Homeಅಂಕಣಗಳು'ನಮ್ಮ ಎಲುಬುಗಳ ಮೇಲೆ' - ನಾವು ಪ್ರದರ್ಶಿಸಿದ ಮೊದಲ ನಾಟಕ

‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

ಸಕಲೇಶಪುರ ಪುರಭವನದಲ್ಲಿ ಇದರ ಪ್ರದರ್ಶನವಾಯಿತು. ಅದು ಕಾಫಿ ತೋಟದ ಕೂಲಿ ಕಾರ್ಮಿಕರು ತಾಲ್ಲೂಕಿನ ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯತ್ನವಾಗಿತ್ತು.

- Advertisement -
- Advertisement -

ಕಳೆದು ಹೋದ ದಿನಗಳು -17

1977ರ ಜನತಾ ಪಕ್ಷದ ಗೆಲುವಿನ ನಂತರ ಕೆಲಕಾಲ ಎಲ್ಲರಲ್ಲೂ ದೇಶದೆಲ್ಲೆಡೆ ಜನತಾ ಪಕ್ಷವೇ ಅಧಿಕಾರ ಗಳಿಸಲಿದೆ ಎಂಬ ಹುಮ್ಮಸ್ಸಿತ್ತು. ಇದಕ್ಕೆ ಸರಿಯಾಗಿ ಉತ್ತರದ ಏಳು ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜನೆ ಮಾಡಿ ನಡೆಸಿದ ಚುನಾವಣೆಗಳಲ್ಲಿ ಜನತಾ ಪಕ್ಷ ಜಯಗಳಿಸಿತ್ತು. ಕರ್ನಾಟಕದಲ್ಲೂ ರಾಜಕೀಯ ಗರಿಗೆದರಿತ್ತು. ಇಲ್ಲೂ ಒಂದೆರಡು ತಿಂಗಳು ರಾಷ್ಟ್ರಪತಿ ಆಡಳಿತ ತಂದು ಚುನಾವಣೆ ನಡೆಸಿದರೆ ದೇವರಾಜ ಅರಸರನ್ನು ಸುಲಭವಾಗಿ ಸೋಲಿಸಬಹುದು ಎಂದು ಜನತಾ ಪಕ್ಷದ ನಾಯಕರು ಯೋಚಿಸಿದ್ದರು. ಆದರೆ ಆದದ್ದೇ ಬೇರೆ ದೇವರಾಜ ಅರಸರನ್ನು ಜನ ಮತ್ತೆ ದೊಡ್ಡ ಬಹುಮತದಿಂದಲೇ ಆಯ್ಕೆ ಮಾಡಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ದೇವಾಲಕೆರೆ ಲೋಕೇಶಗೌಡರು ಅಭ್ಯರ್ಥಿಯಾಗಲಿ ಎಂದು ಹೆಚ್ಚಿನ ಯುವಕರ ಬಯಕೆಯಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಬಿ.ಬಿ. ಶಿವಪ್ಪನವರು ಅಭ್ಯರ್ಥಿಯಾದರು. ಲೋಕೇಶಗೌಡರು ಬಂಡೆದ್ದು ಅಂದಿನ ರೆಡ್ಡಿ ಕಾಂಗ್ರೆಸ್ ನಿಂದ ಅಭ್ಯರ್ಥಿಯಾದರು. ಯುವಕರ ಪಡೆಯೇ ಅವರ ಹಿಂದಿತ್ತು. ಅವರು ಸುಮಾರು 19 ಸಾವಿರ ಮತಗಳನ್ನು ಪಡೆದರೆಂದು ನನ್ನ ನೆನಪು. ಅದು ಇಂದಿರಾ ಕಾಂಗ್ರೆಸ್ಸಿನ ಜೆ.ಡಿ.ಸೋಮಪ್ಪನವರು  ಪ್ರಥಮಬಾರಿಗೆ ಶಾಸಕರಾಗಲು ದಾರಿಯಾಯಿತು. ಲೋಕೇಶಗೌಡರು ನಂತರ ಇಂದಿರಾ ಕಾಂಗ್ರೆಸ್ ಸೇರಿದರು.  ಆದರೆ ಮುಂದೆ ಲೋಕೇಶಗೌಡರು ರಾಜಕಾರಣದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ. ಅದು ಸಕಲೇಶಪುರಕ್ಕೆ ಆದ ನಷ್ಟವೆಂದೇ ನಮ್ಮಂತ ಹಲವರ ಭಾವನೆ.

