ರಾಜ್ಯದಾದ್ಯಂತ ಕೋಮು ದ್ವೇಷ ಹರಡುವ ಕೆಲಸವನ್ನು ದುಷ್ಕರ್ಮಿಗಳು ಮಾಡುತ್ತಿರುವ ಹಿನ್ನಲೆಯಲ್ಲಿ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿದು, ಸಾಮರಸ್ಯ ಸಾರುವ ಉದ್ದೇಶದಿಂದ ಕರಾವಳಿ ಪ್ರದೇಶದ ಜಿಲ್ಲೆಯಾದ ಉಡುಪಿಯಲ್ಲಿ ಮೇ 7ರ ಶನಿವಾರದಂದು ಸಹಬಾಳ್ವೆ ಉಡುಪಿ ಹಾಗೂ ರಾಜ್ಯದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಸೌಹಾರ್ದ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಾವೇಶದ ಸಂಚಾಲನಾ ಸಮಿತಿ “ಕರ್ನಾಟಕವು ಹಲವು ಶತಮಾನಗಳ ಕಾಲ ಹಲವು ಜಾತಿ, ಮತ, ವಿಚಾರ ಪಂಥಗಳ ಜನರು ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿರುವ ನಾಡಾಗಿದೆ. ಆಯಾ ಕಾಲಗಳ ಕಷ್ಟ-ಸುಖಗಳನ್ನು ಜನರು ಸಹಬಾಳ್ವೆಯ ಚೇತನದಲ್ಲಿ ಹಂಚಿ ಬದುಕಿದ ನಾಡು ನಮ್ಮದು. ಆದರೆ, ಇತ್ತೀಚಿಗಿನ ದಶಕಗಳಲ್ಲಿ ಅಧಿಕಾರ ರಾಜಕಾರಣಕ್ಕಾಗಿ ಮತ ದ್ವೇಷ ಸೃಷ್ಟಿಸುವ ಕೆಲಸಗಳು ಹೆಚ್ಚಾಗಿ ನಾಡು ಹಿಂಸೆಯ ಉದ್ವೇಗವನ್ನು ಅನುಭವಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಈ ವರ್ಷವಂತೂ, ಉಡುವ ಬಟ್ಟೆ, ದೈನಂದಿನ ವ್ಯಾಪಾರ ವ್ಯವಾಹಾರ, ತಿನ್ನುವ ತುತ್ತುಗಳಲ್ಲಿಯೂ ಮತ ಭೇದ ಸೃಷ್ಟಿಸಿ, ನಾಡಲ್ಲಿ ಮತ ದ್ವೇಷದ ದಳ್ಳುರಿಯನ್ನು ಹಬ್ಬಿಸುವ ಆತಂಕಕಾರಿ ವಿದ್ಯಮಾನಗಳನ್ನು ಕಾಣುತ್ತಿದ್ದೇವೆ. ಸೌಹಾರ್ದಯುತ ಸಹಬಾಳ್ವೆಯನ್ನು ಬಯಸುವ ಜನವರ್ಗವು ಎಚ್ಚೆತ್ತು ಸಹಬಾಳ್ವೆಯನ್ನು ಉಳಿಸಿ ಪೋಷಿಸುವ ಕಾರ್ಯದಲ್ಲಿ ತೊಡಗುವುದು ಕಾಲದ ತುರ್ತಾಗಿದೆ” ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ಕೋಮು ದ್ವೇಷ ಹೆಚ್ಚುತ್ತಿರುವ ಹಿನ್ನಲೆ: ರಾಜ್ಯ ಮಟ್ಟದ ಸೌಹಾರ್ದ ಸಮಾವೇಶಕ್ಕೆ ಸಜ್ಜಾಗುತ್ತಿರುವ ಉಡುಪಿ!
“ರಾಜ್ಯದಲ್ಲಿ ಸೌಹಾರ್ದಯುತ ಸಹಬಾಳ್ವೆಯನ್ನು ಬಯಸುವ ಪ್ರಗತಿಪರ ಸಂಘಟನೆಗಳು ಒಗ್ಗೂಡಿ, ‘ಸಹಬಾಳ್ವೆ ಉಡುಪಿ’ ಇದರ ಸಹಯೋಗದಲ್ಲಿ ಮೇ 7ರ ಶನಿವಾರದಂದು ‘ಸೌಹಾರ್ದ ನಡುಗೆ-ಸಹಬಾಳ್ವೆ ಸಮಾವೇಶ’ವನ್ನು ಆಯೋಜಿಸಲಾಗಿದೆ” ಎಂದು ಸಮಾವೇಶದ ಸಂಚಾಲನ ಸಮಿತಿ ತಿಳಿಸಿದ್ದು, ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಲು, ರಾಜ್ಯಮಟ್ಟದ ಈ ಸಾಮರಸ್ಯ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ನಾಡಿನ ಜನತೆಯಲ್ಲಿ ಸಮಿತಿಯ ವಿನಂತಿಸಿದೆ.
ಸೌಹಾರ್ದ ಸಮಾವೇಶದ ಬಗ್ಗೆ ಈ ಹಿಂದೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ್ದ ‘ಸಹಬಾಳ್ವೆ ಉಡುಪಿ’ ತಂಡದ ಸಂಚಾಲಕ ಅಮೃತ ಶೆಣೈ, “ಉಡುಪಿಯಿಂದ ಹಲವಾರು ವಿವಾದಗಳು ಪ್ರಾರಂಭವಾಗಿದೆ. ಇದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಅವುಗಳೆಲ್ಲವೂ ಬಹುತೇಕ ಸಾಮರಸ್ಯ ಕೆಡಿಸುವಂತ ವಿವಾದ ಹಾಗೂ ವಿಚಾರಗಳಾಗಿವೆ. ಹಾಗಾಗಿ ಶಾಂತಿ, ಸಾಮರಸ್ಯದ ಸಂದೇಶವನ್ನು ಉಡುಪಿಯಿಂದಲೇ ಸಾರಬೇಕು ಎಂಬ ಕಾರಣದಿಂದ ಇದನ್ನು ಹಮ್ಮಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದರು.
ಕಾರ್ಯಕ್ರಮದ ಅಂಗವಾಗಿ ಸೌಹಾರ್ಧ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಲಿದ್ದು, ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಹಾಗೂ ರಾಜಕೀಯೇತರ ನಾಯಕರುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಅಮೃತ್ ಶೆಣೈ ಹೇಳಿದ್ದರು.