Homeಕರ್ನಾಟಕಕೊರೊನಾ ಪರಿಹಾರ: ರಂಗಕರ್ಮಿಗಳ ನಡುವೆ ತಾರತಮ್ಯಕ್ಕೆ ಕೆವಿಎಸ್‌ ಆಕ್ರೋಶ

ಕೊರೊನಾ ಪರಿಹಾರ: ರಂಗಕರ್ಮಿಗಳ ನಡುವೆ ತಾರತಮ್ಯಕ್ಕೆ ಕೆವಿಎಸ್‌ ಆಕ್ರೋಶ

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಸಿಎಂ ಯಡಿಯೂರಪ್ಪ ಅವರು 1,200 ಕೋಟಿ ರೂ ಪ್ಯಾಕೇಜ್‌ ಘೋಷಿಸಿದ್ದಾರೆ. ಇದರಲ್ಲಿ ರಂಗಕರ್ಮಿಗಳಿಗೂ ಪ್ರೋತ್ಸಾಹ ಧನ ಘೋಷಿಸಿದ್ದು, 35 ವರ್ಷ ಮೇಲ್ಪಟ್ಟ ರಂಗಕರ್ಮಿಗಳಿಗೆ ಮಾತ್ರ 3,000 ರೂ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ರಂಗಕರ್ಮಿಗಳ ವಿಚಾರದಲ್ಲಿ ವಯಸ್ಸಿನ ಆಧಾರದ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ರಂಗಕರ್ಮಿ, ಕೆವಿಎಸ್‌ ಮುಖಂಡ ಲಕ್ಷ್ಮಣ್ ಮಂಡಲಗೆರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಸರ್ಕಾರ ಕೊಡುವ ಸಣ್ಣ ಮೊತ್ತಕ್ಕೆ ಕಲಾವಿದರು ಅರ್ಜಿ ಸಲ್ಲಿಸಲು ಅರ್ಧ ಖರ್ಚಾಗುತ್ತದೆ. ಎರಡು ಮೂರು ವರ್ಷಗಳಿಂದ ಕೊರೊನಾ ನೆಪ ಹೇಳಿ ಇಲಾಖೆಗಳಿಗೆ, ಅಕಾಡೆಮಿಗಳಿಗೆ ಹಣವೇ ಬಿಡುಗಡೆ ಆಗಿಲ್ಲ. ಏನಿಲ್ಲಂದರೂ 200 – 300 ಕೋಟಿ ರೂ. ಹಣ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಸಾಹಿತ್ಯ ಪರಿಷತ್ತುಗಳಿಗೆ, ಇಲಾಖೆಗಳಿಗೆ ಬಿಡುಗಡೆ ಆಗಬೇಕಾದ ಹಣ ಎಲ್ಲಿ ಹೋಯಿತು?  ಕೊನೆ ಪಕ್ಷ ಕಲಾವಿದರ ಕಷ್ಟಕ್ಕಾದರು ಅ ಹಣ ಉಪಯೋಗ ಆಗುವುದು ಬೇಡವೇ?” ಎಂದು ರಾಜ್ಯ ಸರ್ಕಾರವನ್ನು ಪಶ್ನಿಸಿದ್ದಾರೆ.

“ರಂಗ ಚಟುವಟಿಕೆಗಳು ನಡೆಸಲು ಅವಕಾಶ ಇಲ್ಲದೆ, ಕಾರ್ಯಕ್ರಮಗಳು ಇಲ್ಲದೆ, ಒಂದಿಷ್ಟು ದುಡಿಮೆ ಇರುವ ಬೇಸಿಗೆ ಶಿಬಿರಗಳು ಇಲ್ಲ. ಸಣ್ಣ ಪುಟ್ಟ ರಂಗ ತಂಡಗಳಲ್ಲಿ ನಾಟಕ ತಯಾರು ಮಾಡಿಕೊಂಡು ಸುತ್ತಾಟ ಮಾಡುತ್ತ, ಸಂಕಷ್ಟಗಳನ್ನು ಎದುರಿಸುತ್ತ ರಂಗಭೂಮಿಯನ್ನೇ ನಂಬಿ ತಮ್ಮ ಬದುಕನ್ನಾಗಿಸಿಕೊಂಡ ಕಲಾವಿದರಿಗೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಸಹಾಯಕ್ಕೆ ನಿಲ್ಲದಿರುವಂತಹ ದುಸ್ಥಿತಿ ಬಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಲಪಾನ್‌ ಬಂದೋಪಾದ್ಯಾಯ್‌ರವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರಕ್ಕಿದೆಯೇ?

“ನೊಂದ ಕಲಾವಿದರ ಕುಟುಂಬ ನಿರ್ವಹಣೆಗಾದರೂ ಸರ್ಕಾರ ಸಹಾಯ ಮಾಡಬಹುದು ಅಂದುಕೊಂಡರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಅಕಾಡೆಮಿ ಅಧ್ಯಕ್ಷರು, ಸದಸ್ಯರುಗಳು ಮತ್ತು ರಾಜ್ಯ ಸರ್ಕಾರ ಈ ಎಲ್ಲರೂ ಸೇರಿ ಕಲಾವಿದರ ವಯಸ್ಸಿನ ಆಧಾರದಲ್ಲಿ ಅರ್ಜಿ ಆಹ್ವಾನಿಸಿ ಅನ್ಯಾಯ ಮಾಡಿದೆ. 35 ವರ್ಷದೊಳಗಿನವರಿಗೆ, ಮಾಶಾಸನ ಪಡೆಯುವವರಿಗೆ ಹಾಗೂ ಧನಸಹಾಯ ಪಡೆಯುವ ಸಂಘ – ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂಬ ನಿಯಮಗಳಿವೆ…ಹಾಗಾದರೆ ಸರ್ಕಾರವು ಮಧ್ಯ ವಯಸ್ಸಿನ ಎಷ್ಟು ಕಲಾವಿದರಿಗೆ ಕೊಡತ್ತೀರಿ ಎನ್ನುವುದು ನನ್ನ ಪ್ರಶ್ನೆಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಕರ್ನಾಟಕದಲ್ಲಿ ರಂಗಭೂಮಿ ಇಷ್ಟೆಲ್ಲ ಕ್ರಿಯಾಶೀಲವಾಗಿ ಕೆಲಸ ಮಾಡಲು ಜೀವಂತವಾಗಿರುವುದಕ್ಕೆ ಈ 35 ವಯಸ್ಸಿನ ಒಳಗಿರುವ ಯುವ ರಂಗ ಕಲಾವಿದರು. ಬೇಸಿಗೆ ಶಿಬಿರಗಳಲ್ಲಿ, ದೊಡ್ಡ ದೊಡ್ಡ ರೆಪರ್ಟರಿಗಳಲ್ಲಿ, ಸಣ್ಣ ಸಣ್ಣ ರಂಗತಂಡಗಳಲ್ಲಿ ಕ್ರಿಯಾಶೀಲವಾಗಿ ಹೊಸ ಹೊಸ ಯೋಚನೆಗಳೊಂದಿಗೆ ನಾಟಕಗಳನ್ನು ನಿರ್ದೇಶಿಸಿ ನಟಿಸಿ, ಸಂಘಟಿಸುವುದರ ಮೂಲಕ  ಇಂದು ಯುವರಂಗ ಕಲಾವಿದರು ರಂಗಭೂಮಿಯನ್ನು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿದ್ದಾರೆ ಮತ್ತು ರಂಗಭೂಮಿಯನ್ನೇ ಬದುಕನ್ನಾಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲಕ್ಷ್ಮಣ್ ಮಂಡಲಗೆರ

“ಆದರೆ ಈ ಕಲಾವಿದರನ್ನು ಸರ್ಕಾರಗಳು ಕಡೆಗಣಿಸುತ್ತಿರುವುದು ವಿಷಾದನೀಯ. ಸರ್ಕಾರದ ಅಡಿಯಲ್ಲಿ ನಡೆಯುವ ರಂಗಭೂಮಿಯ ದೊಡ್ಡ ರೆಪರ್ಟರಿಗಳು ಎನಿಸಿಕೊಂಡಿರುವ ರಂಗಾಯಣಗಳಿಗೆ ಕಲಾವಿದರ ಆಯ್ಕೆ ಮಾಡುವಾಗ 35 ವರ್ಷದ ಒಳಗಿರುವ ಯುವ ರಂಗ ಕಲಾವಿದರೇ ಬೇಕು ಎಂದು ಹೇಳುತ್ತಾರೆ. ಅಂತವರನ್ನೇ ಆಯ್ಕೆ ಮಾಡಿ ರಂಗಾಯಣಗಳಿಗೆ ದುಡಿಸಿಕೊಳ್ಳುತ್ತಾರೆ. ಆಗ ಮಾತ್ರ ಯುವ ಕಲಾವಿದರು ಬೇಕು, ಕೊರೊನಾ ಪರಿಹಾರ ನೀಡುವ ಸಮಯದಲ್ಲಿ ಬೇಡ ಎನ್ನುತ್ತಾರೆ…ಇದ್ಯಾವ ಸೀಮೆ ನ್ಯಾಯ, ಈ ನಿರ್ಧಾರ ಸರಿಯಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಮತಾ v/s BJP – ಮಾಜಿ ಮುಖ್ಯಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ!

