ಬಸಾಪುರ ಕೆರೆಯನ್ನು ಬಲ್ಡೋಟಾದಿಂದ ಮುಕ್ತಗೊಳಿಸಲು ಒತ್ತಾಯಿಸಿ ವಿಶಿಷ್ಟ ಪ್ರತಿಭಟನೆ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಸಾಪುರ ಕೆರೆ ಅತಿಕ್ರಮಣವನ್ನು ಖಂಡಿಸಿ, ಬಲ್ಡೋಟಾ ಎಂಎಸ್‌ಪಿಎಲ್ ಕಂಪನಿ ವಿರುದ್ಧ ಬೃಹತ್ “ಜನ-ಜಾನುವಾರು ಪ್ರತಿಭಟನೆ” ಇಂದು (ಜು.24) ಜಿಲ್ಲಾ ಕೇಂದ್ರದಲ್ಲಿ ನಡೆಯಿತು. ಬಸಾಪುರ ಕೆರೆ ಬಚಾವೋ ಮತ್ತು ಪರಿಸರ ಹಿತರಕ್ಷಣಾ ಸಮಿತಿಗಳು ಜಂಟಿಯಾಗಿ ಕರೆ ನೀಡಿದ ಈ ಪ್ರತಿಭಟನೆಯಲ್ಲಿ ಸುಮಾರು 4,000 ಕುರಿ ಮತ್ತು ದನಗಳೊಂದಿಗೆ ಸಹಸ್ರಾರು ರೈತರು ಕೊಪ್ಪಳ ಜಿಲ್ಲಾಡಳಿತದ ಕಚೇರಿ ಮುಂದೆ ಜಮಾಯಿಸಿ, ಉಚ್ಚ ನ್ಯಾಯಾಲಯದ ಆದೇಶದಂತೆ ಬಸಾಪುರ ಕೆರೆಯನ್ನು ತಕ್ಷಣವೇ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ, “ಸಿದ್ದರಾಮಯ್ಯನವರೇ ಇಲ್ಲಿ ನೋಡಿ, ಕುರಿಗಳಿಗೆ ಕುಡಿಯಲು ನೀರಿಲ್ಲ, ದನಗಳಿಗೆ ಕುಡಿಯಲು ನೀರಿಲ್ಲ!” ಎಂದು ಆಕ್ರೋಶದಿಂದ ಕೂಗಿದರು. ಕೊಪ್ಪಳ ಜಿಲ್ಲೆಯ ಬೃಹತ್ ಕಾರ್ಪೊರೇಟ್ ಸಂಸ್ಥೆಯಾದ ಬಲ್ಡೋಟಾ ಕಂಪನಿಗೆ ಬಸಾಪುರ ಕೆರೆಯನ್ನು ಬರೆದುಕೊಡಲಾಗಿದೆ ಎಂದು ಆರೋಪಿಸಿದ ರೈತರು, ಇದನ್ನು ವಿರೋಧಿಸಿ ಇಂದು ಕಂಪನಿ ಮುಂದೆ ಈ ಜನ-ಜಾನುವಾರು ಪ್ರತಿಭಟನೆ ನಡೆಸಲಾಯಿತು ಎಂದು ತಿಳಿಸಿದರು. ಸುಮಾರು 4,000ದಷ್ಟು ಕುರಿ ಮತ್ತು ದನಗಳೊಂದಿಗೆ ಪ್ರತಿಭಟಿಸಿದ ನೂರಾರು ಪ್ರತಿಭಟನಾಕಾರರು, “ಬಸಾಪುರ ಕೆರೆಯನ್ನು ನಾವು ಬಿಡುವುದಿಲ್ಲ, ಬಿಡುವುದಿಲ್ಲ!” ಎಂದು ಜೋರು ಘೋಷಣೆಗಳನ್ನು ಕೂಗಿದರು. ಇಂತಹ ಕಂಪನಿಗಳಿಗೆ ಕಾರ್ಖಾನೆ ಮಾಡಲು ಕೇಳಿದಷ್ಟು ಜಾಗ ಕೊಟ್ಟಿರುವುದರ ಪರಿಣಾಮವೇ ಈ ನೀರಿನ ಅಭಾವ ಮತ್ತು ಜಾನುವಾರುಗಳ ಸಂಕಷ್ಟ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ಅತಿಕ್ರಮಣ ಮತ್ತು ನೀರಿನ ಭೀಕರ ಅಭಾವ
ಪ್ರತಿಭಟನಾನಿರತ ರೈತರು ನೀಡಿದ ಮಾಹಿತಿಯ ಪ್ರಕಾರ, ಬಲ್ಡೋಟಾ ಕಂಪನಿಯು ತನಗೆ ಮಂಜೂರಾಗಿದ್ದ ಭೂಮಿಯ ಜೊತೆಗೆ, ಬಸಾಪುರ ಗ್ರಾಮದ 44 ಎಕರೆ 35 ಗುಂಟೆ ಸಾರ್ವಜನಿಕರ ಕೆರೆಯನ್ನು ಅಕ್ರಮವಾಗಿ ತನ್ನೊಡಲೊಳಗೆ ಸೇರಿಸಿಕೊಂಡು, ಸುತ್ತಲೂ ಕಂಪೌಂಡ್ ಅನ್ನು ನಿರ್ಮಿಸಿದೆ. ಇಷ್ಟೇ ಅಲ್ಲದೆ, ಕೆರೆಯ ಮಧ್ಯಭಾಗದಲ್ಲಿ ರಸ್ತೆಯನ್ನೂ ಸಹ ನಿರ್ಮಿಸಿದ್ದು, ಇದು ಸಂಪೂರ್ಣವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವನ್ನು ಕಡಿತಗೊಳಿಸಿದೆ. ಈ ಕಂಪನಿಯ ಸುತ್ತಮುತ್ತ ಇರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಭೂಮಿ ಮತ್ತು ಕೆರೆಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ. ಈ ಕಂಪನಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. “ಕೆಲವರು