Homeಚಳವಳಿಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

ಕಿಸಾನ್ ಸತ್ಯಾಗ್ರಹ; ದೆಹಲಿಯ ರೈತ ಹೋರಾಟದ ಡಾಕ್ಯುಮೆಂಟರಿ

- Advertisement -
- Advertisement -

ಗೆಳೆಯರಾದ ಕೇಸರಿ ಹರವೂ ಅವರು ದೆಹಲಿಯ ಚಾರಿತ್ರಿಕ ಮಹತ್ವದ ರೈತಹೋರಾಟದ ಬಗ್ಗೆ ಮಾಡಿರುವ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರವನ್ನು ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕಾಗಿ ಈ ಟಿಪ್ಪಣಿ.

ಈ ಚಿತ್ರವನ್ನು ಒಂದು ಪದ್ಯ ಓದುವ ತನ್ಮಯತೆಯಲ್ಲಿ ನೋಡಿದೆ. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ರೂಪಕವನ್ನು ಕನ್ನಡ ದಲಿತ ಕಾವ್ಯ ಸೃಷ್ಟಿಸಿದೆಯಷ್ಟೆ. ಭಾರತದ ಬೇರೆಬೇರೆ ಹೋರಾಟದ ಧಾರೆಗಳು ಸೇರಿ ರೂಪುಗೊಂಡ ದೆಹಲಿ ರೈತ ಹೋರಾಟವು, ಈ ರೂಪಕದ ಆನ್ವಯಿಕತೆ ಅನಿಸಿತು. ಈ ಹೋರಾಟದಲ್ಲಿ ಭಾರತದ ಸಿಖ್ಖರ ಧಾರೆಯೇ ಪ್ರಧಾನವಾದುದು. ಚಿತ್ರದಲ್ಲಿ ಸಿಖ್ಖರ ಪೇಟಗಳ ಮತ್ತು ಬೇರೆಬೇರೆ ಸಂಘಟನೆಗಳ ಬಳಕೆಯಾದ ಬಾವುಟಗಳ ವರ್ಣವೈವಿಧ್ಯವು ಎದ್ದು ತೋರುತ್ತದೆ. ಈ ಹಲವು ಬಣ್ಣಗಳಿಗೆ ತಕ್ಕಂತೆ ಹೋರಾಟದಲ್ಲಿ ಹಲವು ಧರ್ಮದ ಜನರು ಇರುವುದನ್ನು ಚಿತ್ರ ಕಾಣಿಸುತ್ತದೆ. ಇದು ಭಾರತದ ಭಾಷಿಕ ಸಾಂಸ್ಕೃತಿಕ ಧಾರ್ಮಿಕ ಬಹುತ್ವವನ್ನು ಮಾತ್ರವಲ್ಲದೆ, ನಾಡಿನ ಹೋರಾಟಗಳಲ್ಲಿ ಇರಬೇಕಾದ ಪಾಲುದಾರಿಕೆಯ ಬಹುತ್ವವನ್ನೂ ಧ್ವನಿಸುತ್ತದೆ.

