ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅವರು ಇದ್ದ ವಾಹನಗಳು ಉತ್ತರ ಪ್ರದೇಶದ ಲಖಿಂಪುರ್‌ಖೇರಿಯಲ್ಲಿ ರೈತರ ಮೇಲೆ ಹರಿದು ಎಂಟು ಜನರ ಹತ್ಯೆಗೆ ಕಾರಣವಾಗಿದೆ ಎಂದು ಪ್ರಕರಣ ದಾಖಲಾಗಿದ್ದರೂ ಪ್ರಮುಖ ಆರೋಪಿ ಆಶೀಶ್ ಮಿಶ್ರಾನ ಬಂಧನವಾಗಿಲ್ಲ. ಈ ಕುರಿತು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಗುರುವಾರ ಎಚ್ಚರಿಕೆ ನೀಡಿತ್ತು. ಆದರೆ ಪೊಲೀಸರ ನಿಧಾನಗತಿಯ ಕ್ರಮವನ್ನು ಮತ್ತೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, `ಹೆಚ್ಚಿಗೆ ಏನು ಆಗಿಲ್ಲ’ ಎಂದು ಟೀಕಿಸಿದೆ.
ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. “ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ” ಎಂದಿರುವ ಸುಪ್ರೀಂ, “ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ನಾವು ತೃಪ್ತರಾಗಿಲ್ಲ. ಜವಾಬ್ದಾರಿಯುತ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನಾವು ನಿರೀಕ್ಷಿಸುತ್ತೇವೆ. ಬಂದೂಕನ್ನು ಬಳಸಿ ಕೊಲ್ಲಲಾಗಿದೆ ಎಂಬುದನ್ನು ಒಳಗೊಂಡಂತೆ ಈಗ ಕೇಳಿ ಬಂದಿರುವ ಆರೋಪಗಳು ತೀವ್ರ ಗಂಭೀರವಾಗಿವೆ” ಎಂದು ಸುಪ್ರೀಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಆತಂಕ ವ್ಯಕ್ತಪಡಿಸಿದ್ದಾರೆ.
“ಯಾವ ಸಂದೇಶವನ್ನು ನೀವು ಕಳುಹಿಸುತ್ತಿದ್ದೀರಿ? ಸಾಮಾನ್ಯ ಸಂದರ್ಭಗಳಲ್ಲಿ ಕೂಡ ಪೊಲೀಸರು ತಕ್ಷಣ ಹೋಗಿ ಆರೋಪಿಗಳನ್ನು ಬಂಧಿಸುವುದಿಲ್ಲ. ಇರಬೇಕಾದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಇದು ಕೇವಲ ಮಾತಿಗೆ ಸೀಮಿತವಾಗಿದೆ ಹೊರತು ಕ್ರಿಯೆಗಳಲ್ಲಿ ಕಂಡು ಬರುತ್ತಿಲ್ಲ” ಎಂದು ಸಿಜೆಐ ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ ನಾಲ್ವರು ರೈತರ ಹತ್ಯೆಗೆ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿ ಆಲಿಸುತ್ತಿರುವ ಸುಪ್ರೀಂ ಕೋರ್ಟ್, ಗುರುವಾರವೂ ಯುಪಿ ಸರ್ಕಾರವನ್ನು “ಎಷ್ಟು ಜನರನ್ನು ಬಂಧಿಸಿದ್ದೀರಿ? ಇದು ದುರದೃಷ್ಟಕರ ಘಟನೆ. ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ?” ಎಂದು ಪ್ರಶ್ನಿಸಿತ್ತು.
ನಾಲ್ವರು ರೈತರು, ಒಬ್ಬ ಪತ್ರಕರ್ತ ಮತ್ತು ಮೂವರು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿರುವ ಪ್ರಕರಣದಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ ತೆಗೆದುಕೊಂಡಿರುವ ಕ್ರಮಗಳು ಮತ್ತು ತನಿಖೆಯ ವರದಿ ಸಲ್ಲಿಸಬೇಕು ಎಂದು ಹೇಳಿತ್ತು.
ಈ ಪ್ರಕರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯು ತನಿಖೆ ನಡೆಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ತನಿಖೆ ನಡೆಸಲಿದೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ಆಯೋಗಕ್ಕೆ ತಿಳಿಸಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಇಂದು ಪ್ರಕರಣದ ವಿಚಾರಣೆ ನಡೆಸಲಿದೆ.
ಇದನ್ನೂ ಓದಿರಿ: ಲಖಿಂಪುರ್ ಖೇರಿಗೆ ಪಾದಯಾತ್ರೆ: ಆರೋಪಿಗಳನ್ನು ಬಂಧಿಸದಿದ್ದರೇ ಉಪವಾಸ ಸತ್ಯಾಗ್ರಹ-ನವಜೋತ್ ಸಿಂಗ್ ಸಿಧು


