42 ದಿನಗಳ ಪ್ರತಿಭಟನೆಗಳ ಬಳಿಕ ಪಶ್ಚಿಮ ಬಂಗಾಳದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಶನಿವಾರ ಬೆಳಿಗ್ಗೆ ಕಿರಿಯ ವೈದ್ಯರು ಭಾಗಶಃ ತಮ್ಮ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯನಿರತ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಅವರು ‘ಕೆಲಸ ನಿಲ್ಲಿಸಿ’ ಆಂದೋಲನ ನಡೆಸುತ್ತಿದ್ದರು.
ಕಿರಿಯ ವೈದ್ಯರು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತಮ್ಮ ಸೇವೆಗೆ ಪುನಃ ಸೇರಿಕೊಂಡರು. ಆದರೆ, ಹೊರರೋಗಿ ವಿಭಾಗದಲ್ಲಿ (ಒಪಿಡಿ) ಇನ್ನೂ ಅವರ ಸೇವೆ ಆರಂಭವಾಗಿಲ್ಲ.
“ನಾವು ಇಂದು ಮತ್ತೆ ಕರ್ತವ್ಯಕ್ಕೆ ಸೇರಲು ಪ್ರಾರಂಭಿಸಿದ್ದೇವೆ. ನಮ್ಮ ಸಹೋದ್ಯೋಗಿಗಳು ಇಂದು ಬೆಳಿಗ್ಗೆಯಿಂದ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ಮಾತ್ರ ತಮ್ಮ ಇಲಾಖೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಆದರೆ, ಒಪಿಡಿ ಗಳಲ್ಲಿ ಅಲ್ಲ. ಇದು ಕರ್ತವ್ಯಗಳ ಭಾಗಶಃ ಪುನರಾರಂಭವಾಗಿದೆ ಎಂಬುದನ್ನು ದಯವಿಟ್ಟು ಮರೆಯಬೇಡಿ” ಎಂದು ಪ್ರತಿಭಟನಾ ನಿರತ ವೈದ್ಯ ಅನಿಕೇತ್ ಮಹಾತೋ ತಿಳಿಸಿದ್ದಾರೆ.
ಹಲವು ಕಿರಿಯ ವೈದ್ಯರು ಈಗಾಗಲೇ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ತೆರಳಿದ್ದಾರೆ, ಅಲ್ಲಿ ಅವರು ‘ಅಭಯ ಚಿಕಿತ್ಸಾಲಯಗಳನ್ನು’ (ವೈದ್ಯಕೀಯ ಶಿಬಿರಗಳು) ಪ್ರಾರಂಭಿಸುತ್ತಾರೆ. ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೂ ಸಾರ್ವಜನಿಕ ಆರೋಗ್ಯದ ಬಗ್ಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತೇವೆ ಎಂದು ಅವರು ಹೇಳಿದರು.
ಮೃತ ವೈದ್ಯರಿಗೆ ನ್ಯಾಯದ ಜೊತೆಗೆ, ರಾಜ್ಯ ಆರೋಗ್ಯ ಕಾರ್ಯದರ್ಶಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಆಡಳಿತ ಮಂಡಳಿಯು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಇನ್ನೂ ಏಳು ದಿನ ಕಾಯುತ್ತೇವೆ. ಇಲ್ಲದಿದ್ದರೆ ಮತ್ತೊಂದು ಸುತ್ತಿನ ‘ಬಂದ್’ ಪ್ರಾರಂಭಿಸುತ್ತೇವೆ ಎಂದು ಧರಣಿ ನಿರತ ವೈದ್ಯರು ಹೇಳಿದರು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾದ ನಂತರ ಆಗಸ್ಟ್ 9 ರಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ, ಮೃತ ವೈದ್ಯರಿಗೆ ನ್ಯಾಯಕ್ಕಾಗಿ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರಮುಖ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರು ಸೇರಿದಂತೆ ಹಲವರನ್ನು ಬಂಧಿಸಿದೆ.
ಇದನ್ನೂ ಓದಿ; ನ್ಯಾಯಾಧೀಶರ ಹೇಳಿಕೆ ವೈರಲ್ : ಅನುಮತಿ ಇಲ್ಲದೆ ಕಲಾಪದ ವಿಡಿಯೋ ಬಳಕೆಗೆ ಹೈಕೋರ್ಟ್ ನಿರ್ಬಂಧ