ಈ ಕಂಪನಿ ಜೊತೆಗೆ ನಿಂತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಜನ, ಜಾನುವಾರುಗಳ ಸ್ಥಿತಿ ಅರಣ್ಯರೋದನವಾಗಿದೆ. ಇಂತಹ ಒಂದು ಪರಿಸ್ಥಿತಿ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಉದ್ಭವಿಸಿದೆ,” ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸಿರುವುದು ಮಾತ್ರವಲ್ಲದೆ, ಈ ಅತಿಕ್ರಮಣವನ್ನು ಪ್ರಶ್ನಿಸಲು ಹೋದರೆ ಕಾರ್ಖಾನೆಯವರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮದ ರೈತರು, ಇಂದು ಸುಮಾರು 4,000 ಕುರಿ-ದನಗಳೊಂದಿಗೆ ಕೊಪ್ಪಳ ಜಿಲ್ಲಾಡಳಿತದ ಮುಂದೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.

ರೈತರ ಸಂಕಷ್ಟ ಮತ್ತು ಕಠಿಣ ಎಚ್ಚರಿಕೆ
ಒಬ್ಬ ರೈತ ಮಾತನಾಡಿ, “ನಮ್ಮ ಕೊಪ್ಪಳ ಜಿಲ್ಲೆಯ ಅಸ್ತಿಯನ್ನೆಲ್ಲಾ ಖರೀದಿ ಮಾಡಿಕೊಂಡು, ಕೆರೆಯ ನೀರನ್ನು ಕುಡಿಯಲು ಹೋಗಲು ದಾರಿಯಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಅದರ ಸಲುವಾಗಿ ಇಂದು ನಾವು ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲಿಕ್ಕೆ ಬಂದಿದ್ದೇವೆ,” ಎಂದು ಹೇಳಿದರು. ಈ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದಾಗುತ್ತದೆ. ಇದನ್ನು ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ “ಇಂದು 4,000 ಜಾನುವಾರುಗಳೊಂದಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ 45,000 ದನ ಮತ್ತು 1 ಲಕ್ಷ ಕುರಿಗಳೊಂದಿಗೆ ಬರುತ್ತೇವೆ,” ಎಂದು ಅವರು ಜಿಲ್ಲಾಡಳಿತಕ್ಕೆ ತೀವ್ರ ಎಚ್ಚರಿಕೆ ನೀಡಿದರು.
“ಆಗ ನಾವು ಈ ಕುರಿ ಮತ್ತು ಜಾನುವಾರುಗಳೊಂದಿಗೆ ಪ್ರತಿಭಟಿಸುತ್ತೇವೆ. ನಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ರೈತರು ದೃಢಸಂಕಲ್ಪ ವ್ಯಕ್ತಪಡಿಸಿದರು. “ಈ ಕಂಪನಿಯವರು 2007ರಿಂದಲೂ ನೀರನ್ನು ಬಳಕೆ ಮಾಡಲು ಬಿಟ್ಟಿಲ್ಲ. ಕೆರೆಯ ಸುತ್ತಲೂ ಕಂಪೌಂಡ್ ಹಾಕಿಬಿಟ್ಟಿದ್ದಾರೆ ಮತ್ತು ಗೇಟ್ ಮಾಡಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ, ಈ ಗೇಟಿಗೆ ಹತ್ತಾರು ಕಾವಲುಗಾರರನ್ನು ಇಟ್ಟಿದ್ದಾರೆ. ಹೀಗಿದ್ದಾಗ ನಾವು ನಮ್ಮ ಜಾನುವಾರುಗಳಿಗೆ ನೀರು ಕುಡಿಸುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು. ಬಸಾಪುರ ಕೆರೆಯ ಹತ್ತಿರ ಜನ ಅಥವಾ ಜಾನುವಾರು ಹೋದರೆ ಬಡಿದು ಕಳುಹಿಸುತ್ತಾರೆ. ಈ ರೀತಿಯ ದೌರ್ಜನ್ಯ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದೆ ಎಂದೂ ಪ್ರತಿಭಟಿಸಿದ ರೈತರು ಆರೋಪಿಸಿದರು.
ಹೋರಾಟದ ಪ್ರಮುಖ ಬೇಡಿಕೆಗಳು ಮತ್ತು ಸರ್ಕಾರದ ಅಸಡ್ಡೆ
ಇಂದು ಜನ ಮತ್ತು ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರರು ತಿಳಿಸಿದರು. ಇಂದಿನ ಹೋರಾಟದ ಪ್ರಮುಖ ಉದ್ದೇಶಗಳು ಎರಡು. “ಒಂದು, ಬಲ್ಡೋಟಾ ಕಂಪನಿಯ ವಿಸ್ತರಣೆಯನ್ನು ನಿಲ್ಲಿಸಬೇಕು. ಎರಡನೆಯದು, ಕಂಪನಿಗೆ ಬಸಾಪುರ ಕೆರೆಯನ್ನು ಜಿಲ್ಲಾಡಳಿತ ಮಾರಾಟ ಮಾಡಿದೆ. ಇದನ್ನು ನಾವು ಸರ್ವತ ಒಪ್ಪುವುದಿಲ್ಲ. ಹಾಗಾಗಿ ಬಸಾಪುರ ಕೆರೆಯನ್ನು ಜನ ಮತ್ತು ಜಾನುವಾರುಗಳಿಗೆ ಮುಕ್ತಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ,” ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು.
ಕಾನೂನುಬದ್ಧತೆ ಏನೇ ಇರಲಿ, ಸರ್ಕಾರ ಕಂಪನಿಗೆ ಈ ಕೆರೆಯನ್ನು ಮಾರಾಟ ಮಾಡಿರುವುದೇ ತಪ್ಪು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. “ಅದನ್ನು ಜನ ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಾಗಾಗಿ ಈ ಕಂಪನಿಯಿಂದ ದೌರ್ಜನ್ಯಕ್ಕೊಳಗಾದ ಗ್ರಾಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಬೇಕು, ಇಲ್ಲಿಯ ಪರಿಸ್ಥಿತಿ ಅವಲೋಕಿಸಿ ಇಲ್ಲಿರುವ ಕಂಪನಿಯನ್ನು ಒಕ್ಕಲೆಬ್ಬಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು,” ಎಂದು ಅವರು ಆಗ್ರಹಿಸಿದರು.
ಇದನ್ನು ಬಿಟ್ಟು ಸರ್ಕಾರ ಮತ್ತು ಜಿಲ್ಲಾಡಳಿತ ಬೇರೆ ಏನೋ ನೆಪವೊಡ್ಡಿ ಬಲ್ಡೋಟಾ ವಿಸ್ತರಣೆಯನ್ನು ನಿಲ್ಲಿಸದಿದ್ದರೆ ಮತ್ತು ಕೆರೆಯನ್ನು ಮುಕ್ತಗೊಳಿಸದಿದ್ದರೆ, “ಮುಂದಿನ ದಿನಗಳಲ್ಲಿ 40,000 ಜಾನುವಾರುಗಳೊಂದಿಗೆ ಬಲ್ಡೋಟಾ ಕಂಪನಿಯ ಒಳಗೆ ನುಗ್ಗುವಂತಹ ಹೋರಾಟವನ್ನು ಮಾಡುತ್ತೇವೆ,” ಎಂದು ಹೋರಾಟಗಾರರು ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದರು.
ಹೈಕೋರ್ಟ್ ಆದೇಶದ ಉಲ್ಲಂಘನೆ
ಹೋರಾಟಗಾರ ಮಂಜುನಾಥ್ ಗೊಂಡ್ವಾಳ್ ಮಾತನಾಡಿ, “ರೈತಪರ ಇರುವ ರಾಜ್ಯ ಸರ್ಕಾರ ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಬಲ್ಡೋಟಾ ಕಂಪನಿಯನ್ನು ರದ್ದುಗೊಳಿಸುವುದಕ್ಕೆ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.” ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕ ಧರಣಿಯಾಗಿದೆ. ತಮ್ಮ ಬೇಡಿಕೆ ಕುರಿತು ಮನವಿಯನ್ನು ನೀಡಿದ್ದೇವೆ ಎಂದರು.
