ಮನೆಗಳ ನಿರ್ಮಾಣದ ಸ್ಥಳ (ಕೃಷ್ಣಾಪುರ)

ಕಳೆದುಹೋದ ದಿನಗಳು -21

ವಸತಿ ಇಲ್ಲದವರಿಗಾಗಿ ಮನೆಗಳ ಕೆಲಸ ಪ್ರಾರಂಭವಾಗಿತ್ತು. ನನ್ನ ಓಡಾಡ ಮತ್ತಷ್ಟು ಹೆಚ್ಚಿತು. ಮೊದಲು ಮನೆಕಟ್ಟಲು ಸ್ಥಳ ಗುರುತಿಸುವ ಕೆಲಸ ಮಾಡಬೇಕಿತ್ತು. ಆಗ ಹಲವಾರು ಕಡೆಗಳಲ್ಲಿ ಸ್ಥಳೀಯ ಭೂಮಾಲಿಕರಿಂದ ವಿರೋಧ ಪ್ರಾರಂಭವಾಯಿತು. ಅಲ್ಲಿ ಬೇಡ, ಇಲ್ಲಿ ಬೇಡ ಎನ್ನುವವರು. ಹಾಗಾದರೆ ಸ್ಥಳ ನೀವೇ ತೋರಿಸಿ ಎಂದರೆ, ಯಾವುದೂ ಗುಡ್ಡದ ತುದಿಯ ಜಾಗ ತೋರಿಸುವರು. ಇಲ್ಲವೇ ಇಂದು ನಾಳೆ ಎಂದು ಕಾಲಹರಣ ಮಾಡುವರು.

ಕೆಲವರು ಆಗಲೇ ಖಾಲಿ ಇದ್ದ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತತೊಡಗಿದರು. ಗಣಪಯ್ಯನವರಿಂದ ಉಪಕಾರ ಪಡೆದವರೇ ಕೆಲವರು ಈಗ “ಗಣಪಯ್ಯ ದಲಿತರನ್ನು ಎತ್ತಿಕಟ್ಟುತ್ತಿದ್ದಾರೆ. ಅವರ ತೋಟದಲ್ಲಿ ಮನೆ ಕಟ್ಸಿ ಕೊಡ್ಲಿ” ಎಂದು ಹಿಂದಿನಿಂದ ದೂರತೊಡಗಿದರು.

ಗಣಪಯ್ಯನವರು ರಾಜಕೀಯವಾಗಿಯೂ ಶಕ್ತರಾಗಿದ್ದುದರಿಂದ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಯಿತು. ಅವರು ಅಧಿಕಾರಿಗಳನ್ನು ಸ್ಥಳಕ್ಕೇ ಕರಸಿಕೊಂಡು ಅವರ ಸಮ್ಮುಖದಲ್ಲೇ ಮನೆ ಕಟ್ಟಲು ಸ್ಥಳ ನಿಗದಿ ಮಾಡುತ್ತ ಹೋದರು. ಹತ್ತು ಇಪ್ಪತ್ತು ಮನೆಗಳ ಗುಂಪುಗಳು ಅಲ್ಲಲ್ಲಿ ರಚನೆಯಾದವು.

ಗಣಪಯ್ಯ ತಮ್ಮ ಕಾರ್ಯಕ್ಷೇತ್ರದಲ್ಲಿ, ಮೊಮ್ಮಕ್ಕಳೊಂದಿಗೆ

ಅಂತೂ ಹೇಗೋ ಮನೆಗಳ ಕೆಲಸ ಪ್ರಾರಂಭವಾಯಿತು. ಹೆಂಚು, ಮತ್ತು ಮರಗಳಿಗೆಂದು ಒಂದು ಸಾವಿರ ಕಳೆದು ಉಳಿದ ಒಂದು ಸಾವಿರ ಹಣವನ್ನು ಕಂತು ಕಂತಾಗಿ ಕೊಡುತ್ತಿದ್ದರು. ಗಣಪಯ್ಯ ಮತ್ತು ರವೀಂದ್ರನಾಥರು ಇರುವುದರಿಂದ ಬಿಲ್ ಆಗುವಾಗ ಅಷ್ಟೂ ಹಣ ಯಾವುದೇ ಕಡಿತಗಳಿಲ್ಲದೆ ಬರುತ್ತಿತ್ತು.

ಬ್ಯಾಂಕಿನಲ್ಲಿ ಮಂಜೂರಾಗಿದ್ದ ಸಾಲದ ಮೊತ್ತವನ್ನು ಮೊದಲು ಪಡೆದು ಕೆಲಸ ಪ್ರಾರಂಭಿಸಿದೆವು.

ಕಲ್ಲು, ಸಿಮೆಂಟು, ಮುಂತಾದವುಗಳಿಗೆ ಮಾತ್ರ ಹಣ ಪಾವತಿ ಮತ್ತೆ ಉಳಿದ ಕೆಲಸಗಳಲ್ಲಿ ಮರಗೆಲಸವೊಂದನ್ನು ಬಿಟ್ಟು ಉಳಿದ ಎಲ್ಲ ಕೆಲಸಗಳನ್ನು ಆಯಾ ಗುಂಪಿನವರು ಸೇರಿ ಮಾಡಬೇಕು. ಆ ಕೆಲಸಗಳಿಗೆ ಆಯಾ ದಿನದ ಮಜೂರಿಯನ್ನು ಅವರು ಅದೇ ಹಣದಲ್ಲಿ ಪಡೆದುಕೊಳ್ಳಬೇಕು. ಇದರಿಂದ ಅವರ ಹಣ ಅವರಿಗೇ ಹಿಂದಿರುಗುತ್ತಿತ್ತು ಅಲ್ಲದೆ ಉಳಿತಾಯವಾದರೆ ಅವರಿಗೇ ಸಲ್ಲುತ್ತಿತ್ತು ಇದು ಯೋಜನೆ.

ಪ್ರಾರಂಭದಲ್ಲಿ ಎಲ್ಲರೂ ಉತ್ಸಾಹದಿಂದ ಬಂದರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಈ ರೀತಿ ಕೆಲಸ ಮಾಡಿದ ಅನುಭವವಾಗಲೀ ಸಹಕಾರಿ ತತ್ವದ ದುಡಿಮೆಯ ಬಗ್ಗೆ ತಿಳುವಳಿಕೆಯಾಗಲೀ ಇಲ್ಲದ್ದರಿಂದ ತನ್ನ ಮನೆ ಕೆಲಸ ಇರುವಾಗ ಬರುವುದು, ಬೇರೆಯವನ ಮನೆಕೆಲಸ ಇದ್ದಾಗ ತಪ್ಪಿಸಿಕೊಳ್ಳುವುದು ಹೀಗೆಲ್ಲ ಮಾಡುತ್ತಿದ್ದರು. ಅದಲ್ಲದೆ ಇವರೆಲ್ಲರೂ ಯಾವಾಗಲೂ ಬೇರೆಯವರ ತೋಟಗಳಿಗೆ ಕೆಲಸಕ್ಕೆ ಹೋಗುವವರು. ಹೆಚ್ಚಿನವರು ಅಲ್ಲಿ ಸಾಲ ಪಡೆದವರೇ ಆಗಿದ್ದುರಿಂದ ಅವರಿಂದಲೂ ಒತ್ತಡವಿರುತ್ತಿತ್ತು. ಈ ಎಲ್ಲ ಕಾರಣಗಳಿಂದ ನಾವು ಯೋಚಿಸಿದಷ್ಟು ಬೇಗನೆ ಕೆಲಸ ಮುಗಿಯುತ್ತಿರಲಿಲ್ಲ.

ಬ್ಯಾಂಕಿಗೆ ಹೋಗುವುದು, ಬಿಲ್ ಮಾಡಿಸುವುದು, ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಕಛೇರಿಯಿಂದ ಹೆಂಚುಗಳನ್ನು ಪಡೆದುಕೊಳ್ಳುವುದು, ಮಿಲ್ಲಿನಿಂದ ಮರ ಮುಟ್ಟುಗಳನ್ನು ಸಾಗಿಸುವುದು, ಜೊತೆಗೆ ಇವರೆಲ್ಲರ ಕೆಲಸದ ಲೆಕ್ಕವಿಟ್ಟು ಬಟವಾಡೆ ಮಾಡುವುದೂ ನನ್ನ ಕೆಲಸವಾಗಿತ್ತು. ಹಾಗಾಗಿ ನಾನು ಇವರ ಮೇಲೆಲ್ಲಾ ಕೂಗಾಡುವುದೂ ಬೈಯುವುದೂ ಸಮಾಧಾನ ಮಾಡುವುದೂ ಜೊತೆಗೆ ತತ್ವ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುವುದೂ ಎಲ್ಲ ಇತ್ತು.

ಅವರಿಗೆಲ್ಲ ತಿಳುವಳಿಕೆಯೇ ಇರಲಿಲ್ಲವೆಂದಲ್ಲ ಅವರೆಲ್ಲ ಈ ರೀತಿ ನಡೆದುಕೊಳ್ಳಲು ಅದಕ್ಕೆ ಹಲವಾರು ಕಾರಣಗಳಿದ್ದವು. ಅದು ನನಗೆ ಮುಂದೆ ತಿಳಿಯಿತು.

ಈ ಮನೆಗಳಲ್ಲಿ ನೂರಾರು ಮನೆಗಳ ಮರಗೆಲಸವನ್ನು ನನ್ನ ರಂಗ ಸಂಗಾತಿ ಉಗ್ಗಪ್ಪ ಮನೆಯೊಂದಕ್ಕೆ ನೂರ ನಲುವತ್ತು ರೂಪಾಯಿಗಳಿಗೆ ಗುತ್ತಿಗೆ ಪಡೆದಿದ್ದ. ಹಾಗಾಗಿ ಆತನೂ ಹಲವು ಸಲ ನನ್ನ ಜೊತೆ ಇರುತ್ತಿದ್ದ. ಆಗ ಇಬ್ಬರೂ ಸೈಕಲ್ಲಿನಲ್ಲಿ ಡಬ್ಬಲ್ ರೈಡ್‌ನಲ್ಲಿ ಬರುತ್ತಿದ್ದೆವು.

ಈ ಕೆಲಸಗಳಿಗಾಗಿ ಬೆಳಗ್ಗಿನ ಡೈರಿ ಸುತ್ತು ಕೆಲಸ ಮತ್ತು ಹಾಲು ಕರೆಯುವುದು ಮುಗಿಸಿ ನಂತರ ಸೈಕಲ್ ತೆಗೆದುಕೊಂಡು ಹೊರಟೆನೆಂದರೆ, ಈ ಮನೆಗಳ ಕೆಲಸ ನಡೆಯುತ್ತಿದ್ದ ಅಗಲಟ್ಟಿ, ಮಾವಿನ ಹಳ್ಳಿ, ಹಾರ್ಲೆ ಕೂಡಿಗೆ, ಗಾಣದಹೊಳೆ, ಕೃಷ್ಣಾಪುರ ಅಲ್ಲಿಂದ ಹೆನ್ನಲಿ, ಹೆಬ್ಬಸಾಲೆ ಮಾರ್ಗವಾಗಿ ಹೇಮಾವತಿ ಹೊಳೆಬದಿಯಲ್ಲೇ ಸಕಲೇಶಪುರದ ರೈಲ್ವೇ ಸ್ಟೇಷನ್‌ಗಾಗಿ ನಗರ ಸೇರುತ್ತಿದ್ದೆ. ಅಲ್ಲಿಂದ ಮುಂದೆ ಹಲವು ಕಛೇರಿಗಳನ್ನು ಮುಖ್ಯರಸ್ತೆಯಲ್ಲೇ ಬಂದು ಕೆಲವು ಸಲ ಹಾರ್ಲೆಗೂ ಹೋಗುತ್ತಿದ್ದೆ. ನಂತರ ಕೆಲವೊಮ್ಮೆ ಪಶು ಚಿಕಿತ್ಸೆಯ ಓಡಾಟಗಳು, ನಮ್ಮ ತಂಡದ ರಂಗ ಚಟುವಟಿಕೆಗಳ ಕೆಲಸಗಳು ಎಲ್ಲ ಸೇರಿ ದಿನವೊಂದಕ್ಕೆ ಎಪ್ಪತ್ತು ಕಿ.ಮೀ ನಷ್ಟು ಸೈಕಲ್ ಸವಾರಿ ಮಾಡಿದ್ದೂ ಇದೆ.

