ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಯಾದವ ಸಮುದಾಯದ ಯುವಕನ ಕುಟುಂಬವು, ಪೊಲೀಸರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದೆ
ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮನೆಯಿಂದ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟ ಎರಡು ದಿನಗಳ ನಂತರ, ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಕುಟುಂಬ ದೂರಿದೆ.
ಸೆಪ್ಟೆಂಬರ್ 5ರಂದು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಡೆಸಿದ ಮಂಗೇಶ್ ಯಾದವ್ ಎನ್‌ಕೌಂಟರ್ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಇದನ್ನು ‘ನಕಲಿ ಎನ್‌ಕೌಂಟರ್’ ಎಂದು ಟೀಕಿಸಿವೆ.
ಡಕಾಯಿತಿ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಬಲ ಜಾತಿಗಳು ಮತ್ತು ಇತರ ಸಮುದಾಯಗಳ ಆರೋಪಿಗಳ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಮಂಗೇಶ್ ಅನ್ನು ಮಾತ್ರ ಆತನ ಜಾತಿಯ ಕಾರಣಕ್ಕೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ)ದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಯಾದವರು ಉತ್ತರ ಪ್ರದೇಶದ ಅತಿ ದೊಡ್ಡ ಇತರೆ ಹಿಂದುಳಿದ ವರ್ಗಗಳ ಸಮುದಾಯವಾಗಿದೆ ಮತ್ತು ಸಮಾಜವಾದಿ ಪಕ್ಷದ ರಾಜಕೀಯದ ತಳಹದಿ ಎಂದು ಪರಿಗಣಿಸಲಾಗಿದೆ.
“ಪೊಲೀಸರು ನನ್ನ ಮಗನನ್ನು ಕರೆದುಕೊಂಡು ಹೋಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಕಸ್ಟಡಿಯಲ್ಲೇ ಅವರು ಹತ್ಯೆ ಮಾಡಿದ್ದಾರೆ” ಎಂದು ಮಂಗೇಶ್ ಅವರ ತಾಯಿ ಶೀಲಾ ದೇವಿ ಸ್ಥಳೀಯ ಜೌನ್‌ಪುರದ ಬಕ್ಷಾ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಮಂಗೇಶ್ ಅನ್ನು ಬಂಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು’ಎನ್‌ಕೌಂಟರ್’ನಲ್ಲಿ ಕೊಲ್ಲಲಾಯಿತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಿರುವ ಯಾದವ ಸಮುದಾಯವನ್ನು ಉತ್ತರ ಪ್ರದೇಶ ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮಂಗೇಶ್ ಅವರ ‘ಎನ್ಕೌಂಟರ್’ ನಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸೇರಿದಂತೆ ಎಲ್ಲಾ 11 ಪೊಲೀಸ್ ಸಿಬ್ಬಂದಿ ಪ್ರಬಲ ಜಾತಿ ಗುಂಪುಗಳಿಗೆ, ವಿಶೇಷವಾಗಿ ಠಾಕೂರ್ ಮತ್ತು ಬ್ರಾಹ್ಮಣ ಜಾತಿಗೆ ಸೇರಿದವರು ಎಂದು ಸಮಾಜವಾದಿ ಪಕ್ಷದ ಬೆಂಬಲಿಗರು ಮತ್ತು ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಸೆಳೆದಿದ್ದಾರೆ.
ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಾರ್ಯಾಚರಣೆಯ ನೇತೃತ್ವವನ್ನು ಪೊಲೀಸ್ ಉಪ ಅಧೀಕ್ಷಕ ಧರ್ಮೇಶ್ ಕುಮಾರ್ ಶಾಹಿ ವಹಿಸಿದ್ದರು. ಅವರ ಪತ್ನಿ ರಿತು ಶಾಹಿ ಗೋರಖ್‌ಪುರದ ಬಿಜೆಪಿ ಪದಾಧಿಕಾರಿಯಾಗಿದ್ದು, ಸೆಪ್ಟೆಂಬರ್ 3 ಮಂಗಳವಾರ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
‘ಎನ್‌ಕೌಂಟರ್’ ನಲ್ಲಿ ಭಾಗವಹಿಸಿದ್ದ ಡಿಎಸ್‌ಪಿ ಶಾಹಿ ಅವರು ಮಂಗೇಶ್ ಅವರ ಮೃತ ಶರೀರದ ಪಕ್ಕ ಸ್ಲೈಡ್-ಇನ್ ಚಪ್ಪಲಿ ಧರಿಸಿದ್ದರು. ಅದು ಅವರು ಮುಂದೆ ಬ್ಲಡ್ ಪೂಲ್‌ಗೆ ಇಳಿಯಲು ಸಿದ್ದರಾಗಿದ್ದ ರೀತಿ ತೋರಿಸುತ್ತಿತ್ತು ಎಂದು ಎಸ್‌ಪಿ ಲೋಹಿಯಾ ವಾಹಿನಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಯಾದವ್ ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ.
