ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಗೋಖಲೆ ಅವರ ಎಕ್ಸ್ ಪೋಸ್ಟ್‌ಗಳು ಮಾನಹಾನಿಕರ ಎಂದು ಕಳೆದ ವರ್ಷ ಹೈಕೋರ್ಟ್ ತೀರ್ಪು ನೀಡಿತ್ತು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮತ್ತು ಅವರ ಎಕ್ಸ್ ಹ್ಯಾಂಡಲ್‌ನಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸುವುದರ ಜೊತೆಗೆ ಲಕ್ಷ್ಮಿ ಪುರಿ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನಿರ್ದೇಶಿಸಿತ್ತು.
ಈ ನಿರ್ದೇಶನಗಳನ್ನು ಪಾಲಿಸದೆ ಗೋಖಲೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಪುರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಗೋಖಲೆ ಅವರ ವಕೀಲರು, ಹೈಕೋರ್ಟ್‌ನ 2024 ರ ನಿರ್ದೇಶನಗಳ ವಿರುದ್ಧ ಗೋಖಲೆ ಸಲ್ಲಿಸಿದ ಅರ್ಜಿಯನ್ನು ಅಂತಿಮವಾಗಿ ತೀರ್ಮಾನಿಸುವವರೆಗೆ ಮುಚ್ಚಿದ ಲಕೋಟೆಯಲ್ಲಿ ಅವರು ಕ್ಷಮೆಯಾಚಿಸಬಹುದು ಎಂದು ವಾದಿಸಿದ್ದರು.
ಆದರೆ, ಈ ವಾದವನ್ನು ನ್ಯಾಯಮೂರ್ತಿ ಅನೀಶ್ ದಯಾಳ್ ಅವರು ತಿರಸ್ಕರಿಸಿದ್ದಾರೆ ಮತ್ತು ಎರಡು ವಾರಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸುವಂತೆ ಗೋಖಲೆ ಅವರಿಗೆ ನಿರ್ದೇಶನ ನೀಡಿದ್ದಾರೆ.
ಲಕ್ಷ್ಮಿ ಪುರಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿಯಾಗಿದ್ದು, 2021 ರಲ್ಲಿ, ಅವರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಆದಾಯ ಮೀರಿ ಕೆಲವು ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಾಕೇತ್ ಹಾಕಿದ್ದ ಪೋಸ್ಟ್‌ಗಳ ವಿರುದ್ಧ ಮೊಕದ್ದಮೆ ಹೂಡಿದ್ದರು.
ಜುಲೈ 2021ರಲ್ಲಿ, ನ್ಯಾಯಾಲಯವು ಗೋಖಲೆ ಅವರಿಗೆ ಎಕ್ಸ್ ಪೋಸ್ಟ್‌ಗಳನ್ನು ತೆಗೆದುಹಾಕಲು ಮತ್ತು ಪುರಿ ವಿರುದ್ಧ ಯಾವುದೇ ಮಾನನಷ್ಟಕರ ವಿಷಯವನ್ನು ಪೋಸ್ಟ್ ಮಾಡದಂತೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿತ್ತು.
ಜುಲೈ 2024 ರಲ್ಲಿ ನೀಡಿದ ಅಂತಿಮ ತೀರ್ಪಿನಲ್ಲಿ, ಹೈಕೋರ್ಟ್ ಗೋಖಲೆ ಅವರಿಗೆ ಲಕ್ಷ್ಮಿ ಪುರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ಪಾವತಿಸಲು ಮತ್ತು ಕ್ಷಮೆಯಾಚನೆಯನ್ನು ಪ್ರಕಟಿಸಲು ನಿರ್ದೇಶಿಸಿತ್ತು.
ನಂತರ ಗೋಖಲೆ ಅವರು ಪರಿಹಾರವನ್ನು ಪಾವತಿಸಲು ಆದೇಶಿಸಿದ ತೀರ್ಪನ್ನು ಹಿಂಪಡೆಯಲು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಮೇ 2, 2025 ರಂದು, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಗೋಖಲೆ ಅವರು ಹೈಕೋರ್ಟ್‌ನ 2024 ರ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಲಕ್ಷ್ಮಿ ಪುರಿ ಈ ವರ್ಷದ ಆರಂಭದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೂಡಿದ್ದರು.
ಪರಿಹಾರ ಪಾವತಿಸುವಂತೆ ನೀಡಿದ್ದ ಆದೇಶ ಹಿಂಪಡೆಯಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಗೋಖಲೆ ಪರ ವಕೀಲರು ಇತ್ತಿಚೆಗೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಲ್ಲದೆ, 50 ಲಕ್ಷ ರೂ. ಠೇವಣಿ ಇಡುವವರೆಗೆ ಗೋಖಲೆ ಅವರ ಸಂಬಳದ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ ಎಂದು ಅವರು ಗಮನಸೆಳೆದಿದ್ದಾರೆ.
ಈ ಮೇಲ್ಮನವಿ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಗೋಖಲೆ ಅವರು ಮುಚ್ಚಿದ ಲಕೋಟೆಯಲ್ಲಿ ಕ್ಷಮೆಯಾಚಿಸಬಹುದು ಎಂದು ವಕೀಲರು ವಾದಿಸಿದ್ದಾರೆ.
ಆದಾಗ್ಯೂ, ನ್ಯಾಯಾಲಯವು ಅಂತಹ ಯಾವುದೇ ದಯೆ ತೋರಿಸಲು ನಿರಾಕರಿಸಿದೆ.
ಮಸೂದೆ ಅನುಮೋದನೆಗೆ ಗಡುವು: ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಕೇಳಿದ ರಾಷ್ಟ್ರಪತಿ