ಚಿತ್ರದಲ್ಲಿ ಒಂದೆಡೆ ಪ್ರಭುತ್ವದ ಪರವಾಗಿರುವ ಮಂತ್ರಿಗಳು ರೈತಕಾಯಿದೆ ಎಷ್ಟು ಉಪಯುಕ್ತವಾಗಿದೆ ಎಂದು ವಾದಿಸುವ ಹೇಳಿಕೆಗಳನ್ನು; ಮತ್ತೊಂದೆಡೆ ಈ ಕಾಯಿದೆಗಳು ಎಷ್ಟು ರೈತವಿರೋಧಿಯೂ ಕಾರ್ಪೊರೇಟ್ ಹಿತಾಸಕ್ತಿಯೂ ಆಗಿವೆಂಬ ರೈತರ ಮತ್ತು ಚಿಂತಕರ ಅಭಿಪ್ರಾಯಗಳನ್ನು (ಕೆಲವು ಸಂದರ್ಶನಗಳು ದೀರ್ಘವಾಗಿವೆ), ಉದ್ದಕ್ಕೂ ಮುಖಾಮುಖಿಯಾಗಿ ಮಂಡಿಸುವ ವಿನ್ಯಾಸವಿದೆ. ಆರೋಪ-ಪ್ರತ್ಯಾರೋಪದ ವಿನ್ಯಾಸದಲ್ಲಿರುವ ಈ ಪಕ್ಷ-ಪ್ರತಿಪಕ್ಷ ಮಂಡನೆಗಳ ನಡುವೆ ಚಿತ್ರ ನಿರ್ಲಿಪ್ತವಾಗಿ ನಿಂತಿದೆ ಅನಿಸುತ್ತದೆ. ಆದರೆ ಅದು ಸುಳ್ಳು ಮತ್ತು ಸತ್ಯಗಳನ್ನು ಮುಖಾಮುಖಿ ಮಾಡಿಸುತ್ತಿರುವುದು ಪ್ರೇಕ್ಷಕರಿಗೆ ಮನವರಿಕೆ ಆಗುತ್ತದೆ. ಪ್ರಭುತ್ವವು ತನ್ನ ಕ್ರೌರ್ಯ ಮತ್ತು ಸಂಚುಗಾರಿಕೆ ಅಡಗಿಸಲು ಎಂತಹ ಸೌಮ್ಯದ ಸ್ನೇಹದ ಸುರಕ್ಷೆಯ ಭಾಷೆಯನ್ನು ಬಳಸುತ್ತದೆ ಎಂಬ ಸಂಗತಿಯಂತೂ ಭಾಷೆಯ ರಾಜಕಾರಣಕ್ಕೆ ಒಳ್ಳೆಯ ನಿದರ್ಶನವಾಗಿದೆ. ಈ ಕಾರಣಕ್ಕೆ ಇದೊಂದು ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಸಾಕ್ಷ್ಯಚಿತ್ರ.

ಚಿತ್ರವು ದುಡಿವ ವರ್ಗದ ರಾಜಕೀಯ ಪ್ರಜ್ಞೆ ಮತ್ತು ಬುದ್ಧಿಜೀವಿಗಳ ಚಾರಿತ್ರಿಕ ಹೊಣೆಗಾರಿಕೆ
ಕುರಿತು ಹೊಸ ವ್ಯಾಖ್ಯಾನ ಮಂಡಿಸುವ ಕ್ರಮದಲ್ಲೂ ವಿಶೇಷತೆಯಿದೆ. ಇಲ್ಲಿ ರೈತರು, ತಮ್ಮ ವಾಸ್ತವಿಕ ಅನುಭವದ ನೆಲೆಯಿಂದ ಕೃಷಿಕಾಯಿದೆಗಳ ಬಗ್ಗೆ ಸರಳವಾಗಿ ಸಹಜವಾಗಿ ಆಡುವ ಮಾತುಗಳು, ಅವರ ಆಳವಾದ ರಾಜಕೀಯ ತಿಳಿವಳಿಕೆಯನ್ನು ಸೂಚಿಸುತ್ತವೆ; ಅದೇ ಕಾಲಕ್ಕೆ ರೈತರ ಪರವಾಗಿ ಕೆಲಸ ಮಾಡುವ ವಿಶ್ವವಿದ್ಯಾಲಯಗಳ ಚಿಂತಕರು, ತಮ್ಮ ಅಕೆಡೆಮಿಕ್ ತಿಳಿವಳಿಕೆಯನ್ನು ಬೀದಿ ಆಂದೋಲನಗಳಿಗೆ ಹಾಯಿಸುವುದು, ಬುದ್ಧಿಜೀವಿಗಳ ಚಟುವಟಿಕೆಯ ಮರುಹುಟ್ಟನ್ನು ಸೂಚಿಸುತ್ತವೆ. ಈ ಅರ್ಥದಲ್ಲಿ ಎರಡೂ ವರ್ಗಗಳ ಅರ್ಥಪೂರ್ಣ ರೂಪಾಂತರದ ಸಾಕ್ಷ್ಯವಾಗಿದೆ.

ಚಿತ್ರದಲ್ಲಿ ಒಂದೆಡೆ ಕೃಷಿಕಾಯಿದೆಗಳ ಬಗ್ಗೆ, ಸರ್ಕಾರದ ನೀತಿಗಳ ಬಗ್ಗೆ, ಸೈದ್ಧಾಂತಿಕವಾದ ಗಂಭೀರವಾದ ಟಿಪ್ಪಣಿಗಳನ್ನು ಮಾಡುವ ರೈತರ, ಚಿಂತಕರು, ಹೋರಾಟಗಾರರ ಮಾತುಕತೆ ಬರುತ್ತದೆ. ಇದಾದಕೂಡಲೇ ಹೋರಾಟದ ಕಣದಲ್ಲಿ ರಸ್ತೆಯ ಮೇಲೆ, ರೈತರು ರೊಟ್ಟಿಬೇಯಿಸುವ, ತರಕಾರಿ ಬಿಡಿಸುವ, ಜಳಕಮಾಡುವ, ಚಿತ್ರಗಳು ಬರುತ್ತವೆ. ಇವುಗಳನ್ನು ಚಿತ್ರವು ಒಂದರ ಬಳಿಕ ಮತ್ತೊಂದನ್ನು ಜೋಡಿಸುತ್ತ ಹೋಗುತ್ತದೆ. ಈ ಮೂಲಕ, ಚಳವಳಿಯು ದೈನಿಕ ಚಟುವಟಿಕೆಯಾಗುವ, ಜನರ ದೈನಿಕಗಳು ಹೋರಾಟದ ಭಾಗವಾಗುವ ಪ್ರಕ್ರಿಯೆಯನ್ನು ಹಿಡಿದಿಡುತ್ತದೆ. ಇದು ದೈನಿಕವನ್ನು ಘನತೀಕರಿಸುವ ವಿಧಾನವಾಗಿದೆ.

ಭಾರತದಲ್ಲಿ ಸಿಖ್ಖರ ಬಗ್ಗೆ ಅವರು ದಡ್ಡರು, ಖಾಲಿಸ್ತಾನವಾದಿಗಳು, ಅತಿಧಾರ್ಮಿಕರು ಎಂದೆಲ್ಲ ಗ್ರಹಿಕೆಗಳಿವೆ. ಆದರೆ ಈ ಚಿತ್ರ ಅವರ ಬಗೆಗಿನ ಪರಿಕಲ್ಪನೆಯನ್ನೇ ಬದಲಿಸಿಬಿಡುತ್ತದೆ. ಅವರ ಶ್ರಮಜೀವಿ ವ್ಯಕ್ತಿತ್ವ, ದೇಶಪ್ರೇಮ, ಹೋರಾಟದ ಕೆಚ್ಚು, ಸರಳತೆ, ಅನ್ಯಾಯಕ್ಕೆ ಒಳಗಾದ ಸಂಕಟಗಳನ್ನು ಚಿತ್ರವು ಕಾಣಿಸುತ್ತದೆ. ಇಲ್ಲಿರುವ ಸಾಂಘಿಕ ಹೋರಾಟದ ಹಿಂದೆ, ಇಡೀ ಸಿಖ್ ಧರ್ಮದ ಕೂಡುದುಡಿಮೆ, ಕೂಡುಭೋಜನ, ಲಂಗರ್ ಸಂಸ್ಕೃತಿ, ಜಾತ್ಯತೀತತೆಗಳು ಕಾಣುಟ್ಟವೆ. ದೆಹಲಿಯ ಸುಲ್ತಾನರ ವಿರುದ್ಧ ಸೆಣಸಾಡುತ್ತಲೇ ರೂಪುಗೊಂಡ ಧರ್ಮವಿದು. ಈ ಅರ್ಥದಲ್ಲಿ ಚಿತ್ರವು ಸಿಖ್ ಧರ್ಮದ ಒಳಗೇ ಇರುವ ಹೋರಾಟದ ಪರಂಪರೆಯನ್ನು ಭಿತ್ತಿಯನ್ನಾಗಿ ತಂದುಕೊಂಡಿದೆ.

ಈ ಚಿತ್ರದಲ್ಲಿ ಎರಡು ಕೊರತೆಗಳು ಕಂಡವು. 1. ನಾವು ಇಲ್ಲಿ ಚಳವಳಿಯಲ್ಲಿದ್ದೇವೆ. ನಮ್ಮ ಹೊಲಮನೆಯ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಅನೇಕ ರೈತರು ಹೇಳುತ್ತಾರೆ. ಆ ಮಹಿಳೆಯರು ತಮ್ಮ ಊರುಗಳಲ್ಲಿ ತೊಡಗಿರುವ ಕಾಯಕದ ಚಿತ್ರಗಳು ಇಲ್ಲದಿರುವುದು. ಹೋರಾಟಗಳಲ್ಲಿ ತೆರೆಮರೆಯಲ್ಲಿ ಉಳಿದುಬಿಡುವ ಈ ಅದೃಶ್ಯ ಸೈನಿಕರನ್ನು ಚರಿತ್ರೆಯು ಸಾಮಾನ್ಯವಾಗಿ ಗಮನಿಸದೆ ಹೋಗುವುದರಿಂದ, ಹೋರಾಟಗಳು ಗಂಡುಪ್ರಧಾನ ಕ್ರಿಯೆಗಳಾಗಿ ದಾಖಲಾಗಿಬಿಡುವ ಅಪಾಯವಿದೆ. 2. ಹೋರಾಟದಲ್ಲಿ ಭಾಷಣ ಚರ್ಚೆ ಘೋಷಣೆಗಳಷ್ಟೇ ಪ್ರಧಾನವಾದವು ಹಾಡುಗಳು. ಅದರಲ್ಲೂ ಸಿಖ್ಖರದು ಗುರುಬಾಣಿಗಳನ್ನು ಹಾಡುವ ಧರ್ಮ. ಪಂಜಾಬಿ ಹಾಡುಗಾರರು ಈ ಹೋರಾಟದಲ್ಲಿ ಭಾಗವಹಿಸಿರುವರು. ಅಂತಹ ಹಾಡುಗಳನ್ನು ಚಿತ್ರವು ಅಳವಡಿಸಿಕೊಂಡಿಲ್ಲದಿರುವುದು.

ಚಳುವಳಿ ಮುಗಿದಿಲ್ಲ, ಇನ್ನೂ ತೀವ್ರಗೊಳ್ಳುತ್ತದೆ - ರೈತ ಮುಖಂಡರುಈ ಚಿತ್ರವು ದೃಶ್ಯ ಮತ್ತು ಮಾತು ಪ್ರಧಾನವಾಗಿದೆ. ಇವುಗಳ ಸಂದಣಿಯ ಚಿತ್ರದಲ್ಲಿ, ಮಾತಿಲ್ಲದ, ಹಿನ್ನೆಲೆ ಸಂಗೀತವಿಲ್ಲದ ಗಾಢ ಮೌನ ಆವರಿಸಿಕೊಳ್ಳುವ, ಕೇವಲ ರೈತರ ಮುಖಗಳನ್ನೇ ಕಾಣಿಸುವ ಎರಡು ಸನ್ನಿವೇಶಗಳಿವೆ. ಮೊದಲನೆಯದು-ಗಣರಾಜ್ಯದಂದು ಟ್ರ್ಯಾಕ್ಟರ್ ಪೆರೇಡ್ ಮಾಡುವ ಕಾರ್ಯಕ್ರಮವು, ಪ್ರಭುತ್ವದ ಫಿತೂರಿಯಿಂದ ಗೊಂದಲದಲ್ಲಿ ಮುಗಿದುಹೋದ ಬಳಿಕ, ಚಿಂತೆಯಲ್ಲಿ ಮುಳುಗಿದ ರೈತರನ್ನು ಕಾಣಿಸುವ ಸನ್ನಿವೇಶ. ಎರಡನೆಯದು- ಚಿತ್ರದ ಕೊನೆಯಲ್ಲಿ ಸರ್ಕಾರವು ಚಳವಳಿಯನ್ನು ಮುರಿಯಲು ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಳ್ಳುವ ಹುನ್ನಾರ ಮಾಡಿದಾಗ ರೈತರು ಚಿಂತನೆಯಲ್ಲಿ ಮುಳುಗಿದ ಸನ್ನಿವೇಶ. ಈ ಎರಡೂ ಸನ್ನಿವೇಶಗಳು ಮಾತಿನಲ್ಲಿ ಹೇಳಲಾಗದ ದಿಟಗಳನ್ನು ಮೌನದ ಮೂಲಕ ಹೇಳಿಸುತ್ತ ಬಹಳ ಪರಿಣಾಮಕಾರಿಯಾಗಿವೆ.

