ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ 1,400 ಕಿಂಡಿ ಅಣೆಕಟ್ಟು ಕಟ್ಟುವ ಸಣ್ಣ ನೀರಾವರಿ ಮಂತ್ರಿ ಮಾಧುಸ್ವಾಮಿ ಮತ್ತು ಅವರ ಸಲೆಹೆಗಾರ ಅಧಿಕಾರಿಗಳ ನೀರಾವರಿ ಯೋಜನೆಯ ಒಂದು ಸ್ಯಾಂಪಲ್ ಅನ್ನು ಉತ್ತರ ಕನ್ನಡದ ಕುಮಟಾ ತಾಲೂಕಿನ ಬೊಗರಿಬೈಲ್ ಮತ್ತು ಉಪ್ಪಿನ ಪಟ್ಟಣದ ನಡುವೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಅಘನಾಸಿನಿ ನದಿಗೆ 200 ಕೋಟಿ ರೂ. ಖರ್ಚಿನಲ್ಲಿ ಕಿರು ಅಣೆಕಟ್ಟು ಕಟ್ಟಿ 11 ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ಕುಡಿಯುವ ನೀರೊದಗಿಸುವುದು ಮತ್ತು ಕೆಲವು ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕೊಡುವುದು ಸದರಿ ಯೋಜನೆಯಯ ಘೋಷಿತ ಉದ್ದೇಶ. ಆದರೆ ಈ ಯೋಜನೆಯಿಂದ ನದಿಯಂಚಿನ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುವ ಮತ್ತು ಅಣೆಕಟ್ಟೆಯ ಕೆಳ ಭಾಗದಲ್ಲಿ ಬೇಸಿಗೆಯಲ್ಲಿ ನೀರಿಗೆ ಬರ ಬರುವ ಆತಂಕ ಹುಟ್ಟಿಸಿದೆ. ರಾಜ್ಯ ನೀರಾವರಿ ನಿಗಮದ ಈ ಯೋಜನೆಯನ್ನು ಪುನರ್ ಪರಿಶೀಲಿಸಬೇಕೆಂದು ಸ್ಥಳೀಯ ಜನರು ಒಕ್ಕೊರಲಲ್ಲಿ ಒತ್ತಾಯಿಸುತ್ತಿದ್ದಾರೆ.
ಅಘನಾಶಿನಿ ನದಿಯಾಳದಿಂದ ಒಂದೂವರೆ ಮೀಟರ್ ಎತ್ತರದ ಗೋಡೆ ಕಟ್ಟಲಾಗುತ್ತದೆ. ಅದರ ಮೇಲೆ ಕಿಂಡಿ ಆಣೆಕಟ್ಟು ನಿರ್ಮಿಸಲಾಗವುದು. ಮೇಲ್ಭಾಗದಲ್ಲಿ ಸೇತುವೆ, ರಸ್ತೆ ಮಾಡಲಾಗುವುದು. ಅಣೆಕಟ್ಟೆಯಲ್ಲಿ 0.2 ಟಿ.ಎಮ್.ಸಿ. ಅಡಿ ನೀರು ಸಂಗ್ರಹಿಲಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಗಬಹುದೆಂದು ಕಾಮಗಾರಿಯ ಗುತ್ತಿಗೆ ಪಡೆದಿರುವ ಬೆಂಗಳೂರಿನ ಇ.ಐ.ಟೆಕ್ನಾಲಜಿ ಸಮಸ್ಥೆ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ. ಈಗಾಗಲೇ ಬೊಗರಿಬೈಲ್, ಉಪ್ಪಿನಪಟ್ಟಣ ಧಕ್ಕೆ, ಕಲ್ಲಬ್ಬೆ, ಅಂತ್ರವಳ್ಳಿ ಮುಂತಾದೆಡೆ ಸಮೀಕ್ಷೆ ನಡೆಸಲಾಗುತ್ತಿದೆ.
ನದಿ ನೀರಿನ ಮಟ್ಟಕ್ಕಿಂತ ಎರಡು ಅಡಿಗಳಷ್ಟು ಹೆಚ್ಚು ನೀರನ್ನು ಬೇಸಿಗೆಯ ಉಬ್ಬರದ ಹೊತ್ತಲ್ಲಿ ಸಂಗ್ರಹಿಸಲಾಗುತ್ತದೆ; ಹತ್ತಿರದ ಚಂಡಿಕಾ ಹೊಳೆಯಲ್ಲೂ ನೀರು ಸಂಗ್ರಹಿಸಲಾಗತ್ತದೆ. ಸಂಗ್ರಹವಾದ ನೀರನ್ನು ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಗಳ ಮೂಲಕ ಹರಿಸಲಾಗತ್ತದೆ. ಮಳೆಗಾಲದಲ್ಲಿ ಅಣೆಕಟ್ಟೆಯ ಎಲ್ಲ ಕಿಂಡಿ ತೆರೆದಿಡಲಾಗುತ್ತದೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗುತ್ತದೆ. ಯೋಜನೆಯಿಂದ ಜನವಸತಿ ಪ್ರದೇಶ ಮಳುಗಡೆಯಾಗುವುದಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಈ ಮಾತನ್ನು ನದಿ ಪಾತ್ರದ ಇಕ್ಕೆಲದಲ್ಲಿರುವ ಮಂದಿ ಒಪ್ಪುವುದಿಲ್ಲ.

ಬೊಗರಿಬೈಲ್ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದು ಸುಮಾರು 500 ಮೀಟರ್ ಅಂತರದಲ್ಲಿ ಕಿರು ಅಣೆಕಟ್ಟು ಕಟ್ಟಲಾಗುತ್ತದೆ. ಸೇತುವೆಯ ಕಂಬಗಳು ನೀರು ಸರಾಗವಾಗಿ ಹರಿಯಲು ತಡೆಯೊಡ್ಡುತ್ತವೆ. ಕಂಬಗಳ ಹತ್ತಿರ ನೀರು ವೇಗಪಡೆದು ನದಿಯ ಎರಡೂ ಕಡೆಯ ಕೃಷಿ ಭೂಮಿ ಕೊರೆದು ಹಾನಿಯಾಗಲಿದೆ. ಕಳೆದ ಜುಲೈನಲ್ಲಿ ಪ್ರವಾಹ ಬಂದಾಗ ಸಾಕಷ್ಟು ಅನಾಹುತವಾಗಿದೆ. ಈ ಭಾಗದ ಅಘನಾಶಿನಿ ನದಿಗೆ ಅಡ್ಡವಾಗಿ ಐದು ಸೇತುವೆ ಕಟ್ಟಲಾಗಿದೆ. ಈ ಸೇತುವೆಯ ಕಂಬಗಳಿಂದ ನೀರಿನ ಹರಿವಿಗೆ ತಡೆಯಾಗುತ್ತಿರುವುದರಿಂದ ಪ್ರತಿ ಮಳೆಗಾಲದಲ್ಲಿ ನದಿಯಂಚಿನ ಹಳ್ಳಿಗಳು ಕೃತಕ ಪ್ರವಾಹಕ್ಕೆ ಈಡಾಗುತ್ತಿವೆ. ಕಿಂಡಿ ಅಣೆಕಟ್ಟಾದರೆ ನೆರೆ ಹಾವಳಿ ಹೆಚ್ಚಾಗಲಿದೆಯೆಂದು ಹಳ್ಳಿಗರು ಭಯಭೀತರಾಗಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶವಿದಾದ್ದರಿಂದ ಒಂದಲ್ಲ ಒಂದು ರೀತಿಯ ಅನಾಹುತ ಕಿಂಡಿ ಅಣೆಕಟ್ಟೆಯಿಂದ ಆಗಲಿದೆಯೆಂದು ಭೂವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಈಗಾಲೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಸಾವಿರಾರು ಕಿರು ಅಣೆಕಟ್ಟೆ ಯೋಜನೆ; ಗುಡ್ಡಗಳ ಸಾಲು ಕುಸಿವ ಆತಂಕ!