“ರಾಜ್ಯದ ಯುವ ರಂಗಕಲಾವಿದರು ಬೀದಿಗಿಳಿಯುವ ಮುಂಚೆ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ, ಆರ್ಥಿಕ ನೆರವನ್ನು 10,000  (ಹತ್ತು ಸಾವಿರ)ರೂ. ಗೆ ಏರಿಸಿ. 10 ವರ್ಷಗಳ ಕಲಾಸೇವೆಯನ್ನು 5 ವರ್ಷಕ್ಕೆ ಇಳಿಸಿ. ಕಲಾವಿದರಿಗೆ ಪರಿಹಾರ ಅಲ್ಲ, ಗೌರವಧನವಾಗಿ ಹಣವನ್ನು ತಲುಪುವಂತೆ ಮಾಡಬೇಕು ಜೊತೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕುವ ಕೊನೆಯ ದಿನಾಂಕವನ್ನು ಮುಂದೂಡಬೇಕು” ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

“ಕಲಾವಿದರಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಲು ಆಗಲಿಲ್ಲ ಎಂದರೂ, ಜಿಲ್ಲಾ ಕಛೇರಿಗಳಲ್ಲಿ ಕಲಾವಿದರ ಮಾಹಿತಿ ಇರುತ್ತದೆ. ಅಲ್ಲಿ ಕಲಾವಿದರನ್ನು ಗುರುತಿಸಿ ದಾಖಲಾತಿಯನ್ನು ಪಡೆದು ಜಿಲ್ಲಾ ಕಛೇರಿ ಆಫೀಸ್‌ನಲ್ಲಿರುವ ಕಂಪ್ಯೂಟರ್  ಮೂಲಕವಾದರು ಅರ್ಜಿ ಹಾಕಿಸಿ ಎಲ್ಲಾ ಕಲಾವಿದರಿಗೆ ಆರ್ಥಿಕ ನೆರವು ಸಿಗಬೇಕು” ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ಕಲೆಗೆ ಜಾತಿ,ಮತ, ಧರ್ಮ, ವಯಸ್ಸು ಇಲ್ಲ. ಕಲೆ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿರುವ ಪ್ರತಿಭೆಯಾಗಿದೆ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು, ನಿದ್ದೆಯಲ್ಲಿರುವ ಅಧಿಕಾರ ವ್ಯವಸ್ಥೆಯನ್ನು  ಎಚ್ಚರಿಸಿ ಮುನ್ನಡೆಸುವಂತೆ ಮಾಡುವುದು ಈ ಕಲೆಯ ಕೆಲಸವಾಗಿದೆ. ಯುವ ಕಲಾವಿದರನ್ನು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೆ ಯುವ ರಂಗ ಕರ್ಮಿಗಳ ಮೂಲಕ ಸರ್ಕಾರ ಸಾಕಷ್ಟು ಪ್ರತಿರೋಧಗಳನ್ನು ಎದುರಿಸಬೇಕಾಗುತ್ತದೆ” ಎಂದು ಲಕ್ಷ್ಮಣ್ ಮಂಡಲಗೇರಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಸಿದ ಅಲೆಮಾರಿಗಳಿಗೂ ವಿಶೇಷ ಪ್ಯಾಕೇಜ್ ನೀಡಿ: ಮುಖ್ಯಮಂತ್ರಿಗೆ ಸಿ.ಎಸ್.ದ್ವಾರಕಾನಾಥ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ: ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

0
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದ್ದು, ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 18ರಂದು ಸಂಜೆ ಹುಬ್ಬಳ್ಳಿಯ...