ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ದೋಷಿ ಎಂದು ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯ ಇಂದು (ಜ.18) ತೀರ್ಪು ನೀಡಿದೆ. ಸೋಮವಾರ ಶಿಕ್ಷೆ ಪ್ರಕಟವಾಗಲಿದೆ.
ಆರೋಪಿ ಸಂಜಯ್ ರಾಯ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ಸಂಜಯ್ ರಾಯ್ ತಾನು ಅಮಾಯಕ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಮೃತ ತರಬೇತಿ ವೈದ್ಯೆಯ ದೇಹದ ಮೇಲೆ ಇದ್ದ ಅಂಶ ಮತ್ತು ಆರೋಪಿ ಸಂಜಯ್ ರಾಯ್ ಡಿಎನ್‌ಎ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ್ದ ವರದಿಯನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ಸಂಜಯ್ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಸಂಜಯ್ ರಾಯ್‌ಗೆ ಗರಿಷ್ಠ ಶಿಕ್ಷೆ ಮರಣದಂಡನೆ ಮತ್ತು ಕನಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಹೇಳಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ಪ್ರಕರಣದ ಹಿನ್ನೆಲೆ : ಆಗಸ್ಟ್ 9, 2024ರಂದು ಕೊಲ್ಕತ್ತಾದ ಪ್ರತಿಷ್ಠಿತ ಸರ್ಕಾರಿ ಅರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು.
ಈ ಘಟನೆ ದೇಶದಾದ್ಯಂತ ಭಾರೀ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಕೊಲ್ಕತ್ತಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ವೈದ್ಯರ ಕೆಲಸದ ಸ್ಥಳದ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ರೂಪಿಸಿತ್ತು ಮತ್ತು ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡುತ್ತಿತ್ತು.
ಗುಜರಾತ್: 12 ದರ್ಗಾ ಮತ್ತು ಸ್ಮಾರಕಗಳು ಸೇರಿದಂತೆ 335 ಕಟ್ಟಡಗಳ ತೆರವು


