ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತು ಪುತ್ರಿ ಹೇಮಾ ಯಾದವ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಲಾಲು ಅವರ ಕಿರಿಯ ಮಗ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಹೊಸ ಸಮನ್ಸ್ ಜಾರಿಗೊಳಿಸಿ ಮಾರ್ಚ್ 11 ರಂದು ಹಾಜರಾಗುವಂತೆ ಸೂಚಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಅಂತಿಮ ಆರೋಪಪಟ್ಟಿಯನ್ನು ಪರಿಗಣಿಸಿದ ನಂತರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ 30 ಸರ್ಕಾರಿ ಅಧಿಕಾರಿಗಳು ಸೇರಿದಂತೆ 78 ಜನರನ್ನು ಸಂಸ್ಥೆ ಹೆಸರಿಸಿದೆ. ಇಡಿ ತನಿಖೆ ನಡೆಸುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಲಾಲು ಯಾದವ್ ಮತ್ತು ಅವರ ಇಬ್ಬರು ಪುತ್ರರು ಈಗಾಗಲೇ ಜಾಮೀನು ಪಡೆದಿದ್ದಾರೆ.
ಈ ಹಗರಣವು ಲಾಲು ಪ್ರಸಾದ್ ಅವರು 2004 ಮತ್ತು 2009 ರ ನಡುವೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ. ಸಿಬಿಐ ಪ್ರಕರಣವು ಕೇಂದ್ರ ರೈಲ್ವೆಯಲ್ಲಿ ಗ್ರೂಪ್ ಡಿ ಉದ್ಯೋಗಗಳಲ್ಲಿ ನೇಮಕಾತಿಗಾಗಿ ಆರ್‌ಜೆಡಿ ಮುಖ್ಯಸ್ಥ ಮತ್ತು ಅವರ ಕುಟುಂಬ ಸದಸ್ಯರಿಗೆ ಅಗ್ಗದ ದರದಲ್ಲಿ ಭೂಮಿಯನ್ನು ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದೆ.
ಸಿಬಿಐ ಮೇ 2022 ರಲ್ಲಿ ಲಾಲು, ಅವರ ಪುತ್ರರು ಮತ್ತು ಪುತ್ರಿಯರು ಮತ್ತು ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧ ಪ್ರಕರಣ ದಾಖಲಿಸಿದೆ.
ತಮಿಳುನಾಡು| ಪ್ರಬಲಜಾತಿ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ದಲಿತನ ಯುವಕನ ಮೇಲೆ ಹಲ್ಲೆ


