ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಶವವಾಗಿ ಪತ್ತೆಯಾದ ಸ್ನಾತಕೋತ್ತರ ತರಬೇತಿ ವೈದ್ಯೆಯ ಪ್ರಾಥಮಿಕ ಮರಣೋತ್ತರ ಪರೀಕಾ ವರದಿ, ಲೈಂಗಿಕ ದೌರ್ಜನ್ಯದ ನಂತರ ಹತ್ಯೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವರದಿಯು ವೈದ್ಯೆಯ ಸಾವು ಆತ್ಮಹತ್ಯೆ ಎಂಬುವುದನ್ನು ತಳ್ಳಿಹಾಕಿದ್ದು, ಈ ಸಂಬಂಧ ತಾಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಹೇಳಿದ್ದಾರೆ.
“ನಾಲ್ಕು ಪುಟಗಳ ವರದಿಯ ಪ್ರಕಾರ, ಮಹಿಳೆಯ ಖಾಸಗಿ ಭಾಗ, ಮುಖ ಮತ್ತು ಕಣ್ಣುಗಳಲ್ಲಿ ರಕ್ತಸ್ರಾವವಾಗಿದೆ. ಮುಖ, ಉಗುರು, ಹೊಟ್ಟೆ, ಎಡಗಾಲು, ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿಗಳಿಗೆ ಗಾಯಗಳಾಗಿವೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ಆಸ್ಪತ್ರೆಯ ಕಡೆಯಿಂದಲೂ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಶುಕ್ರವಾರ ಮುಂಜಾನೆ, ಕೋಲ್ಕತ್ತಾ ಮಹಾನಗರದ ಆರ್‌ಜಿ ಕರ್ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಅರೆ ನಗ್ನ ಶವ ಪತ್ತೆಯಾಗಿತ್ತು. ಮೃತ ವೈದ್ಯೆ ಎದೆಯ ಔಷಧ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದರು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ನನ್ನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಮೃತಳ ತಂದೆ ಆರೋಪಿಸಿದ್ದು, ‘ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃತಳ ಪೋಷಕರಿಗೆ ದೂರವಾಣಿ ಕರೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರ ಆರೋಗ್ಯ ಕಾರ್ಯದರ್ಶಿ ಎನ್ ಎಸ್ ನಿಗಮ್ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಹತ್ಯೆ ಘಟನೆ ಖಂಡಿಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಿಜಿಟಿ ವೈದ್ಯರು ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲಿ ಕೆಲಸ ಸ್ಥಗಿತಗೊಳಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಶೀಘ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಶಾಸಕ ಅಗ್ನಿಮಿತ್ರ ಪೌಲ್ ಸೇರಿದಂತೆ ವಿರೋಧ ಪಕ್ಷ ಬಿಜೆಪಿಯ ಹಲವಾರು ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದು, ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕ ಸಂತಾನು ಸೇನ್ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಇಡೀ ಘಟನೆಯ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ಸಂಪೂರ್ಣ ತನಿಖೆಯನ್ನು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಓರ್ವ ಆರೋಪಿಯ ಬಂಧನ :
ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನಿಗೆ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಮುಕ್ತ ಪ್ರವೇಶವಿತ್ತು. ಆತನ ಮೇಲೆ ನಮಗೆ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ : ವಕ್ಫ್ ಮಸೂದೆ ಪರಿಶೀಲನೆಗೆ 31 ಸದಸ್ಯರ ಜಂಟಿ ಸದನ ಸಮಿತಿ ರಚನೆ : ಓವೈಸಿ, ತೇಜಸ್ವಿ ಸೂರ್ಯ, ವೀರೇಂದ್ರ ಹೆಗ್ಗಡೆಗೆ ಸ್ಥಾನ


