ಕೆಲ ದಿನಗಳ ಹಿಂದೆ ಕೊಲೊಂಬೊ ಬಂದರಿನಲ್ಲಿ ಸಿಂಗಾಪುರ ಮೂಲದ ಎಕ್ಸ್‌ಪ್ರೆಸ್ ಪರ್ಲ್ ಎಂಬ ಹಡಗು ಮುಳುಗಡೆಯಾಗಿದೆ. ನೂರಾರು ಟನ್ ರಾಸಾಯನಿಕಗಳನ್ನು ಮತ್ತು ತೈಲವನ್ನು ಸಾಗಿಸುತ್ತಿದ್ದ ಹಡಗು ಸಮುದ್ರದಲ್ಲಿ ಸ್ಫೋಟಗೊಂಡ ಪರಿಣಾಮ ಕೊಲೊಂಬೊ ಸುತ್ತಲಿನ ಸಮುದ್ರ ವಾತಾವರಣದಲ್ಲಿ ತೀವ್ರ ಬದಲಾವಣೆಯಾಗಿದ್ದು ನೂರಾರು ಜಲಚರಗಳ ಮೃತದೇಹಗಳು ಸಮುದ್ರ ದಂಡೆಗೆ ತೇಲಿ ಬರುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 176 ಕಡಲಾಮೆಗಳ ಮೃತದೇಹ ಕೊಲಂಬೊ ತೀರದಲ್ಲಿ ಕಾಣಿಸಿಕೊಂಡಿದ್ದರೆ 20ಕ್ಕೂ ಹೆಚ್ಚು ಡಾಲ್ಫಿನ್‌ಗಳು, 4 ಬೃಹತ್ ತಿಮಿಂಗಲಗಳು ಮತ್ತು ಸಾವಿರಾರು ಸಂಖ್ಯೆಯ ವಿವಿಧ ಜಾತಿಯ ಮತ್ಸ್ಯ ತಳಿಗಳ ಮೃತದೇಹಗಳು ಸಮುದ್ರ ತೀರದಲ್ಲಿ ರಾಶಿ ರಾಶಿಯಾಗಿ ಬಂದು ಬೀಳತೊಡಗಿದೆ.
ಎಕ್ಸ್‌ಪ್ರೆಸ್ ಪರ್ಲ್ ಹಡಗು 238 ಟನ್‌ಗಳಷ್ಟು ದ್ರವ ಇಂದನ ಮತ್ತು 50 ಟನ್‌ಗಳಷ್ಟು ಗ್ಯಾಸ್ ಅನ್ನು ತುಂಬಿ ಕೊಲಂಬೊ ತೀರದಲ್ಲಿ ಮುಳುಗಿದೆ. ದಶಕಗಳ ಕಾಲ ಪರಿಸರದ ಮೇಲೆ ಇದರ ಪರಿಣಾಮ ಉಳಿಯಲಿದೆ ಎಂದು ಪರಿಸರ ತಜ್ಞರು ಹೇಳಿದ್ದಾರೆ. ಶ್ರೀಲಂಕಾದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಡಗು ದುರಂತ ನಡೆದಿರಲಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಈಜಿಪ್ಟ್‌ನ ಸುಯೆಜ್ ಕಾಲುವೆಯ ಮಧ್ಯೆ ಸಿಲುಕಿದ ಬೃಹತ್ ಹಡಗು – ಕೋಟ್ಯಂತರ ಡಾಲರ್ ನಷ್ಟ!
ಹಡಗಿನಲ್ಲಿದ್ದ ವಿಷಕಾರಿ ಅನಿಲಗಳು ಮತ್ತು ರಾಸಾಯನಿಕಗಳು ಸಮುದ್ರದಲ್ಲಿ ಬೆರೆತು ಹಿಂದು ಮಹಾಸಾಗರದ ನೂರಾರು ಕಿಲೋಮೀಟರ್ ವರೆಗಿನ ಜೀವ ಸಂಕಲ ವಿಷಕಾರಿಯಾಗಲಿದೆ. ಈ ಪ್ರದೆಶದಲ್ಲಿನ ಮೀನು ಸೇರಿದಂತೆ ಸಮುದ್ರ ಮೂಲದ ಆಹಾರ ತಿನ್ನುವ ಲಕ್ಷಾಂತರ ಜನರ ಆರೋಗ್ಯದ ಮೇಲೆ ಇದು ದೀರ್ಘಕಾಲದಲ್ಲಿ ಪರಿಣಾಮ ಬೀರಲಿದೆ ಎಂದು ಕೊಲಂಬೊ ಮೂಲದ ಪರಿಸರ ಸಂಘಟನೆಯೊಂದು ಎಚ್ಚರಿಕೆ ನೀಡಿದೆ.
ನೈರುತ್ಯ ಮಾನ್ಸೂನ್ ಸಂದರ್ಭದಲ್ಲಿ ಜಲಚರಗಳು ಇಷ್ಟು ಪ್ರಮಾಣದಲ್ಲಿ ಮೃತಪಟ್ಟ ದಾಖಲೆಯಿಲ್ಲ. ಸಾವಿರಾರು ಸಂಖ್ಯೆಯ ಜೀವ ಸಂಕುಲ ಒಮ್ಮೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಪಾಯಕ್ಕೆ ತುತ್ತಾಗಿರುವುದು ಸಾಮಾನ್ಯ ಘಟನೆಯಲ್ಲ ಎಂದು ಶ್ರೀಲಂಕಾದ ಪರಿಸರ ಸಚಿವ ಮಹಿಂದ ಅಮರವೀರ ಅಭಿಪ್ರಾಯ ಪಟ್ಟಿದ್ದಾರೆ.

186 ಮೀಟರ್ ಉದ್ದದ ಎಕ್ಸ್‌ಪ್ರೆಸ್ ಪರ್ಲ್ ಹಡಗು ಮೇ 15 ರಂದು ಭಾರತದ ಹಜೀರಾ ಬಂದರಿನಿಂದ ಕೊಲಂಬೊ ಕಡೆಗೆ ಪ್ರಯಾಣ ಬೆಳೆಸಿತ್ತು. ಈ ಹಿಂದೆ ಕತಾರ್ ಮತ್ತು ಭಾರತದ ಅಧಿಕಾರಿಗಳು ತಮ್ಮ ಬಂದರಿನಲ್ಲಿ ಹಡಗನ್ನು ನಿಲ್ಲಿಸಲು ಅವಕಾಶವನ್ನು ನೀಡಿರಲಿಲ್ಲ.
ಹಡಗು ದುರಂತ ಸಂಭವಿಸಿರುವ ಸುತ್ತಮುತ್ತದ ಸಮುದ್ರ ಪ್ರದೇಶದಲ್ಲಿ ಶ್ರೀಲಂಕಾ ಸರ್ಕಾರ ಮೀನುಗಾರಿಕೆಯನ್ನು ನಿಷೇಧಿಸಿದ್ದು ಸುಮಾರು 50,000 ಜನ ಮೀನುಗಾರಿಕೆಯನ್ನೇ ಅವಲಂಬಿಸಿರುವ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ನೈಟ್ರಿಕ್ ಆಸಿಡ್ ಸೋರಿಕೆಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದ್ದು ಮೇ 11 ರಿಂದಲೇ ಹಡಗಿನಲ್ಲಿ ಅನಿಲ ಸೋರಿಕೆಯಾಗುತ್ತಿತ್ತು ಎಂಬ ಅಂಶ ಕೂಡ ತನಿಖೆಯಲ್ಲಿ ಪತ್ತೆಯಾಗಿದೆ.
ಅನಿಲ ಸೋರಿಕೆಯ ವಿಷಯವನ್ನು ಮೊದಲೇ ತಿಳಿದಿದ್ದರೂ ಹಡಗಿನ ಸಿಬ್ಬಂದಿ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದೇ ಈ ಮಹಾ ದುರಂತಕ್ಕೆ ಕಾರಣ ಎಂದು ಶ್ರೀಲಂಕಾ ಸರ್ಕಾರ ಹಡಗು ಕಂಪನಿಯ ಮೇಲೆ ಆರೋಪಿಸಿದೆ. ಹಡಗಿನಲ್ಲಿ ಅನಿಲ ಸೋರಿಕೆಯಾಗುತ್ತಿರುವ ವಿಷಯ ಮೇ 11 ರ ವೇಳೆಯಲ್ಲಿಯೇ ಗಮನಕ್ಕೆ ಬಂದಿತ್ತು ಎಂದು ಹಡಗಿನ ಮಾಲೀಕರು ತಿಳಿಸಿದ್ದಾರೆ.
ಶ್ರೀಲಂಕಾ ನ್ಯಾಯಾಲಯದಲ್ಲಿ ಜುಲೈ 15 ರಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದ್ದು ಪರಿಸರಹಾನಿ, ಜೀವಹಾನಿ, ಮೀನುಗಾರರ ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಹಡಗು ಮಾಲೀಕರು ಮತ್ತು ಶ್ರೀಲಂಕಾ ಸರ್ಕಾರದ ಮೇಲೆ ಜನರ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ: ಈಜಿಪ್ಟ್‌ನ ಸುಯೆಜ್ ಕಾಲುವೆಯ ಮಧ್ಯೆ ಸಿಲುಕಿದ ಬೃಹತ್ ಹಡಗು – ಕೋಟ್ಯಂತರ ಡಾಲರ್ ನಷ್ಟ!


