ಬಿಹಾರ ಸಿಂಡರೋಂ ಅಂತ ಒಂದು ಅದ.
ಅದು ಎನಪಾ ಅಂದ್ರ ಬಿಹಾರದಾಗ ಇರೋ ಬುದ್ಧಿವಂತ ಮನುಷ್ಯರು ಸಣ್ಣವರಿದ್ದಾಗ ಬಹಳ ಕಷ್ಟಪಟ್ಟು ಓದಿ, ಪರೀಕ್ಷಾ ಪಾಸು ಮಾಡಿ, ಡಾಕ್ಟರು, ಇಂಜಿನಿಯರು, ಐ.ಎ.ಎಸ್ ಅಧಿಕಾರಿ ಆಗತಾರ. ಅಷ್ಟೆಲ್ಲಾ ಭಾನಗಡಿ ಯಾಕಪಾ ಅಂದ್ರ ಬಿಹಾರದಿಂದ ಹೊರಗ ಬೀಳಲಿಕ್ಕೆ.
ಅಲ್ಲಿಂದ ಹೊರಗಬಿದ್ದವರು ಬೆಂಗಳೂರಿಗೆ ಬಂದು “ಥೂ ಈ ಟ್ರಾಫಿಕ್’, ಈ ಹೊಲಸು ನೀರು, ಗಲೀಜು ಮಾರ್ಕೆಟ್,’ ಅಂತ ಬೈತಾರ ಅದು ಬ್ಯಾರೆ ವಿಷಯ.
ಇದು ಯಾಕ ನೆನಪು ಆತಪಾ ಅಂದ್ರ ಮೊನ್ನೆ ನಮ್ಮ ಕಾಕು ಅವರ ಮನಿಯೊಳಗ ಈ ಸುದ್ದಿ ಬಂತು.
ನಾನು, ನಮ್ಮ ಮನಿಯವರು ಕೂಡಿ ಬಾಜು ಮನಿ ಕಾಕು ಅವರ ಮನಿಗೆ ಹೋಗಿದ್ದವಿ. ಅವರು ಮತ್ತು ಅವರ ಗಂಡ ಕೂಡುಮನಿ ಕಾಕಾ ಇಬ್ಬರೂ ಒಂದು ಕೂಡುಮನಿ (ಅಪಾಟ್ಮೆಂಟ್)ದೊಳಗ ಇರ್ತಾರ.
ಅವರು ಮೊನ್ನೆ ಇನ್ನಾ ಅಮೆರಿಕ ಪ್ರವಾಸ ಮುಗಿಸಿ ಬಂದಿದ್ದರು. ಅಲ್ಲಿ ಇರೋ ತಮ್ಮ ಮಗ – ಸೊಸಿ, ಮಗಳು – ಅಳಿಯನ ಭೇಟಿಯಾಗಿ ಬಂದಿದ್ದರು. ಅಲ್ಲಿಂದ ಬಂದು ಒಂದು ತಿಂಗಳು ಆದರೂ ಕೂಡ ನ್ಯೂಯಾರ್ಕಿನ ಥಂಡಿ, ಅಮೆರಿಕನ್ ಇಂಗ್ಲೀಷ್‌ನ ಒತ್ತುಮಾತು, ಹಾಗೂ ಅಲ್ಲಿನ ಸ್ವಚ್ಛ ರಸ್ತೆಗಳ ಗುಂಗಿನಲ್ಲೇ ಇದ್ದರು.
