ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, ಸರ್ಕಾರವು ಉದ್ದೇಶಪೂರ್ವಕವಾಗಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ನಿಜವಾಗಿಯೂ ಸಂವಿಧಾನವನ್ನು ನಂಬಿದರೆ, ಅದು ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ, ಇತ್ತಿಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ ಎಂಪುರಾನ್ ಅನ್ನು ಉಲ್ಲೇಖಿಸಿದ ಬ್ರಿಟ್ಟಾಸ್, ಬಿಜೆಪಿ ಸಂಸದ ಸುರೇಶ್ ಗೋಪಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ನಿಮ್ಮ ವಿಷವನ್ನು ಕೇರಳ
ಸದನದಲ್ಲಿರುವ ಬಿಜೆಪಿ ಸದಸ್ಯರಲ್ಲಿ ಎಂಪೂರನ್ ಸಿನಿಮಾದ ‘ಮುನ್ನಾ’ ಎಂಬ ಪಾತ್ರಧಾರಿಯಂತ ವ್ಯಕ್ತಿಯಿದ್ದಾರೆ ಎಂದು ಬ್ರಿಟ್ಟಾಸ್ ಪರೋಕ್ಷವಾಗಿ ಬಿಜೆಪಿ ಸಂಸದ ಸುರೇಶ್ ಗೋಪಿಯನ್ನು ಉಲ್ಲೇಖಿಸಿದ್ದಾರೆ. ನಂತರ ಅವರು,“ನಾವು ನಿಮ್ಮ ವಿಷವನ್ನು ಕೇರಳದಿಂದ ದೂರವಿಟ್ಟಿದ್ದೇವೆ. ಆದಾಗ್ಯೂ, ಒಬ್ಬ ವ್ಯಕ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶೀಘ್ರದಲ್ಲೇ ಆ ಖಾತೆಯನ್ನು ಸಹ ಮುಚ್ಚಲಾಗುವುದು.” ಎಂದು ಹೇಳಿದ್ದಾರೆ. ನಿಮ್ಮ ವಿಷವನ್ನು ಕೇರಳ
ಜಾನ್ ಬ್ರಿಟ್ಟಾಸ್ ಅವರ ಭಾಷಣದ ಆಯ್ದ ಭಾಗಗಳು:
“ಕಳೆದ ವರ್ಷವೊಂದರಲ್ಲೇ, ಕ್ರಿಶ್ಚಿಯನ್ನರ ಮೇಲೆ ಸುಮಾರು 700 ದಾಳಿಗಳು ನಡೆದಿವೆ. ಮಣಿಪುರದಲ್ಲಿ, ಅವರು 200 ಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟುಹಾಕಿದರು. ಕಳೆದ ಎರಡು ಅಥವಾ ಮೂರು ದಿನಗಳಿಂದ ಬಿಜೆಪಿ ಇದ್ದಕ್ಕಿದ್ದಂತೆ ಕ್ರಿಶ್ಚಿಯನ್ನರು ಮತ್ತು ಮುನಂಬಮ್ ಪ್ರದೇಶದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನಾವು ಸ್ಟಾನ್ ಸ್ವಾಮಿಯನ್ನು ಮರೆಯಲು ಸಾಧ್ಯವೆ? ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ, ಸಹಾಯವಿಲ್ಲದೆ ಒಂದು ಹನಿ ನೀರು ಕುಡಿಯಲು ಸಾಧ್ಯವಾಗದ ಅವರಿಗೆ ಒಂದು ಸ್ಟ್ರಾ ಕೂಡಾ ನೀಡದೆ ಜೈಲಿನಲ್ಲಿ ಸಾಯಲು ಬಿಡಲಿಲ್ಲವೇ? ನಾವು ಗ್ರಹಾಂ ಸ್ಟೇನ್ಸ್ ಅವರನ್ನು ಮರೆಯಲು ಸಾಧ್ಯವೇ? ಅವರನ್ನು ಅವರ ಮಕ್ಕಳೊಂದಿಗೆ ಜೀವಂತವಾಗಿ ಸುಟ್ಟುಹಾಕಲಿಲ್ಲವೇ? ಇಂದಿಗೂ ದಾಳಿಗಳು ಮುಂದುವರೆದಿವೆ.”