ರಾಜ್ಯದಲ್ಲಿ ದೇವರಾಜ ಅರಸರು ಮತ್ತೆ ಮುಖ್ಯಮಂತ್ರಿಯಾದರು. 1979ರ ಇಂದಿರಾ ಗಾಂಧಿಯವರ ಗೆಲುವಿನ ನಂತರ ದೇಶದ ರಾಜಕಾರಣದಲ್ಲಿ ಹಲವು ಬದಲಾವಣೆಗಳು ಗೋಚರಿಸತೊಡಗಿದವು. ಇಂದಿರಾ ಸೋಲಿನಿಂದ ಕಂಗೆಟ್ಟಿದ್ದ ಕಾರ್ಮಿಕ ವರ್ಗಕ್ಕೆ ಮೊರಾರ್ಜಿ ಭಾಯಿಯವರ ಸರ್ಕಾರ ನಮಗೇನೂ ತೊಂದರೆ ಕೊಡುತ್ತಿಲ್ಲ ಎಂಬ ಭಾವನೆ ನಿಧಾನವಾಗಿ ಬರುತ್ತಿತ್ತು. ಆದರೆ ಉತ್ತರ ಭಾರತದ ಪರಿಸ್ಥಿತಿ ಹಾಗಿರಲಿಲ್ಲ. ಅಲ್ಲಿ 1977ರ ಜನತಾ ಗುಂಪಿನ ಗೆಲುವಿಗೆ ಪಾಳೇಗಾರೀ ಶಕ್ತಿಗಳೇ ಕಾರಣವಾಗಿ ಅವು ವಿಜೃಂಭಿಸತೊಡಗಿದ್ದವು. ಬೆಲ್ಚಿಯಂತ ಘಟನೆಗಳು ನಡೆದವು. ಆಂತರಿಕ ಕಿತ್ತಾಟಗಳಿಂದಲೇ ಮೊರಾರ್ಜಿ ಸರ್ಕಾರ ಕುಸಿಯಿತು. 1980ರಲ್ಲಿ ಮತ್ತೆ ಇಂದಿರಾಂಧಿ ಬಿರುಗಾಳಿಯಂತೆ ಗೆದ್ದುಬಂದರು.

ನಡಹಳ್ಳಿ ಊರು

ಆಗ ನಡೆದ ಪಕ್ಷಾಂತರಗಳು. ರಾಜಕಾರಣದ ಕೊಳಕು ಆಟಗಳು ಗಣಪಯ್ಯನಂತವರಿಗೆ ತೀವ್ರ ಭ್ರಮನಿರಸನವಾಗಿರಬೇಕು. ಅವರು ರಾಜಕಾರಣದ ವಿಚಾರದಿಂದ ದೂರವಾಗಿ ಜನಪರ ಕೆಲಸಗಳತ್ತ ಹೆಚ್ಚಾಗಿ ತೊಡಗಿಕೊಂಡರು.

