ಉತ್ತರ ಪ್ರದೇಶದ ಪ್ರಯಾಗರಜ್‌ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ಸಮರ್ಪಕ ನೈರ್ಮಲ್ಯ ಸೌಲಭ್ಯಗಳು ಒದಗಿಸದ ಕಾರಣಕ್ಕಾಗಿ ಗಂಗಾ ನದಿಯ ದಡದಲ್ಲಿ ಬಯಲು ಮಲವಿಸರ್ಜನೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (UP PCB)ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು ನೋಟಿಸ್ ಜಾರಿ ಮಾಡಿದೆ. ಕುಂಭಮೇಳ
ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ. ಎ. ಸೆಂಥಿಲ್ ವೆಲ್ ಅವರ ಪೀಠವು ಅಧಿಕಾರಿಗಳಿಂದ ಪ್ರತಿಕ್ರಿಯೆಗಳನ್ನು ಕೋರಿದ್ದು, ಮುಂದಿನ ವಿಚಾರಣೆಗೆ ಒಂದು ವಾರ ಮೊದಲು ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಪ್ರಕರಣದ ವಿಚಾರಣೆ ಫೆಬ್ರವರಿ 24 ರಂದು ನಡೆಯಲಿದೆ. ಕುಂಭಮೇಳ
“ಸಾಕಷ್ಟು ಸೌಲಭ್ಯಗಳ ಕೊರತೆಯಿಂದಾಗಿ ಲಕ್ಷಾಂತರ ಸಾಮಾನ್ಯ ಜನರು ಮತ್ತು ಕುಟುಂಬಗಳು ಗಂಗಾ ನದಿಯ ದಡದಲ್ಲಿ ಬಯಲು ಮಲವಿಸರ್ಜನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮೂಲ ಅರ್ಜಿಯಲ್ಲಿ ಅರ್ಜಿದಾರರು ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್ ಅನ್ನು ಲಗತ್ತಿಸಿದ್ದಾರೆ” ಎಂದು ನ್ಯಾಯಮಂಡಳಿಯು ಹೇಳಿದೆ.
ಕುಂಭಮೇಳ ಸ್ಥಳದಲ್ಲಿ ನೈರ್ಮಲ್ಯ ಸೌಲಭ್ಯಗಳ ಕಳಪೆ ನಿಯೋಜನೆಯಿಂದಾಗಿ ದೊಡ್ಡ ಪ್ರಮಾಣದ ಮಾಲಿನ್ಯವನ್ನು ತಡೆಗಟ್ಟಲು ರಾಜ್ಯ ವಿಫಲವಾಗಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ₹10 ಕೋಟಿ ಪರಿಸರ ಪರಿಹಾರವನ್ನು ಕೋರಿ ನಿಪುಣ್ ಭೂಷಣ್ ಎಂಬವರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಪರಿಹಾರಕ್ಕಾಗಿ ಸಲ್ಲಿಸಿದ್ದ ತನ್ನ ಬೇಡಿಕೆಯಲ್ಲಿ ಅರ್ಜಿದಾರ ಭೂಷಣ್ ಅವರು, ಮಾಲಿನ್ಯಕಾರಕ ಪಾವತಿ ತತ್ವವನ್ನು ಪ್ರಸ್ತಾಪಿಸಿದ್ದಾರೆ. ಈ ತತ್ವವೂ ಪರಿಸರ ಕಾನೂನಿನಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟ ತತ್ವವಾಗಿದ್ದು, ಮಾಲಿನ್ಯದಿಂದ ಪರಿಸರಕ್ಕೆ ಉಂಟಾಗುವ ಹಾನಿಯ ವೆಚ್ಚವನ್ನು ಭರಿಸಲು ಮಾಲಿನ್ಯಕಾರಕ ಪಾವತಿಯನ್ನು ಕಡ್ಡಾಯ ಮಾಡುತ್ತದೆ.
ಸಂವಿಧಾನದ 48A ವಿಧಿಯ ಅಡಿಯಲ್ಲಿ ಕರ್ತವ್ಯ ಲೋಪವನ್ನು ಕೂಡಾ ಅರ್ಜಿಯು ಆರೋಪಿಸಿದ್ದು, ಈ ವಿಧಿಯು ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳುತ್ತದೆ. ಸಾಮೂಹಿಕ ಬಯಲು ಮಲವಿಸರ್ಜನೆಗೆ ಅವಕಾಶ ನೀಡುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ವಿಫಲವಾಗುವುದು ಸಾಂವಿಧಾನಿಕ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯನ್ನು ದೂರಲಾಗಿದೆ.
ಜೈವಿಕ ಶೌಚಾಲಯಗಳನ್ನು ಸ್ಥಾಪಿಸುವ ಸರ್ಕಾರಿ ಭರವಸೆಗಳ ಹೊರತಾಗಿಯೂ, ಸಾವಿರಾರು ಯಾತ್ರಿಕರು ಸ್ವಚ್ಛ ಅಥವಾ ಕ್ರಿಯಾತ್ಮಕ ಸೌಲಭ್ಯಗಳ ಕೊರತೆಯಿಂದಾಗಿ ಬಯಲಿನಲ್ಲಿ ಮಲವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿಯೋಜಿಸಲಾದ 1.5 ಲಕ್ಷ ಜೈವಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ, ಜನರ ಬೃಹತ್ ಗುಂಪಿಗೆ ಅವು ಸಾಕಾಗುವುದಿಲ್ಲ ಎಂದು ಅವರು ವಾದಿಸಿದಿದ್ದಾರೆ.
ಕುಂಭಮೇಳದ ಸಂದರ್ಶಕರು ದಾಖಲಿಸಿದ ವೀಡಿಯೊಗಳಲ್ಲಿ ನದಿ ದಡದಲ್ಲಿ ಮಾನವ ತ್ಯಾಜ್ಯ ಸಂಗ್ರಹವಾಗುವುದನ್ನು ತೋರಿಸುತ್ತವೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕವನ್ನು ಹುಟ್ಟುಹಾಕುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೆ ಅಲ್ಲದೆ, ಅರ್ಜಿಯು ನವೆಂಬರ್ 2024 ರ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಸಹ ಉಲ್ಲೇಖಿಸಿದೆ. ಈ ಗುಣಮಟ್ಟದ ವರದಿಯಲ್ಲಿ, ನದಿ ನೀರಿನಲ್ಲಿ ಮಲದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಇರುವುದನ್ನು ಸೂಚಿಸಲಾಗಿತ್ತು. ಅಂತಹ ಮಾಲಿನ್ಯಕಾರಕವು ಕಾಲರಾ, ಹೆಪಟೈಟಿಸ್ ಎ ಮತ್ತು ಪೋಲಿಯೊದಂತಹ ಕಾಯಿಲೆಗಳಿಗೆ ಕಾರಣವಾಗಲಿದೆ. ಹಾಗಾಗಿ ಇದು ಗಂಗಾದಲ್ಲಿ ಪವಿತ್ರ ಸ್ನಾನ ಮಾಡುವ ಲಕ್ಷಾಂತರ ಭಕ್ತರಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ವಾದಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!
ರಾಜಸ್ಥಾನ | ಮದುವೆಯ ದಿನವೆ ಹಣದೊಂದಿಗೆ ನಾಪತ್ತೆಯಾದ ಸಾಮೂಹಿಕ ವಿವಾಹದ ಆಯೋಜಕರು!

