ಕೇರಳದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಯುವತಿಯೊಬ್ಬರು ಸಾವನ್ನಪ್ಪಿರುವ ಮತ್ತೊಂದು ಪ್ರಕರಣ ವರದಿಯಾಗಿದೆ. ದೂರು ನೀಡಿದ್ದ ಪೋಲೀಸ್ ಠಾಣೆಯಿಂದ ಮನೆಗೆ ಮರಳಿದ 21 ವರ್ಷದ ಯುವತಿ ಸೋಮವಾರ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದು, ಪತ್ರದಲ್ಲಿ ಆಕೆಯ ಪತಿ, ಅತ್ತೆ ಮತ್ತು ಆಲುವಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ಹೆಸರನ್ನು ಬರೆದಿದ್ದಾರೆ.
ಅಲುವಾ ಬಳಿಯ ಎಡಯಪುರಂ ನಿವಾಸಿ ಮೋಫಿಯಾ ಪರ್ವೀನ್, ತನ್ನ ಪತಿ ಸುಹೇಲ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆಯ ಆರೋಪದ ಮೇಲೆ ಅಲುವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಲು ನಿರಾಕರಿಸಿದ ಪೊಲೀಸರು ಸಂಧಾನ ಮಾಡಿಕೊಳ್ಳುವಂತೆ ಹೇಳಿದ್ದರು.
ಪ್ರಕರಣವನ್ನು ಇತ್ಯರ್ಥಪಡಿಸಲು ಆಲುವಾ ಪೊಲೀಸರು ಮೋಫಿಯಾ ಮತ್ತು ಅವರ ಪತಿ ಸುಹೇಲ್ ಅವರನ್ನು ಸೋಮವಾರ ಠಾಣೆಗೆ ಕರೆಸಿದ್ದಾರೆ. ವಾಗ್ವಾದದ ಸಂದರ್ಭದಲ್ಲಿ ಮೋಫಿಯಾ ಅವರು ಸುಹೇಲ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಎಸ್‌ಎಚ್‌ಒ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಠಾಣೆಯಲ್ಲಿ ಈ ರೀತಿ ನಡೆದುಕೊಂಡರೆ ತನ್ನ ವಿರುದ್ದವೇ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾರೆ. ಇದರಿಂದ ಮನನೊಂದ ಆಕೆ ಮನೆಗೆ ಮರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಸಂತ್ರಸ್ಥೆ ಮೋಫಿಯಾ ಪರ್ವೀನ್, ತನ್ನ ತಂದೆಗೆ ಬರೆದಿರುವ ಪತ್ರದಲ್ಲಿ ತನ್ನ ಪತಿಯಿಂದ ಅಪಾರ ಚಿತ್ರಹಿಂಸೆಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. “ಪಪ್ಪಾ, ಕ್ಷಮಿಸಿ, ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಹೇಳಿದ್ದು ಸರಿ. ಅವನು ಅರಿಯಾದ ವ್ಯಕ್ತಿಯಲ್ಲ. ಅವನು ನನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಿದ್ದಾನೆ. ಇನ್ನು ಈ ನೋವನ್ನು ನಾನು ಸಹಿಸಲಾರೆ. ಪಪ್ಪಾ, ನನ್ನ ಆತ್ಮವು ಇಲ್ಲೇ ಇರುತ್ತದೆ. ಸಿಐ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕೇರಳ: ಮೊಬೈಲ್ ಗೇಮ್‌ನಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ
ಕಾನೂನು ವಿದ್ಯಾರ್ಥಿನಿಯಾಗಿದ್ದ ಮೋಫಿಯಾ ಮತ್ತು ಸುಹೇಲ್ ಫೇಸ್‌ಬುಕ್‌ನಲ್ಲಿ ಪರಸ್ಪರ ಪರಿಚಯವಾಗಿದ್ದರು. ನಂತರ ಮದುವೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಅಧಿಕಾರಿ ವಿರುದ್ಧದ ಆರೋಪದ ತನಿಖೆಗಾಗಿ ಅಲುವಾ ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಡಿವೈಎಸ್ಪಿ ಅವರ ವರದಿ ಆಧರಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕಾರ್ತಿಕ್ ಅವರು ತಿಳಿಸಿದ್ದಾರೆ.
(ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104)



ತಪ್ಪಿತಸ್ಥರಿಗೆ ಕಟಿಣ ಶಿಕ್ಶೆ ಆಗಬೇಕು. ಹೆಣ್ಣುಮಕ್ಕಳಿಗೆ ಮದುವೆ ಮೊದಲ ಆದ್ಯತೆ ಆಗಬಾರದು. ವಿದ್ಯೆ, ಉದ್ಯೋಗದ ನಂತರ ಮದುವೆ ಮಾಡಬೇಕು.