Homeಮುಖಪುಟವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ಅಂತರರಾಷ್ಟ್ರೀಯ ಸಮುದಾಯವು ಕೋವಿಡ್ ವಿರುದ್ಧ ಭಾರತದ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ- ಮಾಹಿತಿ ತಂತ್ರಜ್ಞಾನವನ್ನು ಬಳಸುವ ಕೆಲವರು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಕಿಡಿಗೇಡಿತನದ ಅಪಪ್ರಚಾರಗಳು ಭಾರತಕ್ಕೆ ಶ್ರೇಯವನ್ನು ತರುವುದಿಲ್ಲ.

- Advertisement -
- Advertisement -

ಕೊರೋನಾ ವಿರುದ್ಧದ ಹೋರಾಟದ ಹೊತ್ತಿನಲ್ಲಿ ವಿಚ್ಛಿದ್ರಕಾರಿ ಅಜೆಂಡಾಗಳು ಸುಳ್ಳು ಸುದ್ದಿಗಳಾಗಿ ಮುನ್ನೆಲೆಗೆ ಬರುತ್ತಿದ್ದು ಅವುಗಳನ್ನು ತಡೆಯುವಂತೆ ಭಾರತದ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್‌ರವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅದರ ಕನ್ನಡ ಅನುವಾದ ಇಲ್ಲಿದೆ.

ನನ್ನ ನೆಚ್ಚಿನ ಪ್ರಧಾನ ಮಂತ್ರಿಯವರೇ,

ಎಪ್ರಿಲ್ 14, 2020ರಂದು ಅಂಬೇಡ್ಕರ್ ಜಯಂತಿಯ ದಿನ ರಾಷ್ಟ್ರೀಯ ಟೆಲಿವಿಷನ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ನೀವು ಮಾಡಿದ ಭಾಷಣವನ್ನು ನಾನು ಅತ್ಯಾಸಕ್ತಿಯಿಂದ ಕೇಳಿದೆ.

ಆದರೆ, ಉಳಿದವರಂತೆ ನಾನು ಕೂಡಾ- ತಮ್ಮ ತಮ್ಮ ಕೆಲಸದ ಸ್ಥಳಗಳಿಂದ ಹೊರತಳ್ಳಲ್ಪಪಟ್ಟಿರುವ ಲಕ್ಷಾಂತರ ಕಾರ್ಮಿಕರು –  ಒಂದೋ ಒತ್ತಾಯಪೂರ್ವಕವಾಗಿ  ನಗರಗಳಲ್ಲಿರುವ ತಮ್ಮತಮ್ಮ ಕೆಲಸದ ಸ್ಥಳಗಳಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುವವವರು; ಅಥವಾ ತಮ್ಮ ಕುಟುಂಬದವರನ್ನು ಸೇರಿಕೊಳ್ಳಲು ನೂರಾರು ಕಿ.ಮೀ. ದೂರದಲ್ಲಿರುವ ಮನೆಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ ಕಾರ್ಮಿಕರನ್ನು ನೋಡಿಕೊಳ್ಳುವ ಸಲುವಾಗಿ ಸರಕಾರ ಯಾವೆಲ್ಲಾ ಕ್ರಮಗಳನ್ನು ಹಾಗೂ ಯೋಜನೆಗಳನ್ನು ಹಾಕಿಕೊಂಡಿದೆ ಎಂಬ ಕುರಿತು ಇನ್ನಷ್ಟು ನಿರ್ದಿಷ್ಟವಾದ ಮಾಹಿತಿಯನ್ನು ನೀವು ನಮಗೆ ಒದಗಿಸುತ್ತೀರಿ ಎಂದು ಆಶಿಸುತ್ತಿದ್ದೆ, ನಿರೀಕ್ಷಿಸುತ್ತಿದ್ದೆ.

ನಾವು ಮಾಧ್ಯಮದಲ್ಲಿ ನೋಡುತ್ತಿರುವ ವರದಿಗಳು ಮತ್ತು ಪ್ರತ್ಯಕ್ಷ ವರದಿಗಳಿಂದ ಅವರ ಸಂಕಷ್ಟ ಹೃದಯ ಒಡೆಯುವಂತದ್ದಾಗಿದೆ ಮತ್ತು ನಾವು ಊಹಿಸಬಹುದಾದುದಕ್ಕಿಂತಲೂ ತೀರಾ ಕೆಟ್ಟದಾಗಿದೆ ಎಂದು ಗೊತ್ತಾಗುತ್ತಿದೆ.

ನಾನು ಮಾರ್ಚ್ 27ರಂದು ಮಾನನೀಯ ರಕ್ಷಣಾ ಸಚಿವರು, ಮುಖ್ಯ ರಕ್ಷಣಾ ಕಾರ್ಯದರ್ಶಿಯವರು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರಿಗೆ ಪ್ರತಿಗಳನ್ನು ಲಗತ್ತಿಸಿ ನಿಮಗೆ ಬರೆದಿದ್ದ ಹಿಂದಿನ ಪತ್ರ ನಿಮಗೆ ನೆನಪಿರಬಹುದು. ಸಶಸ್ತ್ರ ಪಡೆಗಳು ಹೊಂದಿರುವ ಅಗಾಧ ಮಾನವ ಶಕ್ತಿ, ಅದಕ್ಕೂ ಮಿಗಿಲಾಗಿ ಅವರು ಅಖಿಲ ಭಾರತ ಮಟ್ಟದಲ್ಲಿ ಹೊಂದಿರುವ ಅಸ್ತಿತ್ವವನ್ನು- ನಾಗರಿಕ ಆಡಳಿತ ನೆರವಿಗಾಗಿ ಮನವಿ ಸಲ್ಲಿಸುವುದಕ್ಕೆ ಮುನ್ನವೇ- ಸ್ಥಳೀಯ ಆಡಳಿತಕ್ಕೆ ನೆರವಾಗುವ ಸಲುವಾಗಿ ಬಳಸಿಕೊಳ್ಳಬಹುದು ಎಂದು ನಾನು ಸಲಹೆ ಮಾಡಿದ್ದೆ.

ಇಂತಹ “ನಾಗರಿಕ ಅಧಿಕಾರಕ್ಕೆ ನೆರವು” ಎಂಬುದನ್ನು “ನಾಗರಿಕ ಪ್ರಾಧಿಕಾರ ವ್ಯವಸ್ಥೆಗೆ ನೆರವು” ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕು. ಇಂತಹಾ ನೆರವನ್ನು ಹಲವು ರೀತಿಗಳಲ್ಲಿ ನೀಡಲು ಸಾಧ್ಯವಿದೆ. ದೊಡ್ಡ ಸಂಖ್ಯೆಯ ಸಂಚಾರ, ಸಾರಿಗೆಯಲ್ಲಿ ನೆರವಾಗುವುದರಿಂದ ಹಿಡಿದು, ಸಮುದಾಯ ಅಡುಗೆಮನೆ ಮತ್ತು ಆಹಾರ ವಿತರಣೆಯನ್ನು ನಿರ್ವಹಿಸುವುದು, ಅಥವಾ ವಿಸ್ತೃತವಾದ ಆಸ್ಪತ್ರೆಗಳಿಗೆ ಮೂಲಸೌಕರ್ಯ ನಿರ್ಮಾಣ ಮಾಡುವುದು, ಆರೋಗ್ಯ ಸೇವಾ ಸಿಬ್ಬಂದಿಯನ್ನು ಒದಗಿಸುವುದರ ತನಕ- ನಮ್ಮ ನಾಗರಿಕರಿಗೆ ಈಗ ಸಿಗುತ್ತಿರುವ ಸೇವೆಗಳನ್ನು ಬಲಪಡಿಸಲು ಬಳಸಿಕೊಳ್ಳಬಹುದು ಎಂದು ನಾನು ಹೇಳಿದ್ದೆ.

ಆಹಾರ ಧಾನ್ಯಗಳನ್ನು ಜಿಲ್ಲಾ ಆಡಳಿತಗಳು ಪೂರೈಕೆ ಮಾಡಬಹುದು ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ)ದಲ್ಲಿ ಬಿದ್ದುಕೊಂಡಿರುವ ಭಾರೀ ಪ್ರಮಾಣದ ಮಿಗತೆ ಆಹಾರ ಧಾನ್ಯಗಳನ್ನು ಪಡೆದು ಬಳಸಿಕೊಳ್ಳಲು ಅವುಗಳಿಗೆ ಅಧಿಕಾರ ನೀಡಬೇಕು ಎಂದೂ ನಾನು ಸಲಹೆ ಮಾಡಿದ್ದೆ. ಎಲ್ಲಾ ಲಭ್ಯ ಲೆಕ್ಕಾಚಾರಗಳ ಪ್ರಕಾರ ನಮ್ಮ ಆಹಾರದ ಮಿಗತೆ ದಾಸ್ತಾನು ಯಾವುದೇ ತುರ್ತು ಸ್ಥಿತಿಗೆ ಅಗತ್ಯ ಇರುವುದಕ್ಕಿಂತ ಹೆಚ್ಚುಕಡಿಮೆ ಮೂರು ಪಟ್ಟು ಹೆಚ್ಚು ಇದೆ.

ಪ್ರಸ್ತುತ ಸ್ಥಿತಿಯು ಅತ್ಯಂತ ಗಂಭೀರ ಸ್ಥಿತಿಗಿಂತಲೂ ಗಂಭೀರವಾಗಿದೆ ಎಂದು ನೀವು ನನ್ನೊಂದಿಗೆ ಒಪ್ಪಿಕೊಳ್ಳುತ್ತೀರಿ. ಅದೆಂದರೆ, ಹಠಾತ್ತಾಗಿ ಹೇರಿದ ಲಾಕ್‌ಡೌನ್‌ನ ಪರಿಣಾಮವಾಗಿ ಹುಟ್ಟಿಕೊಂಡ ಹಲವಾರು ಸಂಕೀರ್ಣ ಪರಿಸ್ಥಿತಿಗಳು ನಿರ್ಮಿಸಿದ ಸಾಮೂಹಿಕ ಹಸಿವಿನ ಘೋರ ಪರಿಸ್ಥಿತಿ. ಅತ್ಯಂತ ಅಗತ್ಯವಿರುವವರಿಗೆ, ರೇಷನ್ ಕಾರ್ಡು ಇದ್ದರೂ, ಇಲ್ಲದಿದ್ದರೂ ಈ ಆಹಾರ ದಾಸ್ತಾನು ಲಭ್ಯವಾಗುವಂತೆ ಮಾಡದಿದ್ದರೆ ಅದು- ಅತ್ಯಂತ ತೀವ್ರವಾದ ಅಗತ್ಯದ ಸಂದರ್ಭದಲ್ಲಿಯೂ ಅತ್ಯಂತ ಜೀವನಾವಶ್ಯಕ ವಸ್ತುಗಳನ್ನು ಕಳ್ಳದಾಸ್ತಾನು ಮಾಡುವುದಕ್ಕೆ ಸಮನಾಗುತ್ತದೆ.


ಇದನ್ನೂ ಓದಿ: ಪಾದರಾಯನಪುರದಲ್ಲಿ ನಡೆದದ್ದೇನು? ಏನು ಕಾರಣ? ಸಂಪೂರ್ಣ ವಿವರಗಳು


ಸಶಸ್ತ್ರ ಪಡೆಗಳು ಈಗಾಗಲೇ ಆರೋಗ್ಯ ಸೇವೆ, ಔಷಧಿ, ಕ್ವಾರಂಟೈನ್ ಕೇಂದ್ರಗಳು, ಹೆಚ್ಚುವರಿ ಹಾಸಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ತಳಮಟ್ಟದ ಸೇವೆಯನ್ನು ನೀಡುತ್ತಿವೆ ಎಂದು ನನಗೆ ತಿಳಿದಿದೆ. ಇದು ಅತ್ಯುತ್ತಮ ಸೇವಾ ಸಂಪ್ರದಾಯಕ್ಕೆ ಅನುಗುಣವಾಗಿದೆ. ಎಲ್ಲಾ ಸಮಯಗಳಲ್ಲಿ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಈ ಪಿಡುಗನ್ನು ಎದುರಿಸುವುದರಲ್ಲಿ ರಕ್ಷಣಾ ಸಚಿವಾಲಯದಲ್ಲಿರುವ ನಿಮ್ಮ ತಂಡ ತೀವ್ರವಾದ ಒತ್ತಡದಲ್ಲಿದೆ ಎಂದೂ ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ.

ಹಲವಾರು ರಾಜ್ಯ ಮತ್ತು ಜಿಲ್ಲಾಡಳಿತಗಳು ಮತ್ತು ಸರಕಾರೇತರ ಸಂಘಟನೆಗಳು, ಹಲವಾರು ನಾಗರಿಕ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಕೂಡಾ ಮಾಡುತ್ತಿರುವ ಅತ್ಯುತ್ಕೃಷ್ಟ ಸೇವೆಯನ್ನು ನಾನು ಶ್ಲಾಘಿಸುತ್ತೇನೆ. ಈಗ ನಾವು ಎದುರಿಸುತ್ತಿರುವ ಸಮಸ್ಯೆಯ ಪ್ರಮಾಣ ಹಿಂದೆಂದೂ ಎದುರಾಗದಿರುವಂತದ್ದು ಎಂದು ಕೂಡಾ ನಾನು ಹಿಂದೆ ಉಲ್ಲೇಖಿಸಿದ್ದೆ. ಆದುದರಿಂದ, ನಮ್ಮ ಪ್ರತಿಕ್ರಿಯೆ ಕೂಡಾ ಅದೇ ರೀತಿಯಲ್ಲಿ ಇರಬೇಕು.

ನಾನೊಬ್ಬ ನೌಕಾಪಡೆಯ ಮಾಜಿ ಮುಖ್ಯಸ್ಥನಾಗಿದ್ದು, ಭಾರತವು ಸ್ವತಂತ್ರವಾದ ಸ್ವಲ್ಪ ಸಮಯದ ಬಳಿಕ 1949ರಲ್ಲಿ ಭಾರತೀಯ ಸಶಸ್ತ್ರ ಪಡೆ (ನೌಕಾಪಡೆ) ಸೇರಿದ್ದೆ. ರಾಷ್ಟ್ರಪಿತನ ಹತ್ಯೆಯ ಬಳಿಕ ಅಷ್ಟೊಂದು ಜನರು ಅನುಭವಿಸಿದ ಆಘಾತ ನನಗೆ ಇಂದಿಗೂ ನೆನಪಿದೆ. ಇಂತಹ ಒಂದು ಆಘಾತಕಾರಿ ಘಟನೆಯ ಬಳಿಕವೂ- ನಾವು, ಭಾರತೀಯ ಜನರು, ಬಾಬಾ ಸಾಹೇಬ್ ಅಂಬೇಡ್ಕರರ ನಾಯಕತ್ವದಲ್ಲಿ ನಮ್ಮ ಸಂವಿಧಾನವನ್ನು ಅಂಗೀಕರಿಸಿ ಆನಂದತುಂದಿಲರಾಗಿದ್ದೆವು. ಭಾರತದ ಎಲ್ಲಾ ಜನರ ನಡುವಿನ ಸಮಾನತೆಯ ಈ ದರ್ಶನವೇ ಭಾರತೀಯ ಸಶಸ್ತ್ರ ಪಡೆಗಳಲ್ಲಿದ್ದ ನಮ್ಮೆಲ್ಲರಿಗೂ ದಾರಿತೋರುವ ಬೆಳಕಾಗಿದ್ದುದು.

ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಧರ್ಮದ ಬಳಕೆ ಮತ್ತು ದುರ್ಬಳಕೆ, ದ್ವೇಷಕಾರುವ ಮಾತುಗಳು, ಅಲ್ಪಸಂಖ್ಯಾತರನ್ನು, ಅದರಲ್ಲೂ ಮುಸ್ಲಿಮರನ್ನು ಗುರಿಮಾಡುತ್ತಿರುವುದು, ನಮ್ಮ ಸಶಸ್ತ್ರ ಪಡೆಗಳಲ್ಲಿರುವ ಅನೇಕರು ಕೂಡಾ ಮುಸ್ಲಿಮರು ಎಂಬುದನ್ನು ಮರೆಯುತ್ತಿರುವುದು- ಮುಂತಾದವುಗಳನ್ನು ಆಳವಾದ ಆತಂಕ ಮತ್ತು ದುಃಖದಿಂದ ನಾನು ನೋಡುತ್ತಿದ್ದೇನೆ. ಕೊರೋನ ವೈರಸ್/ ಕೋವಿಡ್-19 ಉಂಟುಮಾಡಿರುವ ಈ ದುರಂತಕಾರಿ ಪಿಡುಗನ್ನು ಸಾಮೂಹಿಕವಾಗಿ, ನಮ್ಮ ಅಧೀನದಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿ, ಎಲ್ಲಾ ಜನವಿಭಾಗ, ಧರ್ಮ ಮತ್ತು ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವುದರ ಮೂಲಕ ಎದುರಿಸಬೇಕಾಗಿದೆ.

ಅಂತರರಾಷ್ಟ್ರೀಯ ಸಮುದಾಯವು ಕೋವಿಡ್ ವಿರುದ್ಧ ಭಾರತದ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ- ಮಾಹಿತಿ ತಂತ್ರಜ್ಞಾನವನ್ನು ಬಳಸುವ ಕೆಲವರು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ಕಿಡಿಗೇಡಿತನದ ಅಪಪ್ರಚಾರಗಳು ಭಾರತಕ್ಕೆ ಶ್ರೇಯವನ್ನು ತರುವುದಿಲ್ಲ.

ಪ್ರಧಾನ ಮಂತ್ರಿ ‘ಜೀ’, ನೀವು ಮತ್ತೆಮತ್ತೆ ಭಾರತದ ಸಂವಿಧಾನ ಮತ್ತು ಅದರಲ್ಲಿ ಅಡಕವಾಗಿರುವ ನ್ಯಾಯ, ಸಮಾನತೆ, ಸ್ವಾತಂತ್ರ್ಯಗಳ- ಚುಟುಕಾಗಿ “ವಸುಧೈವ ಕುಟುಂಬಕಂ” ಎಂಬ ಮೌಲ್ಯದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದೀರಿ. ಧರ್ಮ, ಜಾತಿ, ಜನಾಂಗ, ವರ್ಗ ಅಥವಾ ಉದ್ಯೋಗದ ಆಧಾರದಲ್ಲಿ, ಯಾವುದೇ ವ್ಯಕ್ತಿ, ಸಮುದಾಯ ಅಥವಾ ಧರ್ಮದ ಕುರಿತು ಯಾವುದೇ ರೀತಿಯ ಪೂರ್ವಗ್ರಹದಿಂದ ಕೂಡಿರುವ ಎಲ್ಲಾ ಕೃತ್ಯಗಳಿಗೆ ನಿಮ್ಮ ಸರಕಾರ ಮತ್ತು ಪಕ್ಷ ಶೂನ್ಯ ಸಹನೆ ತೋರುವುದು ಎಂಬ ವಿಶ್ವಾಸ ನನಗಿದೆ.

ಹಲವಾರು ಹಂತಗಳಲ್ಲಿ ಸ್ಪಷ್ಟವಾಗಿಯೇ- ಈ ಪರಿಸ್ಥಿತಿಯ ಲಾಭಪಡೆದು ತಮ್ಮ ವಿಚ್ಛಿದ್ರಕಾರಿ ಅಜೆಂಡಾವನ್ನು ಹರಡುತ್ತಾ ದಾರಿತಪ್ಪಿಸುತ್ತಿರುವ ಕೆಲವು ಮೂಲಗಳಿವೆ. ಅದೇ ಹೊತ್ತಿನಲ್ಲಿ, ನಿಸ್ಪಕ್ಷಪಾತದ, ತನಿಖಾ ವರದಿಗಾರಿಕೆಯ ನೀತಿಯನ್ನು ಅನುಸರಿಸುವಂತೆ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳಿಗೆ ನಿರ್ದೇಶಿಸಬೇಕು.

ಪ್ರಸ್ತುತ ನೌಕಾಪಡೆ ಅತ್ಯಂತ ಹಿರಿಯ ಮಾಜಿ ಮುಖ್ಯಸ್ಥನಾಗಿ, ಈ ಮೇಲಿನ ಅಂಶಗಳನ್ನು ನಿಮ್ಮ ಗಂಭೀರ ಪರಿಗಣನೆಗಾಗಿ ಮತ್ತು ದೋಷನಿವಾರಕ ಕ್ರಮಗಳಿಗಾಗಿ ನಿಮ್ಮ ಮುಂದಿಡುವುದು  ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ಅಂಚೆ, ಸ್ಪೀಡ್‌ಪೋಸ್ಟ್, ಕೊರಿಯರ್ ಇತ್ಯಾದಿ ಸೇವೆಗಳೆಲ್ಲವೂ ಪ್ರಸ್ತುತ ಲಭ್ಯವಿಲ್ಲದೇ ಇರುವುದರಿಂದ, ಇದನ್ನು ಒಂದು ಬಹಿರಂಗ ಪತ್ರವನ್ನಾಗಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತಿದ್ದೇನೆ.

ಅತ್ಯುನ್ನತ ಗೌರವಗಳೊಂದಿಗೆ,

ನಿಮ್ಮ ವಿಶ್ವಾಸಿ,

ಎಲ್. ರಾಮದಾಸ್

(ಅಡ್ಮಿರಲ್ (ನಿವೃತ್ತ) ಎಲ್. ರಾಮದಾಸ್ ಅವರು ಭಾರತೀಯ ನೌಕಾಪಡೆ ಮಾಜಿ ಮುಖ್ಯಸ್ಥರು.)

ಅನುವಾದ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...