ನಂತರದ ಅವರ ಕೆಲಸಗಳೆಲ್ಲಾ ದಲಿತರು ಮತ್ತು ಭೂರಹಿತ ಕೂಲಿಕಾರ್ಮಿಕ ಕೇಂದ್ರಿತವಾಗಿತ್ತು. ಈಗಾಗಲೇ ಅವರು ಹಾರ್ಲೆಯ ಪಕ್ಕದ ನಡಹಳ್ಳಿ ಗ್ರಾಮದಲ್ಲಿ ಹದಿನೆಂಟು ದಲಿತ ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡಿಸಿ, ತಾವೇ ಜಾಮೀನು ನಿಂತು ಸಕಲೇಶಪುರ ಬ್ಯಾಂಕಿನಲ್ಲಿ ಸಾಲಕೊಡಿಸಿ  ಉಸ್ತುವಾರಿಗೆ ತಮ್ಮ ತೋಟದ ರೈಟರ್ ಒಬ್ಬರನ್ನು ನೇಮಿಸಿ ತೋಟ ಮಾಡಲು ಪ್ರಾರಂಭಿಸಿದ್ದರು. ಆ ನೆಲದ ಮಾಲಿಕರೇ ಅಲ್ಲಿ ತಮ್ಮದೇ ಸಾಲದ ಹಣವನ್ನು ತಮ್ಮ ಮಜೂರಿಯಾಗಿ ಪಡೆದು ಕೆಲಸಮಾಡುತ್ತಿದ್ದರು. ಸಹಕಾರಿ ತತ್ವದಲ್ಲಿ ಕೆಲಸ ನಡೆಯುತ್ತಿತ್ತು. ಪ್ರಾರಂಭದ ವರ್ಷಗಳಲ್ಲಿ ಇದನ್ನು ಮಾಡಲು ಬಹಳ ಕಷ್ಟವಿತ್ತು. ಅನೇಕರ ಅಪನಂಬಿಕೆ, ಈ ಜಮೀನು ಕೊನೆಗೆ ತಮಗೆ ದೊರೆಯುವುದೋ ಇಲ್ಲವೋ ಎಂದು ದಲಿತರಲ್ಲೇ ಇದ್ದ ಅನುಮಾನಗಳು, ಹಲವರ ಚಿತಾವಣೆಗಳು, ಎಲ್ಲವನ್ನೂ ಮೀರಿ ಕೆಲಸಮಾಡಬೇಕಿತ್ತು. ಆದರೆ ಎಲ್ಲವನ್ನೂ ಎದುರಿಸಿಕೊಂಡು ಅವರು ಕೆಲಸವನ್ನು ಮುಂದುವರೆಸಿದರು.

1980ರ ನಂತರ ಗಣಪಯ್ಯ ಮತ್ತು ರವೀಂದ್ರನಾಥರು ಈ ಕಾರ್ಯವನ್ನು ಒಂದು ಚಳುವಳಿಯಂತೆ ನಡೆಸಿದರು.

ನಮ್ಮ ರಾತ್ರಿಶಾಲೆ ಮುಂದುವರೆದಿತ್ತು. ಹುಡುಗರೆಲ್ಲ ಮತ್ತೆ ನಾಟಕ ಪ್ರದರ್ಶನ ಮಾಡಬೇಕೆಂದು ಹೇಳುತ್ತಿದ್ದರು. ಇದರ ಮಧ್ಯೆಯೇ ನಾವು, ನಾವೆಲ್ಲ ಕೆಲಸಮಾಡುತ್ತಿದ್ದ ಪೂರ್ಣಿಮಾ ಎಸ್ಟೇಟ್‌ನ ಕಿತ್ತಲೆ ಹಣ್ಣಿನ ಫಸಲನ್ನು ಗುತ್ತಿಗೆ ಮಾಡಿ ಸಿಕ್ಕಿದ ಹಣದಲ್ಲಿ ಒಂದಷ್ಟು ರಂಗ ಸಜ್ಜಿಕೆಯನ್ನು ಮಾಡಿಕೊಂಡಿದ್ದೆವು.