ಮಂಗೇಶ್ ಅವರ ಹತ್ಯೆಯ ನಂತರ ಎಸ್‌ಟಿಎಫ್ ತಂಡದ ಗುಂಪು ಛಾಯಾಚಿತ್ರವನ್ನು ಯುಪಿ ಪೊಲೀಸರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರು ಮಂಗೇಶ್ ಅವರ ‘ಎನ್ಕೌಂಟರ್ ಅನ್ನು ನಕಲಿ ಎಂದು ಕರೆದಿದ್ದು, ರಾಜ್ಯ ಪೊಲೀಸರ ಸಂಪೂರ್ಣ ಕಾರ್ಯಾಚರಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
“ಆಡಳಿತ ಪಕ್ಷವು ಸುಲ್ತಾನ್‌ಪುರ ಡಕಾಯಿತಿಯಲ್ಲಿ ಭಾಗಿಯಾಗಿರುವವರೊಂದಿಗೆ ಆಳವಾದ ಸಂಬಂಧ ಹೊಂದಿರುವಂತೆ ತೋರುತ್ತಿದೆ. ಅದಕ್ಕಾಗಿಯೇ, ನಕಲಿ ಎನ್‌ಕೌಂಟರ್‌ಗೆ ಮೊದಲು, ಅವರು ‘ಮುಖ್ಯ ಆರೋಪಿ’ಯನ್ನು ಸಂಪರ್ಕಿಸಿದ್ದಾರೆ. ಅಲ್ಲದೆ, ಇತರರ ಕಾಲಿಗೆ ಗುಂಡು ಹಾರಿಸುವಾಗ ಶರಣಾಗುಂತೆ ಹೇಳಿದ್ದಾರೆ. ಆದರೆ, ಒಬ್ಬರನ್ನು(ಮಂಗೇಶ್ ಯಾದವ್) ಮಾತ್ರ ಅವರ ಜಾತಿಯ ಕಾರಣಕ್ಕೆ ಕೊಲೆ ಮಾಡಿದ್ದಾರೆ” ಎಂದು ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸಿರುವ ಅಖಿಲೇಶ್ ಯಾವದ್ ” ನಕಲಿ ಎನ್‌ಕೌಂಟರ್‌ಗಳು ರಕ್ಷಕನನ್ನು ಪರಭಕ್ಷಕನನ್ನಾಗಿ ಮಾಡುತ್ತದೆ. ನಿಜವಾದ ಪರಿಹಾರ ನಕಲಿ ಎನ್‌ಕೌಂಟರ್‌ಗಳಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿದೆ ಎಂದು ಹೇಳಿದ್ದಾರೆ.
ಮಂಗೇಶ್ ಹತ್ಯೆಯ ನಂತರ ಡಿಎಸ್ಪಿ ಶಾಹಿ ದಾಖಲಿಸಿರುವ ಎಫ್ಐಆರ್ ಪ್ರಕಾರ, ಸೆಪ್ಟೆಂಬರ್ 5 ರಂದು ಮುಂಜಾನೆ 3:15ಕ್ಕೆ ‘ಎನ್‌ಕೌಂಟರ್ ನಡೆದಿದೆ. ಎಸ್‌ಟಿಎಫ್ ತಂಡದಲ್ಲಿ ಡಿಎಸ್ಪಿಗಳಾದ ಶಾಹಿ ಮತ್ತು ವಿಮಲ್ ಕುಮಾರ್ ಸಿಂಗ್, ಇನ್‌ಸ್ಪೆಕ್ಟರ್‌ಗಳಾದ ರಾಘವೇಂದ್ರ ಸಿಂಗ್ ಮತ್ತು ಮಹಾವೀರ್ ಸಿಂಗ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಅತುಲ್ ಚತುರ್ವೇದಿ ಮತ್ತು ಪ್ರದೀಪ್ ಸಿಂಗ್, ಹೆಡ್ ಕಾನ್‌ಸ್ಟೆಬಲ್‌ಗಳಾದ ನೀರಜ್ ಪಾಂಡೆ, ಸುಶೀಲ್ ಸಿಂಗ್ ಮತ್ತು ರಾಮ್ ನಿವಾಸ್ ಶುಕ್ಲಾ ಕಾನ್‌ಸ್ಟೆಬಲ್‌ಗಳಾದ ಅಮಿತ್ ತ್ರಿಪಾಠಿ ಮತ್ತು ಅಮರ್ ಶ್ರೀವಾಸ್ತವ ಇದ್ದರು.
ಸೆಪ್ಟೆಂಬರ್ 5 ಗುರುವಾರ ಮುಂಜಾನೆ ಹಲವು ಅಪರಾಧ ಆರೋಪಗಳನ್ನು ಹೊತ್ತಿದ್ದ ಮಂಗೇಶ್ ಯಾದವ್ ಅವರನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ ಅಂತ್ಯದಲ್ಲಿ ಸುಲ್ತಾನ್‌ಪುರದ ಆಭರಣ ಮಳಿಗೆಯಲ್ಲಿ 1.5 ಕೋಟಿ ರೂಪಾಯಿಯ ದರೋಡೆ ನಡೆದಿತ್ತು. ಅದರಲ್ಲಿ ಮಂಗೇಶ್ ಭಾಗಿಯಾಗಿದ್ದ ಎನ್ನಲಾಗಿದೆ. ಆತನ ತಲೆಯ ಪೊಲೀಸರು 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ : ಜಾರ್ಖಂಡ್ | ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ 12 ಅಭ್ಯರ್ಥಿಗಳು ಸಾವು