ಚಿತ್ರದ ಕೊನೆ ಸಾಂಕೇತಿಕವಾಗಿದೆ. ಅದು ರೈತಾಪಿ ಧ್ವಜವನ್ನು ಹಿಡಿದು ಮಗುವೊಂದು ಆಡುವುದು. ಇದು ಹೋರಾಟದ ರಿಲೇಕೋಲನನ್ನು ಹೊಸತಲೆಮಾರಿಗೆ ಹಾಯುತ್ತಿರುವ ಈ ರೂಪಕವು ವಾಚ್ಯವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಬಿಳಿಯ ಗಡ್ಡಮೀಸೆಯ ರೈತರೇ ತುಂಬಿರುವ ಚಿತ್ರದಲ್ಲಿ, ಈ ಹೊಸತಲೆಮಾರಿನ ಮಗುವಿನ ಚಿತ್ರವು, ದೊಡ್ಡಮರದ ಬುಡದಲ್ಲಿ ಒಡಮೂಡಿದ ಚಿಗುರಿನ ಕುಡಿಯಂತಿದೆ.

ನಾನು ಕೇಸರಿಯವರು ಮಾಡಿರುವ ಅಘನಾಶಿನಿ ಕುರಿತ ಚಿತ್ರವನ್ನು ನೋಡಿರುವೆ. ಅದೊಂದು ಎಚ್ಚರಿಕೆಯಿಂದ ಕಟ್ಟಿದ ಕಾವ್ಯ. ಅದಕ್ಕೆ ಹೋಲಿಸಿದರೆ ರಣರಂಗದಲ್ಲಿ ನಿಂತು ಮಾಡಿದ ಈ ಚಿತ್ರವು ಕೊಂಚ ಚದುರಿಕೊಂಡಿದೆ. ಇಂತಹ ಚಿತ್ರಗಳು ನಮ್ಮ ಕಾಲದಲ್ಲಿ ಹುಟ್ಟಿಸಬಹುದಾದ ರಾಜಕೀಯ ಪ್ರತಿಸ್ಪಂದನೆಯ ದೃಷ್ಟಿಯಿಂದ ಮುಖ್ಯವಾದವು. ಮಾತ್ರವಲ್ಲ, ಮುಂದಿನ ತಲೆಮಾರಿಗೆ ಚರಿತ್ರೆಯಲ್ಲಿ ಇಂತಹದೊಂದು ಚಳುವಳಿ ನಡೆದಿತ್ತು ಎಂದು ಒದಗುವ ಆಕರವಾಗುವುದು. ಕನ್ನಡದ ಒಳ್ಳೆಯ ಮನಸ್ಸೊಂದು ಈ ಚಿತ್ರ ಮಾಡಿದೆಯೆಂಬುದು ಅಭಿಮಾನ ಹುಟ್ಟಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ದಿಟ್ಟ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...