Homeಕರ್ನಾಟಕರಾಜ್ಯದಿಂದ ಇಸ್ರೋ ಗಗನಯಾನ ಯೋಜನೆ ಗುಜರಾತ್‌ಗೆ: ಪ್ರಧಾನಿ, ಸಿಎಂಗೆ ಡಿ.ಕೆ.ಶಿವಕುಮಾರ್‌ ಪತ್ರ

ರಾಜ್ಯದಿಂದ ಇಸ್ರೋ ಗಗನಯಾನ ಯೋಜನೆ ಗುಜರಾತ್‌ಗೆ: ಪ್ರಧಾನಿ, ಸಿಎಂಗೆ ಡಿ.ಕೆ.ಶಿವಕುಮಾರ್‌ ಪತ್ರ

- Advertisement -

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದುಯವರಿಗೆ ಬರೆದಿರುವ ಪತ್ರದಲ್ಲಿ , ಕರ್ನಾಟಕ ನಾಡಿನ ಜನರ ಹೆಮ್ಮೆ, ಆತ್ಮಗೌರವಕ್ಕೆ ಸಂಬಂಧಪಟ್ಟ ಯೋಜನೆ ವಿಚಾರವಾಗಿ ನಾನು ಇಂದು ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಇದು ನನ್ನ ಕರ್ತವ್ಯವೂ ಆಗಿದೆ. ಹಲವು ದಶಕಗಳಿಂದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಕೇಂದ್ರ ಕಛೇರಿ ಹಾಗೂ ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುತ್ತಾರೆ. ನಿಮಗೆ ತಿಳಿದಿರುವಂತೆ 2007ರಿಂದ ಇಸ್ರೋ ‘ಮಾನವಸಹಿತ ಬಾಹ್ಯಾಕಾಶ ಗಗನಯಾನ’ ಯೋಜನೆಗೆ ಬೇಕಾದ ತಂತ್ರಜ್ಞಾನವನ್ನು ಸಿದ್ಧಪಡಿಸಿಕೊಂಡು ಬಂದಿದೆ. ಇಸ್ರೋ ಸಂಸ್ಥೆ 2023ರಲ್ಲಿ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ ಜಿಎಸ್ಎಲ್ವಿ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಅಮೆರಿಕಾ, ಚೀನಾ, ಸೋವಿಯತ್ ಯೂನಿಯನ್ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ ಎಂದು ಗಮನ ಸೆಳೆದಿದ್ದಾರೆ.

“ಕನ್ನಡಿಗರು ಭಾವನಾತ್ಮಕ ವ್ಯಕ್ತಿಗಳಾಗಿದ್ದು, ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳ ಆತಿಥ್ಯವನ್ನು ಬಹಳ ಹೆಮ್ಮೆಯಿಂದ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಈ ಗಗನಯಾನ ಯೋಜನೆ ಬಗ್ಗೆಯೂ ಕನ್ನಡಿಗರು ಭಾವನಾತ್ಮಕ ಸಂಬಂಧ, ಮನಸ್ಥಿತಿ ಇಟ್ಟುಕೊಂಡಿದ್ದಾರೆ. ಈ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಕನ್ನಡಿಗರು ಬೇಸರಗೊಂಡಿದ್ದಾರೆ.  ಈ ಯೋಜನೆ ಸ್ಥಳಾಂತರ ಆಗಿದ್ದೇ ಆದರೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಕಡೆಗಣಿಸಿ, ಅದಕ್ಕೆ ದ್ರೋಹ ಬಗೆದು, ಕನ್ನಡಿಗರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಭಾವಿಸಲಾಗುವುದು. ಅಷ್ಟೇ ಅಲ್ಲ, ಇದು ಕನ್ನಡಿಗರ ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ತರಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದ ಒಂದು ಭಾಗದ ಜನ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಭಾವಿಸಿದರೆ ಅದು ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ, ನಿಮ್ಮ ಕಾರ್ಯಾಲಯ ಕೂಡಲೇ ಮಧ್ಯಪ್ರವೇಶಿಸಿ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ತಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರ ಕಾರು ಪಕ್ಕದಲ್ಲಿ ಹೋಗುವಾಗ ರೆಕಾರ್ಡ್ ಮಾಡಿಕೊಳ್ಳಿ: ಡಿ.ಕೆ.ಶಿವಕುಮಾರ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರೆದಿರುವ ಪತ್ರದಲ್ಲಿ, “ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆ ನಮ್ಮೆಲ್ಲರ ಹೆಮ್ಮೆ. ಇದು ಕನ್ನಡಿಗರ ಭಾವನೆಯ ವಿಚಾರವಾಗಿದೆ. ಕನ್ನಡಿಗರು ಭಾವನಾತ್ಮಕ ಜನರಾಗಿದ್ದು, ಈ ಯೋಜನೆ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಈ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಹುನ್ನಾರದ ವಿಚಾರ ಕೇಳಿ ಕನ್ನಡಿಗರು ದಿಗ್ಭ್ರಾಂತರಾಗಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಜನರ ಭಾವನೆಗೆ ಧಕ್ಕೆ ತಂದು ಈ ರೀತಿಯ ದ್ರೋಹ ಬಗೆದು, ಮಲತಾಯಿ ಧೋರಣೆ ತಾಳುತ್ತಿದೆ. ಈ ನಡೆಯು ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ” ಎಂದು ತಿಳಿಸಿದ್ದಾರೆ.

ಮುಂದುವರಿದು, “ಇಸ್ರೋ ಯೋಜನೆ ಸ್ಥಳಾಂತರದ ಪ್ರಸ್ತಾವನೆ ಕೈಬಿಡುವಂತೆ ಕೋರಿ ನಾನು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದು, ಅದರ ಪ್ರತಿಯನ್ನು ತಮಗೂ ಲಗತ್ತಿಸಲಾಗಿದೆ. ಹೀಗಾಗಿ ಈ ವಿಚಾರದಲ್ಲಿ ತಾವುಗಳು ಪ್ರಧಾನಿಗಳ ಬಳಿಗೆ ರಾಜ್ಯದ ಸಂಸದರ ನಿಯೋಗವನ್ನು ಕರೆದುಕೊಂಡು ಹೋಗಿ, ನಿಮ್ಮ ಕಚೇರಿಯ ಮೂಲಕ ಒತ್ತಡ ಹೇರಿ, ಈ ಮೇಲ್ಕಂಡ ವಿಚಾರದ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಿ. ಈ ಯೋಜನೆ ಸ್ಥಳಾಂತರ ಪ್ರಸ್ತಾವನೆ ಕೈಬಿಡುವಂತೆ ಮಾಡಿ ಕನ್ನಡಿಗರ ಸ್ವಾಭಿಮಾನ, ಆತ್ಮಗೌರವ ಎತ್ತಿ ಹಿಡಿಯಿರಿ ಎಂದು ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ: ಡಿ.ಕೆ.ಶಿವಕುಮಾರ್‌

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial