ಸಂಸ್ಕೃತಿಯ ರಕ್ಷಣೆಗಾಗಿ ಬರಹಗಾರರ ಪ್ರಥಮ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಬರ್ಟೋಲ್ಟ್ ಬ್ರೆಕ್ಟ್ ಭಾಷಣ (ಪ್ಯಾರಿಸ್, 1935)

ಅನುವಾದ: ನಿಖಿಲ್ ಕೋಲ್ಪೆ

ಸಂಗಾತಿಗಳೇ- ನಿರ್ದಿಷ್ಟವಾಗಿ ಹೊಸದೇನನ್ನೂ ಹೇಳಬಯಸದೆಯೇ ನಾನು ಪಶ್ಚಿಮ ಸಂಸ್ಕೃತಿಯನ್ನು ರಕ್ತ ಮತ್ತು ಕೊಳಚೆಗಳಿಂದ ತುಂಬಿ ಮುಗಿಸಲು ಯತ್ನಿಸುತ್ತಿರುವ ಅಥವಾ ಶತಮಾನದ ಶೋಷಣೆಯು ಒಂದಿಷ್ಟಾದರೂ ಜೀವಂತ ಉಳಿಸಿರುವ  ಸಂಸ್ಕೃತಿಯನ್ನು ರಕ್ತಪಾತದಿಂದ ನಾಶಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧದ ಪ್ರಸ್ತುತ ಹೋರಾಟದ ಕುರಿತು ಒಂದಿಷ್ಟು ಹೇಳಲು ಬಯಸುತ್ತೇನೆ. ನಾವು ಈ ಶಕ್ತಿಗಳ ವಿರುದ್ಧ ಪರಿಣಾಮಕಾರಿಯಾಗಿ ಕೊನೆಯ ತನಕ ಹೋರಾಡಬೇಕು ಎಂಬುದರ ಕುರಿತು ಅತ್ಯಂತ ಸ್ಪಷ್ಟತೆ ನಮಗಿರಬೇಕು ಎಂಬ ಒಂದೇ ಒಂದು ಅಂಶದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಬಯಸುತ್ತೇನೆ. ಫ್ಯಾಸಿಸಂನ ದೌರ್ಜನ್ಯಗಳನ್ನು ತಮ್ಮ ಅಥವಾ ಇತರರ ದೇಹಗಳಲ್ಲಿ ಅನುಭವಿಸುತ್ತಿರುವ ಬರಹಗಾರರು, ಸಹಜವಾಗಿಯೇ ಇಂತಹ ಅನುಭವಗಳ ಪರಿಣಾಮವಾಗಿ ಈ ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ ಹೋರಾಡುವ ಪರಿಸ್ಥಿತಿಯಲ್ಲಿಲ್ಲ. ನಿಜವಾದ ಪ್ರತಿಭೆ ಮತ್ತು ನಿಜವಾದ ಸಿಟ್ಟು ಈ ವಿವರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೆಲಸ ಮಾಡುತ್ತಿರುವಾಗ- ಈ ದೌರ್ಜನ್ಯಗಳನ್ನು ಕೇವಲ ವಿವರಿಸಿದರೆ ಸಾಕು ಎಂದು ಕೆಲವರು ಭಾವಿಸಬಹುದು. ಅಂತಹಾ ವಿವರಣೆಗಳು ಮಹತ್ವಪೂರ್ಣ. ದೌರ್ಜನ್ಯಗಳು ನಡೆಯುತ್ತಿವೆ. ಅವುಗಳು ನಡೆಯಬಾರದು. ಜನರನ್ನು ಬಗ್ಗುಬಡಿಯಲಾಗುತ್ತಿದೆ. ಅದು ನಡೆಯಬಾರದು. ಇದಕ್ಕಿಂತ ಹೆಚ್ಚಿನ ಯಾವ ಚರ್ಚೆ ನಮಗೆ ಬೇಕು? ಯಾರಾದರೂ ಎದ್ದು ನಿಂತು ಈ ಹಿಂಸಕರ ಮೇಲೆ ಬೀಳಲಿ. ಸಂಗಾತಿಗಳೇ ನಾವು ಚರ್ಚಿಸುವ ಅಗತ್ಯವಿದೆ.

ಬಹುಶಃ ಯಾರಾದರೂ ಎದ್ದು ನಿಲ್ಲಬಹುದು. ಅದು ತುಂಬಾ ಕಷ್ಟವೇನಲ್ಲ. ಆದರೆ ನಾವು ಶತ್ರುವಿನ ಮೇಲೆ ಮುಗಿಬೀಳಬೇಕು. ಅದು ಹೆಚ್ಚು ಕಷ್ಟದ ಕೆಲಸ. ನಮ್ಮಲ್ಲಿ ಸಿಟ್ಟು ಇದೆ. ಶತ್ರುವನ್ನು ಗುರುತಿಸಲಾಗಿದೆ. ಆದರೆ, ಆತನನ್ನು ಕೆಳಗುರುಳಿಸುವುದು ಹೇಗೆ? ‘ನನ್ನ ಕೆಲಸ ಕೆಟ್ಟದ್ದನ್ನು ಖಂಡಿಸುವುದು ಮಾತ್ರ, ಅದರ ವಿರುದ್ಧ ಕಾರ್ಯಾಚರಿಸುವುದು ಓದುಗರಿಗೆ ಬಿಟ್ಟುಬಿಡಬಹುದು’ ಎಂದು ಲೇಖಕ ಹೇಳಬಹುದು. ಆಗ ಲೇಖಕ ಒಂದು ವಿಚಿತ್ರವಾದ ಅನುಭವಕ್ಕೆ ಒಳಗಾಗುತ್ತಾನೆ. ಕೋಪವು, ಕರುಣೆಯಂತೆ ಒಂದು ಪ್ರಮಾಣದಲ್ಲಿ ಇರುವಂತದ್ದು ಮತ್ತು ಪ್ರಮಾಣದಲ್ಲಿಯೇ ಬಿಡುಗಡೆಯಾಗುವಂತದ್ದು ಎಂದು ಆತನಿಗೆ ಅರಿವಾಗುತ್ತದೆ. ಕೆಟ್ಟ ವಿಷಯವೆಂದರೆ, ಹೆಚ್ಚು ಬಿಡುಗಡೆಯಾಗುತ್ತದೆ ಏಕೆಂದರೆ ಹೆಚ್ಚಿನದರ ಅಗತ್ಯವಿರುತ್ತದೆ. ಸಂಗಾತಿಗಳು ನನಗೆ ಹೇಳಿದ್ದಾರೆ: ನಮ್ಮ ಗೆಳೆಯರನ್ನು ಕೊಲ್ಲಲಾಗಿದೆ ಎಂದು ನಾವು ಮೊದಲ ಬಾರಿ ಘೋಷಿಸಿದಾಗ ಅಲ್ಲಿ ಸಿಟ್ಟಿನ ಕೂಗು ಇತ್ತು ಮತ್ತು ನೆರವು ನೀಡಲು ಮುಂದಾಗಿದ್ದರು. ಅದು ನೂರಾರು ಮಂದಿಯನ್ನು ಕೊಲ್ಲಲಾದಾಗ. ಆದರೆ, ಸಾವಿರಾರು ಮಂದಿಯನ್ನು ಕೊಲ್ಲಲಾದಾಗ ಮತ್ತು ಈ ಕೊಲ್ಲುವಿಕೆಗೆ ಅಂತ್ಯದ ಲಕ್ಷಣಗಳೇ ಕಾಣದಿದ್ದಾಗ, ಮೌನವು ಆವರಿಸುತ್ತದೆ ಮತ್ತು ನೆರವಿನ ಕೊಡುಗೆ ಕಡಿಮೆಯಾಗುತ್ತದೆ. ಅದಿರುವುದೇ ಹೀಗೆ. ‘ಅಪರಾಧವು ವ್ಯಾಪಕವಾದಾಗ ಅದು ಅದೃಶ್ಯವಾಗಿ ನಡೆಯುತ್ತದೆ. ನೋವು ಸಹಿಸಲು ಅಸಾಧ್ಯವಾದಾಗ, ನೋವು ಅನುಭವಿಸುವವನ ಕೂಗು ಕೇಳಿಸದೇ ಹೋಗುತ್ತದೆ. ಒಬ್ಬ ವ್ಯಕ್ತಿಯನ್ನು ಕೊಲ್ಲಲಾದಾಗ ಹತ್ತಿರವಿದ್ದವರು ತಲೆಸುತ್ತಿ ಬೀಳುತ್ತಾರೆ. ಅದು ಸಹಜವಾದದ್ದು. ಆದರೆ ಹತ್ಯಾಕಾಂಡವು ಮಳೆಯಂತೆ ಬೀಳಲಾರಂಭಿಸಿದಾಗ ಅದನ್ನು ನಿಲ್ಲಿಸುವಂತೆ ಯಾರೂ ಕೂಗಿ ಹೇಳುವುದಿಲ್ಲ’.