ಹಾರ್ಲೆಯಲ್ಲೂ ನೌಕರರೆಲ್ಲರೂ ಸೇರಿ ಒಂದು ಮಿತ್ರ ಮಂಡಲಿಯನ್ನು ಮಾಡಿಕೊಂಡು ಬಯಲು ಸೀಮೆಯಿಂದ ನಾಟಕದ ಮೇಷ್ಟ್ರನ್ನು ಕರೆಸಿ ಪೌರಾಣಿಕ ನಾಟಕಗಳನ್ನು ಆಡಲು ಪ್ರಾರಂಭಿಸಿದ್ದರು. ಇದರಲ್ಲಿ ಆಗ ಅಲ್ಲೇ ಉದ್ಯೋಗಿಗಳಾಗಿದ್ದ ನಾರಾಯಣ ಭಟ್, ಜಯರಾಮ ಶೆಟ್ಟರು ಮುಂತಾದವರೆಲ್ಲ ಇದರಲ್ಲಿ ಮುಂದಿದ್ದರು.

ಆಗ ತಾನೇ ಕರ್ನಾಟಕದಲ್ಲಿ ಸಮುದಾಯ ಸಂಘಟನೆ ಬೆಳೆಯುತ್ತಿತ್ತು. ನಾನು ಸಮುದಾಯ ಜಾಥಾವೊಂದರಲ್ಲಿ ಭಾಗವಹಿಸಿದ್ದೆ. ಆದ್ದರಿಂದ ಹುಡುಗರಿಗೆ ನಾನೇ ನಾಟಕ ಬರೆಯುತ್ತೇನೆಂದು ಹೇಳಿದೆ.

ನಡಹಳ್ಳಿ ಊರು

1979ರ ರಾಜಕೀಯ ಘಟನೆಗಳನ್ನಾಧರಿಸಿ ರಾಷ್ಟ್ರ ರಾಜಕಾರಣದ ಎಳೆಗಳನ್ನು ಹಿಡಿದು ಈ ರಾಜಕಾರಣಿಗಳೆಲ್ಲರೂ ಸೇರಿ ಸಾಮಾನ್ಯನ ಬದುಕಿನಲ್ಲಿ ಆಟವಾಡುತ್ತಿದ್ದಾರೆ ಎಂಬ ಕಥೆಯೊಂದನ್ನು ಹೆಣೆದು ನಾಟಕ ಸಿದ್ಧಪಡಿಸಿದೆ. ಆಗ ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು ನನಗೆ ಸಿಕ್ಕಿತ್ತು. ಅದರಲ್ಲಿನ “ಬಿದ್ದಾವು ಮನೆಗಳು……”  ಮತ್ತು ಇನ್ನೂ ಒಂದೆರಡು ಹಾಡುಗಳನ್ನು ಬಳಸಿಕೊಂಡೆ. ಅದೂ ಸಾಲದ್ದರಿಂದ ಅದೇ ತರಹದ ಇನ್ನೂ ಒಂದೆರಡು ಹಾಡುಗಳನ್ನು ನಾನೇ ಬರೆದೆ ಹೀಗೆ ತಯಾರಾಯಿತು. “ನಮ್ಮ ಎಲುಬುಗಳ ಮೇಲೆ” ಎನ್ನುವ ನಾಟಕ.

ಮೂರ್ನಾಲ್ಕು ತಿಂಗಳು ರಿಹರ್ಸಲ್ ನಡೆದು, ಪ್ರದರ್ಶನಕ್ಕೆ ಸಿದ್ಧವಾಯಿತು. ನಮ್ಮ ನೂತನ ರಂಗಸಜ್ಜಿಕೆಯಲ್ಲಿ ಪೂರ್ಣಿಮಾ ಎಸ್ಟೇಟಿನ ಬಂಗಲೆಯ ಪಕ್ಕದಲ್ಲಿ ಪ್ರದರ್ಶನ.

ಗಣಪಯ್ಯನವರನ್ನು ನಾಟಕಕ್ಕೆ ಆಹ್ವಾನಿಸಿದೆವು. ಬರುತ್ತೇನೆ ಎಂದಿದ್ದರು. ನಾವೆಲ್ಲ ಯಾರಿಗೆಲ್ಲ ಬಹುಮಾನ ಇದ್ದೀತೆಂದು ಲೆಕ್ಕಹಾಕುತ್ತ ಹುರುಪಿನಲ್ಲಿದ್ದೆವು.

