ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು (ನ.11, 2025) ಚುನಾವಣಾ ಆಯೋಗ ಮರು ಮತ ಎಣಿಕೆ ಕೈಗೊಂಡಿದೆ.
ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹೀಗಾಗಿ, ಫಲಿತಾಂಶವನ್ನು ಪ್ರಕಟಿಸುವಂತಿಲ್ಲ. ಈ ಹಿನ್ನೆಲೆ ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿದೆ ಮತ್ತು ಬಿಗಿ ಭದ್ರತೆ ಏರ್ಪಡಿಸಲಾಗಿದೆ ವರದಿಯಾಗಿದೆ.
ಕೋಲಾರ ನಗರದ ಹೊರವಲಯ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ ಆವರಣದಲ್ಲಿ ಮರು ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಭದ್ರತೆಗಾಗಿ ಎಣಿಕೆ ಕೇಂದ್ರದ ಸುತ್ತಲೂ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿಸಿಟಿವಿ ಕಣ್ಗಾವಲು (360 ಡಿಗ್ರಿ ಕ್ಯಾಮರಾಗಳು ಸೇರಿದಂತೆ) ಅಳವಡಿಸಲಾಗಿದೆ ಮತ್ತು ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ 248 ಮತಗಳ ಅಲ್ಪ ಅಂತರದಿಂದ ಬಿಜೆಪಿಯ ಕೆ.ಎಸ್ ಮಂಜುನಾಥ್ ಗೌಡ ವಿರುದ್ದ ಗೆಲುವು ಸಾಧಿಸಿದ್ದರು.
ಇದನ್ನು ಪ್ರಶ್ನಿಸಿ ಮಂಜುನಾಥ್ ಗೌಡ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. “ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಇತರ ಕ್ಷೇತ್ರಗಳಂತೆ ಎಣಿಕೆ ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಮಾಡಿಲ್ಲ. ಎಣಿಕೆ ಹಾಲ್‌ನಲ್ಲಿ ಅನಧಿಕೃತ ವ್ಯಕ್ತಿಗಳು ಇದ್ದರು. ಮತಗಳ ಸಂಖ್ಯೆ ಹೊಂದಾಣಿಕೆಯಾಗಿಲ್ಲ ಇತ್ಯಾದಿ ಗಂಭೀರ ಆರೋಪಗಳನ್ನು ಮಂಜುನಾಥ ಗೌಡ ಮಾಡಿದ್ದರು.
ಈ ಸಂಬಂಧ ಸೆಪ್ಟೆಂಬರ್ 2025ರಲ್ಲಿ ಆದೇಶ ಹೊರಡಿಸಿ ಹೈಕೋರ್ಟ್, ಮತ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ನಂಜೇಗೌಡ ಅವರ ಆಯ್ಕೆಯನ್ನು ರದ್ದಗೊಳಿಸಿತ್ತು ಮತ್ತು ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆಗೆ ಆದೇಶಿಸಿತ್ತು.
ತನ್ನ ಆಯ್ಕೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ನಂಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2025ರ ಅಕ್ಟೋಬರ್ 14ರಂದು ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್, ನಂಜೇಗೌಡ ಅವರ ಆಯ್ಕೆ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ಕೊಟ್ಟಿದೆ. ಆದರೆ, ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿದೆ.