ಈ ಮನೆಗಳನ್ನು ಕಟ್ಟುವ ಕೆಲಸದ ಉಸ್ತುವಾರಿಯಲ್ಲಿ ಕೆಲವು ತಮಾಷೆಯ ಪ್ರಸಂಗಗಳು ನಡೆದವು. ಒಬ್ಬಾತ ದ್ಯಾವಯ್ಯ ಅಂತ, ಸ್ವಲ್ಪ ಉಡಾಫೆಯ ಮನುಷ್ಯ ನಮ್ಮೂರ ಪಕ್ಕದಲ್ಲೇ ಒಬ್ಬರ ತೋಟದಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಬೇರೆಯವರದ್ದಿರಲಿ ಆತನದೇ ಮನೆಯ ಯಾವ ಕೆಲಸಕ್ಕೂ ಸರಿಯಾಗಿ ಬರಲೇ ಇಲ್ಲ. ಅಂತೂ ನಾವು ಯಾರು ಯಾರನ್ನೋ ಕರೆದು ಕೆಲಸ ಮುಗಿಸುತ್ತ ಬಂದೆವು. ಕೊನೆಗೆ ನಾನೂ ಉಗ್ಗಪ್ಪನೂ ಮಾತಾಡಿ ಇವನಿಗೆ ಬುದ್ಧಿಕಲಿಸಬೇಕೆಂದು ತೀರ್ಮಾನಿಸಿ, ಏನಾದರೂ ಸರಿ ಇವನ ಮನೆಗೆ ಹೆಂಚು ಹಾಕಬಾರದೆಂದು ಹೆಂಚುಗಳನ್ನು ಹಾಗೇ ಇಟ್ಟೆವು. ರಸ್ತೆ ಬದಿಯಿಂದ ನೂರಡಿ ದೂರ ಹೆಂಚುಗಳನ್ನು ಹೊರಬೇಕಿತ್ತು. ಎಲ್ಲರ ಮನೆಯೂ ಪೂರ್ತಿಯಾಯಿತು. ನಾವು ಕೆಲವು ದಿನ ಕಾದೆವು. ಹೆಂಚುಗಳು ಅಲ್ಲೇ ಇದ್ದವು ಹೊರತು ಆತ ಅದರ ಕಡೆ ತಿರುಗಿ ನೋಡಲೂ ಇಲ್ಲ. ತಮ್ಮ ಮನೆ ಕೆಲಸಕ್ಕೆ ಆತ ಬರದಿದ್ದುದರಿಂದ ಬೇರೆಯವರೂ ಅವನೆ ಮನೆ ಕೆಲಸಕ್ಕೆ ಬರುವುದಿಲ್ಲವೆಂದು ಕುಳಿತರು. ಬಿಲ್ ಮಾಡಿಸಬೇಕಲ್ಲ? ಮನೆ ಪೂರ್ತಿಯಾಗದೆ ಬಿಲ್‌ನ ಹಣ ದೊರೆಯದು. ಕೊನೆಗೆ ನಾನೂ ಉಗ್ಗಪ್ಪನೂ ಸೇರಿ ಆರುನೂರು ಹೆಂಚುಗಳನ್ನು ಹೊತ್ತು ಮಾಡಿಗೇರಿಸಿ ಬಿಲ್ ಮಾಡಿಸಬೇಕಾಯಿತು!

ಮತ್ತೊಮ್ಮೆ ದ್ಯಾವಯ್ಯ ಸಿಕ್ಕಿದಾಗ ನಾನೂ ಉಗ್ಗಪ್ಪನೂ ಸೇರಿ ಬಾಯಿಗೆ ಬಂದಂತೆ ಬೈದೆವು. ಅದಕ್ಕೂ ಅತನೇನು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಇದಕ್ಕೆ ಕಾರಣವೂ ಇತ್ತು. ಸಾಮಾನ್ಯವಾಗಿ ಇಂಥ ಮನೆಗಳನ್ನು ಕಟ್ಟುವಾಗ ಯಾರಾದರೂ ರಾಜಕೀಯ ವ್ಯಕ್ತಿಗಳು ತಮ್ಮ ಕಡೆಯವರಿಗೆ ಕಂಟ್ರಾಕ್ಟ್ ಕೊಡಿಸಿ ಅವರು ಒಂದು ಮನೆಯ ಆಕಾರದ ಕಟ್ಟಡವನ್ನು ಕಟ್ಟಿ ಇವರಿಂದ ರುಜುಪಡೆದು ಮನೆಯನ್ನು ಇವರಿಗೆ ಒಪ್ಪಿಸಿ ತಾವೊಂದಷ್ಟು ಕಮಾಯಿ ಮಾಡುವ ಕ್ರಮ ಅಗಲೇ ಪ್ರಾರಂಭವಾಗಿತ್ತು. ಆದ್ದರಿಂದ ಗಣಪಯ್ಯನವರ ಸ್ವಾವಲಂಬಿ ನಿರ್ಮಾಣ ಕ್ರಮ ಅರ್ಥವಾಗದೆ ಇದರಲ್ಲಿ ಇವರಿಗೇನೋ ಲಾಭವಿದೆ ಆದ್ದರಿಂದ ಇವರೇ ಮಾಡಿಸಲಿ ಎಂದು ತಿಳಿಯುತ್ತಿದ್ದರು.

