ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿ ಅಂಬೇಡ್ಕರ್‌ರವರ ವಿಚಾರಗಳಿಗೆ ಅವಮಾನ ಮಾಡಿದ್ದ ಶಿಕ್ಷಕನನ್ನು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ಕುಶಾಲನಗರದ ಅಂತಿಮ ವರ್ಷದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಅಭಿಲಾಷ್ ಅವರು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲ್ಲೂಕು ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಧರ್ಮರಾಜ್ ಕೊಲೆ ಬೆದರಿಕೆ ಹಾಕಿದ್ದು, ವೈರಲ್ ಆಗಿದೆ. ಬಳಿಕ ಶಿಕ್ಷಣ ಇಲಾಖೆ ಕ್ರಮ ಜರುಗಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಭಿಲಾಷ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಆಡಿಯೊ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಜೀವ ಭಯದಲ್ಲಿ ಇರುವಂತಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿಸಿ ವಿದ್ಯಾರ್ಥಿಯೊಂದಿಗೆ ಮಾತನಾಡಿದ ಸಂದರ್ಭದಲ್ಲಿ ವಿದ್ಯಾರ್ಥಿಯು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಧರ್ಮರಾಜ್ ಸರ್ಕಾರಿ ನೌಕರರಾಗಿದ್ದು ಅನುಚಿತ ವರ್ತನೆ ತೋರಿರುವುದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಧರ್ಮರಾಜ್ ಮಾತನಾಡಿರುವುದೇನು?
ಸುಮಾರು ಇಪ್ಪತ್ತು ನಿಮಿಷಗಳ ಕಾಲ ವಿದ್ಯಾರ್ಥಿ ಅಭಿಲಾಷ್ ಜೊತೆ ಮಾತನಾಡಿದ್ದ ಧರ್ಮರಾಜ್, ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲ್ಬುರ್ಗಿ ಹಾಗೂ ಗೋವಿಂದ ಪಾನ್ಸರೆಯವರು ಹತ್ಯೆಯಾದಂತೆ ನಿನ್ನನ್ನೂ ಹತ್ಯೆ ಮಾಡಲಾಗುತ್ತದೆ ಎಂದು ಹೆದರಿಸಿದ್ದರು.
ಅನಾಮಧೇಯನಾಗಿ ಧಾರವಾಡದಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದ ಧರ್ಮರಾಜ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಮಾತನಾಡಬೇಡ ಎಂದು ವಿದ್ಯಾರ್ಥಿಗೆ ತಾಕೀತು ಮಾಡಿದ್ದರು. ಜೊತೆಗೆ ‘ನಾನೊಬ್ಬ ಆರ್‌ಎಸ್‌ಎಸ್ ಕಾರ್ಯಕರ್ತ’ ಎಂದು ಒಪ್ಪಿಕೊಂಡಿದ್ದರು.
ಇದನ್ನೂ ಓದಿರಿ: 2016-2020ರ ನಡುವೆ 3,400 ಕೋಮು ಗಲಭೆಗಳು ನಡೆದಿವೆ ಎಂದು ಒಪ್ಪಿಕೊಂಡಿದ್ದ ಮೋದಿ ಸರ್ಕಾರ
ಅಂಬೇಡ್ಕರ್ ಬೌದ್ಧಕ್ಕೆ ಹೋದರು. ಹಿಂದೂ ಧರ್ಮವನ್ನು ತ್ಯಜಿಸಿದರು. ಅವರ ಬಗ್ಗೆ ಮಾತನಾಡಬಾರದು. ಮುಸ್ಲಿಮರು ಮತ್ತು ದಲಿತರು ದೇಶಕ್ಕೆ ಅಪಾಯಕಾರಿ ಎಂದು ಬೆದರಿಸಿದ್ದರು. ವಿದ್ಯಾರ್ಥಿಯ ವೈಯಕ್ತಿಕ ವಿವರಗಳನ್ನು ಕಲೆಹಾಕಿಕೊಳ್ಳುವಂತೆ ಮಾತನಾಡಿ, ‘ತಾಕತ್ತಿದ್ದರೆ ನೀನು ಇರುವಲ್ಲಿ ನಾಲ್ಕು ಜನ ನಿನ್ನಂಥವರನ್ನು ಹುಟ್ಟಿ ಹಾಕು ನೋಡೋಣ, ಜೈ ಭೀಮ್ ಎಂದು ಕೂಗು ನೋಡೋಣ’ ಎಂದೆಲ್ಲ ಬೆದರಿಸಿದ್ದರು. ಅಭಿಲಾಷ್ ಧೈರ್ಯದಿಂದಲೇ ಮಾತನಾಡಿ, ಅಂಬೇಡ್ಕರ್ ಕುರಿತು ನಿಮಗೇಕೆ ಬೇಸರ ಎಂದು ಪ್ರಶ್ನಿಸಿದ್ದರು. ಆಡಿಯೊ ವೈರಲ್ ಆದ ಬಳಿಕ ಧರ್ಮರಾಜ್ ಸಿಕ್ಕಿ ಬಿದ್ದಿದ್ದಾರೆ.
ಎಸ್‌ಸಿ ಸಮುದಾಯಕ್ಕೆ ಸೇರಿದ ಧರ್ಮರಾಜ್
ದಲಿತ ಮುಖಂಡರು ಧರ್ಮರಾಜ್ ಅವರಿಂದ ಕ್ಷಮೆ ಯಾಚಿಸಿದ್ದಾರೆ. “ನನ್ನಿಂದ ತಪ್ಪಾಗಿದೆ. ಮತ್ತೆಂದೂ ಈ ರೀತಿಯ ತಪ್ಪು ಮಾಡುವುದಿಲ್ಲ. ನಾನು ಕೂಡ ಪರಿಶಿಷ್ಟ ಜಾತಿಗೆ ಸೇರಿದವನು. ವಿದ್ಯಾರ್ಥಿ ಅಭಿಲಾಷ್ ಅವರಲ್ಲೂ ಕ್ಷಮೆ ಕೋರುತ್ತೇನೆ” ಎಂದು ಧರ್ಮರಾಜ್ ಹೇಳಿದ್ದಾರೆ.
ದಲಿತ ಮುಖಂಡರು ಧರ್ಮರಾಜ್‌ಗೆ ಬುದ್ಧಿ ಹೇಳಿ ಕಳಿಸಿದ್ದಾರೆ. ಶಿಕ್ಷಕನಾಗಿ ಮಾಡಿದ ಅತಾರ್ಚುಕ್ಕೆ ಶಿಕ್ಷಣ ಇಲಾಖೆ ಈಗ ಕ್ರಮ ಜರುಗಿಸಿದೆ.