ಅದು ಇರುವುದು ಹೀಗೆಯೇ. ಅದರ ಕುರಿತು ಮಾಡಬೇಕಾಗಿರುವುದು ಏನನ್ನು? ಜನರು ದೌರ್ಜನ್ಯವನ್ನು ನೋಡಿ ಮುಖತಿರುಗಿಸದಂತೆ ಮಾಡುವ ಯಾವ ಹಾದಿಯೂ ಇಲ್ಲವೆ? ಜನರು ಏಕೆ ವಿಮುಖರಾಗುತ್ತಾರೆ? ಅವರು ಮುಖತಿರುಗಿಸುತ್ತಾರೆ ಏಕೆಂದರೆ, ಮಧ್ಯಪ್ರವೇಶ ಮಾಡುವ ಯಾವುದೇ ಹಾದಿ ಅವರಿಗೆ ಕಾಣದಾಗುತ್ತದೆ. ತಾವು ನೆರವಾಗಬಹುದಾದ ಯಾವ ಹಾದಿಯೂ ಕಾಣದಾದಾಗ ಜನರು ಇತರರ ನೋವಿನ ಬಗ್ಗೆ ಚಿಂತಿಸುವುದಿಲ್ಲ. ಒಂದು ಹೊಡೆತವು ಯಾವಾಗ ಬೀಳುತ್ತದೆ, ಆ ಹೊಡೆತವು ಎಲ್ಲಿಗೆ ಬೀಳುತ್ತದೆ, ಅದು ಯಾಕಾಗಿ ಮತ್ತು ಯಾವ ಕಾರಣಕ್ಕಾಗಿ ಬೀಳುತ್ತದೆ ಎಂದು ಗೊತ್ತಿದ್ದಾಗ ಆ ಹೊಡೆತವನ್ನು ತಡೆಯಬಹುದು. ಮತ್ತು ಒಬ್ಬ ವ್ಯಕ್ತಿ ಆ ಹೊಡೆತವನ್ನು ತಡೆಯಲು ಸಾಧ್ಯವಿದೆ ಎಂದಾದಾಗ, ಅದು ಎಷ್ಟೇ ಸಣ್ಣ ಸಾಧ್ಯತೆಯಾದರೂ, ಆ ಸಾಧ್ಯತೆ ಉಳಿದಿದ್ದರೆ, ಸಂತ್ರಸ್ತನ ಕುರಿತು ಸಹಾನುಭೂತಿ ಹೊಂದುವಂತೆ ಮಾಡುತ್ತದೆ. ಇತರ ಸಮಯಗಳಲ್ಲಿಯೂ ಅದನ್ನು ಮಾಡಬಹುದು, ಆದರೆ ಸಂತ್ರಸ್ತನ ಮೇಲೆ ಹೊಡೆತಗಳ ಸುರಿಮಳೆಯಾಗುತ್ತಿರುವ ಎಲ್ಲ ಸಮದಲ್ಲೂ ಅಲ್ಲ. ಆದುದರಿಂದ ನಾವು ಕೇಳಬೇಕು: ಆ ಹೊಡೆತ ಏಕೆ ಬೀಳುತ್ತದೆ? ಯಾಕೆ ಸಂಸ್ಕೃತಿಯನ್ನು- ನಾವು ಈಗಲೂ ಹೊಂದಿರುವ  ಸಂಸ್ಕೃತಿಯ ಪಳೆಯುಳಿಕೆಗಳನ್ನು ನಿಲುಭಾರದಂತೆ ಹೊರಗೆಸೆಯಲಾಗುತ್ತದೆ. (ಹಡಗುಗಳು ಒಳಪ್ರವೇಶಿಸಲಾಗದ ಬಂದರುಗಳಲ್ಲಿ ಸರಕುಗಳನ್ನು ಹೇರುವಾಗ ಅಥವಾ ಇಳಿಸುವಾಗ ನಿಲುಭಾರ (ballast)ವನ್ನು ಹೊರಗೆಸೆಯಲಾಗುತ್ತದೆ- ಅನುವಾದಕ.) ಯಾಕೆ ಲಕ್ಷಾಂತರ ಜನರ ಜೀವನವು ಬಡತನದಿಂದ ಕೂಡಿದೆ, ಬೆತ್ತಲಾಗಿದೆ ಮತ್ತು ಹೆಚ್ಚುಕಡಿಮೆ ಅಥವಾ ಸಂಪೂರ್ಣವಾಗಿ ನಾಶವಾಗಿದೆ?

ನಮ್ಮಲ್ಲಿ ಕೆಲವರು ಈ ಪ್ರಶ್ನೆಗೆ ಹೀಗೆ ಉತ್ತರ ನೀಡಬಹುದು: ಕ್ರೌರ್ಯದ ಕಾರಣದಿಂದ. ಹೆಚ್ಚೆಚ್ಚು ಮಾನವೀಯ ವಲಯಗಳಲ್ಲಿ ಯಾವುದೋ ಕಾರಣ ತಿಳಿಯದಂತಹ ಭಯಾನಕವಾದದ್ದೊಂದು ಘಟಿಸುತ್ತಿರುವ ಅನುಭವವಾಗುತ್ತಿದೆ ಎಂದವರು ನಂಬುತ್ತಾರೆ. ಅದುಮಿಡಲಾದ ಅಥವಾ ನಿದ್ರೆಯಲ್ಲಿದ್ದ ಸಹಜ ಕ್ರೌರ್ಯವು ಎದ್ದು ಬಂದಂತೆ ಅದು ಧುತ್ತೆಂದು ಎಲ್ಲಿಂದಲೋ ಪ್ರತ್ಯಕ್ಷವಾಗಿದೆ- ಅದೃಷ್ಟವಿದ್ದರೇ ಅಷ್ಟೇ ಏಕಾಏಕಿಯಾಗಿ ಮಾಯವಾಗಬಹುದು ಎಂದು ನಂಬುತ್ತಾರೆ.

ಈ ರೀತಿಯಾಗಿ ಉತ್ತರಿಸುವ ನಮ್ಮಲ್ಲಿ ಅನೇಕರಿಗೆ ಬಹುಶಃ ಈ ಉತ್ತರವು ದೀರ್ಘಕಾಲ ಬಾಳದು ಎಂದು ಗೊತ್ತಿದೆ. ನಾವು ಈ ಕ್ರೌರ್ಯಕ್ಕೆ ನೈಸರ್ಗಿಕ ಶಕ್ತಿಯ, ನರಕದಿಂದ ಬಂದಿರುವ ಬಗ್ಗುಬಡಿಯಲಾಗದ ಶಕ್ತಿಯ ಸ್ಥಾನಮಾನ ನೀಡಬಾರದು ಎಂಬ ಭಾವನೆಯೂ ಅವರಲ್ಲಿದೆ.

ಆದುದರಿಂದ ಅವರು ಮಾನವ ಸಂಕುಲದ ನಿರ್ಲಕ್ಷಿತ ಶಿಕ್ಷಣದ ಬಗ್ಗೆ ಮಾತನಾಡುತ್ತಾರೆ. ಯಾವುದೋ ಒಂದು ಕಳೆದುಹೋಗಿದೆ, ಅದನ್ನು ತ್ವರೆಯಲ್ಲಿ ಮಾಡಲಾಗದು, ಕಳೆದು ಹೋದ ನೆಲೆಯನ್ನು ಮತ್ತೆ ಕಂಡುಕೊಳ್ಳಬೇಕು. ಒಳ್ಳೆಯತನವನ್ನು ಕ್ರೌರ್ಯದ ಎದುರು ನಿಲ್ಲಿಸಬೇಕು. ಈ ಹಿಂದೆ ಫಲ ನೀಡಿದ್ದ ಭೂತೋಚ್ಚಾಟನೆ, ಅಮರವಾದ ಪರಿಕಲ್ಪನೆಗಳು, ಸ್ವಾತಂತ್ರ್ಯದ ಪ್ರೇಮ, ಆತ್ಮಗೌರವ, ನ್ಯಾಯಬದ್ಧತೆ ಇಂತಹ ಇತಿಹಾಸದ ಕ್ಷಮತೆಯಲ್ಲಿ ಸಾಬೀತಾದ ಮಹಾನ್ ಆದರ್ಶಗಳನ್ನು ಮತ್ತೆ ಮುಂದೆಮಾಡಬೇಕು. ಈ ಭೂತೋಚ್ಛಾಟನೆಯನ್ನು ಅನ್ವಯಿಸಲಾಯಿತೆಂದುಕೊಳ್ಳಿ. ಆಗ ಏನಾಗುತ್ತದೆ? ತನ್ನ ಕ್ರೌರ್ಯದ ಅಂಧಾಭಿಮಾನದ ಸಂಭ್ರಮದ ಮೂಲಕ ಫ್ಯಾಸಿಸಂ ಕ್ರೌರ್ಯದ ಸಾಕ್ಷ್ಯವನ್ನು ಒದಗಿಸುತ್ತದೆ. ಅಂಧಾಭಿಮಾನದ ಆರೋಪ ಮಾಡಿದರೆ ಅದು ಅಂಧಾಭಿಮಾನವನ್ನು ಸಂಭ್ರಮಿಸುವ ಮೂಲಕ ಉತ್ತರ ನೀಡುತ್ತದೆ. ತರ್ಕದ ವಿರುದ್ಧ ಅಪರಾಧವೆಸಗಿದ ಆರೋಪ ಮಾಡಿದರೆ ಅದು ಆರಾಮವಾಗಿ ತರ್ಕವನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತದೆ. ಶಿಕ್ಷಣವನ್ನು ನಿರ್ಲಕ್ಷಿಸಲಾಗಿದೆ ಎಂದು ಫ್ಯಾಸಿಸಂಗೂ ಅನಿಸುತ್ತದೆ. ಅದು ಮನಸ್ಸುಗಳ ಮೇಲೆ ಪ್ರಭಾವ ಬೀರುವ, ಹೃದಯಗಳನ್ನು ಆಕ್ರಮಿಸುವ ಭರವಸೆ ಹೊಂದಿದೆ. ತನ್ನ ಚಿತ್ರಹಿಂಸೆಯ ಜೈಲುಕೊಠಡಿಗಳ ಕ್ರೌರ್ಯಕ್ಕೆ ಅದು ತನ್ನ ಶಾಲೆಗಳನ್ನು, ತನ್ನ ಪತ್ರಿಕೆಗಳನ್ನು ಮತ್ತು ನಾಟಕ ಮಂದಿರಗಳನ್ನು ಸೇರಿಸುತ್ತದೆ. ಅದು ಇಡೀ ದೇಶಕ್ಕೆ ಬೋಧನೆ ನೀಡುತ್ತ ಹೋಗುತ್ತದೆ ಮತ್ತು ಇಡೀ ದಿನ ಮಾಡುತ್ತಿರುತ್ತದೆ. ಬಹುಸಂಖ್ಯಾತ ಜನರಿಗೆ ಕೊಡಲು ಅದರ ಬಳಿ ಏನೂ ಇಲ್ಲವಾದರೂ ಅದು ಬೋಧನೆಯನ್ನಷ್ಟೇ ಕೊಡಮಾಡಬಹುದು. ಜನರಿಗೆ ಕೊಡಲು ಅದರ ಬಳಿ ಆಹಾರವಿಲ್ಲ. ಆದುದರಿಂದ ಅದು ಆತ್ಮಸಂಯಮವನ್ನು ಬೋಧಿಸುತ್ತದೆ.

ಉತ್ಪಾದನೆಯನ್ನು ಸರಿಯಾಗಿ ನಡೆಯುವಂತೆ ಮಾಡಲು ಅದಕ್ಕೆ ಸಾಧ್ಯವಿಲ್ಲ. ಆದುದರಿಂದ ಅದಕ್ಕೆ ಯುದ್ಧಗಳ ಅಗತ್ಯಬೀಳುತ್ತದೆ. ಆದುದರಿಂದ ಅದು ಜನರಿಗೆ ದೈಹಿಕ ಧೈರ್ಯದ ಬೋಧನೆ ನೀಡುತ್ತದೆ. ಇವು ಜನರ ಮೇಲೆ ಹೇರುವ ಆದರ್ಶಗಳು ಮತ್ತು ಆಗ್ರಹಗಳು ಮತ್ತು ಕೆಲವೊಮ್ಮೆ ಅವು ಉನ್ನತ, ಉದಾತ್ತ ಬೇಡಿಕೆಗಳನ್ನೂ ಆಗಿರುತ್ತವೆ. ಈ ಆದರ್ಶಗಳ ಉದ್ದೇಶವೇನು, ಈ ಬೋಧನೆಗಳನ್ನು ಯಾರು ಮಾಡುತ್ತಿದ್ದಾರೆ, ಈ ಬೋಧನೆಗಳಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಈಗ ನಮಗೆ ಗೊತ್ತಿದೆ. ಇದು ನಿಜವಾಗಿಯೂ ಬೋಧನೆಯಲ್ಲ. ಹಾಗಾದರೆ ನಮ್ಮ ಆದರ್ಶಗಳ ಗತಿಯೇನು? ಕೆಡುಕಿನ ಬೇರುಗಳನ್ನು ಕ್ರೌರ್ಯದಲ್ಲಿ ಮತ್ತು ದಮನಕಾರಿ ದೌರ್ಜನ್ಯದಲ್ಲಿ ಕಾಣುವ ನಮ್ಮಂತವರು ಕೂಡಾ, ಈಗಾಗಲೇ ಹೇಳಿರುವಂತೆ ಶಿಕ್ಷಣದ ಕುರಿತು ಮಾತ್ರ ಮಾತನಾಡುತ್ತೇವೆ. ಜನರ ಮನಸ್ಸಿನ ಮೇಲೆ ಮಧ್ಯಪ್ರವೇಶದ ಬಗ್ಗೆ ಮಾತ್ರ ಮಾತನಾಡುತ್ತೇವೆ- ಬೇರಾವುದೇ ಮಧ್ಯಪ್ರವೇಶಗಳ ಬಗ್ಗೆಯಲ್ಲ. ನಮ್ಮಲ್ಲಿ ಕೆಲವರು ಒಳ್ಳೆಯತನದ ದೃಷ್ಟಿಯಿಂದ ಬೋಧನೆಯ ಕುರಿತು ಮಾತನಾಡುತ್ತಾರೆ. ಆದರೆ, ಕ್ರೌರ್ಯವು ಕ್ರೌರ್ಯದಿಂದ ಹುಟ್ಟಿರದಂತೆ, ಎಲ್ಲಾ ಪರಿಸ್ಥಿತಿಗಳಲ್ಲಿ, ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕೂಡಾ ಒಳ್ಳೆತನದ ಬೇಡಿಕೆ ಮಾತ್ರದಿಂದಲೇ ಒಮ್ಮತದಿಂದ ಒಳ್ಳೆಯತನವು ಸಹಜವಾಗಿ ಹುಟ್ಟಿಬರುವುದಿಲ್ಲ.

ಕ್ರೌರ್ಯಕ್ಕಾಗಿಯೇ ಕ್ರೌರ್ಯವನ್ನು ನಾನು ನಂಬುವುದಿಲ್ಲ. ಕ್ರೌರ್ಯವು ಉತ್ತಮ ವ್ಯವಹಾರವಲ್ಲದಿರುವಾಗಲೂ ಮಾನವತೆಯನ್ನು ರಕ್ಷಿಸದಿದ್ದಲ್ಲಿ ಅದೂ ಕ್ರೌರ್ಯವಾಗುತ್ತದೆ. ಸ್ವಯಂಹಿತಾಸಕ್ತಿಗೆ ಮೊದಲೇ ಅಶ್ಲೀಲತೆ ಬರುತ್ತದೆ ಎಂದು ನನ್ನ ಗೆಳೆಯ ಫ್ಯೂಷ್‌ವ್ಯಾಂಗರ್ ಹೇಳಿದ್ದು ಹಾಸ್ಯದ ಮಾತಾಗಿರಬಹುದಾದರೂ ತಪ್ಪು. ಕ್ರೌರ್ಯವು ಕ್ರೌರ್ಯದಿಂದ ಬರುವುದಿಲ್ಲ; ಬದಲಾಗಿ ಅದರ ನೆರವಿನಿಂದ ನಡೆಯುವ ವ್ಯವಹಾರದಿಂದ ಬರುತ್ತದೆ

ನಾನು ವಾಸಿಸುತ್ತಿರುವ ಚಿಕ್ಕ ದೇಶದಲ್ಲಿ ಪರಿಸ್ಥಿತಿಯು ಉಳಿದ ಹಲವಾರು ದೇಶಗಳಿಗಿಂತ ಕಡಿಮೆ ಭಯಾನಕವಾಗಿರಬಹುದು; ಆದರೆ ಪ್ರತೀ ವಾರ 5,000 ಜಾನುವಾರುಗಳನ್ನು ನಾಶಮಾಡಲಾಗುತ್ತಿದೆ. ಅದು ಕೆಟ್ಟದ್ದು. ಅದರೆ, ಅದು ಏಕಾಏಕಿ ಹುಟ್ಟಿಕೊಂಡ ರಕ್ತದಾಹವಲ್ಲ. ಹಾಗಿದ್ದರೆ, ಪರಿಸ್ಥಿತಿ ಇಷ್ಟು ಕೆಟ್ಟದಾಗಿರುತ್ತಿರಲಿಲ್ಲ. ಮಾಂಸದ ಜಾನುವಾರುಗಳ ನಾಶ ಮತ್ತು ಸಂಸ್ಕೃತಿಯ ನಾಶಗಳು ಅವುಗಳ ಕಾರಣಗಳಷ್ಟೇ ಕ್ರೂರ ಪ್ರವೃತ್ತಿಯವಲ್ಲ. ಎರಡೂ ಪ್ರಕರಣಗಳಲ್ಲಿ ಶ್ರಮದಿಂದ ಉತ್ಪಾದಿಸಲಾದ ಸರಕುಗಳನ್ನು ಅವು ಹೊರೆಯಾಗಿವೆ ಎಂಬ ಕಾರಣದಿಂದ ನಾಶ ಮಾಡಲಾಗುತ್ತಿದೆ. ಪ್ರಪಂಚದ ಐದನೇ ನಾಲ್ಕು ಭಾಗಗಳಲ್ಲಿ ಉಪವಾಸ ಆವರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಗಳು ಅಪರಾಧ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅವುಗಳಲ್ಲಿ ಜವಾಬ್ದಾರಿಹೀನತೆಯೇನೂ ಇಲ್ಲ. ಇಂದು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಎಲ್ಲಾ ರೀತಿಯ ಅಪರಾಧಗಳನ್ನು ಪುರಸ್ಕರಿಸುವ ಮತ್ತು ಋಜುತ್ವ ದುಬಾರಿಯಾಗಿರುವ ಸಾಮಾಜಿಕ ಪರಿಸ್ಥಿತಿ ಇದೆ. ‘ಒಳ್ಳೆಯ ಮನುಷ್ಯನಿಗೆ ರಕ್ಷಣೆಯಿಲ್ಲ ಮತ್ತು ರಕ್ಷಣೆ ಇಲ್ಲದ ಮನುಷ್ಯನನ್ನು ಹೊಡೆದು ಕೊಲ್ಲಲಾಗುತ್ತದೆ. ಆದರೆ ಕ್ರೌರ್ಯದಿಂದ ಏನನ್ನು ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಅಶ್ಲೀಲತೆಯು 10,000 ವರ್ಷಗಳಿಂದ ಮನೆಮಾಡಿದೆ. ಆದರೆ, ಒಳ್ಳೆಯತನಕ್ಕೆ ಅಂಗರಕ್ಷಕ ಬೇಕು, ಆದರೆ ಯಾರೂ ಸಿಗುತ್ತಿಲ್ಲ!’

ಕೇವಲ ಈ ಅಂಗರಕ್ಷಕನನ್ನು ಒದಗಿಸುವಂತೆ ಜನರನ್ನು ಕೇಳುವುದರ ಕುರಿತು ಎಚ್ಚರಿಕೆಯಿಂದಿರೋಣ. ಅಸಾಧ್ಯವಾದುದನ್ನು ಕೇಳುವುದರ ಕುರಿತು ನಾವು ಎಚ್ಚರವಿರಬೇಕು. ನಾವು ಕೂಡಾ ಅತಿಮಾನುಷವಾದುದನ್ನು ಜನರಲ್ಲಿ ಕೇಳುತ್ತಿದ್ದೇವೆ ಎಂಬ ನಿಂದನೆಗೆ ಗುರಿಯಾಗದಿರೋಣ. ಬದಲಾಯಿಸಬಹುದಾದ ಆದರೆ ಬದಲಾಯಿಸಬಾರದ ಸ್ಥಿತಿಯ, ಸಂಕಷ್ಟದ ಪರಿಸ್ಥಿತಿಯ ಸಂಕಟಗಳನ್ನು ಸದ್ಗುಣಿಗಳಾಗಿ ಅನುಭವಿಸುವಂತೆ ಕೇಳದಿರೋಣ! ಕೇವಲ ಸಂಸ್ಕೃತಿಯ ಬಗ್ಗೆ ಮಾತ್ರ ಮಾತನಾಡದಿರೋಣ!

ಸಂಸ್ಕೃತಿಯ ಬಗ್ಗೆ ನಮಗೆ ಮರುಕವಿರಲಿ. ಆದರೆ, ಮೊದಲಿಗೆ ಮಾನವತೆ-ಮನುಷ್ಯತ್ವದ ಮೇಲೆ ಮರುಕವಿರಲಿ! ಮಾನವೀಯತೆಯ ರಕ್ಷಣೆಯಾದರೆ ಮಾತ್ರ ಸಂಸ್ಕೃತಿಯ ರಕ್ಷಣೆ ಸಾಧ್ಯ.

ಸಂಸ್ಕೃತಿಗಾಗಿ ಜನರು ಬದುಕಿರುವುದು, ಜನರಿಗಾಗಿ  ಸಂಸ್ಕೃತಿ ಇರುವುದು ಅಲ್ಲ ಎಂದು ಹೇಳುವ ಮಟ್ಟಕ್ಕೆ ನಾವು ತೇಲಿಹೋಗದಿರೋಣ. ಅದು ಜಾನುವಾರುಗಳಿಗಾಗಿ ಜನರು ಇರುವುದು; ಜನರಿಗಾಗಿ ಜಾನುವಾರುಗಳು ಇರುವುದಲ್ಲ ಎಂದು ಹೇಳುವ ಮಾರುಕಟ್ಟೆಯ ವಿಧಾನದಂತೆ ಆಗಬಹುದು.

ಸಂಗಾತಿಗಳೇ ಕೆಡುಕಿನ ಬೇರುಗಳಿಗೆ ಕನ್ನಡಿ ಹಿಡಿಯೋಣ!

ಇನ್ನೂ ಎಳೆಯದಾಗಿರುವ ನಮ್ಮ ಗ್ರಹದಲ್ಲಿ ಭಾರೀ ಜನಸಮುದಾಯದ ಮೇಲೆ ಹಿಡಿತ ಸಾಧಿಸುತ್ತಿರುವ ಮಹಾನ್ ಸಿದ್ಧಾಂತವೊಂದು ಎಲ್ಲಾ ಕೆಡುಕುಗಳ ಮೂಲಬೇರು ಇರುವುದು ನಮ್ಮ ಆಸ್ತಿ ಸಂಬಂಧದಲ್ಲಿ ಎಂದು ಹೇಳುತ್ತದೆ. ಈ ಸಿದ್ಧಾಂತವು ಎಲ್ಲಾ ಮಹಾನ್ ಸಿದ್ಧಾಂತಗಳಂತೆ ಈಗಿರುವ ಆಸ್ತಿ ಸಂಬಂಧಗಳಿಂದಾಗಿ ಮತ್ತು ಈ ಸಂಬಂಧಗಳನ್ನು ರಕ್ಷಿಸುತ್ತಿರುವ ಕ್ರೂರ ವಿಧಾನಗಳಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಜನಸಮುದಾಯದ ಮೇಲೆ ಹಿಡಿತ ಹೊಂದಿದೆ. ಇದು ಜಗತ್ತಿನ ಆರನೇ ಒಂದರಷ್ಟು ಭೂಭಾಗವನ್ನು ಆವರಿಸಿರುವ ದೇಶವೊಂದರಲ್ಲಿ ಸಾಕ್ಷಾತ್ಕಾರವಾಗುತ್ತಿದ್ದು, ಅಲ್ಲಿ ದಮನಿತರು ಮತ್ತು ಆಸ್ತಿರಹಿತ ಜನರು ಅಧಿಕಾರ ಹಿಡಿದಿದ್ದು, ಅಲ್ಲಿ ಆಹಾರವಸ್ತುಗಳ ನಾಶ ನಡೆಯುತ್ತಿಲ್ಲ;  ಸಂಸ್ಕೃತಿಯ ನಾಶ ನಡೆಯುತ್ತಿಲ್ಲ.

ನಾವು ಲೇಖಕರಲ್ಲಿ ಹಲವರು ಫ್ಯಾಸಿಸಂನ ದಬ್ಬಾಳಿಕೆಯನ್ನು, ಕ್ರೌರ್ಯಗಳನ್ನ ಅನುಭವಿಸಿದ್ದೇವೆ, ಎದುರಿಸುತ್ತಿದ್ದೇವೆ ಮತ್ತು ಅದರಿಂದ ಅಸಮಧಾನಗೊಂಡಿದ್ದೇವೆ, ಅದರೆ ಇನ್ನೂ ಸಿದ್ಧಾಂತವನ್ನು ಅರ್ಥಮಾಡಿಕೊಂಡಿಲ್ಲ; ತಮಗೆ ಆಕ್ರೋಶ ತರುವ ಅದರ ಕ್ರೌರ್ಯದ ಬೇರುಗಳನ್ನು ಇನ್ನೂ ಕಂಡುಹಿಡಿದಿಲ್ಲ. ಫ್ಯಾಸಿಸಂನ ಭಯಾನಕತೆಯನ್ನು ಅನಗತ್ಯ ಭಯಾನಕತೆ ಎಂದು ಪರಿಗಣಿಸುತ್ತಿರುವ ಅವರಿಗೆ ಅಪಾಯ ಎದುರಾಗಿದೆ. ಆಸ್ತಿ ಸಂಬಂಧಗಳನ್ನು ರಕ್ಷಿಸಲು ಫ್ಯಾಸಿಸಂನ ಭಯಾನಕತೆಯ ಅಗತ್ಯವಿಲ್ಲ ಎಂದು ಭಾವಿಸಿರುವುದರಿಂದಾಗಿ ಅವರು ತಮ್ಮ ಆಸ್ತಿ ಸಂಬಂಧಗಳನ್ನು ಉಳಿಸಿಕೊಡಿದ್ದಾರೆ. ಆದರೆ, ಪ್ರಬಲವಾದ ಆಸ್ತಿ ಸಂಬಂಧಗಳನ್ನು ಕಾಯ್ದುಕೊಳ್ಳಲು ಕ್ರೂರತೆಯ ಅಗತ್ಯವಿದೆ. ಇಲ್ಲಿ ಫ್ಯಾಸಿಸ್ಟರು ಸುಳ್ಳು ಹೇಳುತ್ತಿಲ್ಲ. ಅವರು ಸತ್ಯವನ್ನೇ ಹೇಳುತ್ತಿದ್ದಾರೆ. ಆ ನಮ್ಮ ಗೆಳೆಯರು ಫ್ಯಾಸಿಸಂನ ಭಯಾನಕತೆಯಿಂದ ಆಕ್ರೋಶಗೊಂಡಿದ್ದರೂ ಈಗಿರುವ ಆಸ್ತಿ ಸಂಬಂಧಗಳನ್ನು ಉಳಿಸಿಕೊಳ್ಳಲು ಬಯಸುವುದರಿಂದ ಅಥವಾ ಅವುಗಳನ್ನು ಉಳಿಸಿಕೊಂಡರೂ ಉಳಿಸಿಕೊಳ್ಳದಿದ್ದರೂ ಸಮಸ್ಯೆ ಏನಿಲ್ಲ ಎಂಬಂತಿದ್ದರೆ, ಹರಡುತ್ತಿರುವ ಈ ಕ್ರೌರ್ಯದ ವಿರುದ್ಧ ದೀರ್ಘ ಕಾಲ ಹೊರಾಟ ಮಾಡುವುದು ಸಾಧ್ಯವಿಲ್ಲ ಅಥವಾ ಸಾಕಷ್ಟು ಬಲವಾದ ಹೋರಾಟ ಮಾಡಲಾಗುವುದಿಲ್ಲ; ಏಕೆಂದರೆ ಅವರಲ್ಲಿ ಖಚಿತತೆಯನ್ನು ಹುಡುಕಲು ಸಾಧ್ಯವಿಲ್ಲ.

ಇನ್ನೊಂದು ಕಡೆಯಲ್ಲಿ ಕೆಡುಕಿನ ಬೇರುಗಳ ಹುಡುಕಾಟವು ಆಸ್ತಿ ಸಂಬಂಧಗಳ ದಿಕ್ಕಿನಲ್ಲಿ ಕೆಲವರನ್ನು ಕರೆದೊಯ್ದಿದೆ. ಅದು ಅವರನ್ನು ಮಾನವತೆಯ ಚಿಕ್ಕ ವಿಭಾಗವೊಂದು ನಿಷ್ಕಾರುಣ್ಯ ಪ್ರಾಬಲ್ಯ ಸ್ಥಾಪಿಸಿರುವ ದಬ್ಬಾಳಿಕೆಯ ಅಗ್ನಿಕೂಪದ ಆಳಕ್ಕೆ ತಳ್ಳಿದೆ. ತಮ್ಮ ಸಹ ಮಾನವರ ಶೋಷಣೆಯ ಜೊತೆಗೆ ವೈಯಕ್ತಿಕ ಆಸ್ತಿ ಸಂಬಂಧಗಳನ್ನು ಒಂದು ಚಿಕ್ಕ ಜನವರ್ಗವು ಶತಾಯಗತಾಯ ರಕ್ಷಿಸುವಂತೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮನ್ನು ರಕ್ಷಿಸಲು ಉಪಯೋಗವಿಲ್ಲದ ಒಂದು ಸಂಸ್ಕೃತಿಯನ್ನು ಬಲಿಕೊಡಲು ಸಿದ್ಧರಿದ್ದಾರೆ. ಹತಾಶ ಮಾನವ ಸಮುದಾಯವು ದೀರ್ಘಕಾಲ, ಮಾನವೀಯತೆಯ ಹೋರಾಟದಿಂದ ಸಂಪಾದಿಸಿದ ಮಾನವ ಸಮುದಾಯ ಸಹಬಾಳ್ವೆಯ ಕಾನೂನುಗಳನ್ನು ಸಾರಾಸಗಟಾಗಿ ಬಲಿಕೊಡಲು ಸಿದ್ಧವಿದೆ.

ಸಂಗಾತಿಗಳೇ, ನಾವು ಆಸ್ತಿ ಸಂಬಂಧಗಳ ಕುರಿತು ಮಾತನಾಡೋಣ.

ಅಮಾನುಷ ಕ್ರೌರ್ಯ ಹರಡುವಿಕೆಯ ವಿರುದ್ಧದ ಹೋರಾಟದ ಕುರಿತು ನಾನು ಹೇಳಲು ಬಯಸಿದ್ದದು ಇದನ್ನು.

  • ಬರ್ಟೋಲ್ಟ್ ಬ್ರೆಕ್ಟ್, ಜರ್ಮನಿಯ ನಾಟಕಕಾರ, ಕವಿ ಬ್ರೆಕ್ಟ್ ನಾಝಿ ದುರಾಡಳಿಕ್ಕೆ ತನ್ನ ಸೃಜನಶೀಲ ಬರಹಗಳ ಮೂಲಕ ಪ್ರತಿರೋಧ ತೋರಿದವರು. ಬ್ರೆಕ್ಟ್ ಆಗಲಿ ಆರು ದಶಕಗಳು ಕಳೆದರೂ ಇಂದಿಗೂ ಆತನ ಕವಿತೆಗಳು ಹೋರಾಟಗಾರರಿಗೆ ಸ್ಫೂರ್ತಿ.

ಇದನ್ನು ಓದಿ: ನಾನು ಟ್ವೀಟ್‌ ಮಾಡಿದ್ದು, ನಾಗರಿಕನ ಕರ್ತವ್ಯವಾಗಿತ್ತು. ಆದರೆ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್

LEAVE A REPLY

Please enter your comment!
Please enter your name here