ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿನ ಕೆರೆ ಒತ್ತುವರಿಯ ತೆರವಿಗೆ ಮುಂದಾಗಿದ್ದು, ಇಂದು ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ. ಪೂರ್ವ ಮತ್ತು ದಕ್ಷಿಣ ಬೆಂಗಳೂರಿನ ಜುನ್ನಸಂದ್ರ ಕೆರೆ ಒತ್ತುವರಿ ಮಾಡಿ ಕಟ್ಟಲಾಗಿದ್ದ ಮನೆಗಳನ್ನು ಬಿಬಿಎಂಪಿ ಅಧಿಕಾರಿಗಳು ಇಂದು ನೆಲಸಮಗೊಳಿಸಿದ್ದಾರೆ.
ದಕ್ಷಿಣ ಬೆಂಗಳೂರಿನ ಜುನ್ನಸಂದ್ರ ಕೆರೆಯ ಒತ್ತುವರಿ ಈಗಷ್ಟೆ ಪ್ರಾರಂಭವಾಗಿದ್ದು ಅರಂಭಿಕ ಹಂತದಲ್ಲಿಯೇ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಪೊಲೀಸರು ಮತ್ತು ಸಿಬ್ಬಂದಿಗಳ ನೆರವಿನಿಂದ ಅಕ್ರಮವಾಗಿ ನಿರ್ಮಿಸಲಾಗಿದ್ದ 12 ಮನೆಗಳನ್ನು ಸುಲಭವಾಗಿ ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಜುನ್ನಸಂದ್ರ ಕೆರೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರ ವಿರುದ್ಧ ಪೋಲಿಸ್ ಕಂಪ್ಲೇಟ್ ದಾಖಲಿಸಿತ್ತು. ಇಡೀ ಕೆರೆಯ ಪ್ರದೇಶವನ್ನು ಕೆಲವರು ತಮ್ಮದೆಂದು ಹೇಳಿಕೊಂಡು ಮನೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಿದ್ದರು. ನಿರ್ಮಾಣ ಕಾರ್ಯಕ್ಕೆ ಶೆಡ್‌ಗಳನ್ನು ಹಾಕಲಾಗಿತ್ತು ಎಂದು ಬಿಬಿಎಂಪಿಯ ಸಹಾಯಕ ಇಂಜಿನೀಯರ್ ಕೆ.ವಿ.ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಕೆರೆ ಒತ್ತುವರಿ ಸಂಬಂಧ ಬಿಬಿಎಂಪಿಗೆ ದುರು ನೀಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ತನಿಖೆಯನ್ನು ನಡೆಸಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ವಾರಣಾಸಿ ಕೆರೆಯ 1 ಎಕರೆ 6 ಗುಂಟೆಗಳಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. 8 ಎಕರೆ 24 ಗುಂಟೆ ವಿಸ್ತೀರ್ಣದ ಕೆರೆಯ 5 ಭಾಗಗಳಲ್ಲಿ ಒತ್ತುವರಿ ನಡೆದಿರುವುದು ಬೆಳಕಿಗೆ ಬಂದಿತ್ತು. 12 ಮನೆಗಳನ್ನು ಕೆರೆಯ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು ನ್ಯಾಯಾಲಾಯದ ಆದೇಶದ ಮೇರೆಗೆ ಕ್ರಮ ಜರುಗಿಸಲಾಗಿದೆ ಬಿಬಿಎಂಪಿ ವಿಶೇಷ ಆಯುಕ್ತ ಬಿ ರೆಡ್ಡಿ ಶಂಕರ್ ಬಾಬು ತಿಳಿಸಿದ್ದಾರೆ.
ವಾರಣಾಸಿ ಕೆರೆಯ ಅಭಿವೃದ್ಧಿಗೆ ಬಿಬಿಎಂಪಿ 3 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಿದ್ದು ಅಂತರ್ಜಲ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ: ಗುಬ್ಬಿಯ ಹೊದಲೂರು ಕೆರೆ ಒತ್ತುವರಿ: ತೆರವುಗೊಳಿಸ್ತಾರ ತಹಶೀಲ್ದಾರ್?
ಬಿಬಿಎಂಪಿಯ ವಿಳಂಬದ ಕ್ರಮ
ಬಿಬಿಎಂಪಿ ಕ್ರಮಕ್ಕೆ ಹಲವು ಪರಿಸರ ಸಂಘಟನೆಗಳು ಮತ್ತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿಯ ವಿಳಂಬ ಧೋರಣೆಯಿಂದ ಇನ್ನು ಸಾಕಷ್ಟು ಕೆರೆಗಳು ಭೂಗಳ್ಳರ ಪಾಲಾಗುತ್ತಿದೆ. ಒತ್ತುವರಿ ಕಂಡುಬಂದ ತಕ್ಷಣ ಬಿಬಿಎಂಪಿ ಕ್ರಮಕ್ಕೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಒಂದೋ ಎರಡೋ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದರೆ ಸಾಲುವುದಿಲ್ಲ. 100ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿವೆ. ಬಿಬಿಎಂಪಿ ಆ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಲು ಮುಂದಾಗಬೇಕೆಂದು ಫ್ರೆಂಡ್ಸ್ ಅಫ್ ಲೇಕ್ಸ್ (ಕೆರೆಯ ಗೆಳೆಯರು) ಸಂಘಟನೆಯ ಸಂಸ್ಥಾಪಕ ವಿ ರಾಮಪ್ರಸಾದ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆರೆ ಒತ್ತುವರಿಗಳನ್ನು ತೆರವುಗೊಳಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಮಾರ್ಚ್ 2020ರಲ್ಲಿ ಬಿಬಿಎಂಪಿಗೆ ಆದೇಶಿಸಿತ್ತು.
ಕಾನೂನು ಪ್ರಕ್ರಿಯೆಗಳನ್ನು ಪೂರೈಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಕೆಲವು ಒತ್ತುವರಿದಾರರು ತೆರವಿಗೆ ತಡೆಕೋರಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೊರೊನಾ ಮತ್ತು ಲಾಕ್‌ಡೌನ್ ನಿರ್ಭಂದಗಳು ತೆರವು ಕಾರ್ಯಕ್ಕೆ ಸಾಕಷ್ಟು ಅಡಚಣೆಯನ್ನುಂಟುಮಾಡಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಬಿ. ರೆಡ್ಡಿ ಶಂಕರ್ ಬಾಬು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಗುಬ್ಬಿಯ ಹೊದಲೂರು ಕೆರೆ ಒತ್ತುವರಿ: ತೆರವುಗೊಳಿಸ್ತಾರ ತಹಶೀಲ್ದಾರ್?


