Homeಕರ್ನಾಟಕಹಂಸಲೇಖರ ಪರ ಕಾಂಗ್ರೆಸ್‌ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ ಪ್ರತಿಭಟನೆ

ಹಂಸಲೇಖರ ಪರ ಕಾಂಗ್ರೆಸ್‌ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ ಪ್ರತಿಭಟನೆ

"ಸಂಗೀತ ನಿರ್ದೇಶಕ ಹಂಸಲೇಖ ಅವರು ಯಾವುದೇ ತಪ್ಪು ಮಾಡಿಲ್ಲ" ‌ಎಂದು ಕಾಂಗ್ರೆಸ್ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

- Advertisement -
- Advertisement -

“ಸಂಗೀತ ನಿರ್ದೇಶಕ ಹಂಸಲೇಖ ಅವರು ಯಾವುದೇ ತಪ್ಪು ಮಾಡಿಲ್ಲ” ‌ಎಂದು ಕಾಂಗ್ರೆಸ್ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಹಂಸಲೇಖ ಅವರ ವಿರುದ್ಧ ನಡೆಯುತ್ತಿರುವ ವಿಷಾದಕಾರಿ ಬೆಳವಣಿಗೆಗಳನ್ನು ಖಂಡಿಸಿ, ತುಮಕೂರಿನ ‘ದಲಿತ ಅಲ್ಪಸಂಖ್ಯಾತ ಹಿಂದುಳಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಹಂಸಲೇಖರ ಪರ ಮಾತನಾಡಿದರು.

ಜಿ.ಪರಮೇಶ್ವರ ಅವರು ಮಾತನಾಡಿ, “ಹಂಸಲೇಖ ಅವರು ಯಾರಿಗಾದರೂ ಅವಮಾನ ಮಾಡಬೇಕೆಂದು ಹೇಳಲಿಲ್ಲ. ಯಾವುದೇ ಜಾತಿಯ ವ್ಯವಸ್ಥೆಗೆ ಅವರು ಅವಮಾನ ಮಾಡಬೇಕು ಎಂದು ಹೇಳಲಿಲ್ಲ. ಸಾಂದರ್ಭಿಕವಾಗಿ ಆಡಿದಂತಹ ಮಾತನ್ನು ಜಾತೀಯ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡುವಂತಹದ್ದು ತಪ್ಪು. ಈ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ” ಎಂದರು.

“ವಿಧಾನ ಪರಿಷತ್‌‌ ಚುನಾವಣೆಗೆ ಸ್ಪರ್ಧಿಸಿರುವ ನಮ್ಮ ಪಕ್ಷದ ಅಭ್ಯರ್ಥಿ ರಾಜೇಂದ್ರ ಅವರ ನಾಮಪತ್ರ ಸಲ್ಲಿಸಿ ಬರುವಾಗ, ನಮಗೆ ಪ್ರತಿಭಟನೆಯ ದೃಶ್ಯ ಕಂಡಿತು. ತಕ್ಷಣ ನಾವು ಮೂರು ಜನ (ಜಿ.ಪರಮೇಶ್ವರ, ರಾಜಣ್ಣ, ಟಿ.ಬಿ.ಜಯಚಂದ್ರ) ಮಾತನಾಡಿಕೊಂಡು, ನಾವು ಇದರಲ್ಲಿ ಭಾಗಿಯಾಗಬೇಕೆಂದು ಬಂದೆವು” ಎಂದು ಅವರು ತಿಳಿಸಿದರು.

“ಬಹುಸಂಖ್ಯಾತ ಸಮುದಾಯವನ್ನು ಸಾವಿರಾರು ವರ್ಷಗಳಿಂದ ಶೋಷಣೆ ಮಾಡುತ್ತಿರುವಂತಹ ವರ್ಗ ಇಂದು ಮತ್ತೊಂದು ಬಾರಿ ಅಂತಹದ್ದೇ ಪ್ರಯತ್ನ ಮಾಡುತ್ತಿದೆ ಎಂಬುದನ್ನು ನಾವು ಖಂಡಿಸಬೇಕಾಗಿದೆ. ಜಾತೀಯ ವ್ಯವಸ್ಥೆ ನಾವು ಮಾಡಿಕೊಂಡಿರುವಂತಹದ್ದು, ಅಂದರೆ ಮನುಷ್ಯ ಮಾಡಿಕೊಂಡಿರುವಂತಹದ್ದು. ಮನುಷ್ಯ ಮನುಷ್ಯನನ್ನು ಅಸಮಾನತೆಯಿಂದ ಕಾಣಲಾಗುತ್ತಿದೆ, ಶೋಷಣೆ ಮಾಡಲಾಗುತ್ತಿದೆ. ಇಪತ್ತೊಂದನೆ ಶತಮಾನಕ್ಕೆ ಕಾಲಿಟ್ಟಿದ್ದರೂ ಆ ಶೋಷಣೆ ತಪ್ಪಿಲ್ಲ. ಆ ಶೋಷಣೆಯನ್ನು ತಪ್ಪಿಸುವ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ” ಎಂದು ವಿಷಾದಿಸಿದರು.


