ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಬುಧವಾರ ರಾತ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ನಿಯೋಗ ಕೊನೆಗೂ ಭೇಟಿ ಮಾಡಿದೆ. ಘಟನೆಯಲ್ಲಿ ಮೃತಪಟ್ಟ ರೈತ 19 ವರ್ಷದ ಲವ್‌ಪ್ರೀತ್ ಸಿ೦ಗ್ ಅವರ ಕುಟುಂಬವನ್ನು ಭೇಟಿಯಾಗಿ ಸಾ೦ತ್ವನ ಹೇಳಿದ್ದಾರೆ.
ನಿಯೋಗದಲ್ಲಿ ರಾಹುಲ್ ಗಾ೦ಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಚತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ಪ೦ಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚೆನ್ನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಇದ್ದರು.
ಸಂತ್ರಸ್ತರ ಭೇಟಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಕ್ ಗಾಂಧಿ, “ದೇಶದಲ್ಲಿ ಈಗ ಪ್ರಜಾಪ್ರಭುತ್ವ ಇಲ್ಲ, ನಿರಂಕುಶಾಧಿಪತ್ಯವಿದೆ. ರೈತರ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರ ಕುಟುಂಬವನ್ನು ಭೇಟಿ ಮಾಡಲು ರಾಜಕಾರಣಿಗಳಿಗೆ ಅವಕಾಶ ನಿರಾಕರಿಸಲಾಗಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚೀನಾ+ಪಾಕಿಸ್ತಾನ+ಮಿ.56″= ಭಾರತದ ಪ್ರದೇಶಗಳ ಮೇಲೆ ಚೀನಾ ಅತಿಕ್ರಮಣ: ರಾಹುಲ್ ಗಾಂಧಿ
‘‘ಪ್ರಿಯಾಂಕ ಆಗಲಿ, ನಾನಾಗಲಿ ಅಥವಾ ನಮ್ಮ ಕುಟುಂಬದ ಯಾರೇ ಆಗಲಿ, ಕೆಟ್ಟದಾಗಿ ನಡೆಸಿಕೊಂಡರು ಎಂಬ ಕಾರಣಕ್ಕೆ ಹಿಂಜರಿದಿಲ್ಲ. ನಮ್ಮ ಮೇಲೆ ಹಲ್ಲೆ ಮಾಡಿ, ನಮ್ಮನ್ನು ವಶಕ್ಕೆ ಪಡೆಯಿರಿ ಅಥವಾ ನಮ್ಮನ್ನು ಹೂತು ಹಾಕಿ, ಈ ಯಾವುದರ ಬಗ್ಗೆಯು ಚಿಂತೆ ಇಲ್ಲ. ಉತ್ತರ ಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯ ನಡೆಯುತ್ತಿದೆ. ಅಪರಾಧಿಗಳು ತಮಗೆ ಬೇಕಾದುದನ್ನು ಮಾಡಿ ಮುಕ್ತವಾಗಿ ತಿರುಗಾಡಬಹುದು. ಆದರೆ, ಸಂತ್ರಸ್ತರಿಗೆ ನ್ಯಾಯ ಕೊಡಿ ಎಂದು ಕೇಳಿದವರನ್ನು ಬಂಧಿಸಲಾಗಿದೆ” ಎಂದು ರಾಹುಲ್ ಗಾಂಧಿ ಕಿಡಿ ಕಾಡಿದರು.
ಸೋಮವಾರವೇ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕ ಗಾಂಧಿಯನ್ನು ಯುಪಿ ಪೊಲೀಸರು ಬಂಧಿಸಿದ್ದರು. ಬುಧವಾರ ಬೆಳಿಗ್ಗೆ ರಾಹುಲ್ ಗಾ೦ಧಿಗೆ ಕೂಡಾ ಲಖಿ೦ಪುರ್ ಖೇರಿಗೆ ತೆರಳಲು ಯುಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಆನಂತರ ಒತ್ತಡ ಹೆಚ್ಚಾದಾಗ ರಾಹುಲ್ ಗಾ೦ಧಿ, ಪ್ರಿಯಾ೦ಕಾ ಗಾ೦ಧಿ ಹಾಗೂ ಇತರ ಮೂವರಿಗೆ ಭೇಟಿ ನೀಡಲು ಅವಕಾಶ ನೀಡಿತು.
ಅದಾಗ್ಯೂ ರಾಹುಲ್ ಗಾಂಧಿ ಅವರನ್ನು ಲಕ್ನೋ ವಿಮಾನ ನಿಲ್ದಾಣಲ್ಲಿ ತಡೆಯಲಾಗಿತ್ತು. ಭದ್ರತಾ ಸಿಬ್ಬಂದಿಗಳು ಅವರನ್ನು ಪೊಲೀಸ್ ಕಾರಿನಲ್ಲಿ ತೆರಳಲು ಕೇಳಿಕೊಂಡಿದ್ದು, ಇದಕ್ಕೆ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ನಂತರ ರಾಹುಲ್ ಗಾಂಧಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಧರಣಿ ಕೂತರು. ಕೊನೆಗೆ ಅವರದೆ ಸ್ವಂತ ಕಾರಿನಲ್ಲಿ ತೆರಳಲು ಅನುಮತಿ ನೀಡಲಾಗಿತ್ತು.
ಲಕ್ನೋ ವಿಮಾನ ನಿಲ್ದಾಣದಿಂದ ರಾಹುಲ್ ಗಾಂಧಿ ಮೊದಲಿಗೆ ಸೋಮವಾರದಿಂದ ಬಂಧನದಲ್ಲಿದ್ದ ತನ್ನ ಸಹೋದರಿ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿ, ಅಲ್ಲಿಂದ ಅವರಿಬ್ಬರೂ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಭೇಟಿ: ರಾಹುಲ್ ಗಾಂಧಿಗೆ ಅನುಮತಿ ನೀಡಿ ಏರ್‌ಪೋರ್ಟ್‌ನಲ್ಲಿ ತಡೆದ ಆದಿತ್ಯನಾಥ್ ಸರ್ಕಾರ



??