ಕಳೆದ ಐದು ವರ್ಷಗಳಲ್ಲಿ 60ಕ್ಕಿಂತ ಹೆಚ್ಚು ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕೇರಳದ ಪತ್ತನಂತಿಟ್ಟದ 18 ವರ್ಷದ ದಲಿತ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ
ತನ್ನ 13ನೇ ವಯಸ್ಸಿನಿಂದ ಇದುವರೆಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕ್ರೀಡಾಪಟುವಾಗಿರುವ ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಜನವರಿ 10ರಂದು ಶುಕ್ರವಾರ ಪತ್ತನಂತಿಟ್ಟದ ಎಲವುಂತಿಟ್ಟ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣಗಳ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನಂದಕುಮಾರ್ ಮತ್ತು ಇನ್ಸ್‌ಪೆಕ್ಟರ್ ವಿನೋದ್ ಕೃಷ್ಣನ್ ಪ್ರತ್ಯೇಕವಾಗಿ ನಡೆಸಲಿದ್ದಾರೆ.
ಕಾಲೇಜಿನಲ್ಲಿ ಕೌನ್ಸೆಲಿಂಗ್ ನಡೆಸುವ ವೇಳೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಬಿನ್ (24), ಎಸ್. ಸಂದೀಪ್ (30), ವಿಕೆ ವಿನೀತ್ (30), ಕೆ ಆನಂದು (21), ಮತ್ತು ಶ್ರೀನಿ ಅಲಿಯಾಸ್ ಎಸ್ ಸುಧಿ ಶ್ರೀನಿ (24) ಎಂಬವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಪತ್ತನಂತಿಟ್ಟದ ಚೆನ್ನೀರ್ಕರ ನಿವಾಸಿಗಳು ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಹುಡುಗಿಯ ನೆರೆಮನೆಯವನಾದ ಸುಬಿನ್, ಹುಡುಗಿ 13 ವರ್ಷದವಳಿದ್ದಾಗ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ 16ನೇ ವಯಸ್ಸಿನಲ್ಲಿ ಮತ್ತೊಮ್ಮೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದರ ವಿಡಿಯೋಗಳನ್ನು ರೆಕಾರ್ಡ್ ಮಾಡಿ, ಅವುಗಳನ್ನು ಇತರ ಆರೋಪಿಗಳೊಂದಿಗೆ ಹಂಚಿಕೊಂಡಿದ್ದ. ಆ ವಿಡಿಯೋ ಮುಂದಿಟ್ಟುಕೊಂಡು ಹುಡುಗಿಯನ್ನು ಹೆದರಿಸಿದ್ದ ಆರೋಪಿಗಳು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಗಳು ಕನಿಷ್ಠ 60 ಆರೋಪಿಗಳನ್ನು ಗುರುತಿಸಿವೆ. ಇವರಲ್ಲಿ ಯುವತಿಯ ಕೋಚ್ ಮತ್ತು ಸಹ ಕ್ರೀಡಾಪಟುಗಳು ಸೇರಿದ್ದಾರೆ ಎಂದು ವರದಿಗಳು ಹೇಳಿವೆ.
ಆರೋಪಿಗಳ ವಿರುದ್ಧ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಮತ್ತು ಐಪಿಸಿ ಸೆಕ್ಷನ್ 376(2) (ತೀವ್ರ ಅತ್ಯಾಚಾರ), 376(3) (ಹದಿನಾರು ವರ್ಷದೊಳಗಿನ ಹೆಣ್ಣಿನ ಮೇಲೆ ಅತ್ಯಾಚಾರ), 376(n)(ಒಂದೇ ಹೆಣ್ಣಿನ ಮೇಲೆ ಪುನರಾವರ್ತಿತ ಅತ್ಯಾಚಾರ), 376(D)(ಸಾಮೂಹಿಕ ಅತ್ಯಾಚಾರ), ಮತ್ತು 354A (ಲೈಂಗಿಕ ಕಿರುಕುಳ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಅಲ್ಲದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO)ಕಾಯ್ದೆಯ ಸೆಕ್ಷನ್ 3(a), 5(g),11, 12 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66ಇ (ಗೌಪ್ಯತೆಯ ಉಲ್ಲಂಘನೆ) ಮತ್ತು 67ಬಿ (ಲೈಂಗಿಕವಾಗಿ ಸ್ಪಷ್ಟವಾದ ಕೃತ್ಯಗಳಲ್ಲಿ ಮಕ್ಕಳನ್ನು ಚಿತ್ರಿಸುವುದು) ಅನ್ವಯಿಸಲಾಗಿದೆ.
ಬೀದರ್ | ಅನ್ಯ ಜಾತಿಯ ಬಾಲಕಿಯನ್ನು ಪ್ರೀತಿಸುತ್ತಿದ್ದ ದಲಿತ ಯುವಕನ ಕೊಲೆ


