‘ಮಾದಿಗ’ ಸಮುದಾಯದ ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಗಳು ಹೇಳಿವೆ.
ಸಂತ್ರಸ್ತ ಯುವಕನನ್ನು ಗುಡದಪ್ಪ ಮುಳ್ಳಣ್ಣ (21) ಎಂದು ಗುರುತಿಸಲಾಗಿದೆ. ಗ್ರಾಮದ ನಾಗನಗೌಡ, ಯಲ್ಲಪ್ಪ, ಭೀಮಪ್ಪ, ಹನುಮಗೌಡ , ಪ್ರಜ್ವಲ್ ಹಾಗೂ ನವೀನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
“ಆರೋಪಿಗಳು ಮಾದಿಗ ಎಂಬ ಕಾರಣಕ್ಕೆ ಗುಡದಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಈ ದಿನ.ಕಾಮ್ ವರದಿ ಮಾಡಿದೆ.
“ಸೆ.9ರಂದು ಬೆಳಗ್ಗೆ ಗ್ರಾಮದ ಕಟ್ಟೆಯ ಮೇಲೆ ಕುಳಿತುಕೊಂಡು ಸಿಗರೇಟ್ ಸೇದುತ್ತಿದ್ದೆ. ಅಲ್ಲಿಗೆ ಬಂದ ವಾಲ್ಮೀಕಿ ಸಮುದಾಯದ ಯುವಕರು ಸಿಗರೇಟ್ ಸೇದಬಾರದು ಎಂದು ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾದರು. ನಾನು ಭಯಗೊಂಡು ಅಲ್ಲಿಂದ ಮನೆ ಕಡೆಗೆ ಹೋದೆ” ಎಂದು ಸಂತ್ರಸ್ತ ಯುವಕ ತಿಳಿಸಿರುವುದಾಗಿ ವರದಿ ಹೇಳಿದೆ.
“ಅದೇ ದಿನ ಸಂಜೆ ಗಣಪತಿ ವಿಸರ್ಜನೆ ವೀಕ್ಷಿಸಲು ಹೋದಾಗ ಮದ್ಯ ಸೇವಿಸಿದ್ದ ಅದೇ ಯುವಕರು ನನ್ನ ಮೇಲೆ ಹಲ್ಲೆ ಮಾಡಿ, ತಲೆಗೆ ಹೊಡೆದಿದ್ದಾರೆ. ಬಳಿಕ ನಾನು ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿಸಿದ್ದಾರೆ. ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕೈಗೆ ಸಿಕ್ಕ ಬಡಿಗೆ, ಚಪ್ಪಲಿಯಲ್ಲಿ ಹೊಡೆದಿದ್ದಾರೆ” ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ತ ಯುವಕ ಗುಡದಪ್ಪ ವಿವರಿಸಿದ್ದಾರೆ. ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿರುವ ಹಲ್ಲೆಗೊಳಗಾದ ಯುವಕ ಗುಡದಪ್ಪ ಮುಳ್ಳಣ್ಣ, “ಮಾದಿಗ ಜಾತಿ ಎಂಬ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಬೆಳಿಗ್ಗೆ ನಾನು ಸಿಗರೇಟ್ ಸೇದಲು ಕುಳಿತಿದ್ದಾಗ ಯುವಕರ ತಂಡ ಸಿಗರೇಟ್ ಸೇದಬಾರದು, ಇಲ್ಲಿಂದ ಹೋಗು ಎಂದಾಗ ಮಾತಿನ ಚಕಮಕಿ ನಡೆದಿತ್ತು. ಅಂದು ಸಂಜೆ 6ರ ಸುಮಾರಿಗೆ ಕಿರಾಣಿ ಅಂಗಡಿಗೆ ತೆರಳುತ್ತಿದ್ದಾಗ ನಾಗನಗೌಡ ಎಂಬಾತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಕಂಬಕ್ಕೆ ಕಟ್ಟಿ, ಸಿಕ್ಕ ಸಿಕ್ಕ ವಸ್ತುವಿನಲ್ಲಿ ಇತರರೂ ಹಲ್ಲೆ ಮಾಡಿದ್ದಾರೆ. ಗಲಾಟೆಯ ವಿಷಯ ತಿಳಿದು ನಮ್ಮ ಕುಟುಂಬಸ್ಥರು ಜಗಳ ಬಿಡಿಸಲು ಬಂದಾಗ, ಅವರನ್ನೂ ಕೂಡ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ತಿಳಿಸಿದ್ದಾನೆ.
ಇದನ್ನೂ ಓದಿ : ಯಾದಗಿರಿ| ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದವನ ಮೇಲೆ ದೂರು ದಾಖಲಿಸಿದ ಪೋಷಕರು; ಸಂಧಾನಕ್ಕೆ ಒಪ್ಪದ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ


