“ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಅದಾನಿ ಯಾರು? ಅವರಿಗೆ ಇಲ್ಲಿ (ರಾಜಕೀಯದಲ್ಲಿ) ಏನು ಕೆಲಸವಿದೆ?” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ನ.14) ಪ್ರಶ್ನಿಸಿದ್ದಾರೆ.
ಕಲಬುರಗಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯದಲ್ಲಿ ಅದಾನಿ ಹಸ್ತಕ್ಷೇಪ ಮಾಡುತ್ತಿದ್ದು, ಪ್ರಧಾನಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ.
ಗರಿಷ್ಠ ಸಂಖ್ಯೆಯ ಜನರಿಗೆ ಉದ್ಯೋಗ ಸಿಗುವುದರಿಂದ ಸರ್ಕಾರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಬೆಂಬಲಿಸಬೇಕು. ಆದರೆ, ಎನ್‌ಡಿಎ ಸರ್ಕಾರ ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ನಡೆಸಲು ಕಾರ್ಪೊರೇಟ್ ಸಂಸ್ಥೆಗಳಿಗೆ ಬೆಂಬಲ ನೀಡುತ್ತಿದೆ. ಅವುಗಳಿಂದ ನೇರ ಮತ್ತು ಪರೋಕ್ಷ ದೇಣಿಗೆಗಳನ್ನು ಪಡೆಯುತ್ತದೆ. ಆದ್ದರಿಂದಲೇ ಅದಾನಿಯವರಂತಹವರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
“ಮಹಾರಾಷ್ಟ್ರದ 2019ರ ವಿಧಾನಸಭೆಯ ಚುನಾವಣೆಯ ನಂತರ ಬಿಜೆಪಿ ಮತ್ತು ಅವಿಭಜಿತ ಎನ್‌ಸಿಪಿ ಜೊತೆಗೆ ನಡೆದಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಕೂಡಾ ಭಾಗವಹಿಸಿದ್ದರು” ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
‘ಮೀಸಲಾತಿ’ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಕುರಿತು ಪ್ರಶ್ನಿಸಿದಾಗ, “ಮೀಸಲಾತಿಯ ಬಗ್ಗೆ ಮಾತನಾಡಲು ಅವರು ಯಾರು? ಸಂವಿಧಾನವೇ ಮೀಸಲಾತಿಯ ಹಕ್ಕನ್ನು ನೀಡಿದೆ; ಯಾರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಖರ್ಗೆ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಅವರಿಗೆ ಪ್ರಯೋಜನಕಾರಿ ನೀತಿಗಳನ್ನು ಜಾರಿಗೆ ತರುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸಿರುವುದು ಕಾಂಗ್ರೆಸ್ ಪಕ್ಷದ ಬದ್ಧತೆಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿಗಳ ಅನುಷ್ಠಾನ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ನಮ್ಮ ಬದ್ಧತೆ ತೋರಿಸಲು ಮಾದರಿಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಧರ್ಮ ಆಧಾರಿತ ರಾಜಕೀಯಕ್ಕೆ ಪ್ರಾಮುಖ್ಯತೆ ನೀಡುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ಓಲೈಸಲು ಪ್ರಯತ್ನಿಸುತ್ತದೆ ಎಂದು ಜನರಿಗೆ ತಿಳಿದಿದೆ. ನಾವು ಅದನ್ನು ವಿರೋಧಿಸುತ್ತೇವೆ. ನಾನು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈಗಾಗಲೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಪ್ರವಾಸ ಮಾಡಿದ್ದು, ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿಯಿಂದ ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ : ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ


