ಕೇಂದ್ರ ಕೈಗಾರಿಕಾ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಭೂಕಬಳಿಕೆ ಆರೋಪಗಳ ತನಿಖೆಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಐದು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಾಜ್ಯ ಸರ್ಕಾರ ರಚಿಸಿದೆ.
ರಾಮನಗರದ ಬಿಡದಿಯ ಕೇತಗಾನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 8, 9, 10, 16 ಮತ್ತು 79 ರಲ್ಲಿ 14.04 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಎಸ್‌ಐಟಿಯಲ್ಲಿ ಸರ್ವೆ, ಇತ್ಯರ್ಥ ಮತ್ತು ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹ್ಮದ್, ಹೆಚ್ಚುವರಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗಡ್ಡ್ಯಾಲ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸದಸ್ಯರಾಗಿ ತಹಶೀಲ್ದಾರ್ ಗ್ರೇಡ್ -2 ಶೀತಲ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹಣ ವರ್ಗಾವಣೆ ತನಿಖೆಯನ್ನು ಚುರುಕುಗೊಳಿಸುತ್ತಿರುವಂತೆ ಕಂಡುಬರುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖೆಗೆ ಎಸ್‌ಐಟಿ ರಚನೆಯಾಗಿದೆ.
ನವೆಂಬರ್ 2024 ರಲ್ಲಿ, ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಅಫಿಡವಿಟ್‌ನಲ್ಲಿ ಆಪಾದಿತ ಅತಿಕ್ರಮಣವನ್ನು ತನಿಖೆ ಮಾಡಲು ಎಸ್‌ಐಟಿ ರಚಿಸುವುದಾಗಿ ತಿಳಿಸಿತ್ತು. ಎಸ್‌ಐಟಿ ರಚನೆಗೆ ಆದೇಶವನ್ನು ಜನವರಿ 28 ರಂದು ಹೊರಡಿಸಲಾಯಿತು.
“ಹೈಕೋರ್ಟ್ ಸರ್ಕಾರಕ್ಕೆ ತೀಕ್ಷ್ಣ ನಿರ್ದೇಶನ ನೀಡಿದೆ. ಅದರಂತೆ, ನಾವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದರೂ, ಸರ್ಕಾರವು ತನ್ನ ವರದಿಯನ್ನು ಹೈಕೋರ್ಟ್‌ಗೆ ಬೇಗನೆ ಸಲ್ಲಿಸಲು ಬಯಸುತ್ತದೆ ಎಂದು ಸಚಿವರು ಹೇಳಿದರು. “ನಾವು ಮೂರು ತಿಂಗಳ ಕಾಲಾವಕಾಶವನ್ನು ಕೋರಿದ್ದೆವು. ಆದರೆ, ಹೈಕೋರ್ಟ್ ಅದಕ್ಕೆ ಒಪ್ಪಲಿಲ್ಲ. ಸಾಧ್ಯವಾದಷ್ಟು, ಫೆಬ್ರವರಿ 21 ರ ಮೊದಲು ತನಿಖೆಯನ್ನು ಮುಗಿಸಿ ವರದಿಯನ್ನು ಸಲ್ಲಿಸಲು ನಾವು ಬಯಸುತ್ತೇವೆ” ಎಂದು ಹೇಳಿದರು.
ಬಿಡದಿಯ ಕೇತಗಾನಹಳ್ಳಿಯಲ್ಲಿ ಸರ್ವೆ ಸಂಖ್ಯೆ 8, 9, 10, 16 ಮತ್ತು 79 ಕ್ಕೆ ಸೇರಿದ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಸರ್ಕಾರ ಎಸ್‌ಐಟಿಯನ್ನು ಕೇಳಿದೆ. ಅಗತ್ಯವಿದ್ದರೆ, ಎಸ್‌ಐಟಿ ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬಹುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಭೂ ಸಂಬಂಧಿತ ಯಾವುದೇ ಕಾನೂನುಗಳನ್ನು ಉಲ್ಲಂಘಿಸಲಾಗಿದೆಯೇ ಎಂದು ಪರೀಕ್ಷಿಸಲು ಎಸ್‌ಐಟಿಗೆ ಸೂಚಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡಿರುವುದು ಕಂಡುಬಂದರೆ, ಅತಿಕ್ರಮಣ ತೆರವುಗೊಳಿಸಲು ಎಸ್‌ಐಟಿ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಆಗಸ್ಟ್ 2014 ರಲ್ಲಿ, ಕರ್ನಾಟಕ ಲೋಕಾಯುಕ್ತವು ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ ಎಂದು ತೋರಿಸುವ ಯಾವುದೇ ದಾಖಲೆಗಳು ಕಂಡುಬಂದಿಲ್ಲದಿದ್ದರೆ ಅದನ್ನು ವಶಪಡಿಸಿಕೊಳ್ಳಲು ಆದೇಶಿಸಿತ್ತು. 2020 ರಲ್ಲಿ, ಸಮಾಜ ಪರಿವರ್ತನಾ ಸಮುದಾಯದ ಎಸ್‌ಆರ್ ಹಿರೇಮಠ್ ಅವರು ಲೋಕಾಯುಕ್ತ ನಿರ್ದೇಶನದಂತೆ ಕೇತಗಾನಹಳ್ಳಿಯಲ್ಲಿ ಅತಿಕ್ರಮಣಗೊಂಡ ಭೂಮಿಯನ್ನು ವಶಪಡಿಸಿಕೊಳ್ಳುವ ಬಗ್ಗೆ ಹೈಕೋರ್ಟ್‌ಗೆ ನೀಡಿದ ಭರವಸೆಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.
ಕುಮಾರಸ್ವಾಮಿ, ಅವರ ಸಂಬಂಧಿ ಮತ್ತು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಮತ್ತು ಇತರರು ಭೂಕಬಳಿಕೆ ಆರೋಪ ಹೊರಿಸಿ ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ; ಚಿಕ್ಕಮಗಳೂರು| ನಕ್ಸಲ್ ನಾಯಕ ಕೋಟೆಹೊಂಡ ರವೀಂದ್ರ ಇಂದು ಮುಖ್ಯವಾಹಿನಿಗೆ