ಅವರು ಮುಂದುವರೆದು, “44 ಎಕರೆ ಕೆರೆ ಮತ್ತು ಸಾರ್ವಜನಿಕ 12 ಎಕರೆ ಭೂಮಿ ಅಂದರೆ ಸುಮಾರು 57 ಎಕರೆ ಮುಖ್ಯರಸ್ತೆ ಹೊಂದಿಕೊಂಡಿರುವ ಭೂಮಿಯನ್ನು ಕಬಳಿಸಿ ಅತ್ಯಂತ ಕಡಿಮೆ ಬೆಲೆಗೆ ಲೀಸ್ ಕಮ್ ಖರೀದಿ ಮಾಡಿಕೊಂಡಿದ್ದಾರೆ.” ಈ ಕೆರೆಗೆ ಸಂಬಂಧಿಸಿದಂತೆ 2022ರ ಹೈಕೋರ್ಟ್ ಆದೇಶದಲ್ಲಿ ಈ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ಇದೆ. ಆದರೆ ಕಂಪನಿಯು ಈ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಗೊಂಡ್ವಾಳ್ ಆರೋಪಿಸಿದರು.
“ಹಾಗಾಗಿ ಜಾನುವಾರುಗಳಿಗೆ, ಕುರಿಗಳಿಗೆ, ಕರುಗಳಿಗೆ ನೀರು ಕುಡಿಯಲು ಮುಕ್ತಗೊಳಿಸಬೇಕು. ಇಲ್ಲಿ ಯಾವುದೇ ರೀತಿಯಾದ ಅಡತಡೆಯನ್ನು ಕಂಪನಿ ಮಾಡಬಾರದು ಎಂದು ಕೋರ್ಟ್ ಆದೇಶವಿದೆ. ಈ ಆದೇಶವನ್ನು ಸರ್ಕಾರ ಮತ್ತು ಜಿಲ್ಲಾಡಳಿತವು ಜಾರಿ ಮಾಡದೆ, ಕೆಲ ಜನರು ಕಂಪನಿ ಜೊತೆ ಸೇರಿಕೊಂಡಿದ್ದಾರೆ. ಹಾಗಾಗಿ ಕಂಪನಿ ನಿರ್ಮಿಸಿರುವ ಕಂಪೌಂಡ್ ಅನ್ನು ಈ ಕೂಡಲೇ ತೆರವುಗೊಳಿಸಬೇಕು. ಅಲ್ಲಿರುವ ಕಂಪನಿಯ ಭದ್ರತಾ ಸಿಬ್ಬಂದಿಯ ದೌರ್ಜನ್ಯದ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ. ಇಲ್ಲಿಯ ಜನ-ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರೆಸುತ್ತೇವೆ,” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂಬಂಧ ಮುಖ್ಯಮಂತ್ರಿಯವರಿಗೂ ಮತ್ತು ಜಿಲ್ಲಾಧಿಕಾರಿಗೂ ಸಹ ಮನವಿ ಸಲ್ಲಿಸಿದ್ದರೂ, ತಮ್ಮ ಸಮಸ್ಯೆ ಕುರಿತು ಯಾರೂ ಗಮನಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಊರಿನ ಕೆರೆಗೆ ನಮ್ಮ ಹಕ್ಕು ಇದೆ. ಸರ್ಕಾರವೇ ನಮಗೆ ಮೋಸ ಮಾಡಿದರೆ ನಾವೆಲ್ಲ ಬೀದಿಪಾಲಾಗುತ್ತೇವೆ. ರೈತರಾದ ನಾವು ದುಡಿಯದೇ ಇದ್ದರೆ ಇವರೇನು ದುಡ್ಡನ್ನು ತಿಂದು ಬದುಕುತ್ತಾರೆಯೇ? ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇಲ್ಲವೇ? ಸರ್ಕಾರ ನಡೆಸುವವರು ರೈತರ ಮಕ್ಕಳಲ್ಲವೇ? ಇವರಿಗೆ ಸರ್ಕಾರಿ ನೌಕರಿ ಬಂದ ಕೂಡಲೇ ದೊಡ್ಡ ಶ್ರೀಮಂತರಾಗಿಬಿಟ್ಟರೆಯೇ? ಇಂತಹ ಬಂಡರು ಹುಟ್ಟಿ ಹುಟ್ಟಿ ನಮ್ಮ ದೇಶ ಹಾಳಾಗಿ ಹೋಗಿದೆ,” ಎಂದು ರೈತರೊಬ್ಬರು ತಮ್ಮ ಆಕ್ರೋಶವನ್ನು ತೀವ್ರವಾಗಿ ವ್ಯಕ್ತಪಡಿಸಿದರು.
ಇಂದಿನದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದೆ. ಇದು ಮುಂದುವರಿಯುತ್ತದೆ. ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರೈತರು ದೃಢಪಡಿಸಿದ್ದಾರೆ.


