ಹರಿಯಾಣದ ಭಿವಾನಿ ಜಿಲ್ಲೆಯ ದಾದಾಮ್‌ನ ಗಣಿಗಾರಿಕೆ ವಲಯದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದ ಪ್ರದೇಶದಿಂದ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯನ್ನು ಐದಕ್ಕೆ ಏರಿದೆ. ಪರಿಹಾರ ಕಾರ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಕಾರ್ಯನಿರ್ವಹಿಸುತ್ತಿದೆ.
ಈ ಮಧ್ಯೆ, ಮಣ್ಣಿನ ಅಡಿಯಲ್ಲಿ ಇನ್ನೂ ಯಾರಾದರೂ ಸಿಲುಕಿರುವ ಸಾಧ್ಯತೆಯಿರುವುದರಿಂದ ಸದ್ಯಕ್ಕೆ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಭಾನುವಾರ ಸಂಜೆ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಗಿದೆ” ಎಂದು ತೋಷಮ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುಖ್ಬೀರ್ ತಿಳಿಸಿದ್ದಾರೆ.
ಇದನ್ನೂ ಓದಿ:ಹರಿಯಾಣ ಗಣಿಗಾರಿಕೆ ವಲಯದಲ್ಲಿ ಭೂಕುಸಿತ: 1 ಸಾವು; ಮಣ್ಣಿನಡಿಯಲ್ಲಿ ಇನ್ನೂ 20 ಜನರು
ದಾದಾಮ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಭಿವಾನಿ-ಮಹೇಂದರ್‌ಗಢದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಅವರು ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದೆ ಮತ್ತು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಯಾವುದೇ ಮಾನದಂಡಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಸಾವಿಗೀಡಾದ ಪ್ರತಿಯೊಬ್ಬರ ಕುಟುಂಬಕ್ಕೆ 25 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಜೊತೆಗೆ ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯವನ್ನು ತೀವ್ರಗೊಳಿಸಿದ್ದಾರೆ. ಹರ್ಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ ಭಾನುವಾರದಂದು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ತೀವ್ರಗೊಳ್ಳುತ್ತಿರುವ ರೈತ ಹೋರಾಟ: ಹರಿಯಾಣದ 60 ಗ್ರಾಮಗಳಲ್ಲಿ ಬಿಜೆಪಿಗೆ ಪ್ರವೇಶ ನಿಷೇಧ
ಭಿವಾನಿಯಲ್ಲಿರುವ ಖಾನಕ್ ಮತ್ತು ದಾದಾಮ್ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದ ಗಣಿಗಾರಿಕೆ ನಡೆಸಲಾಗುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದ ಗಣಿಗಾರಿಕೆ ಕೆಲಸವನ್ನು ಎರಡು ತಿಂಗಳ ಹಿಂದೆ ನಿಷೇಧಿಸಲಾಗಿತ್ತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಗುರುವಾರ ಅನುಮತಿ ನೀಡಿತ್ತು. ಇದರ ಮರುದಿನ ಕೆಲಸ ಪ್ರಾರಂಭವಾಗಿತ್ತು.
ಎರಡು ತಿಂಗಳಿನಿಂದ ಗಣಿಗಳನ್ನು ಮುಚ್ಚಿದ್ದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ಉಂಟಾಗಿದೆ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಸ್ಫೋಟಗಳನ್ನು ನಡೆಸಲಾತ್ತು, ಇದರಿಂದಾಗಿ ಭೂಕುಸಿತ ಉಂಟಾಗಿದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ:ಹರಿಯಾಣ: ದುಷ್ಕರ್ಮಿಗಳಿಂದ ಯೇಸು ಕ್ರಿಸ್ತನ ಪ್ರತಿಮೆ ಧ್ವಂಸ


