ಮಹಾರಾಷ್ಟ್ರ ಸರ್ಕಾರವು ತನ್ನ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ ನೀಡುವ ಮಾಸಿಕ ಪಾವತಿಯನ್ನು 8 ಲಕ್ಷ ಮಹಿಳೆಯರಿಗೆ 1,500 ರೂ.ಗಳಿಂದ 500 ರೂ.ಗಳಿಗೆ ಕಡಿತಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅನುದಾನ ಕಡಿತಗೊಂಡ ಮಹಿಳೆಯರುವ ನಮೋ ಶೇತ್ಕರಿ ಮಹಾಸನ್ಮಾನ್ ನಿಧಿ ಯೋಜನೆಯಡಿಯಲ್ಲಿ ತಿಂಗಳಿಗೆ 1,000 ರೂ.ಗಳನ್ನು ಪಡೆಯುತ್ತಿರುವವರಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಲಡ್ಕಿ ಬಹಿನ್ ಯೋಜನೆಯ ನಿಯಮಗಳ ಅಡಿಯಲ್ಲಿ, ಸರ್ಕಾರ ನೀಡುವ ಒಟ್ಟು ಮಾಸಿಕ ಪ್ರಯೋಜನದಲ್ಲಿ 1,500 ರೂ.ಗಳನ್ನು ಮೀರದಿದ್ದರೆ ಮಾತ್ರ ಫಲಾನುಭವಿಗಳು ಇತರ ಸರ್ಕಾರಿ ಸಹಾಯವನ್ನು ಪಡೆಯಬಹುದಾಗಿದೆ. ಯೋಜನೆಯು ಅರ್ಹತಾ ಮಾನದಂಡಗಳನ್ನು ಪೂರೈಸುವವರಿಗೆ ಸೀಮಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯವು ನಡೆಸುತ್ತಿರುವ ಪರಿಶೀಲನೆಯ ಭಾಗವಾಗಿ ಈ ಕಡಿತವನ್ನು ಮಾಡಲಾಗಿದೆ.
“ಸದ್ಯದ ಪರಿಶೀಲನೆ ನಡೆಯುತ್ತಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಪತ್ರಿಕೆ ಉಲ್ಲೇಖಿಸಿದೆ. “ಮೊದಲು ಜಿಲ್ಲೆಗಳಿಂದ ರಾಜ್ಯ ಪ್ರಧಾನ ಕಚೇರಿಗೆ ಕಳುಹಿಸಲಾದ ಅರ್ಜಿಗಳನ್ನು ಸ್ಕ್ಯಾನ್ ಮಾಡುತ್ತೇವೆ. ನಂತರ ಅರ್ಹ ಪ್ರಕರಣಗಳನ್ನು ಮರುಪರಿಶೀಲಿಸುತ್ತೇವೆ.” ಎಂದು ಅವರು ಹೇಳಿದ್ದಾರೆ.
ಪರಿಶೀಲನೆಯ ನಂತರ ಫಲಾನುಭವಿಗಳ ಸಂಖ್ಯೆ 10 ರಿಂದ 15 ಲಕ್ಷದಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಹಿಂದೆ ಎಂದು ಹೇಳಿದ್ದರು. “ನಾವು ಮಾನದಂಡಗಳನ್ನು ಅಥವಾ ಹಣವನ್ನು ಬದಲಾಯಿಸುತ್ತಿಲ್ಲ. ಅರ್ಹರಿಗೆ ಮಾತ್ರ ಸ್ಟೈಫಂಡ್ ಸಿಗಬೇಕು ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದ್ದರು.
ಅಕ್ಟೋಬರ್ ವೇಳೆಗೆ ರಾಜ್ಯವು ಈ ಯೋಜನೆಗೆ ಸುಮಾರು 2.63 ಕೋಟಿ ಅರ್ಜಿಗಳನ್ನು ಸ್ವೀಕರಿಸಿತ್ತು. ಪರಿಶೀಲನೆಯ ನಂತರ, ಫೆಬ್ರವರಿ ವೇಳೆಗೆ ಈ ಅಂಕಿ ಅಂಶವು 2.52 ಕೋಟಿಗಳಲ್ಲಿ 11 ಲಕ್ಷ ಇಳಿದಿದೆ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ 2.46 ಕೋಟಿ ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗಿದೆ.
ಅರ್ಹತೆ ಪಡೆಯಲು, ಅರ್ಜಿದಾರರು 18 ರಿಂದ 65 ವರ್ಷ ವಯಸ್ಸಿನವರಾಗಿರಬೇಕು, ರಾಜ್ಯದಲ್ಲಿ ನೆಲೆಸಿರಬೇಕು ಮತ್ತು ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಕಡಿಮೆ ಕುಟುಂಬದ ಆದಾಯವನ್ನು ಹೊಂದಿರಬೇಕು. ಸರ್ಕಾರಿ ಉದ್ಯೋಗಿ ಅಥವಾ ನಾಲ್ಕು ಚಕ್ರಗಳ ವಾಹನವನ್ನು ಹೊಂದಿರುವ ಕುಟುಂಬಗಳು ಈ ಯೋಜನೆಗೆ ಅರ್ಹರಲ್ಲ.
ಸರ್ಕಾರದ ಈ ನಡೆಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿದ್ದು, 8 ಲಕ್ಷ ಮಹಿಳೆಯರಿಗೆ ಹಣ ಪಾವತಿಯನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರವು ನಾಗರಿಕರಿಗೆ ಮಾಡಿದ ದ್ರೋಹ ಎಂದು ಹೇಳಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, “ಸರ್ಕಾರ ರಚಿಸಿದ ಐದು ತಿಂಗಳೊಳಗೆ, ಮಹಾಯುತಿ ರಾಜ್ಯದ ಜನರಿಗೆ ಎರಡು ಬಾರಿ ದ್ರೋಹ ಮಾಡಿದೆ” ಎಂದು ಹೇಳಿದ್ದಾರೆ.
“ಇತ್ತೀಚೆಗಷ್ಟೆ, ರಾಜ್ಯ ಸರ್ಕಾರವು ತನ್ನ ಕೃಷಿ ಸಾಲ ಮನ್ನಾ ಭರವಸೆಯನ್ನು ರದ್ದುಗೊಳಿಸಿತ್ತು ಮತ್ತು ಈಗ 8 ಲಕ್ಷ ಫಲಾನುಭವಿಗಳಿಗೆ ಲಡ್ಕಿ ಬಹಿನ್ ಹಣವನ್ನು ಕಡಿಮೆ ಮಾಡುವ ಮೂಲಕ ದ್ರೋಹ ಮಾಡುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಈ ಸರ್ಕಾರದಿಂದ ಇಂತಹ ಹೆಚ್ಚಿನ ದ್ರೋಹಗಳಿಗೆ ನಾಗರಿಕರು ಸಿದ್ಧರಾಗಿರಬೇಕು” ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಈ ಯೋಜನೆಯನ್ನು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಪರಿಚಯಿಸಲಾಗಿದೆ ಎಂದು ಆರೋಪಿಸಿದ್ದಾರೆ.


