Homeಕರ್ನಾಟಕಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಹೇಶ್‌ ಜೋಶಿಯವರು ಆಯ್ಕೆಯಾದ ಬಳಿಕ ಕಸಾಪದಲ್ಲಿ ಬೇರು ಬಿಟ್ಟಿರುವ ಪಕ್ಷರಾಜಕಾರಣದ ಚರ್ಚೆ ಮುನ್ನೆಲೆಗೆ ಬಂದಿತು. ಜೋಶಿಯವರು ಬಲಪಂಥೀಯ ವಿಚಾರಧಾರೆಗಳಿಗೆ ಹತ್ತಿರವಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಬಿಜೆಪಿ ಬೆಂಬಲದಿಂದ ಮಹೇಶ್‌ ಜೋಶಿಯವರು ಗೆದ್ದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ವಿಜಯ ಕರ್ನಾಟಕ ಪತ್ರಿಕೆ ನಡೆಸಿದ್ದ ಸಂದರ್ಶನದಲ್ಲಿ ‘ಒಂದು ಪಕ್ಷದ ವ್ಯಕ್ತಿಯಾಗಿ ಗುರುತಿಸಿಕೊಂಡು ಮತಗಳನ್ನು ಗಿಟ್ಟಿಸಿಕೊಂಡಿದ್ದೀರಿ ಎಂಬ ಆರೋಪಗಳಿವೆಯಲ್ಲ?’ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ಮಹೇಶ್‌ ಜೋಶಿಯವರು “ನಾನು ರಾಜಕೀಯವಾಗಿ ತಟಸ್ಥ, ಯಾವುದೇ ಪಕ್ಷದ ಸದಸ್ಯನಲ್ಲ, ಗುರುತಿಸಿಕೊಂಡಿಲ್ಲ. ನಾನು ಕನ್ನಡ ಪಂಥದವರು. ನಾನು ಯಾವುದೇ ಪಕ್ಷದ ಬ್ಯಾನರ್‌ ಹಿಡಿದು ಮತ ಕೇಳಿಲ್ಲ. ನನಗೆ ವಿಜಯಪುರದಲ್ಲಿ ಅತಿಹೆಚ್ಚು ಮತಗಳು ಬಂದಿರುವುದು ಮಸ್ಲಿಮರ ಮತಗಳು. ಪಕ್ಷದೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಒಂದು ದುರಂತವಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು.

ಜೋಶಿಯವರು ದೂರದರ್ಶನದಲ್ಲಿ ದೆಹಲಿ ಮತ್ತು ದಕ್ಷಿಣ ಭಾರತದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಡೋಜ, ರಾಷ್ಟ್ರಪತಿಗಳ ಗೃಹರಕ್ಷಕ ದಳ ಗೌರವಾನ್ವಿತ ಸೇವೆಗಾಗಿ ನಾಗರಿಕ ರಕ್ಷಣಾ ಪದಕ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅತಿದೊಡ್ಡ ಪರಂಪರೆಯನ್ನು ಹೊಂದಿರುವ ಕಸಾಪದಂತಹ ಸಂಸ್ಥೆಯ ಜವಾಬ್ದಾರಿ ಅವರ ಹೆಗಲಿಗೇರಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್‌ ಅವರೊಂದಿಗೆ ಕಸಾಪ ಅಧ್ಯಕ್ಷರಾದ ಮಹೇಶ್‌ ಜೋಶಿ. (ಚಿತ್ರಕೃಪೆ: ಎಫ್‌ಬಿ, ಮಹೇಶ್‌ ಜೋಶಿಯವರ ಪೇಜ್‌‌)

ಕಸಾಪದಲ್ಲಿ ಮೊದಲಿನಿಂದಲೂ ಪಕ್ಷ ರಾಜಕೀಯ ಬೇರು ಬಿಟ್ಟಿದೆ ಎಂಬುದು ಸುಳ್ಳಲ್ಲ. ಹಣಬಲ, ಜಾತಿ ಬಲ ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಯಲ್ಲಿ ತಾಂಡವಾಡುತ್ತಿದೆ ಎಂಬ ಆರೋಪಗಳು ಇತ್ತೀಚೆಗೇನೂ ಕೇಳಿಬರುತ್ತಿಲ್ಲ. ಈ ನಿಟ್ಟಿನಲ್ಲಿ ಕಸಾಪ ಅಧ್ಯಕ್ಷರ ಆಯ್ಕೆಯೂ ಚರ್ಚೆಗೆ ಗ್ರಾಸವಾಗಿದೆ.