“ಇಲ್ಲೆ ಎಲ್ಲಾ ಕಡೆ ಹೊಲಸು, ಕಷ್ಟಪಟ್ಟು ಓದಿದ ಹುಡುಗರಿಗೆ ಮರಿಯಾದಿ ಇಲ್ಲ, ಮೀಸಲಾತಿಯೊಳಗ ಸಿಕ್ಕು ಸಾಯಬೇಕು. ಒಳ್ಳೆ ನೌಕರಿ ಇಲ್ಲ, ಏನಿಲ್ಲ, ಅದಕ್ಕ ನಮ್ಮ ಹುಡುಗರಿಗೆ ನಾ ಹೈಸ್ಕೂಲ್‌ದಾಗ ಹೇಳಿಬಿಟ್ಟೆ. ನೋಡ್ರಿ ಇಲ್ಲೆ ಛಲೋ ಓದರಿ, ಎಷ್ಟು ಲಗೂ ಆಗತದ ಅಷ್ಟು ಲಗೂ ಅಮೆರಿಕ, ಯೂರೋಪು, ಆಸ್ಟ್ರೇಲಿಯಾ ಅಂತ ಎಲ್ಲೇರ ಹೋಗಿ ಬಿಡರಿ. ಅವರು ನನ್ನ ಮಾತು ಕೇಳಿದರು, ಶಾಣೆ ಆದರು” ಅಂತ ಚಾಕಲೆಟ್ ಕಾರ್ಖಾನೆಯ ಒಳಗೆ ಹೋದ ಚಾರ್ಲಿಯಂತೆ ಖುಷಿ ಸೂಸಿದರು.
ಅವರು ಅಲ್ಲಿಗೆ ಹೋದ ಮ್ಯಾಲೆ ಅಲ್ಲೇ ಇರೋ ಹುಡುಗ ಹುಡುಗಿ ನೋಡಿ ಅವರ ಲಗ್ನ ಮಾಡಿದಿವಿ. ಅವರು ಅಲ್ಲೇ ಆರಾಮ ಇದ್ದಾರ ಅಂತ ಕಾಕಾ ಅಂದ್ರು.
“ಏನು ಆರಾಮೋ ಏನೋ ತಮ್ಮಾ? ಇಬ್ಬರಿಗೂ ಸಕ್ಕರೆ ರೋಗ. ಇವರಿಗೆ ಸಿಟ್ಟು ಜಾಸ್ತಿ ಆಗಿ ಆಗಿ ಬಿ. ಪಿ ಬ್ಯಾರೆ ಬಂದದ. ಒಂದು ಬ್ಲಡ್ ಟೆಸ್ಟ್ ಮಾಡಸಬೇಕು ಅಂದ್ರ ಯಾರರ ಹುಡುಗರ ಮರ್ಜಿ ಹಿಡಿಬೇಕು. ಅವಲಕ್ಕಿ ಖಾಲಿ ಆದರ ಕಿರಾಣಿ ಅಂಗಡಿಯವನಿಗೆ ಫೋನು ಮಾಡಿ ಕಾಯಬೇಕು. ಹಿಂಗ ನಡದದ ನೋಡು,” ಅಂತ ಕಾಕು ನಿಟ್ಟುಸಿರುಬಿಟ್ಟರು.
ಅಷ್ಟೊತ್ತಿಗೆ ನೀರಿಕ್ಷೆಯಂತೆ ಮಾತು ಹಿಂದೂಸ್ತಾನದ ರಾಜಕಾರಣಕ್ಕೆ ಹೊರಳಿತು. ಅಲ್ಲೋ ನಮ್ಮ ಜನಾ ಕೊರೊನಾ ಬಂದದ ಮಾಸ್ಕ್ ಹಾಕ್ಕೊಂಡು ಓಡಾಡರಿ ಅದ್ರ ಕೇಳೋದೇ ಇಲ್ಲ. ಬಜಾರ್‌ದಾಗ ಹೋದರ ಒಬ್ಬರ ಮೈ ಮ್ಯಾಲೆ ಒಬ್ಬರು ಬೀಳತಾರ. ಯಾರಿಗೂ ಶಿಸ್ತು ಅನ್ನೋದು ಇಲ್ಲ. ಛೇ ಛೇ ಅಂದ್ರು ಕಾಕಾ.
“ಅದಕ್ಕ ನೋಡು ನಮಗ ಸರ್ವಾಧಿಕಾರಿನ ಬೇಕು. ಪ್ರಜಾಪ್ರಭುತ್ವ ಎಲ್ಲಾ ನಡಿಯೋದಿಲ್ಲ. ಈ ಚುನಾವಣೆ, ಸಂಸತ್ತು, ಕ್ಯಾಬಿನೇಟು ಎಲ್ಲಾ ಕೆಲ್ಸಕ್ಕ ಬಾರದ ಮಾತು, ಗೈರು ಉಪಯೋಗಿ,” ಅಂದ್ರು.
ಈ ಕೂಡುಮನಿ ಕಾಕಾಗಳು ಬ್ಯಾರೆ ಎಲ್ಲಾ ವಿಷಯ ಮಾತಾಡೋವಾಗ ಸಹಜ ಇರ್ತಾರ. ಆದರ ರಾಜಕೀಯ ಬಂತು ಅಂದ್ರ ಡಿಸ್ಕವರಿ ಚಾನಲ್‌ನ ಪ್ರಾಣಿ ಬೇಟೆ ಆಗುವಾಗ ಮಾಡೋಹಂಗ ಆಗತಾರ. ಅವರ ದನಿ ಜೋರ ಆಗಲಿಕ್ಕೆ ಶುರುಆಗತದ. ಅವರ ಕೈ ಉಗುರು ಹೊರಗ ಬರಲಿಕ್ಕೆ ಹತ್ತತಾವು. ಅವರ ಕಣ್ಣ ಪಾಪೆ ದೊಡ್ಡವು ಆಗಲಿಕ್ಕೆ ಶುರು ಆಗತಾವು. ಹಿಂದ ರಾಮ್ಸೆ ಬಂಧುಗಳ ಹಳೆ ಹಾರರ ಹಿಂದಿ ಪಿಚ್ಛರನ ಹಿನ್ನೆಲೆ ಸಂಗೀತ ಕೇಳಲಿಕ್ಕೆ ಶುರು ಆಗತದ.
“ನಾನು ಹೋಗಲಿ ಬಿಡರಿ ಕಾಕಾ. ರಾಜಕೀಯ ಮಾತಾಡಿ ಚಹಾದ ರುಚಿ ಯಾಕ ಕೇಡಿಸಿಕೊಳ್ಳಬೇಕು,” ಅಂತ ನಕ್ಕೆ. ಅಗದೀ ಖರೆ ಮಾತು ಹೇಳಿದಿ ನೋಡಪಾ. ಇವರಿಗೆ ನಮ್ಮ ಅಳಿಯ ಒಂದು ಶಾಣೆ ಫೋನು ಕೊಡಿಸಿ ಬಿಟ್ಟಾನ. ಅದರಾಗ ಆ ‘ಏನು ನಡದದ’ (ವಾಟಸಪ್ಪು ) ಬ್ಯಾರೆ ಹಾಕಿ ಕೊಟ್ಟಾನ. ಆವಾಗಿನಿಂದಾ ಬರೆ ಅದರಾಗ ಇರ್ತಾರ. ಯಾರ ಬಂದರೂ ಬರೆ ರಾಜಕೀಯದ ಮಾತು. ನನಗ ಅಂತೂ ಸಾಕಾಗಿ ಬಿಟ್ಟದ. ಅಂತ ಅಂದ್ರು.
ನಾನು ಹೋಗಲಿ ಬಿಡರಿ. ಅದು ಹೊಸಾದು ಅಂತ ಅದನ್ನ ನೋಡತಾರ. ಒಂದು ದಿವಸ ಅದು ಸಹಿತ ಬೇಜಾರು ಆಗಿ ಬಿಟ್ಟುಬಿಡತಾರ ಅಂದೆ.
ಒಂದು ಕೆಲಸ ಮಾಡ್ರಿ. ಈ ವರ್ಷ ಅಮೆರಿಕ ಹೋದಂಗ ಮುಂದಿನ ವರ್ಷ ಉತ್ತರ ಕೊರಿಯಾ ಹೋಗರಿ. ಅಲ್ಲೇ ಮಜಾ ಇರ್ತದ ಅಂದೆ. ನಮ್ಮ ಗೆಳೆಯ ಇದ್ದಾನ. ಕಿಮ್ ಅಂತ. ಅವನ ಅಡ್ರೆಸ್ ಕೊಡತೆನಿ. ಅಲ್ಲಿ ಸ್ವಲ್ಪ ದಿವಸ ಇದ್ದು ಬರ್ರಿ ಅಂದೆ.
“ಅಲ್ಲೇ ಏನು ಮಜಾಪಾ ಅಂತಾದು” ಅಂದ್ರು ಕಾಕು.
“ಅಲ್ಲೇ ತಿಂಗಳದಾಗ ಎಲ್ಲರ ಮನಿಗೆ ಎರಡು ಸರೆ ಕೇಶಕರ್ತನ ನಿರೀಕ್ಷಕರು (ಹೇರ್‌ಕಟ್ ಇನ್ಸ್‌ಪೆಕ್ಟರ್) ಬರ್ತಾರ. ಅಲ್ಲಿನ ಕಾನೂನು ಪ್ರಕಾರ ಗಂಡಸರು 15 ರೀತಿ ಕಟ್ ಮಾಡಿಸಿಕೋಬೇಕು. ಹೆಣ್ಣು ಮಕ್ಕಳಿಗೆ ವಿನಾಯಿತಿ ಅದ. ಅವರು 16 ರೀತಿ ಮಾಡಿಸಿಕೊಳ್ಳಬೇಕು. ತಲಿ ಮ್ಯಾಲೆ ಕೂದಲು ಇಲ್ಲಾ ಅನ್ನೋ ಖಲವಾಟ ಗಂಡಸುರು ಪರಿಮಿತಿ ಪಡೆದ ವಿಗ್ ಹಾಕಿಸಿಕೊಳ್ಳಬೇಕು,” ಅಂತ ಅಂದೆ ನಾನು.

ಹೋಗೋ ಮಾರಾಯ ಎನರ ಸುಳ್ಳು ಸುಳ್ಳು ಹೇಳಬ್ಯಾಡ ಅಂತಅಂದ್ರು. ಅಯ್ಯೋ ಇಲ್ಲಾ. ಇಲ್ಲೇ ನೋಡ್ರಿ ಬೇಕಾರ ಅಂತ ಹೇಳಿದೆ.
ಅಲ್ಲೇ ಇನ್ನೊಂದು ಕಾನೂನು ಆದ. ರಾಜಕೀಯ ಅಪರಾಧಿಗಳಿಗೆ ಬೇಗ ಬೇಗ ವಿಚಾರಣೆ, ಬೇಗ ಬೇಗ ಶಿಕ್ಷೆ. ಅವರಿಗೆ ಜಾಮೀನು ಇಲ್ಲ, ಬಿಡುಗಡೆ ಇಲ್ಲ. ಅವರಿಗೆ ವಿಶೇಷ ಜೈಲು. ಅಲ್ಲೇ ಅವರ ಹತ್ತರ ಕಠಿಣ ಕೂಲಿ ಕೆಲಸ ಮಾಡಿಸಿ ಊಟಕ್ಕ ಹಾಕತಾರ. ಇನ್ನೂ ಮಜಾ ಏನು ಅಂದ್ರ ಯಾವ ರಾಜಕೀಯ ಹೋರಾಟಗಾರರು ಒಬ್ಬಂಟಿ ಆಗಬಾರದು ಅಂತ ಹೇಳಿ ಅವರ ಅಪ್ಪ, ಮಕ್ಕಳು ಎಲ್ಲರನ್ನೂ ಅವರ ಜೊತೆಗೆ ಜೈಲಿಗೆ ಹಾಕತಾರ.
ಒಬ್ಬ ಮನುಷ್ಯನಿಗೆ ಕ್ರಾಂತಿಕಾರಿ ಐಡಿಯಾ ಬಂದೇತಿ ಅಂದ್ರ ಅದಕ್ಕ ಅವರ ಅಪ್ಪ ಕಾರಣ ಇರತಾನ. ಅದಕ್ಕ ಅವ ಒಳಗ ಇನ್ನೂ, ತನ್ನ ಮಗನ ಮ್ಯಾಲೆ ಕ್ರಾಂತಿಕಾರಿ ಪ್ರಭಾವ ಬೀರಿರಬಹುದು. ಅದಕ್ಕ ಅವನಿಗೂ ಜೈಲು. ಅವರು ಎಷ್ಟು ಸಣ್ಣಾವ್ರು ಇದ್ದರೂ ಸರಿ, ಜೈಲಿಗೆ ಕಳಸೋದ. ಐದಾರು ವರ್ಷದ ಮಕ್ಕಳಿಗೆ ಜೈಲಿಗೆ ಹಾಕೋದು ಅಲ್ಲೇ ಸಾಮಾನ್ಯ ಅಂತ ಅಂದೆ. ಅಯ್ಯೋ ಅಷ್ಟು ಸಣ್ಣ ಹುಡುಗರಿಗೆ ಯಾಕ? ಅಂತ ಯಾರೋ ಕೇಳಿದಾಗ ಹಾವಿಗೆ ಹುಟ್ಟಿನಿಂದ ವಿಷ ಇರ್ತದ ಅಂತ ಅಲ್ಲಿನ ಕಿಮ್ ಅನ್ನೋ ನಾಯಕರು ಹೇಳಿದರು.
ಅದಕ್ಕ ಆ ಜೈಲಿಗೆ 14 ನೆ ನಂಬರ್ ಕ್ಯಾಂಪ್ ಅಂತ ಹೆಸರು. ಅದಕ್ಕ ಕೆಲವರು ಜೋಕು ಮಾಡತಾರ. ಉತ್ತರ ಕೊರಿಯಾದಾಗ ಇರೋದಕ್ಕಿಂತ ಆ ಕ್ಯಾಂಪ್‌ದಾಗ ಇರಬೇಕು. ಯಾಕ್ ಅಂದ್ರ ಇಡೀ ದೇಶದಾಗಿನ ಸಾಹಿತಿಗಳು, ಕವಿಗಳು, ಚಿತ್ರ ಕಲಾವಿದರು, ಚಲನಚಿತ್ರ ನಿರ್ದೇಶಕರು, ಸಂಗೀತಕಾರರು, ಕಾಲೇಜು ಶಿಕ್ಷಕರು, ಎಲ್ಲರೂ ಅಲ್ಲೇ ಇದ್ದಾರ, ಅಂತ.
ನನ್ನ ಮಾತು ಮುಂದುವರೆಯಿತು. ಅದು ಕೆಟ್ಟ ಸರ್ವಾಧಿಕಾರ. ನಮಗ ಬೇಕಾಗಿದ್ದು ಒಳ್ಳೆ ಸರ್ವಾಧಿಕಾರ. ಅಂತ ಅಂದ್ರು ಕಾಕಾ. ಅದರಾಗ ಒಳ್ಳೇದು – ಕೆಟ್ಟದ್ದು ಅನ್ನೋದು ಇರೋದಿಲ್ಲ ಕಾಕಾ, ಅಮಾಸಿ ಅಮಾಸಿನ, ಹುಣಿಮಿ ಹುಣಿಮಿನ ಅಂತ ಅಂದೆ.
ಈ ಮಾತು ಕತೆ ಯಾವಾಗ ಮುಗಿತದೋ ಅಂತ ಕಾಕು ಕಾಯತಾ ಕೂತಿದ್ದರು.
ನೋಡ್ರಿ, ಮಾನವ ಸ್ವಾತಂತ್ರ ಸೂಚಿ – 19 ಅಂತ ಒಂದು ವರದಿ ಬಂದದ. ಅದರ ಪ್ರಕಾರ ಎರಡು ನೂರು ದೇಶದಾಗ ಭಾರತ 94 ನೆ ಸ್ಥಾನದಾಗ ಆದ. ಏಷಿಯಾದ ಅನೇಕ ದೇಶಗಳು ಇದಕ್ಕಿಂತ ಉನ್ನತ ಸ್ಥಾನದಾಗ ಅದಾವು ಅಂತ ಹೇಳಿದೆ.
ನಮ್ಮದು ಸ್ವತಂತ್ರ ದೇಶ. ಇದು ಮೊದಲಿನ ಹತ್ತು- ಇಪ್ಪತ್ತುರ ಒಳಗ ಇರಬೇಕಾಗಿತ್ತು ಅಲ್ಲಾ, ಅಂತ ಕಾಕಾ ಮಹಾಭಾರತದ ದ್ರತರಾಷ್ಟ್ರನ ಗತೆ ಒಂದು ಘನ ಗಂಭೀರ ಹೇಳಿಕೆಕೊಟ್ಟರು.
ಎಲ್ಲೆ ಇರ್ತದ ಕಾಕಾ, ಹೊಸ ಸರಕಾರ ಬಂದ ಮ್ಯಾಲೆ ಪಂಥ ಪ್ರಧಾನ ಸೇವಕರು ಇಲ್ಲ ಅನ್ನುವವರನ್ನ ದೂರ ಮಾಡಿ ಹೌದು ಅನ್ನುವರನ್ನು ಮಾತ್ರ ಹತ್ತಿರ ಇಟ್ಟುಕೊಂಡಾರ. ಟೀಕಾಕಾರರಿಗೆ ಜಾಗ ಇಲ್ಲ. ಭಜನಾ ಮಂಡಳಿಗಳಿಗೆ ಮಾತ್ರ ಜಾಗ ಇದೆ. ಸರಕಾರ ಅನ್ನೋದು ಮಿತಿಮೀರಿದ ಅಧಿಕಾರ ಪಡೆದುಕೊಂಡುಬಿಟ್ಟದ. ಎಲ್ಲಾ ರೀತಿಯ ಚಳುವಳಿ, ಹೋರಾಟಗಳನ್ನ ಹತ್ತಿಕ್ಕಿಬಿಟ್ಟದ.
ನೂರಾರು ಮಂದಿ ಚಿಂತಕರನ್ನ ವರ್ಷಗಟ್ಟಲೆ ವಿಚಾರಣೆ ಇಲ್ಲದೆ, ನ್ಯಾಯಾಲಯದ ಮುಂದ ನಿಲ್ಲಿಸದೆ, ನಿಲ್ಲಿಸಿದರೂ ಅವರಿಗೆ ಬೇಲು ಸಿಗದಂತೆ ನೋಡಿಕೊಂಡಾರ. ಅವರ ಅಪ್ಪ- ಮಕ್ಕಳು ಎಲ್ಲರನ್ನೂ ಕರಕೊಂಡು ಹೋಗಿ 14 ನೆ ನಂಬರ್ ಕ್ಯಾಂಪ್‌ಗೆ ಕರಕೊಂಡು ಹೋಗೋದು ಒಂದು ಬಾಕಿ ಐತಿ ನೋಡ್ರಿ, ಅಂದೆ.
ಹಂಗೂ ಆಗಬಹುದು ಅಂತಿಯೇನು, ಅಂದ್ರು ಕಾಕು. ಯಾರಿಗೆ ಗೊತ್ತಪಾ ಮಾರಾಯ. ಯಾರಿಗೂ ಅಗತ್ಯಕ್ಕಿಂತ ಜಾಸ್ತಿ ಅಧಿಕಾರ ಕೊಡಬಾರದು ಅಂತ ಅಂತ ಸಣ್ಣ ದನಿಯೊಳಗ ಅಂದುಕೊಂಡರು. ಅವರು ಓಣಿಯೊಳಗ ಓಡಾಡಿ ಬೆಳದವರು. ಎಲ್ಲಕ್ಕಿಂತ ಮುಖ್ಯ ಅಂದ್ರ ಅವರ ಫೋನಿನ ಒಳಗ ’ಎನ್ ನಡದದ’ ಅನ್ನೋದು ಇಲ್ಲಾ!
ಇದನ್ನೂ ಓದಿ: ಈ ಜಿಡಿಪಿ ಅಂದರೆ ಏನಪಾ? : ಡೇಟಾಮ್ಯಾಟಿಕ್ಸ್