ಮತ್ತೊಂದು ಕಡೆ ಇದೇ ರೀತಿ ಮನೆಗಳನ್ನು ಕಟ್ಟುವಾಗ ಕೆಲವು ಮನೆಗಳಿಗೆ ಬರಬೇಕಾದ ಹೆಂಚುಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಸರ್ಕಾರದ ಟೆಂಡರಿಗೆ ಹೆಂಚಿನ ಕಾರ್ಖಾನೆಗಳು ಸ್ಪರ್ಧೆಯಿಂದ ಕಡಿಮೆಗೆ ಬಿಡ್ ಮಾಡಿ ಕಳಪೆ ಹೆಂಚುಗಳನ್ನು ಕೊಡುತ್ತಿದ್ದರು ಇದಕ್ಕಾಗಿ ನಾವು ದೂರು ಸಲ್ಲಿಸಿದ್ದರಿಂದ ಅದನ್ನೂ ಸಮಯಕ್ಕೆ ಕೊಡದೆ ಸತಾಯಿಸಿದರು. ಮಳೆಗಾಲ ಪ್ರಾರಂಭವಾದರೂ ಹೆಂಚುಗಳು ಬರುವ ಲಕ್ಷಣಗಳು ಕಾಣಿಸಲಿಲ್ಲ. ಕೊನೆಗೆ ಹಾರ್ಲೆಯಲ್ಲಿ ಒಂದು ಕಟ್ಟಡ ರಿಪೇರಿಗೆಂದು ಬಿಚ್ಚಿದ ಸುಮಾರು ನಾಲ್ಕು ಸಾವಿರ ಹೆಂಚುಗಳಿದ್ದವು. ಅವು ಹಳೆಯದಾದರೂ ಉತ್ತಮ ಗುಣ ಮಟ್ಟದ ಬಾಸೆಲ್ ಮಿಷನ್ ಹೆಂಚುಗಳು. ಅದನ್ನೇ ತೆಗೆದುಕೊಂಡು ಹೋಗುವಂತೆ ಗಣಪಯ್ಯ ಹೇಳಿದರು.

ನಾವು ಆ ಹೆಂಚುಗಳನ್ನು ಒಯ್ದು ಬಾಕಿ ಉಳಿದಿದ್ದ ಮನೆಗಳಿಗೆ ಹೊದೆಸಿ ಗೋಡೆಗಳು ಬೀಳದಂತೆ ರಕ್ಷಿಸಿದೆವು. ಅದನ್ನು ನೋಡಿ ಕೆಲವರು “ಗಣಪಯ್ಯ ಹೊಸ ಹೆಂಚು ತೋಟಕ್ಕೆ ಸಾಗಿಸಿ ಹಳೆ ಹೆಂಚು ಇವರ ತಲೆಗೆ ಕಟ್ಟಿದ್ದಾರೆ” ಎಂದು ಪ್ರಚಾರ ಮಾಡಿದರು.

ಈ ನೆಲ-ಮನೆಗಳ ಯೋಜನೆ ಕೆಲಸಗಳಿಗಾಗಿ ಗಣಪಯ್ಯ ತಮ್ಮ ಸ್ವಂತ ಹಣ ಖರ್ಚು ಮಾಡಿದ್ದು ಅಂದಿನ ಕಾಲದಲ್ಲೇ ಲಕ್ಷಗಳಲ್ಲಿತ್ತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಪ್ರಸಾದ್ ರಕ್ಷಿದಿ
+ posts

LEAVE A REPLY

Please enter your comment!
Please enter your name here