ಮಹೇಶ್ ಜೋಶಿಯವರು, ತಾವು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಅನುಮಾನಗಳಿಗೆ ಎಡೆಮಾಡುವ ಬೆಳವಣೆಯೊಂದು ಆಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಎನ್‌.ಆರ್‌.ರಮೇಶ್‌ ಅವರು, ಎಂ.ಮಹೇಂದ್ರಗೌಡ ಎಂಬವರನ್ನು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದುಹಾಕುವಾಗ ನೀಡಿರುವ ಕಾರಣವು ಚರ್ಚೆಗೆ ಅವಕಾಶ ನೀಡಿದೆ.


ಇದನ್ನೂ ಓದಿರಿ: ಇವರ ದೇಶಪ್ರೇಮ ಬ್ಯಾನರ್‌ಗಷ್ಟೇ ಸೀಮಿತ; ಸಂಘಪರಿವಾರದ ಜೊತೆಗಿನ ಆ ದಿನಗಳು…


ಬನಶಂಕರಿ ಮೂರನೇ ಹಂತದ ನಿವಾಸಿಯಾಗಿರುವ ಎಂ.ಮಹೇಂದ್ರಗೌಡ ಅವರಿಗೆ ಎನ್‌.ಆರ್‌.ರಮೇಶ್‌ ಅವರು ಬರೆದಿರುವ ಪತ್ರದಲ್ಲಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಸ್ಥಾನದಿಂದ ವಜಾಗೊಳಿಸುವುದಾಗಿ ತಿಳಿಸಲಾಗಿದೆ. ಅದಕ್ಕೆ ಕಾರಣವನ್ನು ಎನ್‌.ಆರ್‌.ರಮೇಶ್‌ ಹೀಗೆ ನೀಡಿದ್ದಾರೆ:

“ತಾವು ನಿರಂತರವಾಗಿ ಒಂದಿಲ್ಲೊಂದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಬಾರಿ ಈ ಬಗ್ಗೆ ತಮಗೆ ಎಚ್ಚರಿಕೆ ನೀಡಿದ್ದರೂ ತಾವು ಎಲ್ಲವನ್ನೂ ಕಡೆಗಣಿಸಿ, ಪ್ರಸ್ತುತ ನಡೆಯುತ್ತಿರುವ ‘ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ’ಗೆ ಸಂಬಂಧಿಸಿದಂತೆ, ಭಾರತೀಯ ಜನತಾ ಪಾರ್ಟಿಯು ಅಧಿಕೃತವಾಗಿ ಬೆಂಬಲ ನೀಡಿರುವ ಶ್ರೀ ಮಹೇಶ್ ಜೋಶಿ ರವರ ವಿರುದ್ಧವಾಗಿ ತಾವು ಕೆಲಸ ಮಾಡುತ್ತಿರುವುದಲ್ಲದೇ, ಬೇರೊಬ್ಬ ಅಭ್ಯರ್ಥಿಯ ಪರವಾಗಿ ತಮ್ಮ ಬೆಂಬಲವನ್ನು ಘೋಷಿಸಿ ಹಲವಾರು ವಾಟ್ಸ್‌ಆಪ್‌ ಗ್ರೂಪ್‌ಗಳಿಗೆ ಸಂದೇಶಗಳನ್ನೂ ಹಾಕಿರುತ್ತೀರಿ..”

“ಇದಕ್ಕೆ ಸಂಬಂಧಿಸಿದಂತೆ ಪದ್ಮನಾಭನಗರ ಮಂಡಲ ಭಾಜಪ ಘಟಕದ ಅಧ್ಯಕ್ಷರಾಗಿರುವ ರವಿಕುಮಾರ್‌ ದೂರನ್ನೂ ಸಲ್ಲಿಸಿರುತ್ತಾರೆ. ಆದ ಕಾರಣ ಈ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮನ್ನು ದಕ್ಷಿಣ ಜಿಲ್ಲಾ ಭಾಜಪ ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಲು ಇಚ್ಛಿಸುತ್ತೇನೆ. ಇನ್ನು ಮುಂದೆ ತಾವು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂಬ ಅಂಶವನ್ನೂ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ

ಎನ್‌.ಆರ್‌.ರಮೇಶ್ ಅವರ ಈ ಪತ್ರವು ವೈರಲ್‌ ಆಗಿದೆ. ಜೋಶಿಯವರು ಪಕ್ಷಾತೀತರಲ್ಲ ಎಂಬುದು ಕೇವಲ ಹೇಳಿಕೆಯಷ್ಟೇ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಎನ್‌.ಆರ್‌.ರಮೇಶ್, “ಮಹೇಂದ್ರಗೌಡ ಅವರು ನಿರಂತರವಾಗಿ ಪಕ್ಷಕ್ಕೆ ಮುಜುಗರ ಆಗುವಂತೆ ಪೋಸ್ಟರ್‌ಗಳನ್ನು ಮಾಡುತ್ತಿದ್ದರು. ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಅಪಪ್ರಚಾರ ಮಾಡಿದ್ದರು. ಈಗಾಗಲೇ ಮೂರು ಬಾರಿ ಕರೆದು ಶೋಕಸ್ ನೋಟಿಸ್ ನೀಡಲಾಗಿತ್ತು. ಆದರೂ ಪಕ್ಷದ ವಿರುದ್ಧವಾಗಿ ನಡೆದುಕೊಂಡಿದ್ದರು. ಹೀಗಾಗಿ ಅವರನ್ನು ಕಾರ್ಯಕಾರಣಿ ಸಮಿತಿಯಿಂದ ತೆಗೆಯಲಾಗಿದೆ. ಪಕ್ಷದ ಕಾರ್ಯಕರ್ತರಾಗಿ ಮುಂದುವರಿಯಬಹುದು. ಅದಕ್ಕೆ ಅಡ್ಡಿ ಇಲ್ಲ. ನಮ್ಮ ಜಿಲ್ಲೆಯಿಂದ ಮಹೇಶ್‌ ಜೋಶಿಯವರಿಗೆ ಬೆಂಬಲ ನೀಡಿದ್ದೇವೆ. ಕಾಂಗ್ರೆಸ್‌ನವರು, ಜೆಡಿಎಸ್‌ನವರು, ಕಮ್ಯುನಿಸ್ಟರು ಎಲ್ಲರೂ ಕಸಾಪ ರಾಜಕೀಯದಲ್ಲಿ ರಾಜಕಾರಣ ಮಾಡಿದ್ದಾರೆ. ಹೀಗಾಗಿ ನಮ್ಮ ವಿಚಾರಧಾರೆಗಳಿಗೆ ಹತ್ತಿರವಿರುವವರಿಗೆ ಬೆಂಬಲ ನೀಡಿದ್ದೇವೆ. ಮಹೇಶ್‌ ಜೋಶಿಯವರೇನೂ ನಮ್ಮ ಬಳಿ ಬಂದು ಬೆಂಬಲ ಕೇಳಿಲ್ಲ. ಇದು ನಮ್ಮ ವೈಯಕ್ತಿಕ ನಿಲುವು” ಎಂದರು. ಮಹೇಂದ್ರಗೌಡ ಅವರ ಪ್ರತಿಕ್ರಿಯೆಗೆ ಕರೆ ಮಾಡಲಾದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಕಸಾಪದಂತಹ ಸ್ವಾಯತ್ತ ಸಂಸ್ಥೆ ದಿನೇದಿನೇ ಪಕ್ಷ ರಾಜಕಾರಣದ ಪಡಸಾಲೆಯಾಗುತ್ತಿರುವುದಕ್ಕೆ ಪ್ರಜ್ಞಾವಂತರು ವಿಷಾದ ವ್ಯಕ್ತಪಡಿಸುತ್ತಿರುವುದಂತೂ ಸತ್ಯ. ಜಾತಿ, ಮತಗಳನ್ನು ಮೀರಿ ಕನ್ನಡದ ಕೆಲಸಗಳು ಆಗಬೇಕೆಂಬುದು ಕನ್ನಡ ಮನಸ್ಸುಗಳ ಆಗ್ರಹ.


ಇದನ್ನೂ ಓದಿರಿ: ಹಂಸಲೇಖರ ಪರ ಕಾಂಗ್ರೆಸ್‌ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...