ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಕೊರತೆ ಸರಿದೂಗಿಸಲು ಪರಿಹಾರಕ್ಕಾಗಿ ಕೇಂದ್ರ ನೀಡಿರುವ ಆಯ್ಕೆಗಳು ಸ್ವೀಕಾರಾರ್ಹವಲ್ಲ ಎಂದು ಕೇರಳ ಹೇಳಿದೆ. “ಜಿಎಸ್‌ಟಿ ಆದಾಯದ ಕೊರತೆಯನ್ನು ನೀಗಿಸಲು ರಾಜ್ಯಗಳು ಸಾಲ ಪಡೆಯುವ ಪ್ರಸ್ತಾಪವನ್ನು ರಾಜ್ಯವು ತಿರಸ್ಕರಿಸುತ್ತದೆ” ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.
ಒಟ್ಟು 3 ಲಕ್ಷ ಕೋಟಿ ರೂಗಳ ಕುಸಿತವನ್ನು ಕೇಂದ್ರ ಎದುರಿಸುತ್ತಿದೆ. ಕೇವಲ 65000 ಕೋಟಿ ಸೆಸ್ ಸಂಗ್ರಹವಾಗುವ ನಿರೀಕ್ಷೆಯಿದ್ದು ಉಳಿದ 2.35 ಲಕ್ಷ ಕೋಟಿ ಕೊರತೆ ಬೀಳುತ್ತದೆ. ಹಾಗಾಗಿ ಮೊದಲ ಆಯ್ಕೆಯಾಗಿ ಆರ್‌ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು ಮತ್ತು ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022ರ ನಂತರ ಕೇಂದ್ರ ಭಾಗಶಃ ತೀರಿಸುತ್ತದೆ ಎಂಬ ಎರಡು ಆಯ್ಕೆಗಳನ್ನು ಕೇಂದ್ರವು ರಾಜ್ಯಗಳ ಮುಂದಿಟ್ಟಿದೆ.
ಆರ್‌ಬಿಐ ನಿಂದ ಸಾಲ ಪಡೆದರೆ ಅಸಲು ಬಡ್ಡಿ ಎರಡನ್ನು ಕೇಂದ್ರ ತೀರಿಸಲಿದೆ. ಒಂದು ವೇಳೆ ಹೊರಗಿನಿಂದ 2.35 ಲಕ್ಷ ಸಾಲ ಪಡೆದರೆ ಕೇಂದ್ರ ಅಸಲನ್ನು ಮಾತ್ರ ತೀರಿಸುವುದಾಗಿಯೂ, ರಾಜ್ಯಗಳು ಬಡ್ಡಿ ಭರಸಬೇಕೆಂದು ಕೇಂದ್ರ ಹೇಳಿದೆ.
ಕೇಂದ್ರದ ಈ ಎರಡೂ ಆಯ್ಕೆಗಳನ್ನು ಬಿಜೆಪಿಯೇತರ ರಾಜ್ಯಗಳು ವಿರೋಧಿಸಿವೆ. ಕಾನೂನುಬದ್ಧವಾಗಿ ನ್ಯಾಯಯುತವಾಗಿ ನಮ್ಮ ಪಾಲಿನ ತೆರಿಗೆ ಹಣ ನೀಡಿ ಎಂದು ಪಟ್ಟು ಹಿಡಿದಿವೆ. ಕೇರಳವಂತು ಕೇಂದ್ರ ಹಣ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದೆ.
“ಜಿಎಸ್‌ಟಿ ಪರಿಹಾರದ ಬಗ್ಗೆ ಕೇಂದ್ರದ ಉದ್ದೇಶಗಳನ್ನು ನಾವು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಕೇಂದ್ರದ ‘ಲಾಕ್, ಸ್ಟಾಕ್ ಮತ್ತು ಬ್ಯಾರೆಲ್’ ನೀತಿಯನ್ನು ತಿರಸ್ಕರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಆತ್ಮನಿರ್ಭರ್ ಅನ್ನು ಯಾವುದೇ ರಾಜ್ಯವು ಒಪ್ಪಿಕೊಂಡಿಲ್ಲ. ಸಾಕು, ರಾಜ್ಯಗಳು ತನ್ನ ಹಕ್ಕುಗಳಿಗಾಗಿ ಇನ್ನು ರಾಜಿಯಾಗಬಾರದು. ಜಿಎಸ್‌ಟಿ ಪರಿಹಾರ ನಮ್ಮ ಸಾಂವಿಧಾನಿಕ ಹಕ್ಕು” ಐಸಾಕ್ ಟ್ವೀಟ್ ಮಾಡಿದ್ದಾರೆ.
Now that we fully understand Centre’s intentions on GST Compensation we have no choice other than to reject them lock, stock and barrel. No state with Atmanirbhar can accept them. Enough is enough. No more surrender of states rights. GST Compensation is our constitutional right.
— Thomas Isaac (@drthomasisaac) August 31, 2020
41ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತವಾಗಿದೆ ಎಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದು ದೇವರ ಕಾರ್ಯ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಅಸಹಾಯಕತೆ ಪ್ರದರ್ಶಿಸಿದ್ದರು.
ಇದನ್ನೂ ಓದಿ: ಕೋವಿಡ್‌ನಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತ: ರಾಜ್ಯಗಳಿಗೆ ಪಾಲು ನೀಡಲು ಹಣವಿಲ್ಲವೆಂದ ಕೇಂದ್ರ!
ಇನ್ನು ರಾಜ್ಯಗಳು ದೊಡ್ಡ ಮೊತ್ತದ ಸಾಲ ಪಡೆಯಲು ಮತ್ತು ಅದರ ಬಡ್ಡಿ ಕಟ್ಟಲು ಸಾಧ್ಯವಿಲ್ಲ ಎಂದು ಘೋಷಿಸಿವೆ. ಹಾಗಾಗಿ ಆರ್‌ಬಿಐ ಮತ್ತೆ ನೇರವಾಗಿ ಕೇಂದ್ರಕ್ಕೆ ಸಾಲ ಕೊಡುವ ನೀರಿಕ್ಷೆಯಿದೆ ಎನ್ನಲಾಗುತ್ತಿದೆ.
ಬಿಜೆಪಿಯೇತರ ಪಕ್ಷಗಳು ಆಳ್ವಿಕೆಯಲ್ಲಿರುವ ರಾಜ್ಯಗಳು, “ಕೇಂದ್ರವು ನಮ್ಮ ಪಾಲಿನ ಜಿಎಸ್‌ಟಿ ಹಣವನ್ನು ನೀಡುವುದು ಶಾಸನಬದ್ಧ ಬಾಧ್ಯತೆಯಾಗಿದೆ” ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ. ಆದರೂ “ಜಿಎಸ್‌ಟಿ ಸಂಗ್ರಹ ಕುಸಿದಿರುವಾಗ ಕೇಂದ್ರಕ್ಕೆ ಅಂತಹ ಬಾಧ್ಯತೆಗಳಿಲ್ಲ” ಎಂದು ಸರ್ಕಾರ ವಾದಿಸಿದೆ.
ಜಿಎಸ್‌ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್‌ಟಿ ಜಾರಿಗೆ ಬಂದ ಜುಲೈ 1, 2017 ರಿಂದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಕೇಂದ್ರದಿಂದ ಪಾವತಿ ಖಾತರಿ ನೀಡಲಾಗಿದೆ. 2022ರವರೆಗೂ ರಾಜ್ಯಗಳು ನಷ್ಟ ಹೊಂದಿದ್ದಲ್ಲಿ ಕೇಂದ್ರ ಅದನ್ನು ತುಂಬಿಕೊಡುವ ಭರವಸೆ ನೀಡಿತ್ತು.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಿಎಸ್‌ಟಿ ಆದಾಯದ ನಷ್ಟಕ್ಕೆ ಕೇಂದ್ರವು ರಾಜ್ಯಗಳಿಗೆ ಸಂಪೂರ್ಣ ಪರಿಹಾರವನ್ನು ನೀಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದ್ದರು.
ಇದನ್ನೂ ಓದಿ: ಲಾಕ್‌ಡೌನ್ ವಿಧಿಸಿದ್ದು ನೀವು, ಈಗ ನೀವೇ ನೆರವು ನೀಡಿ: ಕೇಂದ್ರಕ್ಕೆ ಸುಪ್ರೀಂ ತಾಕೀತು