“ಕೇವಲ ಮೂವತ್ತು ಬೆಳ್ಳಿಯ ತುಂಡುಗಳಿಗಾಗಿ ಯೇಸು ಕ್ರಿಸ್ತನಿಗೆ ದ್ರೋಹ ಮಾಡಿದ ಪಾತ್ರವೊಂದು ಬೈಬಲ್‌ನಲ್ಲಿದೆ. ಇಲ್ಲಿ ಕೆಲವರು ಹಾಗೆ ಇದ್ದಾರೆ. ಕೆಲವು ದಿನಗಳ ಹಿಂದೆ, ಕೆಲವು ವ್ಯಕ್ತಿಗಳು ಶಿಲುಬೆ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಮಾತನಾಡಿದರು, ಆದರೆ ವಾಸ್ತವದಲ್ಲಿ, ಅವರು ಕ್ರಿಸ್ತನಿಗೆ ದ್ರೋಹ ಮಾಡಿದ ಯೂದನಂತಿದ್ದಾರೆ.”
“ಇತ್ತೀಚೆಗೆ, ನಾವು ಎಂಪುರಾನ್ ಚಿತ್ರದ ಬಗ್ಗೆ ಮಾತನಾಡಿದ್ದೆವು. ಆ ಚಿತ್ರದಲ್ಲಿ ಮುನ್ನಾ ಎಂಬ ಪಾತ್ರವಿದೆ. ಮುನ್ನಾ ಯಾರೆಂದು ನಿಮಗೆ ತಿಳಿದಿದೆಯೇ? ಆ ಪಾತ್ರವನ್ನು ನೀವು ಇಲ್ಲಿಯೇ(ಬಿಜೆಪಿ ಪೀಢಗಳ ಮೇಲೆ) ನೋಡಬಹುದು. ಕೇರಳದ ಜನರು ಈ ಮುನ್ನಾ ಪಾತ್ರಧಾರಿಯನ್ನು ಗುರುತಿಸುತ್ತಾರೆ. ಅದು ಕೇರಳದ ಇತಿಹಾಸ. ನಾವು ನಿಮ್ಮ ವಿಷವನ್ನು ನಮ್ಮ ರಾಜ್ಯದಿಂದ ದೂರವಿಟ್ಟಿದ್ದೇವೆ. ಹೌದು, ಒಬ್ಬ ವ್ಯಕ್ತಿ ಗೆದ್ದಿದ್ದಾನೆ, ವಿಧಾನಸಭೆಯಲ್ಲಿ ಕೂಡಾ ಒಂದು ಖಾತೆ ಇತ್ತು, ಅದನ್ನು ನಾವು ಮುಚ್ಚಿದ್ದೇವೆ. ಅದನ್ನು ಮುಚ್ಚಿದಂತೆ, ಶೀಘ್ರದಲ್ಲೇ ಲೋಕಸಭೆಯ ಈ ಖಾತೆಯನ್ನು ಸಹ ಮುಚ್ಚುತ್ತೇವೆ. ಕೇರಳದಲ್ಲಿ ಒಂದು ತಪ್ಪು ಸಂಭವಿಸಿದೆ, ಆದರೆ ನಾವು ಅದನ್ನು ಶೀಘ್ರದಲ್ಲೇ ಸರಿಪಡಿಸುತ್ತೇವೆ – ಚಿಂತಿಸುವ ಅಗತ್ಯವಿಲ್ಲ.”
ಬ್ರಿಟ್ಟಾಸ್ ಅವರ ಈ ಹೇಳಿಕೆ ಸಂಸದ ಸುರೇಶ್ ಗೋಪಿ ಅವರ ತ್ರಿಶೂರ್ ಕ್ಷೇತ್ರದ ಬಗ್ಗೆಯಾಗಿದೆ. ಅವರು ಕೇರಳದ ಮೊದಲ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
ಮುನಂಬಮ್ ಬಗ್ಗೆ ಭರವಸೆ:
ಬ್ರಿಟಸ್ ಮುನಂಬಮ್ ಪ್ರದೇಶದ ಜನರಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ. “ಮುನಂಬಮ್‌ನಲ್ಲಿ ಯಾರೂ ತಮ್ಮ ಮನೆಯನ್ನು ಕಳೆದುಕೊಳ್ಳುವುದಿಲ್ಲ. ಇದು ಎಡಪಂಥೀಯ ಸರ್ಕಾರದ ಬದ್ಧತೆಯಾಗಿದೆ. ಐದು ಲಕ್ಷ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಶಕ್ತಿ ಮತ್ತು ಪ್ರಾಮಾಣಿಕತೆ ನಮಗಿದ್ದರೆ, ಮುನಂಬಮ್‌ನ ಜನರನ್ನು ರಕ್ಷಿಸುವ ಜವಾಬ್ದಾರಿಯೂ ನಮಗಿದೆ.” ಎಂದು ಘೋಷಿಸಿದ್ದಾರೆ.
“ನಾವು ಅದನ್ನು ಮಾಡಲಿದ್ದು, ನಮಗೆ ಯಾರ ಸಹಾನುಭೂತಿಯೂ ಅಗತ್ಯವಿಲ್ಲ. ಕೇರಳದಲ್ಲಿ ಯಾವುದೇ ಮಸೀದಿಯನ್ನು ಬಲವಂತವಾಗಿ ಮುಚ್ಚಲಾಗುವುದಿಲ್ಲ. ಯಾವುದೇ ಪೂಜಾ ಸ್ಥಳವನ್ನು ಮರೆಮಾಡಲಾಗುವುದಿಲ್ಲ. ಯಾರೂ ಭಯದಿಂದ ಬದುಕಬೇಕಾಗಿಲ್ಲ. ಕೇರಳದಲ್ಲಿ ಸಹೋದರತ್ವದ ವಾತಾವರಣವನ್ನು ನಾವು ಖಚಿತಪಡಿಸುತ್ತೇವೆ. ಅದು ಅಲ್ಲಿ ಅಸ್ತಿತ್ವದಲ್ಲಿದ್ದು, ಅದನ್ನು ಹೇಗೆ ನಿರ್ವಹಿಸಬೇಕೆಂದು ನಮಗೆ ತಿಳಿದಿದೆ. ನೀವು ಈಗ ಕ್ರಿಶ್ಚಿಯನ್ನರಿಗಾಗಿ ಮೊಸಳೆ ಕಣ್ಣೀರು ಸುರಿಸಿರಬಹುದು, ಆದರೆ ಕೇರಳದ ಜನರು ನಿಮ್ಮ ವಂಚನೆಯನ್ನು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ.”
ಬಿಜೆಪಿಯ ಕೋಮು ರಾಜಕೀಯದ ಟೀಕೆ:
ದೇಶದಲ್ಲಿ ನಿರಾಶ್ರಿತರಾಗಿರುವ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸಿದ ಜಾನ್ ಬ್ರಿಟ್ಟಾಸ್, “ನೀವು ಈ ಮಸೂದೆಯನ್ನು ಮಂಡಿಸುವಾಗ ‘ಮುನಂಬಂ, ಮುನಂಬಂ’ ಎಂದು ಪುನರಾವರ್ತಿಸುತ್ತಿದ್ದೀರಿ. ಆದರೆ ಉತ್ತರ ಭಾರತದಲ್ಲಿ, ನೀವು ಹತ್ತಾರು ಸಾವಿರ ಜನರನ್ನು ಸ್ಥಳಾಂತರಗೊಳಿಸಿ, ನಿರಾಶ್ರಿತರನ್ನಾಗಿ ಮಾಡಿದ್ದೀರಿ. ಮಣಿಪುರದಲ್ಲಿ 50,000 ಕ್ಕೂ ಹೆಚ್ಚು ಜನರು ಈಗ ನಿರಾಶ್ರಿತರಾಗಿದ್ದಾರೆ. ಅನೇಕರು ದೇಶವನ್ನು ಬಿಟ್ಟು ಓಡಿಹೋಗಿದ್ದಾರೆ. ಅವರ ಬಗ್ಗೆ ನೀವು ಏನೂ ಹೇಳುತ್ತಿಲ್ಲ. ನೀವು ಹಲವಾರು ಚರ್ಚುಗಳನ್ನು ನಾಶಪಡಿಸಿದ್ದೀರಿ. ನೀವು ಎಂಪುರಾನ್‌ನ ಮುನ್ನಾ ಪಾತ್ರಧಾರಿಯಾಗಿದ್ದೀರಿ. ಆದರೆ ಕೇರಳದ ಜನರು ನಿಮ್ಮಲ್ಲಿರುವ ಈ ಮುನ್ನಾಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿದ್ದಾರೆ.”
“ನಿಜವಾಗಿಯೂ ಭಾರತೀಯ ಸಂವಿಧಾನವನ್ನು ನೀವು ನಂಬಿದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ. ನೀವು ಕೋಮು ಸಾಮರಸ್ಯವನ್ನು ಬಯಸಿದರೆ, ಎಲ್ಲಾ ಜನರನ್ನು ಮತ್ತು ಎಲ್ಲಾ ನಂಬಿಕೆಗಳನ್ನು ಸಮಾನವಾಗಿ ಪರಿಗಣಿಸುವಲ್ಲಿ ನಂಬಿಕೆಯಿದ್ದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ” ಎಂದು ಬ್ರಿಟ್ಟಾಸ್ ನೇರ ಮನವಿಯೊಂದಿಗೆ ತನ್ನ ಭಾಷಣವನ್ನು ಮುಕ್ತಾಯಗೊಳಿಸಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಕ್ಫ್ ಮಸೂದೆಗೆ ಬೆಂಬಲ | ನಿತೀಶ್ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ
ವಕ್ಫ್ ಮಸೂದೆಗೆ ಬೆಂಬಲ | ನಿತೀಶ್ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ

