಸ್ಟಾಲ್ ಮಾಡಿದ್ದೇನೆ. ಅದರಲ್ಲಿದ್ದ ಎಲ್ಲಾ ಗ್ರೂಪ್‌ಗಳನ್ನು ಮ್ಯಾನುಅಲ್ ಆಗಿ ತೆಗೆದು ಹಾಕಿದ್ದೇನೆ. ಶೀಘ್ರದಲ್ಲೇ ನನ್ನ ಫೋನ್ ಬದಲಾಯಿಸುತ್ತೇನೆ” ಎಂದು ಹೇಳಿಕೊಂಡಿದ್ದರು.
ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಗೋಪಾಲಕೃಷ್ಣನ್ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಫೋರೆನ್ಸಿಕ್ ಪರೀಕ್ಷೆಯಲ್ಲಿ ಅವರ ಮೊಬೈಲ್ ಹ್ಯಾಕ್ ಆದ ಬಗ್ಗೆ ಯಾವುದೇ ಪುರಾವೆಗಳು ಪೊಲೀಸರಿಗೆ ಸಿಕ್ಕಿರಲಿಲ್ಲ. ಅಲ್ಲದೆ, ಪೊಲೀಸರಿಗೆ ನೀಡುವ ಮೊದಲು ತನ್ನ ಫೋನ್ ಅನ್ನು ಫಾರ್ಮ್ಯಾಟ್ ಮಾಡಿದ್ದೇನೆ ಎಂದು ಗೋಪಾಲಕೃಷ್ಣನ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಮೊಬೈಲ್ ಸೈಬರ್ ದಾಳಿಗೆ ಒಳಗಾದ ಯಾವುದೇ ಲಕ್ಷಣಗಳು ಗೋಪಾಕೃಷ್ಣನ್ ಅವರ ಮೊಬೈಲ್‌ನಲ್ಲಿ ಪೊಲೀಸರಿಗೆ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ‘ಕೋಮುದ್ವೇಷ’ ಹರಡುವ ಕಾರ್ಟೂನ್ | ಬಿಜೆಪಿ ವಿರುದ್ಧ ಚು.ಆಯೋಗಕ್ಕೆ ದೂರು


