ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣ ಭಾನುವಾರ (ಜ.19) ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಯಿತು. ಭಾರತದ ಪುರುಷರು ಮತ್ತು ಮಹಿಳೆಯರ ತಂಡಗಳು ತಮ್ಮ ಫೈನಲ್ ಪಂದ್ಯಗಳಲ್ಲಿ ನೇಪಾಳವನ್ನು ಸೋಲಿಸಿ ಚೊಚ್ಚಲ ಖೋ ಖೋ ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
ಕರ್ನಾಟಕದ ಚೈತ್ರಾ ಬಿ. ಅವರ ಅಮೋಘ ಆಟದಿಂದ ಭಾರತದ ಮಹಿಳೆಯರ ತಂಡವು ಖೋ ಖೋ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಅದರ ಬೆನ್ನಲ್ಲೇ ಪುರುಷರ ತಂಡವೂ ಸಾಂಘಿಕ ಆಟ ಪ್ರದರ್ಶಿಸಿ ಚೊಚ್ಚಲ ವಿಶ್ವಕಿರೀಟ ತನ್ನದಾಗಿಸಿಕೊಂಡಿತು. ಎರಡೂ ವಿಭಾಗಗಳಲ್ಲೂ ನೇಪಾಳ ತಂಡವು ರನ್ನರ್ಸ್ ಅಪ್ ಆಯಿತು.
ಮಹಿಳಾ ತಂಡದ ನಾಯಕಿ ಪ್ರಿಯಾಂಕಾ ಇಂಗಲ್ ಬಹು ಟಚ್ ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿದರು. ವುಮೆನ್ ಇನ್ ಬ್ಲೂ ತಂಡವು ಸರದಿ 1ರಲ್ಲಿ ಭದ್ರ ಬುನಾದಿ ಹಾಕಲು ಸಹಾಯ ಮಾಡಿದರು. ಅಲ್ಲಿ ಅವರು 14 ಅಂಕಗಳನ್ನು ಗಳಿಸಿದರು. ಈ ಮೂಲಕ ಭಾರತವು ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಅರ್ಧಾವಧಿಯಲ್ಲಿ 34-11 ಮುನ್ನಡೆ ಸಾಧಿಸಿತು, ನಂತರ ಹಿಂತಿರುಗಿ ನೋಡಲಿಲ್ಲ.
ಪಂದ್ಯಾಟದ ಕೊನೆಯ ಸರದಿಯಲ್ಲಿ ಚೈತ್ರಾ ಬಿ ಅವರ ಐದು ನಿಮಿಷಗಳಿಗೂ ಹೆಚ್ಚು ಸಮಯದ ಅದ್ಭುತ ಕನಸಿನ ಓಟವು ಭಾರತವನ್ನು ವಿಜಯಶಾಲಿಯನ್ನಾಗಿ ಮಾಡಿತು. ಖೋ ಖೋ ವಿಶ್ವಕಪ್‌ನ ಮಹಿಳಾ ವಿಭಾಗದ ಮೊದಲ ಚಾಂಪಿಯನ್ ಆಗಿ ಭಾರತ ಹೊರ ಹೊಮ್ಮಿತು.
ಪುರುಷರ ತಂಡವೂ ಮೊದಲು ದಾಳಿಗಿಳಿದು ಆಕರ್ಷಕ ನೆಗೆತ, ಸ್ಕೈಡೈವ್ ಮೂಲಕ ಮೊಲದ ಸರದಿಯಲ್ಲಿ 26 ಅಂಕಗಳನ್ನು ಕಲೆ ಹಾಕಿತು. ಎರಡನೇ ಸರದಿಯಲ್ಲಿ ಎದುರಾಳಿ ತಂಡವು 18 ಅಂಕ ಪಡೆದರೆ, ಮೂರನೇ ಸರದಿಯಲ್ಲಿ ಮತ್ತೆ ಆತಿಥೇಯ ತಂಡದ ಆಟಗಾರರು 28 ಅಂಕ ಸಂಪಾದಿಸಿ ಅಂತರವನ್ನು ಹಿಗ್ಗಿಸಿಕೊಂಡರು. ಅಂತಿಮ ಸರದಿಯಲ್ಲೂ ಎದುರಾಳಿ ತಂಡ ಹೆಚ್ಚಿನ ಪ್ರತಿರೋಧ ತೋರಲು ಅತಿಥೇಯ ತಂಡ ಅವಕಾಶ ನೀಡಲಿಲ್ಲ.
ಒಟ್ಟು 19 ತಂಡಗಳಿದ್ದ ಮಹಿಳೆಯರ ವಿಭಾಗದಲ್ಲಿ ಭಾರತ ಮತ್ತು ನೇಪಾಳವು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದವು. ಹೀಗಾಗಿ, ಅವುಗಳ ಸೆಣಸಾಟ ಭಾರೀ ಕುತೂಹಲ ಮೂಡಿಸಿತ್ತು. ಆದರೆ, ಅಂತಿಮ ಹಣಾ ಹಣಿಯಲ್ಲಿ 78–40ರಿಂದ ಆತಿಥೇಯ ತಂಡ ಪಾರಮ್ಯ ಮೆರೆಯಿತು.
ಪುರುಷರ ವಿಭಾಗದ ಫೈನಲ್‌ನಲ್ಲಿ ನೇಪಾಳ ತಂಡವನ್ನು 54–36ರಿಂದ ಮಣಿಸಿದ ಭಾರತದ ಪಡೆ ಅಜೇಯವಾಗಿ ಉಳಿಯಿತು. ಪುರುಷರ ವಿಭಾಗದಲ್ಲಿ 20 ತಂಡಗಳು ಭಾಗವಹಿಸಿದ್ದವು.
ಇದನ್ನೂ ಓದಿ : ಗಾಝಾ ಕದನ ವಿರಾಮ | ಮೊದಲ ಹಂತದಲ್ಲಿ ಬಂಧಿತರು, ಒತ್ತೆಯಾಳುಗಳ ಬಿಡುಗಡೆ