ಇದನ್ನೂ ಓದಿರಿ: ಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌


ಕೆ.ಎನ್‌.ರಾಜಣ್ಣ ಮಾತನಾಡಿ, “ಹಂಸಲೇಖ ಅವರು ಹೇಳಿರುವಂತಹದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಜಾತಿಯ ಬಣ್ಣವನ್ನು ಕಟ್ಟಿ, ಈ ಅಸ್ಪೃಶ್ಯತೆಯನ್ನು ಇನ್ನು ಬಹಳಷ್ಟು ವರ್ಷಗಳ ಕಾಲ ಮುಂದುವರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಮಾತುಗಳನ್ನು ಹಂಸಲೇಖ ಅವರ ವಿರುದ್ಧ ಆಡುತ್ತಿದ್ದಾರೆ” ಎಂದು ಆರೋಪಿಸಿದರು.

“ಹಂಸಲೇಖ ಅವರು ದೂರದವರೇನಲ್ಲ. ತುಮಕೂರಿನವರು, ಇದೇ ನಗರದಲ್ಲಿ ಹುಟ್ಟಿ ಬೆಳೆದವರು. ಅವರು ಯಾವತ್ತೂ ಯಾವುದೇ ಸಮಾಜವಾಗಲೀ, ಯಾವುದೇ ಧರ್ಮದ ವಿರುದ್ಧವಾಗಲೀ ಮಾತನಾಡಿದವರಲ್ಲ. ಅವರು ಆಡಿರುವಂತಹ ಮಾತನ್ನು ಇವರು ತಿರುಚಿ ಅಪವಾದವನ್ನು ತರುವಂತಹ ಉನ್ನಾರವನ್ನು ಈ ಮುಂದುವರಿದ ಸಮಾಜಗಳು ಮಾಡುತ್ತಿರುವುದು ಎಲ್ಲರಿಗೂ ಸ್ಪಷ್ಟವಾಗಿದೆ. ನಾವು ಎಲ್ಲರೂ ಇದನ್ನು ಖಂಡಿಸುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ತಲುಪಿಸುವ ಪ್ರಯತ್ನವನ್ನು ನಾವು ಮಾಡಲು ಹೊರಟಿದ್ದೇವೆ” ಎಂದರು.

ಟಿ.ಬಿ.ಜಯಚಂದ್ರ ಅವರು ಮಾತನಾಡಿ, “ಹಂಸಲೇಖ ಅವರು ಕರ್ನಾಟಕದ ಹೆಮ್ಮೆಯ ಪುತ್ರ. ವಾಸ್ತವಿಕವಾಗಿರುವ, ಮನಸ್ಸಿನಲ್ಲಿರುವ ನೋವನ್ನು ಅವರು ಹೇಳಿದಾಗ ಅವರನ್ನು ಅವಹೇಳನ ಮಾಡುವಂತಹದ್ದು ಸರಿಯಲ್ಲ. ಹಂಸಲೇಖ ಅವರ ಜೊತೆ ನಾವಿದ್ದೇವೆ ಎಂಬುದನ್ನು ತೋರಿಸಲೆಂದು ನಾವಿಲ್ಲಿಗೆ ಬಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.

“ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನಬದ್ಧವಾಗಿ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಿದರೂ ನಿಜಸ್ಥಿತಿಯಲ್ಲಿ ಅದು ಸಮಾಜದಲ್ಲಿದೆ. ಇದನ್ನು ಸಹಿಸಲು ಆಗುವುದಿಲ್ಲ, ಸಹಿಸಬಾರದು ಎಂಬ ಹಿನ್ನೆಲೆಯಲ್ಲಿ ಹಂಸಲೇಖ ಅವರು ಹೇಳಿರುವಂತಹ ವಿಚಾರಕ್ಕೆ ನಾವು ಸದಾ ಬೆಂಬಲವಾಗಿ ಇರಬೇಕು. ನಿಮ್ಮ ಹೋರಾಟದೊಂದಿಗೆ ನಾವು ಕೂಡ ಇದ್ದೇವೆ ಎಂಬುದನ್ನು ಘಂಟಾಘೋಷವಾಗಿ ಹೇಳಲು ಸಿದ್ಧವಿದ್ದೇವೆ” ಎಂದರು.

ಮುಖಂಡರಾದ ನಿಕೇತ್‌ ರಾಜ್‌ ಮೌರ್ಯ, ಕೊಟ್ಟ ಶಂಕರ್‌‌, ನರಸಿಂಹಮೂರ್ತಿ ಮರಳೂರು, ವಿರೂಪಾಕ್ಷ ಡಾಗೇರಹಳ್ಳಿ, ರಫೀಕ್‌ ಅಹಮದ್‌ ಹಾಗೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಇದನ್ನೂ ಓದಿರಿ: ಇವರ ದೇಶಪ್ರೇಮ ಬ್ಯಾನರ್‌ಗಷ್ಟೇ ಸೀಮಿತ; ಸಂಘಪರಿವಾರದ ಜೊತೆಗಿನ ಆ ದಿನಗಳು…


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...