ಲಾಕ್‌ಡೌನ್‌ನಿಂದ ಬಹುತೇಕ ಭಾರತೀಯರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಮಯದಲ್ಲಿಯೂ ಆನ್‌ಲೈನ್‌ನಲ್ಲಿ ದಂಡದೊಂದಿಗೆ ಪರೀಕ್ಷಾ ಶುಲ್ಕ ವಸೂಲಿ ಮಾಡುತ್ತಿರುವ ಕೆಲ ಕಾಲೇಜುಗಳ ನಡೆಗೆ ಕೆವಿಎಸ್ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆವಿಎಸ್ ರಾಜ್ಯಸಂಚಾಲಕ ಸರೋವರ್ ಬೆಂಕಿಕರೆಯವರು “ಲಾಕ್‌ಡೌನ್ ಸಮಯದಲ್ಲಿ ಪರೀಕ್ಷಾ ಶುಲ್ಕ ಕಟ್ಟಬೇಕೆ, ಬೇಡವೇ ಎಂಬುದರ ಬಗ್ಗೆ ಗೊಂದಲಗಳುಂಟಾಗಿವೆ. ಬೆಂಗಳೂರು ವಿವಿ ಪರೀಕ್ಷೆ ಮತ್ತು ಶುಲ್ಕ ಪಾವತಿಯನ್ನು ಮುಂದೂಡಿದೆ. ಆದರೆ ಈ ವಿಚಾರ ಅನೇಕ ವಿದ್ಯಾರ್ಥಿಗಳಿಗೆ ತಲುಪಿಲ್ಲ. ಇದರ ದುರುಪಯೋಗಪಡಿಸಿಕೊಂಡು ಕೆಲ ಕಾಲೇಜುಗಳು ಆನ್‌ಲೈನ್‌ದಲ್ಲಿ ದಂಡದೊಂದಿಗೆ ಶುಲ್ಕ ಕಟ್ಟಿಸಿಕೊಳ್ಳುತ್ತಿರುವುದು ಅಕ್ಷಮ್ಯ” ಎಂದು ದೂರಿದ್ದಾರೆ.

ದಿನಾಂಕ 20-3-2020 ರಂದು ಬೆಂಗಳೂರಿನ ಕೇಂದ್ರಿಯ ವಿಶ್ವವಿದ್ಯಾಲಯ ಹೊರಡಿಸಿರುವ ಪತ್ರದ ಪ್ರಕಾರ ವಿದ್ಯಾರ್ಥಿಗಳು ಏಪ್ರಿಲ್ 13ರ ವರೆಗೂ ದಂಡದ ಜೊತೆ ಶುಲ್ಕ ಹಾಗೂ ಏಪ್ರಿಲ್ 17ರ ಒಳಗಾಗಿ ವಿಶೇಷ ದಂಡದ ಜೊತೆ ಶುಲ್ಕ ಪಾವತಿ ಮಾಡಲು ಕಡೆಯ ದಿನಾಂಕದ ಗಡುವು ನೀಡಲಾಗಿತ್ತು. ಆದರೆ 24ರಂದು ಲಾಕ್‌ಡೌನ್ ಘೋಷಿಸಿದ್ದರಿಂದ ವಿವಿಯು ಮಾರ್ಚ್ 25 ರಂದು ಮತ್ತೊಂದು ಸುತ್ತೋಲೆ ಹೊರಡಿಸಿ ಅನಿರ್ಧಿಷ್ಠಾವಧಿಗೆ ಪರೀಕ್ಷಾ ಶುಲ್ಕ ಹಾಗೂ ಪರೀಕ್ಷೆಯ ವೇಳಾಪಟ್ಟಿಯನ್ನು ಎರಡನ್ನೂ ಮುಂದೂಡಲಾಗಿದೆ ಎಂದು ತಿಳಿಸಿದೆ.

ಆದರೆ ಈ ವಿಚಾರ ವಿದ್ಯಾರ್ಥಿಗಳಿಗೆ ಮನವರಿಕೆಯಾಗದ ಕಾರನ ಏಪ್ರಿಲ್ 7ರವರೆಗೂ ಕೆಲವು ವಿದ್ಯಾರ್ಥಿಗಳಿಂದ ದಂಡಸಹಿತ ಶುಲ್ಕ ಕಟ್ಟಿಸಿಕೊಂಡ ಆರೋಪಗಳು ಕೇಳಿಬಂದಿವೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ.
ಹಾಗಾಗಿ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಶುಲ್ಕದ ಈ ಗೊಂದಲ ಹಾಗೂ ಆತಂಕವನ್ನು ನಿವಾರಣೆ ಮಾಡಬೇಕು. ಆರ್ಥಿಕ ಬಿಕ್ಕಟಿನ ಈ ಕಾಲದಲ್ಲಿ ಮುಂಬರುವ ಪರೀಕ್ಷಾ ಶುಲ್ಕ ಹಾಗೂ ಪ್ರವೇಶಾತಿ ಸಮಯದಲ್ಲಿಯೂ ಶುಲ್ಕವನ್ನು ಸಾಧ್ಯವಾದಷ್ಟು ಸರ್ಕಾರವೇ ಭರಿಸಬೇಕು, ಅಥವಾ ಕಂತುಗಳಲ್ಲಿ ಪಾವತಿಸುವ ಹಾಗೂ ಶುಲ್ಕದಲ್ಲಿ ರಿಯಾಯಿತಿಯನ್ನು ನೀಡುವ ಕ್ರಮಗಳನ್ನು ಸರ್ಕಾರ ಅಗತ್ಯವಾಗಿ ಮಾಡಬೇಕು. ಖಾಸಗೀ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣವನ್ನೂ ಹೇರಬೇಕು ಎಂದು ಸಂಘಟನೆ ಒತ್ತಾಯಿಸಿದೆ.


