ತುಮಕೂರು –ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಕೊರಟಗೆರೆ ಹಿತರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಕಳೆದ ವಾರ ಕೊರಟಗೆರೆ ಬಳಿ ಸಂಭವಿಸಿದ ಭೀಕರ ಅಪಘಾತದ ನಂತರ ಎಚ್ಚೆತ್ತಿರುವ ಜನರು ಪರಿಹಾರಕ್ಕಾಗಿ ಇಂದಿ ಬೀದಿಗಿಳಿದಿದ್ದಾರೆ.
ಈ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳನ್ನು ಸಂಪೂರ್ಣ ನಿಷೇಧಿಸಬೇಕು ಮತ್ತು ಸರ್ಕಾರಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕೊರಟಗೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಸ್ಥಾಪಿಸಬೇಕು ಎಂದು ಜಾಥಾದ ಮೂಲಕ ಒತ್ತಾಯಿಸಿದರು.
ಇದನ್ನೂ ಓದಿ: ಖಾಸಗಿ ಬಸ್ಸು ಪಲ್ಟಿಯಾಗಿ ಕೊರಟಗೆರೆ ಬಳಿ 8 ಸಾವು: ವಿಡಿಯೋ ನೋಡಿ…
ತುಮಕೂರು ಪಾವಗಡ ರಸ್ತೆಯಲ್ಲಿ ಉಬ್ಬುಗಳು ನಿರ್ಮಾಣ ಮಾಡದೇ ಇರುವುದರಿಂದ ಖಾಸಗಿ ಬಸ್ ಗಳು ಅತಿ ವೇಗವಾಗಿ ಸಂಚರಿಸುತ್ತವೆ. ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಲು ಭಯವಾಗುತ್ತದೆ. ದಾರಿ ಹೋಕರು ನಡೆದು ಹೋಗಲು ಆಗುತ್ತಿಲ್ಲ. ಈ ರಸ್ತೆಯಲ್ಲಿ ಖಾಸಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರತಿ ಐದು ನಿಮಿಷಕ್ಕೆ ಒಂದು ಖಾಸಗಿ ಬಸ್ ಸಂಚರಿಸುತ್ತವೆ. ಬಸ್ ಗಳ ಸಂಚಾರದ ನಡುವೆ ಅಂತರ ಕಡಿಮೆ ಇದೆ. ಹೀಗಾಗಿ ಸಮಯ ನಿರ್ವಹಣೆ ಮಾಡಲು ಖಾಸಗಿ ಬಸ್ ಗಳು ಪೈಪೋಟಿ ಮೇಲೆ ವೇಗವಾಗಿ ಓಡಾಡುತ್ತವೆ.. ಮಧುಗಿರಿ ತುಮಕೂರು ನಡುವೆ ಕೆಲ ಬಸ್ ಗಳಿಗೆ 12 ಟ್ರಿಪ್ ಓಡಾಡಲು ಅವಕಾಶ ಕಲ್ಪಿಸಿದೆ. ಇದರಿಂದ ರಸ್ತೆಯಲ್ಲಿ ಓಡಾಡುವುದು ಮತ್ತು ರಸ್ತೆ ದಾಟುವುದಕ್ಕೆ ತೊಂದರೆಯಾಗಿದೆ ಎಂದು ದೂರಿದರು.
ಕೆಲವು ಖಾಸಗಿ ಬಸ್ ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ವೇಗವಾಗಿ ಹೋಗುತ್ತವೆ. ಬಸ್‌ಗಾಗಿ ಕೆಲವೇ ಸಂಖ್ಯೆಯಲ್ಲಿರುವ ಸರ್ಕಾರಿ ಬಸ್ ಗಳನ್ನು ಅವಲಂಬಿಸಬೇಕಾಗಿದೆ. ಈ ರಸ್ತೆಯ ಪ್ರಮುಖ ಗ್ರಾಮಗಳನ್ನು ಬಿಟ್ಟರೆ ಬೇರೆ ಕಡೆ ವಾಹನಗಳ ನಿಲುಗಡೆ ಮಾಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಬಸ್ ಗಾಗಿ ಕಾಯುವಂತಹ ಪರಿಸ್ಥಿತಿ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಬಸ್ ಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಕೂಡಲೇ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರಿ ಬಸ್ ಗಳ ಸೇವೆ ಒದಿಗಸಬೇಕು. ಪದೇ ಪದೇ ಅಪಘಾತಗಳು ಆಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


