2016 ನವೆಂವಬರ್ 08. ದೇಶದ ಪ್ರಧಾನಿ ನರೇಂದ್ರ ಮೋದಿ ಅಂದು ಸಂಜೆ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು ಹಣದ ನಿಗ್ರಹಕ್ಕಾಗಿ ನೋಟ್‌ಬ್ಯಾನ್ ಅನಿವಾರ್ಯ ಎಂದು ಘೋಷಿಸಿದ್ದರು. ನೋಟ್‌ಬ್ಯಾನ್‌ನಿಂದಾಗಿ ಎಷ್ಟು ಪ್ರಮಾಣದ ಕಪ್ಪು ಹಣವನ್ನು ನಿಗ್ರಹಿಸಲಾಗಿದೆ ಎಂಬ ಕುರಿತ ಮಾಹಿತಿಯನ್ನು ಆರ್‌ಬಿಐ ಈವರೆಗೆ ನೀಡಿಲ್ಲ. ಆದರೆ, ಬ್ಯಾಂಕಿನ ಎದುರು ಹಣಕ್ಕಾಗಿ ಸಾಲುಗಟ್ಟಿ ನಿಂತು ಸತ್ತ ಬಡವರ ಸಂಖ್ಯೆ ಮಾತ್ರ ಬರೋಬ್ಬರಿ 124ಕ್ಕೂ ಅಧಿಕ ಎನ್ನುತ್ತಿವೆ ಅಂಕಿಅಂಶಗಳು.
ನೋಟ್‌ಬ್ಯಾನ್ ನಂತರ ಮತ್ತದೇ ಸಾಮೂಹಿಕ ಸಾವಿಗೆ ಕಾರಣವಾಗಿರುವ ಮತ್ತೊಂದು ಮಹತ್ವದ ಘೋಷಣೆಯೇ ಲಾಕ್‌ಡೌನ್. ಲಾಕ್‌ಡೌನ್‌ನಿಂದಾಗಿ ಮೃತಪಟ್ಟ ವಲಸೆ ಕಾರ್ಮಿಕರ ಒಟ್ಟು ಸಂಖ್ಯೆ ಎಷ್ಟು ಎಂಬ ಕುರಿತ ಅಂಕಿಅಂಶಗಳು ಇನ್ನಷ್ಟೇ ಹೊರ ಬೀಳಬೇಕಿದೆ. ಆದರೆ, ಈ ಸಾವಿನ ಸರಣಿಗೆ ಇಂದು 12 ವರ್ಷದ ಬಾಲಕಿಯೂ ಸೇರ್ಪಡೆಯಾಗಿರುವುದು ದುರಂತವಾಗಿದೆ.
ಲಾಕ್‌ಡೌನ್‌ನಿಂದಾಗಿಯೂ ದೇಶದ ನಾನಾ ಕಡೆಗಳಲ್ಲಿ ಹತ್ತಾರು ಸಾವು ಸಂಭವಿಸುತ್ತಿದೆ. ತೆಲಂಗಾಣದಿಂದ ಛತ್ತೀಸ್‌ಘಡದ ತನ್ನ ತವರು ಜಿಲ್ಲೆಗೆ ಕಾಲ್ನಡಿಗೆಯಲ್ಲೇ ತೆರಳಿದ್ದ 12 ವರ್ಷದ ಅಮಾಯಕ ಬಾಲಕಿ ಜಾಮ್ಲೊ ಮಕ್ಡಾಮ್ ಇಂದು ಮೃತಪಟ್ಟಿದ್ದು, ಈಕೆಯ ಸಾವಿಗೆ ನಿರ್ಜಲೀಕರಣ ಮತ್ತು ಅಪೌಷ್ಠಿಕತೆ ಕಾರಣ ಎಂದು ವೈದ್ಯರು ಷರಾ ಬರೆದಿದ್ದಾರೆ.
ಛತ್ತೀಸ್‌ಘಡದಿಂದ ತೆಲಂಗಾಣಕ್ಕೆ ಮೆಣಸಿನಕಾಯಿ ಹೊಲದಲ್ಲಿ ಕೆಲಸ ಮಾಡಲು ಬಂದಿದ್ದ ಕುಟುಂಬಕ್ಕೆ ಲಾಕ್‌ಡೌನ್‌ನಿಂದಾಗಿ ಬದುಕು ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿ ಕಳೆದ ಏಪ್ರಿಲ್ 15 ರಂದು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ 11 ಜನರೊಂದಿಗೆ ಈ ಕುಟುಂಬ ತನ್ನೂರಿಗೆ ದೀರ್ಘ ಪ್ರಯಾಣಕ್ಕೆ ಮುಂದಾಗಿದೆ.
ಕಳೆದ 5 ದಿನಗಳಿಂದ ಕಾಡು ದಾರಿಯಲ್ಲಿ ಕ್ರಮಿಸಿದ್ದ ಈ ತಂಡ ಇಂದು ಹೆದ್ದಾರಿಗೆ ಆಗಮಿಸಿತ್ತು. ಆದರೆ, ತನ್ನ ಹಳ್ಳಿಗೆ ಇನ್ನೂ ಕೇವಲ 14 ಕಿಮೀ ದೂರದಲ್ಲಿ ಇದ್ದ ವೇಳೆ ನತದೃಷ್ಟ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿಯ ಕೊರೊನಾ ಪರೀಕ್ಷಾ ವರಿದಿಯು ನೆಗೆಟಿವ್ ಬಂದಿದೆ. ಆದರೆ ಹಸಿವು, ಬಳಲಿಕೆಯಿಂದ ಆಕೆ ಮೃತಳಾಗಿದ್ದಾಳೆ. ಆ ಮಗುವಿನೊಂದಿಗೆ ನಡೆದ ಅಷ್ಟು ಜನಕ್ಕೂ ಕೂಡ ಸಮರ್ಪಕ ಆಹಾರ ಸಿಕ್ಕಿಲ್ಲ ಎಂದು ಬಿಜಾಪುರ ಜಿಲ್ಲಾ ಆರೋಗ್ಯ ಅಧಿಕಾರಿ ಬಿ.ಆರ್ ಪೂಜಾರಿ ತಿಳಿಸಿದ್ದಾರೆ. ಛತ್ತಿಸ್‌ಘಡ ಸಿಎಂ ಭೂಪೇಶ್ ಭಾಘೆಲ್ ಒಂದು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ ಎಂದು ಬಿಸಿನೆಸ್ ಟುಡೆ ವರದಿ ಮಾಡಿದೆ.
ಈ ಹಿಂದೆ ದೆಹಲಿಯಿಂದ ಉತ್ತರಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಸುಮಾರು 200 ಕಿಮೀ ಕ್ರಮಿಸಿದ ನಂತರ ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಹೃದಯಾಘಾತಕ್ಕೆ ಬಲಿಯಾದ ರಣವೀರ್ ಸಿಂಗ್, ಅದೇ ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಉರಿ ಬಿಸಿಲಿನಲ್ಲಿ ನಡೆದು ನಡೆದು ನಿರ್ಜಲೀಕರಣಕ್ಕೆ ಬಲಿಯಾದ ತನ್ನ10 ವರ್ಷದ ಮಗುವನ್ನು ಎತ್ತಿಕೊಂಡು ಸಹಾಯಕ್ಕೆ ಅಂಗಲಾಚುತ್ತಾ ನಡೆದ ಉತ್ತರಪ್ರದೇಶ ಮಹಿಳೆ, ಇನ್ನೂ ಸ್ವಂತ ಊರಿಗೆ ನಡೆದೇ ಸಾಗುತ್ತಿರುವಾಗ ಕರ್ನಾಟಕದ ಬಳ್ಳಾರಿ ಬಳಿ ಮೃತಪಟ್ಟ ಸಿಂಧನೂರಿನ ಗಂಗಮ್ಮ ಹೀಗೆ ಲಾಕ್‌ಡೌನ್ ಸಾವಿನ ಪಟ್ಟಿ ಸಾಗುತ್ತಲೇ ಇದೆ.
ಹೀಗೆ ಲಾಕ್‌ಡೌನ್‌ಗೆ ಮೃತಪಟ್ಟ ಎಲ್ಲರೂ ಸಹ ಬಡವರು ಮತ್ತು ವಲಸೆ ಕಾರ್ಮಿಕರು ಎಂಬುದು ಉಲ್ಲೇಖಾರ್ಹ. ಲಾಕ್‌ಡೌನ್‌ನಿಂದಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿ ಕೊನೆಗೆ ಬೇರೆ ವಿಧಿ ಇಲ್ಲದೆ ತನ್ನ ಸ್ವಗ್ರಾಮಕ್ಕೆ ನಡೆದೇ ಸಾಗುವಾಗ ಇವೆರೆಲ್ಲರೂ ಮೃತಪಟ್ಟಿದ್ದಾರೆ.
ಕೊರೋನಾವನ್ನು ತಡೆಯಲು ಲಾಕ್‌ಡೌನ್ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕನಿಷ್ಟ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕಿತ್ತು. ವಲಸೆ ಮತ್ತು ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ ಕನಿಷ್ಟ ಊಟವನ್ನಾದರೂ ಪೂರೈಕೆ ಮಾಡಬೇಕಿತ್ತು. ಆದರೆ, ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಈ ಕುರಿತು ಮಾಡಬೇಕಾದಷ್ಟು ಕೆಲಸ ಮಾಡಿಲ್ಲ. ಇದರ ಫಲಿತಾಂಶವೇ ಸಾಲು ಸಾಲು ಸಾವುಗಳು.
ಇದನ್ನೂ ಓದಿ: ಲಾಕ್ ಡೌನ್ ನಿಂದ ಅಸ್ತವ್ಯಸ್ತಗೊಂಡ ಕಾರ್ಮಿಕರ ಬದುಕು; ಜನ ಸಾಹಸ್ ಸರ್ವೇ ಬಿಚ್ಚಿಟ್ಟ ಸತ್ಯಗಳು
ಹಸಿವಿನಿಂದ ಬಳಲುತ್ತಿರುವ ವಲಸೆ ಕಾರ್ಮಿಕರನ್ನು ಅವರ ಸ್ವಗ್ರಾಮಗಳಿಗೆ ತಲುಪಿಸುವವರೆಗೆ ಇಂತಹ ಸಾವುಗಳಿಗೆ ಕೊನೆ ಇಲ್ಲ. ಆದರೆ, ಕೇಂದ್ರ ಸರ್ಕಾರ ಈವರೆಗೆ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ಕುರಿತು ಚಿಂತನೆಯೇ ನಡೆಸಿಲ್ಲ. ಪರಿಣಾಮ ಇತ್ತೀಚೆಗೆ ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರ ತಾಳ್ಮೆ ಕಟ್ಟೆ ಒಡೆದಿದ್ದು ಮಹಾರಾಷ್ಟ್ರದ ಬಾಂದ್ರಾ ಪ್ರದೇಶದಲ್ಲಿ ಒಗ್ಗೂಡಿದನ್ನು ನೆನೆಯಬಹುದು.
ಇನ್ನಾದರೂ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ರೂಪಿಸಬೇಕಿದೆ. ಅಥವಾ ಕನಿಷ್ಟ ಅವರಿಗೆ ಒಪ್ಪೊತ್ತಿನ ಊಟಕ್ಕಾದರೂ ದಾರಿ ಮಾಡಿಕೊಡಬೇಕಿದೆ. ಇಲ್ಲದಿದ್ದರೆ ಈ ಸಾವಿನ ಸರಣಿ ನಿಲ್ಲದು!



ಇಂತಹ ಸಾವುಗಳು ಈ ಕೂಡಲೇ ನಿಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.