ನಾಟಕಕ್ಕೆ ತುಂಬ ಜನರು ಬಂದಿದ್ದರು. ಗಣಪಯ್ಯ ಹೇಳಿದ ಸಮಯಕ್ಕೆ ಸರಿಯಾಗಿ ಬಂದರು.

ಹೇಳಿದ ಸಮಯಕ್ಕೆ ಸರಿಯಾಗಿ ಒಂದು ನಿಮಿಷವೂ ಆಚೆ ಈಚೆ ಆಗದಂತೆ ಬರುವುದು ಗಣಪಯ್ಯನವರ ಕ್ರಮ. ಐದು ನಿಮಿಷ ಮೊದಲೇ ಬಂದು ಹತ್ತಿರದಲ್ಲೆಲ್ಲೋ ಇರುವರು. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹಾಜರು. ಇದರಲ್ಲಿ ಕಾರ್ಯಕ್ರಮ ಮಾಡುತ್ತಿರುವವರು ಸಣ್ಣವರು ದೊಡ್ಡವರು ಬೇಧವಿಲ್ಲ. ಈ ಶಿಸ್ತನ್ನು ಅವರು ಕೊನೆಯವರೆಗೂ ಕಾಪಾಡಿಕೊಂಡಿದ್ದರು.

ಇದರಿಂದಾಗಿ ಎಷ್ಟೋ ಕಡೆಗಳಲ್ಲಿ ನನ್ನ ಗೆಳೆಯರೇ “ಗಣಪಯ್ಯನ ಕರೀಬೇಡ ಮಾರಾಯ, ಅವರು ಸರಿಯಾದ ಸಮಯಕ್ಕೆ ಬಂದ್ ಬಿಡ್ತಾರೆ ಭಾರಿ ಕಷ್ಟ ಅವರತ್ರ” ಎನ್ನುತ್ತಿದ್ದರು!

ಅಂದು ಗಣಪಯ್ಯ ನಮ್ಮ ನಾಟಕ ನೋಡುತ್ತ ಕುಳಿತವರು ಅರ್ಧ ನಾಟಕ ನೋಡುತ್ತಿದ್ದಂತೆ ಸಿಟ್ಟು ಮಾಡಿಕೊಂಡು ಎದ್ದು ಹೋಗಿದ್ದರು!

ನಾಟಕ ಮುಗಿಯಿತು.

ನಮ್ಮ ರಂಗವೇದಿಕೆ 1979, ಮತ್ತು ನಟರು

ಒಂದೆರಡು ದಿನಗಳ ನಂತರ ನಾನು ಕೆಲಸದ ನಿಮಿತ್ತ ಹಾರ್ಲೆಗೆ ಹೋದೆ. ದಾರಿಯಲ್ಲಿ ಸಿಕ್ಕಿದ ಹಿರಿಯ ರೈಟರೊಬ್ಬರು, “ಸಾವ್ಕಾರ್ರು ನಿಮಗೆ ಮೊನ್ನೆಯಿಂದ ಬೈತಾ ಇದ್ದಾರೆ, ಏನೆಲ್ಲ ನಾಟಕ ಮಾಡಿದ್ದೀರಂತೆ, ಹೋಗಿ ಹೋಗಿ” ಎಂದು ಒಗ್ಗರಣೆ ಹಾಕಿದರು.

ನಾನು ಮತ್ತೆ ರಾಜೀನಾಮೆ ಪತ್ರದ ಕನಸು ಹೊತ್ತು ಆಫೀಸಿನತ್ತ ಹೋದೆ. ನನ್ನ ವ್ಯಾವಹಾರಿಕ ಕೆಲಸಗಳು ಮುಗಿದವು.

ಗಣಪಯ್ಯನವರು ನಾಟಕದ ಸುದ್ದಿ ಎತ್ತಲಿಲ್ಲ. ನಾನು ಅವರು ಏನಾದರೂ ಹೇಳುತ್ತಾರೆಂದು ಈ ಸಲ ನಾಟಕದ ಪರದೆಗಳು ನಮ್ಮದೇ ಸ್ವಂತ ಎಂದೆ. “ಹ್ಞ” ಎಂದರು. ಮತ್ತೆ ಏನೂ ಹೇಳಲೇ ಇಲ್ಲ. ನಾನು ಒಂದೆರಡು ನಿಮಿಷ ಅಲ್ಲೇ ನಿಂತೆ, “ಸರಿ ಹೋಗು ಎಂದರು” ಮುಂದೆ ಏನೂ ಹೇಳದೆ ಎರಡನೇ ಬಾರಿಯ ನನ್ನ ರಾಜೀನಾಮೆ ಪತ್ರ ಕೊಡುವ ಆಸೆಗೆ ತಣ್ಣೀರೆರಚಿದರು.

ನಾಟಕಗಳ ಪ್ರಚಾರ ಪತ್ರಿಕೆಗಳು

ಅದೇ ವರ್ಷ ರವೀಂದ್ರನಾಥರು ವಾಸವಿದ್ದ ವೊಡ್ಗಲ್ ತೋಟಕ್ಕೆ ಕೇರಳದಿಂದ ಒಂದಷ್ಟು ಜನ ಕೆಲಸಗಾರರರು ಬಂದರು. ಅವರಲ್ಲಿ ಒಂದಿಬ್ಬರು ಕಾಲೇಜಿನ ತನಕ ಓದಿದ ವಿದ್ಯಾವಂತರಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಅವರು ಇಲ್ಲಿನವರನ್ನು ಸೇರಿಸಿಕೊಂಡು ಅವರು ಮಲೆಯಾಳಂ ಭಾಷೆಯಲ್ಲಿ ನಾಟಕಗಳನ್ನು ಆಡತೊಡಗಿದರು. ಅವರು ನಮ್ಮ ಜೊತೆ ಸೇರಿ ಕೆಲವು ಕಡೆ ಪ್ರದರ್ಶನ ಮಾಡಿದೆವು. “ಚುವನ್ನ ಮೇಘಂ”. “ರಕ್ತ ಸಂಧ್ಯ” ಎಂಬ ನಾಟಕಗಳನ್ನು ಅವರು ಆಡುತ್ತಿದ್ದು ಅವೆಲ್ಲವೂ ಎಡಪಂಥೀಯ ಧೋರಣೆಯ ನಾಟಕಗಳೇ ಆಗಿದ್ದವು.

ಹಾರ್ಲೆಯಲ್ಲಿಯೂ ಆ ನಾಟಕದ ಪ್ರದರ್ಶನಗಳಾದವು. ಗಣಪಯ್ಯನವರು ಅದನ್ನೂ ಕುಳಿತು ನೋಡಿದರು. ಅವರಿಗೆ ಮಲೆಯಾಳಂ ಚೆನ್ನಾಗಿ ಬರುತ್ತಿತ್ತು.

“ನಮ್ಮ ಎಲುಬುಗಳ ಮೇಲೆ” ನಾಟಕವು ಹಲವು ಪ್ರದರ್ಶನಗಳಾದವು. ನಮ್ಮ ರೈತ ಚಳುವಳಿಯ ಕಾಲದಲ್ಲಿ ಅಲ್ಲಲ್ಲಿ ಇದನ್ನು ಪ್ರದರ್ಶಿಸಿದೆವು. ಸಕಲೇಶಪುರ ಪುರಭವನದಲ್ಲಿ ಇದರ ಪ್ರದರ್ಶನವಾಯಿತು. ಅದು ಕಾಫಿ ತೋಟದ ಕೂಲಿ ಕಾರ್ಮಿಕರು ತಾಲ್ಲೂಕಿನ ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯತ್ನವಾಗಿತ್ತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...